ಬೆಂಗಳೂರು: ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಆದಾಗ ದೂರು ನೀಡಲು ತಂತ್ರಜ್ಞಾನ ಬಳಸಬೇಕು. ದೂರು ನೀಡಲು ತಕ್ಷಣಕ್ಕೆ ಮೊಬೈಲ್ ಆ್ಯಪ್ ಮೂಲಕ ಅವಕಾಶ ಸಿಗುವಂತಾಗಬೇಕು. ತನಿಖೆ ಮಾಡುವಾಗ ನೂರು ಬಾರಿ ಪ್ರಶ್ನೆಗಳಿಂದಲೇ ಅತ್ಯಾಚಾರ ಮಾಡ್ತಾರೆ. ಪೊಲೀಸ್ ಇಲಾಖೆಗೆ ಮಹಿಳಾ ಶಾರ್ಪ್ ಶೂಟರ್ಗಳನ್ನು ಸೇರಿಕೊಳ್ಳಬೇಕು. ಪೊಲೀಸ್ ಇಲಾಖೆಗೆ ಹೆಚ್ಚು ಮಹಿಳೆಯರು ಸೇರಬೇಕು. ಇದರಿಂದ ಪೊಲೀಸ್ ಠಾಣೆಗೆ ಬರಲು ಮಹಿಳೆಯರಿಗೆ ಇನ್ನಷ್ಟು ಧೈರ್ಯ ಬರುತ್ತದೆ ಎಂದು ಬಿಜೆಪಿ ಎಂಎಲ್ಸಿ ತೇಜಸ್ವಿನಿ ಗೌಡ ವಿಧಾನ ಪರಿಷತ್ ಕಲಾಪದಲ್ಲಿ ಒತ್ತಾಯಿಸಿದ್ದಾರೆ.
ಮಹಿಳೆಯನ್ನು ಅನುಭವಿಸಲು, ಜಾಹೀರಾತಿಗೆ, ಎಲ್ಲ ವಿಷಯಕ್ಕೂ ಸರಕು ಆದಾಗಿನಿಂದ ಸಮಸ್ಯೆ ಶುರುವಾಗಿದೆ. ನಮ್ಮ ದೇಶದಲ್ಲಿ ಕಾನೂನು ಗಟ್ಟಿಯಾಗಿದ್ದರೂ ಯಾಕೆ ಅಪರಾಧಿಗಳು ತಪ್ಪಿಸಿಕೊಳ್ತಿದ್ದಾರೆ? ಕಾನೂನು ಎಷ್ಟೇ ಚೆನ್ನಾಗಿದ್ದರೂ ಕೂಡ ಅದರ ಜಾರಿ ಸರಿಯಾಗದಿದ್ದರೆ ಖುಲಾಸೆ ಆಗುತ್ತಾರೆ. ಮಹಿಳೆಯನ್ನು ಕೆಟ್ಟದಾಗಿ ನೋಡಿ ಕಣ್ಣಲ್ಲೇ ಅತ್ಯಾಚಾರ ಮಾಡ್ತಾರೆ. ನಮ್ಮ ದೇಶದಲ್ಲಿ ಫ್ರೀ ಸೆಕ್ಸ್, ನಮ್ಮಲ್ಲಿ ಕುಟುಂಬ ವ್ಯವಸ್ಥೆ ಇದೆ. ಇಲ್ಲಿ ಮನಸ್ಸಿಗೆ ಅನಿಸಿದ್ದನ್ನೆಲ್ಲ ಅನುಭೋಗಿಸೋ ಹಾಗಿಲ್ಲ ಎನ್ನುವುದಕ್ಕೆ ಕಾನೂನು ಇದೆ. ಆದರೆ ಅದನ್ನು ಜಾರಿಗೆ ತರೋದು ಯಾರು? ಎಂದು ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮಹಿಳೆಯರು ಮಾತ್ರವಲ್ಲದೆ ಮಕ್ಕಳ ಮೇಲೆ ಪೋರ್ನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮುಂಬೈನಲ್ಲಿ ಒಬ್ಬ ದೊಡ್ಡ ಮನುಷ್ಯ ಅಶ್ಲೀಲ ಚಿತ್ರಗಳ ಸಿಡಿ ಮಾಡ್ತಾನೆ, ಪೋರ್ನ್ ಮಾಡ್ತಾನೆ. ಅವನಿಗೆ ಜಾಮೀನು ಸಿಕ್ಕಿ ಈಗ ಬಿಡುಗಡೆಯಾಗಿದ್ದಾನೆ ಅಂದರೆ ಏನನ್ನಬೇಕು? ಎಂದು ರಾಜ್ ಕುಂದ್ರಾ ಕುರಿತು ತೇಜಸ್ವಿನಿ ಗೌಡ ಪ್ರಸ್ತಾಪಿಸಿದ್ದಾರೆ.
