ಬೆಂಗಳೂರು: ‘ಮುಸ್ಲಿಂ ವ್ಯಾಪಾರಿಗಳಿಗೆ ಕಿರುಕುಳ ಕೊಡುವುದು ತಪ್ಪು. ಅದು ಬಿಜೆಪಿಯ ಉದ್ದೇಶವೂ ಅಲ್ಲ’ ಎಂದು ಬಿಜೆಪಿ ನಾಯಕ ಮತ್ತು ಸಂಸದ ಈರಣ್ಣ ಕಡಾಡಿ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಿರುಕುಳ ನೀಡುವವರಿಗೆ ಬಿಜೆಪಿ ಪಕ್ಷದ ಬೆಂಬಲ ಇರುವುದಿಲ್ಲ. ಯಾವುದೇ ಸಮುದಾಯದ ವ್ಯಾಪಾರಿಗಳಿಗೆ ತೊಂದರೆ ಕೊಡುವುದು ತಪ್ಪು ಎಂದು ತಿಳಿಸಿದರು. ಹೈಕೋರ್ಟ್ ಆದೇಶ ಪಾಲಿಸದೆ ಉದ್ಧಟತನದ ವರ್ತನೆಯನ್ನು ಕೆಲವರು ತೋರುತ್ತಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಬರುತ್ತಿದೆ ಎಂದು ತಿಳಿಸಿದರು. ಇಂಥ ಸಂಗತಿಗಳು ಕರ್ನಾಟಕದಲ್ಲಿ ಮುಂದುವರಿಯಬಾರದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಗ್ರಾಮೀಣ ಭಾಗದಲ್ಲಿ ಈ ವಿಚಾರಗಳು ಚರ್ಚೆಗೆ ಬರುತ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಮಸಾಲೆ ಸುದ್ದಿಯಾಗಿ ಚರ್ಚೆಗಳು ನಡೆಯುತ್ತಿವೆ ಎಂದು ವಿಷಾದಿಸಿದರು.
ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು, ಯಾರೇ ಅಂಥ ಕೆಲಸ ಮಾಡಿದರೂ ನಾವು ಸಮರ್ಥನೆ ಮಾಡುವುದಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದರು. ನುಗ್ಗಿಕೇರಿ ಘಟನೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಅಖಂಡ ಶ್ರೀನಿವಾಸ್ ರವರ ಮನೆಗೆ ಬೆಂಕಿ ಬಿದ್ದಾಗ ಎಲ್ಲರೂ ಸುಮ್ಮನಿದ್ದರು. ಕಲ್ಲಂಗಡಿ ಹಣ್ಣಿನ ಬಗ್ಗೆ ತೋರಿಸುವ ಕಳಕಳಿ, ಸಂಕಟವನ್ನ ತಲೆ ಹೊಡೆದಾಗಲೂ ತೋರಿಸಬೇಕಿತ್ತು. ಖಂಡಿಸಿದರೆ ವೋಟು ಹೋಗುತ್ತೆ ಅನ್ನೋ ಸಂಕಟವೇ ಎಂದು ವ್ಯಂಗ್ಯವಾಡಿದರು.
ವ್ಯಾಪಾರಿಗೆ ಕುಮಾರಸ್ವಾಮಿ ನೆರವು
ಧಾರವಾಡದ ನುಗ್ಗಿಕೇರಿ ಗ್ರಾಮದಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಿ ನಬಿಸಾಬ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ₹ 10 ಸಾವಿರ ನೆರವು ನೀಡಿದರು. ಗಲಾಟೆಯಲ್ಲಿ ವ್ಯಾಪಾರಿಯ ಕಲ್ಲಂಗಡಿ ಹಣ್ಣುಗಳನ್ನು ಹಾಳುಗೆಡವಲಾಗಿತ್ತು.
