
ಬೆಂಗಳೂರು, (ಡಿಸೆಂಬರ್ 23): ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Bikla Shiva murder case) ಸಂಬಂಧಿಸಿದಂತೆ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ (BJP MLA Byrathi Basavaraj )ಜಾಮೀನು ಅರ್ಜಿಯಲ್ಲಿ ಕೋರ್ಟ್ ವಜಾಗೊಳಿಸಿದೆ. ಇಂದು (ಡಿಸೆಂಬರ್ 23) ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ (anticipatory bail application) ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ (Special Court) ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್, ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸದ್ಯ ನಾಪತ್ತೆಯಾಗಿರುವ ಬೈರತಿ ಬಸವರಾಜ್ ಯಾವುದೇ ಸಂದರ್ಭದಲ್ಲೂ ಅರೆಸ್ಟ್ ಆಗಬಹುದು.
ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿಂದು ನಡೆಯಿತು. ಬೈರತಿ ಬಸವರಾಜ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ರೆ, ಸಿಐಡಿ ಪರ ಎಸ್‌ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದರು.
SPP ಅಶೋಕ್ ನಾಯ್ಕ್: SPP ಅಶೋಕ್ ನಾಯ್ಕ್ ಅವರು ಕೋರ್ಟ್ಗೆ ಚಾರ್ಜ್ಶೀಟ್ ಪ್ರತಿ ಸಲ್ಲಿಕೆ ಮಾಡಿದ್ದು, ಚಾರ್ಜ್ಶೀಟ್ನ ಪೇಜ್ ನಂ.298ರಲ್ಲಿ ಟವರ್ ಲೊಕೇಷನ್ ನಮೂದಿಸಿದೆ. ಎ1 ಮತ್ತು ಎ 5 ನಡುವೆ ದೂರವಾಣಿ ಮಾತುಕತೆ ಇರುವ ದಾಖಲೆಯಿದೆ. ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ. ಪ್ರಮುಖ ಲಿಂಕ್ಗಳೇನಿದೆ ಎಂಬುದು ಬಳಿಕ ತಿಳಿಯಲಿದೆ ಎಂದು ವಾದ ಮಂಡಿಸಿದರು.
ಬೈರತಿ ಪರ ಸಂದೇಶ್ ಚೌಟ ವಾದ :ಇದಕ್ಕೆ ಪ್ರತಿಯಾಗಿ ಬೈರತಿ ಬಸವರಾಜ್ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಒಳಸಂಚು, ಉದ್ದೇಶವಾಗಿದೆ. ಇದಕ್ಕೆ ಸಾಕ್ಷ್ಯಗಳು ಯಾವುದೂ ಲಭ್ಯವಿಲ್ಲ. 5 ತಿಂಗಳಾದರೂ ಇವರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಎ1 ಜಗ್ಗ, ಎ 5 ಬೈರತಿ ಬಸವರಾಜ್ ನಡುವಿನ ಸಂಪರ್ಕ ಸಾಬೀತಿಗೆ ಯತ್ನಿಸುತ್ತಿದ್ದಾರೆ. ಹುಟ್ಟುಹಬ್ಬ, ಕುಂಭ ಮೇಳಕ್ಕೆ ಹೋಗಿರುವುದನ್ನು ಉಲ್ಲೇಖಿಸಿದ್ದಾರೆ. ಆದರೆ ಕೊಲೆಯ ಸಂಚಿನ ಬಗ್ಗೆ ಯಾವುದೇ ಸಾಕ್ಷ್ಯ ಸಂಗ್ರಹಿಸಿಲ್ಲ.ಅಲ್ಲದೇ ತನಿಖೆಗೆ ಸಿದ್ಧವೆಂದು ಪದೇ ಪದೇ ಹೇಳಿದ್ದರೂ ಸಮನ್ಸ್ ನೀಡಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದರು.
ಎರಡೂ ಕಡೆಯಿಂದ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಸಂಜೆ ಆದೇಶ ಜಾಯ್ದಿರಿಸಿದ್ದರು.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಇದೀಗ ಇಲ್ಲೂ ಸಹ ಜಾಮೀನು ಅರ್ಜಿ ವಜಾಗೊಂಡಿದೆ. ಹೀಗಾಗಿ ಬೈರತಿ ಬಸವರಾಜ್ ಪರ ವಕೀಲರು, ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 26ರಂದು ಹೈಕೋರ್ಟ್ ರಜಾಕಾಲದ ಪೀಠ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಅಂದೇ ಬೈರತಿ ಬಸವರಾಜ್ ಅರ್ಜಿ ವಿಚಾರಣೆ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ನಲ್ಲೂ ಜಾಮೀನು ಅರ್ಜಿ ತಿರಸ್ಕೃತಗೊಂಡಿರೆ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.
ಮೊನ್ನೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಬಂಧನ ಭೀತಿಯಿಂದಾಗಿ ಬೈರತಿ ಬಸವರಾಜ್ ತಲೆಮರೆಸಿಕೊಂಡಿದ್ದಾರೆ. ಗೋವಾ ಅಥವಾ ಮಹಾರಾಷ್ಟ್ರಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ತನಿಖೆ ಮುಂದುವರೆಸಿದ ಅಧಿಕಾರಿಗಳಿಗೆ ಬೈರತಿ ಬಸವರಾಜ್ ಕೊನೆಯದಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಲೈವ್ ಲೊಕೇಶನ್ ಪತ್ತೆಯಾಗಿದ್ದು, ಆನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇತ್ತ ಸಿಐಡಿ ಅಧಿಕಾರಿಗಳು ಸಹ ತೀವ್ರ ಹುಡುಕಾಟ ನಡೆಸಿದ್ದು, ಯಾವುದೇ ಸಂದರ್ಭದಲ್ಲೂ ಬೈರತಿ ಬಸವರಾಜ್ ಅರೆಸ್ಟ್ ಆಗಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:04 pm, Tue, 23 December 25