ಗೃಹ ಇಲಾಖೆಯಲ್ಲಿ ಮಹಿಳೆ, ಮಕ್ಕಳಿಗೆ ಸುರಕ್ಷತೆ ಕಲ್ಪಿಸುವುದು ಮೊದಲ ಕರ್ತವ್ಯ. ಆದರೆ, ಇಂದು ಯಾವ ರೀತಿಯ ಸುರಕ್ಷತೆ ಸಿಗುತ್ತಿದೆ? ಸೆ. 21ರಂದು ಮಂಗಳೂರಿನಲ್ಲಿ ಒಂದು ಕೇಸ್ ಆಗಿದೆ. ಆ 21 ವರ್ಷದ ಹುಡುಗಿ ಮೈಸೂರಿನ ನಂಜನಗೂಡಿನವಳು. ಆಕೆ ಓರ್ವ ವಿವಾಹಿತ ಪುರುಷನ ಮೋಸದ ಪ್ರೇಮದ ಜಾಲಕ್ಕೆ ಬೀಳುತ್ತಾಳೆ. ಅವಳನ್ನು ಮಂಗಳೂರಿನ ಮುಡಿಪು ಎಂಬ ಭಾಗದಲ್ಲಿರುವ ಒಬ್ಬ ವ್ಯಕ್ತಿ ಆಕೆಯನ್ನು ಮರುಳು ಮಾಡಿ ಆಕೆಯಿಂದ 26 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ನಂತರ ಆಕೆಯ ಅರೆನಗ್ನ ಫೋಟೋಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡುತ್ತಾನೆ. ಆಕೆ ಆತನ ವಿರುದ್ಧ ದೂರು ನೀಡಲು ಹೋಗುತ್ತಾಳೆ. ಆಕೆಗೆ ತಂದೆ ಇಲ್ಲ, ತಾಯಿಗೆ ಅನಾರೋಗ್ಯ. ಹೀಗಾಗಿ, ನನ್ನ ಹಣವನ್ನು ವಾಪಾಸ್ ಕೊಡು ಎಂದ ಆಕೆಯನ್ನು ಮನೆಗೆ ಕರೆಸಿ ಆತನ ಮನೆಯವರು ಅವಳಿಗೆ ಹೊಡೆದಿದ್ದಾರೆ. ಇದರ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ದೂರು ದಾಖಲಿಸಿಕೊಳ್ಳುವುದನ್ನು ಬಿಟ್ಟು ಮಂಗಳೂರಿನ ಪೊಲೀಸರು ಆಕೆಯನ್ನು ತಾವೇ ಬಸ್ ಹತ್ತಿಸಿ ವಾಪಾಸ್ ಮನೆಗೆ ಕಳಿಸುತ್ತಾರೆ. ಈ ವಿಷಯ ಮಾಧ್ಯಮಗಳಿಗೆ ಗೊತ್ತಾಗಿ ಕೇಳಿದಾಗ ಆಕೆಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಕೊನೆಗೆ ಮಾಧ್ಯಮದವರು, ಸಂಘ ಪರಿವಾರದವರು, ಜನಪ್ರತಿನಿಧಿಯೊಬ್ಬರು ಆಕೆಯ ಸಹಾಯಕ್ಕೆ ಬರುತ್ತಾರೆ. ಆಕೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪೊಲೀಸ್ ಇಲಾಖೆ ದಕ್ಷ ಆಡಳಿತ ನೀಡದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ತೇಜಸ್ವಿನಿ ಗೌಡ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಾನಮತ್ತ ಯುವತಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ ಆರೋಪ; ಕ್ಯಾಬ್ ಚಾಲಕನ ಬಂಧನ
Stop Rape: ಮೈಸೂರಿನ ಖಾಸಗಿ ಫಾರ್ಮ್ಹೌಸ್ನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿಯ ಬಂಧನ
(BJP MLC Tejaswini Gowda urges Karnataka Government to Appoint Women Sharp Shooters in Police Department)