ಪ್ರಮೋದ್​ ಮುತಾಲಿಕ್ ಕಾಂಗ್ರೆಸ್​ ಪಕ್ಷದ ಬಿ ಟೀಮ್ ಎಂದ ಬಿಜೆಪಿ; ಕಮಲ ಪಕ್ಷದ ವಿರುದ್ಧ ಗರಂ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 07, 2022 | 10:50 AM

ರಾಜ್ಯದಲ್ಲಿ ಚುನಾವಣೆಯ ಆರ್ಭಟ ಈಗಾಗಲೇ ಶುರುವಾಗಿದ್ದು, ಆರೋಪ-ಪ್ರತ್ಯಾರೋಪಗಳಂತೂ ನಿರಂತರವಾಗಿ ನಡೆಯುತ್ತಲೇ ಇವೆ. ಇಂತಹ ಸಮಯದಲ್ಲಿ ಬಿಜೆಪಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರಿಗೆ ಕಾಂಗ್ರೆಸ್​ ಪಕ್ಷದ ಬಿ ಟೀಮ್​ ಎಂದಿದ್ದಾರೆ.

ಪ್ರಮೋದ್​ ಮುತಾಲಿಕ್ ಕಾಂಗ್ರೆಸ್​ ಪಕ್ಷದ ಬಿ ಟೀಮ್ ಎಂದ ಬಿಜೆಪಿ; ಕಮಲ ಪಕ್ಷದ ವಿರುದ್ಧ ಗರಂ
ಪ್ರಮೋದ್​ ಮುತಾಲಿಕ್​
Follow us on

ಧಾರವಾಡ: ಇತ್ತೀಚಿಗೆ ವಕ್ಫ್ ಅಧ್ಯಕ್ಷರು ಮುಸ್ಲಿಂ ಕಾಲೇಜು ಆರಂಭಿಸುವುದಾಗಿ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಅನೇಕ ಬಾರಿ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದಿದ್ದರು. ಇದೇ ಕಾರಣಕ್ಕೆ ಇದೀಗ ಬಿಜೆಪಿ ಮುತಾಲಿಕ್ ವಿರುದ್ಧವೇ ತಿರುಗಿ ಬಿದ್ದಿದೆ. ಸಾಮಾಜಿಕ ಜಾಲತಾಣದ ಮೂಲಕ ಪ್ರಮೋದ್​ ಮುತಾಲಿಕ್ ಕಾಂಗ್ರೆಸ್​ನ ಬಿ ಟೀಮ್ ಎಂದು ಹೇಳುತ್ತಿದೆ. ಇದರಿಂದಾಗಿ ಪ್ರಮೋದ ಮುತಾಲಿಕ್ ಗರಂ ಆಗಿದ್ದಾರೆ.

ಪ್ರಮೋದ್​ ಮುತಾಲಿಕ್ ಹಿಂದೂ, ಮುಸ್ಲಿಂ ಎಂಬ ಯಾವುದೇ ವಿಚಾರಗಳು ಬಂದರೂ ಮೊದಲ ಸಾಲಿನಲ್ಲಿ ನಿಂತು ಹಿಂದೂಗಳ ಪರ ಗಟ್ಟಿಯಾಗಿ ಮಾತಾಡುವ ವ್ಯಕ್ತಿ. ಹಿಜಾಬ್, ಹಲಾಲ್ ಕಟ್, ಮಸೀದಿಗಳ ಮೇಲೆ ಮೈಕ್ ಅಳವಡಿಸಿರುವ ವಿಚಾರ, ಹಿಂದೂ ದೇವಸ್ಥಾನಗಳ ಸುತ್ತಮುತ್ತ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದೇ ಇರುವ ವಿಚಾರ, ಮುಸ್ಲಿಮರ ಜೊತೆ ವ್ಯಾಪಾರ ಮಾಡದ ವಿಚಾರವಾಗಿ ಎಲ್ಲದರಲ್ಲಿಯೂ ಪ್ರಮೋದ್​ ಮುತಾಲಿಕ್ ಮುಂಚೂಣಿಯಲ್ಲಿದ್ದರು. ಹೀಗಾಗಿ ಅವರಿಗೆ ಅನೇಕ ಕಡೆಗಳಿಂದ ಜೀವ ಬೆದರಿಕೆ ಕರೆಗಳೂ ಬಂದಿವೆ. ಇದೇ ವೇಳೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದರೂ ಕೆಲವು ವೇಳೆ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರದ ವಿರುದ್ಧ ನೇರವಾಗಿ ಪ್ರಮೋದ ಮುತಾಲಿಕ್ ಗುಡುಗಿದ್ದೂ ಇದೆ.

