ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್: ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಿಯೋಗ

ಕಲಬುರಗಿ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಸಂಬಂಧ ಮುಸ್ಲಿಮರ ವಿರುದ್ಧ ದಾಖಲಾದ 13 ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಕೈಗೊಂಡ ತೀರ್ಮಾನವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಬಿಜೆಪಿ ಆಯೋಗವು ರಾಜ್ಯಪಾಲರ ಮೊರೆ ಹೋಗಿದ್ದು, ಕೇಸ್ ವಾಪಸ್ ಪಡೆದ ನಿರ್ಣಯ ರದ್ದುಪಡಿಸಲು ಸೂಚಿಸಬೇಕೆಂದು ಮನವಿ ಮಾಡಿದೆ.

ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್: ರಾಜ್ಯಪಾಲರ ಮೊರೆ ಹೋದ ಬಿಜೆಪಿ ನಿಯೋಗ
Karnataka Bjp
Edited By:

Updated on: Jun 02, 2026 | 4:45 PM

ಬೆಂಗಳೂರು, (ಜೂನ್ 02):  ಕಲಬುರಗಿ (Kalaburagi) ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ (Ladle Mashak Dargah) ಹೊಸ ತಿರುವು ಪಡೆದುಕೊಂಡಿದೆ. ಆಳಂದದ (Aland) ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣ ವಾಪಸ್ ಪಡೆದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಲು ಸೂಚಿಸಬೇಕು ಎಂದು ಬಿಜೆಪಿ (BJP) ನಿಯೋಗ ರಾಜ್ಯಪಾಲರಿಗೆ (Governer) ದೂರು ನೀಡಿದೆ. ಇಂದು (ಜೂ.2) ಮಧ್ಯಾಹ್ನ 1 ಗಂಟೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿ ಮಾಡಿ, ದೂರು ಸಲ್ಲಿಸಿದೆ.

ಮುಖ್ಯಾಂಶಗಳು

  • ಆಳಂದದ ಲಾಡ್ಲೆ ಮಶಾಕ್ ದರ್ಗಾ ಘರ್ಷಣೆ ಕೇಸ್ ಹಿಂಪಡೆಯುವ ನಿರ್ಧಾರ ವಿಚಾರ
  • ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​​​ ಭೇಟಿಯಾದ ಬಿಜೆಪಿ ನಿಯೋಗ
  • ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ
  • ಸಚಿವ ಸಂಪುಟ ನಿರ್ಧಾರವನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ
  • 2022ರಲ್ಲಿ ಲಾಡ್ಲೆ ಮಶಾಕ್ ದರ್ಗಾದಲ್ಲಿ ಘರ್ಷಣೆ ನಡೆದಿತ್ತು

ಆಳಂದದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣವನ್ನು ಸರ್ಕಾರ ವಾಪಸ್ ಪಡೆದಿದೆ. ಈ ನಿರ್ಧಾರವನ್ನು ರದ್ದುಗೊಳಿಸಲು ಸರ್ಕಾರಕ್ಕೆ ಸೂಚಿಸುವಂತೆ ಬಿಜೆಪಿ ಆಯೋಗ ತನ್ನ ದೂರಿನ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದೆ. ಜೊತೆಗೆ ಕೇಸ್ ವಾಪಸ್ ಪಡೆದ ನಿರ್ಣಯ ರದ್ದುಪಡಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ಕೊಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ವಿವಾದದ ಕೇಸ್​​ಗಳು ಸೇರಿ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ: ಬಿಜೆಪಿ ವಿರೋಧ

ಇತ್ತೀಚೆಗೆ ಈ ಹಿಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಲಾಡ್ಲೆ ಮಶಕ್ ದರ್ಗಾದಲ್ಲಿ 2022 ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಕೈಗೊಂಡಿದೆ. ಇದರಿಂದ ಹಿಂದೂಪರ ಸಂಘಟನೆಗಳು, ಬಿಜೆಪಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು, ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ಘಟನೆ ಹಿನ್ನೆಲೆ

2022ರ ಮಹಾಶಿವರಾತ್ರಿಯ ದಿನದಂದು ಆಳಂದದಲ್ಲಿ ನಡೆದ ಘಟನೆ ರಾಜ್ಯದ ಗಮನ ಸೆಳೆದಿತ್ತು. ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂ ಭಕ್ತರು ಸಿದ್ಧತೆ ನಡೆಸಿದ್ದರು. ಆದರೆ, ಅದೇ ಸಂದರ್ಭದಲ್ಲಿ ಶಿವಲಿಂಗಕ್ಕೆ ಅವಮಾನ ಎಸಗಲಾಗಿದೆ. ಮತ್ತು ಮಲಮೂತ್ರ ವಿಸರ್ಜನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಯು ಸ್ಥಳೀಯವಾಗಿ ಉದ್ವಿಗ್ನತೆಯನ್ನು ಸೃಷ್ಟಿಸಿತು. ಪರಿಸ್ಥಿತಿ ತಿಳಿಗೊಳಿಸಲು ಹಾಗೂ ಸ್ಥಳವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲು ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿದ್ದರು. ಈ ವೇಳೆ, ಗುಂಪೊಂದು ಅಧಿಕಾರಿಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿತ್ತು. ಈ ಗಲಭೆಗೆ ಸಂಬಂಧಿಸಿದಂತೆ ಸುಮಾರು 400ಕ್ಕೂ ಹೆಚ್ಚು ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Kiran Haniyadka
Follow Us