ದಾವಣಗೆರೆ: ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸರ್ಕಾರ ಹಲವು ಪರಿಹಾರ ಕಾರ್ಯಗಳನ್ನು ಘೋಷಿಸಿದೆ. ವೈದ್ಯಕೀಯ, ಆರ್ಥಿಕ ನೆರವು ನೀಡಲು ಮುಂದಾಗಿದೆ. ಸರ್ಕಾರ ಮಾತ್ರವಲ್ಲದೇ ಸಾಮಾಜಿಕವಾಗಿ ಕೂಡ ಹಲವು ಸಂಘಟನೆಗಳು ಒಂದಾಗಿ ಕೊವಿಡ್-19 ವಿರುದ್ಧ ಹೋರಾಡಲು ಸಹಕಾರ ನೀಡುತ್ತಿದ್ದಾರೆ. ಆಯಾ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು, ನಾಯಕರು ಕೆಲಸ ಮಾಡುತ್ತಿದ್ದಾರೆ. ಒಂದಷ್ಟು ಕಡೆಗಳಲ್ಲಿ ರಾಜಕಾರಣಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಇದ್ದರೂ ಮತ್ತುಳಿದ ಕೆಲವೆಡೆ ರಾಜಕೀಯ ನಾಯಕರೂ ಸಹಕಾರ ತೋರುತ್ತಿದ್ದಾರೆ.
ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೊರೊನಾ ಸೋಂಕಿತರಿಗೆ ಸಹಾಯ ಮಾಡುವಲ್ಲಿ ಕೈಜೋಡಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ವಿವಿಧ ರೀತಿಯಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಸಾಮಾಜಿಕವಾಗಿ ಆತ್ಮಸ್ಥೈರ್ಯ ತುಂಬಲು ಕಾರಣರಾಗುತ್ತಿದ್ದಾರೆ. ಇಂದು (ಮೇ 23) ರೇಣುಕಾಚಾರ್ಯ ಕೊವಿಡ್ ಕೇರ್ ಸೆಂಟರ್ನಲ್ಲಿ ಅಡುಗೆ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿರುವ ಕೊವಿಡ್ ಕೇರ್ ಸೆಂಟರ್ನಲ್ಲಿ ಅಡುಗೆ ಮಾಡಿದ್ದಾರೆ. 100ಕ್ಕೂ ಹೆಚ್ಚು ಸೋಂಕಿತರಿರುವ ಕೊವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ, ಅಡುಗೆ ಮಾಡಿ ಸೋಂಕಿತರಿಗೆ ಶಾಸಕ ರೇಣುಕಾಚಾರ್ಯ ಧೈರ್ಯ ತುಂಬಿದ್ದಾರೆ.
ಈ ಮೊದಲು, ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಕೊರೊನಾದಿಂದ ಗುಣಮುಖರಾದವರಿಗೆ ಪುಷ್ಪವೃಷ್ಟಿ ಮಾಡಿದ್ದರು. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಕೊವಿಡ್ ಕೇರ್ ಸೆಂಟರ್ನಲ್ಲಿ ಪುಷ್ಪವೃಷ್ಟಿ ಮಾಡಲಾಗಿತ್ತು. ಅಲ್ಲದೆ, ಕೊವಿಡ್ನಿಂದ ಗುಣಮುಖರಾದ 12 ಜನರಿಗೆ ರೇಣುಕಾಚಾರ್ಯ ಸಿಹಿ ಹಂಚಿದ್ದರು.
ಎಲ್ಲಾ ರೋಗಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮುಂದಾಗಿದ್ದರು. ಬೆಳ್ಳಂಬೆಳಿಗ್ಗೆಯೇ ತಮ್ಮ ಸ್ವಗೃಹದ ಮುಂದೆ ಸೋಂಕಿತರಿಗಾಗಿ ಇಡ್ಲಿ ತಯಾರಿಸಿ ಉಪಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು. ರೇಣುಕಾಚಾರ್ಯ ದಂಪತಿ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಮ್ಮ ಸ್ವಗೃಹದ ಮುಂದೆ ಇಡ್ಲಿ ತಯಾರಿಸಿದ್ದರು. ಪ್ರತಿನಿತ್ಯವೂ ಕೂಡಾ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಗೆ ಮತ್ತು ಲಸಿಕೆ ಪಡೆಯುವವರಿಗೆ ಜೊತೆಗೆ ಸೋಂಕಿತರ ಸಿಬ್ಬಂದಿಗೆ ಉಪಹಾರ ನೀಡುತ್ತಿದ್ದರು. ಮೇ 16ರಂದು ಬೆಳಿಗ್ಗಿನ ಉಪಹಾರಕ್ಕೆ ಇಡ್ಲಿ ಜೊತೆಗೆ ಚಟ್ನಿ, ಸಂಬಾರ್ ತಯಾರಿಸಿದ್ದರು.
ಕೊರೊನಾ ಸೋಂಕಿತರಿಗೆ ಬಸವ ಜಯಂತಿಯಂದು ರೇಣುಕಾಚಾರ್ಯ ಹೋಳಿಗೆ ಊಟವನ್ನು ಕೂಡ ಹಾಕಿಸಿದ್ದರು. ಅಗತ್ಯ ಸಂದರ್ಭದಲ್ಲಿ ಆಕ್ಸಿಜನ್ ಒದಗಿಸುವ ಮೂಲಕವೂ ಶಾಸಕರು ಸೋಂಕಿತರ ರಕ್ಷಣೆಯ ಕೆಲಸ ಮಾಡಿದ್ದರು.
ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ
Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ
Published On - 6:38 pm, Sun, 23 May 21