ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್‌ನ್ಯೂಸ್: ಋತುಚಕ್ರದ ರಜೆಗೆ ಇಲಾಖೆ ಗ್ರೀನ್‌ಸಿಗ್ನಲ್
ಜನವರಿ 1ರಿಂದ ಋತುಚಕ್ರ ರಜೆ ಮಂಜೂರು ಮಾಡಲು ಸಾರಿಗೆ ಇಲಾಖೆ ಗ್ರೀನ್‌ಸಿಗ್ನಲ್ ನೀಡಿದೆ. ಆ ಮೂಲಕ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಪ್ರತಿ ತಿಂಗಳು ಒಂದು ದಿನ ರಜೆ ಪಡೆಯಬಹುದಾಗಿದೆ. ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, ಡಿಸೆಂಬರ್ 23: ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ಋತುಚಕ್ರದ ರಜೆ (Menstrual Leave) ನೀಡಲು ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 1ರಿಂದ ಮಹಿಳಾ ಡ್ರೈವರ್, ಕಂಡಕ್ಟರ್ ಸೇರಿ ಮಹಿಳಾ ಸಿಬ್ಬಂದಿ ಋತುಚಕ್ರದ ರಜೆ ಪಡೆಯಬಹುದಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಎಂಡಿ ಅಕ್ರಂ ಪಾಷ ಈ ಬಗ್ಗೆ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಆ ಮೂಲಕ ನಾಲ್ಕು ನಿಗಮದ ಮಹಿಳಾ ನೌಕರರಿಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.
ಆದೇಶದಲ್ಲೇನಿದೆ?
ಕರ್ನಾಟಕ ಸರ್ಕಾರವು ಮಹಿಳಾ ನೌಕರರ ಮನೋಸ್ಥೆರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಿ ಷರತ್ತು ಮತ್ತು ನಿಬಂಧನೆಗೊಳಪಟ್ಟು ರಜೆ ಮಂಜೂರು ಮಾಡಲು ಆದೇಶಿಸಿದೆ.
ಇದನ್ನೂ ಓದಿ: ಋತುಚಕ್ರ ರಜೆ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಗೆ ತಾತ್ಕಾಲಿಕ ಮಾರ್ಪಾಡು ಮಾಡಿದ ಹೈಕೋರ್ಟ್
ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ 01 ಜನವರಿ 2026ರಿಂದ ಜಾರಿಗೆ ಬರುತ್ತಿದ್ದು, ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಷರತ್ತುಗಳೇನು?
- ಋತುಚಕ್ರ ಹೊಂದಿರುವ 18 ರಿಂದ 52 ವಯಸ್ಸಿನ ನಿಗಮದ ಮಹಿಳಾ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
- ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆ ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ.
- ಈ ರಜೆಯನ್ನು ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು.
- ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸಬಾರದು. ಸದರಿ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು ಹಾಗೂ ಮುಂದಿನ ತಿಂಗಳಿಗೆ ಅವಕಾಶವಿರುವುದಿಲ್ಲ. ಸಂಬಂಧಪಟ್ಟವರೆಲ್ಲರೂ ಆದೇಶಕ್ಕೆ ತಕ್ಕಂತೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