ಹೇಯ ಕೃತ್ಯ: ದಿನೇಶ್ ಗುಂಡೂರಾವ್
ಧಾರವಾಡದ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಶ್ರೀರಾಮಸೇನೆಯವರು ನಡೆಸಿರುವ ಪುಂಡಾಟವನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮೂಲಕ ಖಂಡಿಸಿದ್ದಾರೆ. ಇದು ಹೇಯ ಮತ್ತು ಹೀನ ಕೃತ್ಯ. ಬಡ ಮುಸ್ಲಿಮನೊಬ್ಬನ ಅಂಗಡಿ ನಾಶಪಡಿಸಿ, ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿದ ಶ್ರೀರಾಮಸೇನೆಯವರು ಸಾಧಿಸಿದ್ದೇನು? ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ? ಶ್ರೀರಾಮಸೇನೆಯವರು ನಡೆಸಿದ ದಾಂದಲೆ ಭಯೋತ್ಪಾದನೆಗೆ ಸಮ. ಶ್ರೀರಾಮನ ತತ್ವಾದರ್ಶಗಳನ್ನು ನಿಜವಾಗಿ ಪಾಲಿಸುವವರು ಇಂತಹ ಕಿರಾತಕ ಕೆಲಸ ಮಾಡುವುದಿಲ್ಲ. ಶ್ರೀರಾಮಸೇನೆಯ ಕೃತ್ಯ ರಾಮನ ಹೆಸರಿಗೆ ಕಳಂಕ ತರುವ ಯತ್ನ. ದಾಂದಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
1
ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯವರು ನಡೆಸಿರುವ ಪುಂಡಾಟ ಹೇಯ ಮತ್ತು ಹೀನ ಕೃತ್ಯ.
ಬಡ ಮುಸ್ಲಿಮನೊಬ್ಬನ ಅಂಗಡಿ ನಾಶಪಡಿಸಿ,ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿದ ಶ್ರೀರಾಮ ಸೇನೆಯವರು ಸಾಧಿಸಿದ್ದೇನು?
ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 10, 2022
ಸಾಮರಸ್ಯ, ಸಹಬಾಳ್ವೆ ಮತ್ತು ಶಾಂತಿಗೆ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೀಗ ಬೊಮ್ಮಾಯಿ ಸರ್ಕಾರದಲ್ಲಿ ಕರ್ನಾಟಕವೂ ’ಜಂಗಲ್ ರಾಜ್’ ಆಗಿ ಬದಲಾಗುತ್ತಿದೆ. ಬಸವಣ್ಣ ಶರಣಾದಿ ಪರಂಪರೆಯಿಂದ ಬಂದ ನೀವು ಮಾಡುತ್ತಿರುವುದು ನಿಮಗೆ ಸಮ್ಮತವೆ. ಕಳೆದ ಕೆಲ ದಿನಗಳಿಂದ ರಾಜ್ಯ ಅಸಹಿಷ್ಣುತೆಯ ನಾಡಾಗಿದೆ. ಸಮಾಜಘಾತುಕ ಶಕ್ತಿಗಳು ಕೆಲ ಅಭಿಯಾನದ ಮೂಲಕ ಮಾನವ ದ್ವೇಷ ಹರಡುತ್ತಿವೆ. ಇಷ್ಟಾದರೂ ಬೊಮ್ಮಾಯಿಯವರು ಸರ್ಕಾರಕ್ಕೂ ಸಮಾಜಘಾತುಕ ಶಕ್ತಿಗಳ ಅಭಿಯಾನಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ. ಬೊಮ್ಮಾಯಿಯವರ ಕಣ್ಣ ಇಶಾರೆ ಇಲ್ಲದೆ ಸಮಾಜ ಘಾತುಕ ಶಕ್ತಿಗಳು ಹೀಗೆ ಬಾಲ ಬಿಚ್ಚಲು ಸಾಧ್ಯವೆ? ಬೊಮ್ಮಾಯಿಯವರೆ, ನೀವು ಹಸುವಿನ ವೇಷ ತೊಟ್ಟ ಗೋಮುಖವ್ಯಾಘ್ರ ಆಗುವುದು ಬೇಡ. ಮುಖ್ಯಮಂತ್ರಿಯಾಗಿ ನೀವು ಈ ರಾಜ್ಯದ ಯಜಮಾನನಿದ್ದಂತೆ. ನಾಡಿನ ದೊರೆಯಾಗಿ ಸರ್ವರನ್ನು ಸಮಾನವಾಗಿ ಕಾಣುವ ಔದಾರ್ಯ ಬೆಳೆಸಿಕೊಳ್ಳಿ. ಧರ್ಮವನ್ನು ಒಡೆದು ಆಳುವ ನಿಮ್ಮ ನೀತಿ ಕೊನೆಗೆ ನಿಮಗೆ ಮುಳ್ಳಾಗಲಿದೆ ಎಂಬ ಕನಿಷ್ಠ ಪ್ರಜ್ಞೆ ನಿಮಗಿರಲಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮುಸ್ಲಿಂರ ಜೊತೆ ಮದುವೆಯಾಗುವ ಕುಟುಂಬವನ್ನು ಬಹಿಷ್ಕರಿಸಿ; ಸರ್ಕಾರಿ ಲೆಟರ್ ಹೆಡ್ನಲ್ಲೇ ಪತ್ರ!
Published On - 1:18 pm, Sun, 10 April 22