ಕೊರೊನಾ ಕಾಲದಲ್ಲಿ ನೆರವಿಗೆ ನಿಂತ ಮಾಲೂರಿನ ಮಾರಿಕಾಂಭ; ನಿರ್ಗತಿಕರಿಗೆ ಮೂರು ಹೊತ್ತಿನ ಊಟ ನೀಡಿ ಸಹಾಯ
ರಾಜ್ಯ ಸರ್ಕಾರ ಏಪ್ರಿಲ್ 29 ರಂದು ಲಾಕ್ಡೌನ್ ಘೋಷಣೆ ಮಾಡಿದ ಮೇಲೆ ಮಾರಿಕಾಂಭ ದೇವಿ ಪಟ್ಟಣದ ಜನರಿಗೆ ತಾಯಿ ಅನ್ನಪೂರ್ಣೆಯಾಗಿದ್ದಾಳೆ. ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ ರೋಗಿಗಳಿಗೆ ಈ ದೇವಾಲಯದಲ್ಲಿ ಪ್ರತಿನಿತ್ಯ ಮೂರು ಹೊತ್ತು ಚಪಾತಿ, ಅನ್ನ, ಪಲ್ಯ, ಸಾರು ಸೇರಿದಂತೆ 5 ಬಗ್ಗೆಯ ಊಟವನ್ನು ನೀಡಲಾಗುತ್ತಿದೆ.
ಕೋಲಾರ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇನ್ನು ಸೋಂಕಿತರ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸುಧಾರಿಸಲು ಲಾಕ್ಡೌನ್ ಘೋಷಣೆ ಮಾಡಿದೆ. ಆದರೆ ಇದರಿಂದಾಗಿ ಸಾವಿರಾರು ಜನ ಊಟ ಇಲ್ಲದೆ ನರಳುವ ಸ್ಥಿತಿ ಎದುರಾಗಿದೆ. ಇಷ್ಟೇ ಅಲ್ಲ ಕೊರೊನಾ ಎಂದು ಆಸ್ಪತ್ರೆ ಸೇರುವ ರೋಗಿಗಳಿಗು ಕೂಡ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಹೀಗಾಗಿ ಕೋಲಾರದ ಜನ ಎಚ್ಛೇತ್ತುಕೊಂಡಿದ್ದು, ಶಕ್ತಿ ದೇವತೆ ಸನ್ನಿಧಿಯನ್ನೇ ಊಟ ತಯಾರಿಸುವ ಕೇಂದ್ರವನ್ನಾಗಿ ಮಾಡಿ ಜನರಿಗೆ ನೆರವು ನೀಡುತ್ತಿದೆ.
ಕೋಲಾರ ಜಿಲ್ಲೆಯ ಜನರ ನಂಬಿಕೆಯ ದೇವರು ಎಂದರೆ ಅದು ಮಾಲೂರಿನ ಮಾರಿಕಾಂಭ ದೇವರು. ಇಲ್ಲಿನ ಜನರಿಗೆ ಮಾರಿಕಾಂಬ ದೇವರ ಮೇಲೆ ಅಷ್ಟೊಂದು ನಂಬಿಕೆ ಇದೆ. ಸದಾ ಕಾಲ ಊರ ಜನರ ಸಂಕಷ್ಟಕ್ಕೆ ಸ್ಪಂದಿಸಿ ಜನರಿಗೆ ಶಕ್ತಿ ನೀಡುವ ದೇವತೆ ಕೊರೊನಾ ಸಂಕಷ್ಟದ ಕಾಲದಲ್ಲೂ ಸ್ಪಂದಿಸುತ್ತಿದ್ದಾಳೆ ಎಂದು ನಂಬಿದ್ದಾರೆ. ಹೀಗಾಗಿ ಮಾಲೂರು ಮಾರಿಕಾಂಭ ಟ್ರಸ್ಟ್ನ ಸದಸ್ಯರು ಕೊರೊನಾ ಸಂಕಷ್ಟದಲ್ಲಿ ಅನೇಕ ನಿರ್ಗತಿಕರಿಗೆ ಮತ್ತು ಬಡವರಿಗೆ ಆಸರೆಯಾಗಿ ಕೆಲಸ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಏಪ್ರಿಲ್ 29 ರಂದು ಲಾಕ್ಡೌನ್ ಘೋಷಣೆ ಮಾಡಿದ ಮೇಲೆ ಮಾರಿಕಾಂಭ ದೇವಿ ಪಟ್ಟಣದ ಜನರಿಗೆ ತಾಯಿ ಅನ್ನಪೂರ್ಣೆಯಾಗಿದ್ದಾಳೆ. ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ ರೋಗಿಗಳಿಗೆ ಈ ದೇವಾಲಯದಲ್ಲಿ ಪ್ರತಿನಿತ್ಯ ಮೂರು ಹೊತ್ತು ಚಪಾತಿ, ಅನ್ನ, ಪಲ್ಯ, ಸಾರು ಸೇರಿದಂತೆ 5 ಬಗ್ಗೆಯ ಊಟವನ್ನು ನೀಡಲಾಗುತ್ತಿದೆ. ಜೊತೆಗೆ ಕೊರೊನಾದಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಮತ್ತು ನಿರ್ಗತಿಕರಿಗೆ ಮೂರು ಹೊತ್ತಿನ ಊಟವನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ. ಈ ಮೂಲಕ ಪ್ರತಿನಿತ್ಯ ಸುಮಾರು 400-500 ಜನರಿಗೆ ಮಾರಿಕಾಂಭ ಟ್ರಸ್ಟ್ನಿಂದ ಊಟ ನೀಡಲಾಗುತ್ತಿದೆ.
ಇನ್ನು ಟ್ರಸ್ಟ್ ವತಿಯಿಂದ ಮತ್ತೊಂದು ಬಹುದೊಡ್ಡ ಕಾರ್ಯ ಇಲ್ಲಿ ಮಾಡಿದ್ದಾರೆ. ಅದೆನೆಂದರೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ 12 ಐಸಿಯು ಬೆಡ್ಗಳನ್ನು ಮಾಡಿದ್ದು, ಉಸಿರಾಟದ ತೊಂದರೆಯಿಂದ ಬಳಲುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಸೋಂಕಿಗೆ ತುತ್ತಾಗಿ ಹೋಮ್ ಐಸೋಲೇಷನ್ನಲ್ಲಿರುವ ರೋಗಿಗಳಿಗೆ ಮೆಡಿಸಿನ್ ಕಿಟ್ಗಳನ್ನು ವ್ಯವಸ್ಥೆ ಮಾಡಿದ್ದು, ಇದನ್ನು ಮನೆ ಮನೆಗೂ ತಲುಪಿಸುವಂತಹ ಕೆಲಸ ಮಾಡುತ್ತಿದ್ದಾರೆ.
ಕೊವಿಡ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಬೇಕಾಗುವಂತ ಸ್ಯಾನಿಟೈಜರ್ ಮಾಸ್ಕ್, ಗ್ಲೌಸ್, ಸೇರಿದಂತೆ ಸುಮಾರು 1 ಸಾವಿರ ಬೆಲೆ ಬಾಳುವ ಕಿಟ್ಗಳನ್ನು ನೀಡಲಾಗುತ್ತಿದೆ. ಸತತವಾಗಿ 24 ದಿನಗಳಿಂದ ಟ್ರಸ್ಟ್ನ ಸಿಬ್ಬಂದಿ ಪಟ್ಟಣದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 25 ಜನ ಸ್ವಯಂ ಸೇವಕರು ಈ ಕಾರ್ಯಕ್ಕೆ ಕೈಜೋಡಿಸಿದ್ದು, ಆ ಮೂಲಕ ಜನರ ಸಂಕಷ್ಟದ ಕಾಲದಲ್ಲಿ ನೆರವಿಗೆ ನಿಂತಿದ್ದಾರೆ.
ಇದನ್ನೂ ಓದಿ:
ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾವಿರ ಮಕ್ಕಳಿಗೆ ಸಹಾಯ ಮಾಡುತ್ತಿರುವ ನಟಿ ಲಕ್ಷ್ಮೀ ಮಂಚು
ಕೊರೊನಾ ಚಿಕಿತ್ಸೆಗೆ ನೆರವು, ಆರ್ಥಿಕ ಸಹಾಯ, ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣ; ಸುತ್ತೂರು ಮಠದಿಂದ ಹಲವು ಸತ್ಕಾರ್ಯ