ಈ ಬಾರಿ ಪ್ರಮೋದ್​ ಮುತಾಲಿಕ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಕರಾವಳಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಇಂತಹ ಸಂದರ್ಭದಲ್ಲಿ ಪ್ರಮೋದ್​ ಮುತಾಲಿಕ್ ಸ್ಪರ್ಧಿಸಿದರೆ, ಅದು ನೇರವಾಗಿ ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆ. ಹೀಗಾಗಿ ಬಿಜೆಪಿ ಟೀಮ್ ಇದೀಗ ಹೊಸ ತಂತ್ರವನ್ನು ಹೂಡಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಪ್ರತಿಸಲ ಚುನಾವಣೆ ಬಂದಾಗಲೂ ಪ್ರಮೋದ್​ ಮುತಾಲಿಕ್ ಅಂಥಹವರಿಂದ ಬಿಜೆಪಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಾಭ ಪಡೆದುಕೊಂಡಿದೆ. ಇದೀಗ ತಮ್ಮದೇ ಸರಕಾರದ ವಿರುದ್ಧ ಪ್ರಮೋದ್​ ಮುತಾಲಿಕ್ ಟೀಕೆ ಮಾಡುವುದರಿಂದ ಅವರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ:ಪಾವಗಡ ಸೋಲಾರ್​ ಪಾರ್ಕ್​ ಯೋಜನೆಯಲ್ಲಿ ಅವ್ಯವಹಾರ: ಹೆಚ್​ ಡಿ ಕುಮಾರಸ್ವಾಮಿ ಸ್ಫೋಟಕ ಆರೋಪ

ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕರು ಹೇಳುವುದೇ ಬೇರೆ. ಮುತಾಲಿಕ್ ಯಾವತ್ತು ಕಾಂಗ್ರೆಸ್ ಬಿ ಟೀಮ್ ಆಗಲು ಸಾಧ್ಯವೇ ಇಲ್ಲ. ಎ ಟೀಮ್, ಬಿ ಟೀಮ್ ಎನ್ನುವುದೆಲ್ಲ ಬಿಜೆಪಿಯವರದ್ದೇ. ಅಂತಹ ಯಾವುದೇ ಟೀಮ್ ಕಾಂಗ್ರೆಸ್ ನಲ್ಲಿ ಇಲ್ಲ ಎಂದು ಹೇಳುತ್ತಾರೆ. ಇದೀಗ ಚುನಾವಣೆ ಸಮೀಪ ಬಂದಿರುವುದರಿಂದ ಆರೋಪಪ್ರತ್ಯಾರೋಪ ಹೆಚ್ಚಾಗುತ್ತಾ ಹೋಗುತ್ತಿವೆ. ಇಂತಹ ವೇಳೆ ಜಾತಿ, ಧರ್ಮಗಳನ್ನೇ ಮುಂದಿಟ್ಟುಕೊಂಡು ನಡೆಯುತ್ತಿರುವ ಸಂಘರ್ಷ ಮಹತ್ವ ಪಡೆಯುತ್ತವೆ. ಇದೇ ಕಾರಣಕ್ಕೆ ಬಿಜೆಪಿ ತನ್ನ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್​ಗೆ ಇಂತಹ ತಂತ್ರಗಳ ಮೊರೆ ಹೋಗಿದ್ದರೆ, ಅತ್ತ ಇದನ್ನೇ ಬಳಸಿಕೊಂಡು ಲಾಭ ತೆಗೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