ಬಿಜೆಪಿ ಶಾಸಕ ಮುನಿರತ್ನ ಮತ್ತೆ 14 ದಿನ ಜೈಲು ಪಾಲು; ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

| Updated By: ಗಣಪತಿ ಶರ್ಮ

Updated on: Sep 21, 2024 | 12:12 PM

ಜಾತಿ ನಿಂದನೆ ಹಾಗೂ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಅತ್ಯಾಚಾರ ಪ್ರಕರಣ ಸಂಕಷ್ಟ ತಂದೊಡ್ಡಿದೆ. ಶುಕ್ರವಾರ ಬಂಧನಕ್ಕೊಳಗಾಗಿದ್ದ ಅವರನ್ನು ಶನಿವಾರ ಕೋರ್ಟ್​ಗೆ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಿಜೆಪಿ ಶಾಸಕ ಮುನಿರತ್ನ ಮತ್ತೆ 14 ದಿನ ಜೈಲು ಪಾಲು; ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ
ಮುನಿರತ್ನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
Follow us on

ಬೆಂಗಳೂರು, ಸೆಪ್ಟೆಂಬರ್ 21: ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಶನಿವಾರ ಆದೇಶ ನೀಡಿದೆ. ಇದರೊಂದಿಗೆ ಅವರು ಮತ್ತೆ ಜೈಲು ಪಾಲಾಗಿದ್ದಾರೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರನ್ನು ಸುತ್ತಿಕೊಂಡಿತ್ತು.

ಮುನಿರತ್ನನ್ನು ಪೊಲೀಸರು ಶನಿವಾರ ಕೋರ್ಟ್​ಗೆ ಹಾಜರುಪಡಿಸಿದ್ದು, ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ನ್ಯಾಯಾಧೀಶರ ಎದುರು ಮುನಿರತ್ ಅಳಲು

ವಿಚಾರಣೆ ವೇಳೆ ನ್ಯಾಯಾಧೀಶರ ಬಳಿ ಮುನಿರತ್ನ ಅಳಲು ತೋಡಿಕೊಂಡರು. ನನ್ನನ್ನು ಜೈಲಲ್ಲಿ ಇರಿಸಲು ವ್ಯವಸ್ಥಿತವಾದ ಸಂಚು ಹೂಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಇದೆಲ್ಲ ಶುರುವಾಗಿದೆ. ಐದು ವರ್ಷಗಳ ಬಳಿಕ ಅತ್ಯಾಚಾರ ದೂರು ಕೊಡಿಸಿದ್ದಾರೆ. ಆಕೆ ಮೊದಲೇ ಕೊಡಬಹುದಿತ್ತಲ್ಲವೇ? ನನ್ನನ್ನು ಪೂರ್ತಿ ಐದು ವರ್ಷ ಜೈಲಲ್ಲಿ ಇಡಲು ಪ್ಲಾನ್ ಮಾಡಿಸಿದ್ದಾರೆ. ನಾನು ಜನಪ್ರತಿನಿಧಿಯಾದವನು, ನನಗೆ ಜನರ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿದೆ. ನಾನು ಈ ನ್ಯಾಯಾಲಯದಲ್ಲೆ ಬೇಕಾದರೆ ರಾಜೀನಾಮೆ ಕೊಡುತ್ತೇನೆ. ಆದರೆ ಈ ತರ ಹಿಂಸೆ ತಡೆದುಕೊಳ್ಳಲು ಆಗಲ್ಲ ಎಂದು ಮುನಿರತ್ನ ಅಲವತ್ತುಕೊಂಡರು.

ಇದನ್ನೂ ಓದಿ: ಮುನಿರತ್ನ ಬಳಿ ಇದೆ ಹಲವರ ಖಾಸಗಿ ವಿಡಿಯೋ, ಎದುರಾಳಿಗಳ ಹಣಿಯಲು ಬಳಕೆ: ದೂರಿನಲ್ಲಿ ಉಲ್ಲೇಖ

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನೀವು ಎಲ್ಲಿ ಕೊಡಬೇಕೋ ಅಲ್ಲಿಯೇ ರಾಜೀನಾಮೆ ಕೊಡಿ ಎಂದರು. ನಂತರ, ಪೊಲೀಸ್ ಕಸ್ಟಡಿಗೆ ಕೇಳುತ್ತೀರಾ ಎಂದು ಪೊಲೀಸರನ್ನು ಪ್ರಶ್ನಿಸಿದರು. ಇದೇ ವೇಳೆ, ‘ಇಲ್ಲ’ ಎಂದು ಪಿಪಿ ಉತ್ತರ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:06 pm, Sat, 21 September 24