ಬೆಂಗಳೂರು: ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಗಳಲ್ಲಿ ವಿಜಯ ಪತಾಕೆ ಹಾರಿಸಿರುವ ಕಮಲ ಪಕ್ಷ ಈಗ ರಾಜ್ಯಾದ್ಯಂತ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಈಗಾಗಲೇ, ರಾಜ್ಯಾದ್ಯಂತ ಶೇ. 80 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಪಕ್ಕಾ ಪ್ಲಾನ್ ಸಿದ್ಧಪಡಿಸಿದೆ. ಹಾಗಾದರೆ, ಹೇಗೆ ನಡೀತಿದೆ ಕಮಲ ಪಾಳಯದಲ್ಲಿ ತಯಾರಿ? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸೋಕೆ ರಣತಂತ್ರ ರೂಪಿಸುತ್ತಿದೆ. ಅಂದ ಹಾಗೆ, ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ನಿನ್ನೆ ನಡೆದ ಪದಾಧಿಕಾರಿಗಳ ಸಭೆ ಈ ಕುರಿತು ಸುಳಿವು ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚುನಾವಣಾ ರಣತಂತ್ರದ ಬಗ್ಗೆ ಬಿಜೆಪಿ ಪದಾಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.
ಕಾರ್ಯಕರ್ತರಿಗೆ ಪ್ರಶಿಕ್ಷಣ ತರಬೇತಿ
ಬಿಜೆಪಿ ತನ್ನ ಸಿದ್ಧಾಂತ, ಕಾರ್ಯವೈಖರಿ ಮತ್ತು ಚುನಾವಣಾ ರಣತಂತ್ರ ಹೇಗೆ ರೂಪಿಸಬೇಕು ಎಂಬ ವಿಷಯಗಳ ಬಗ್ಗೆ ತನ್ನ ಕಾರ್ಯಕರ್ತರಿಗೆ ಪ್ರಶಿಕ್ಷಣ ತರಬೇತಿ ನಡೆಸುತ್ತಿದೆ. ಡಿಸೆಂಬರ್ 24 ರೊಳಗೆ ಎಲ್ಲಾ ಮಂಡಲಗಳ ವ್ಯಾಪ್ತಿಯಲ್ಲಿ ಈ ಪ್ರಶಿಕ್ಷಣ ತರಬೇತಿ ಮುಗಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.
ಬಿಜೆಪಿ ರಚಿಸಿದ 6 ವಿಶೇಷ ತಂಡಗಳು ರಾಜ್ಯಾದ್ಯಂತ ನಿರಂತರ ಪ್ರವಾಸ ನಡೆಸಲಿದ್ದು ಪ್ರತಿ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಕನಿಷ್ಠ 2 ಸಮಾವೇಶಗಳನ್ನ ನಡೆಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಇದಷ್ಟೇ ಅಲ್ಲ, ನವೆಂಬರ್ 27 ರಿಂದ ಡಿಸೆಂಬರ್ 3 ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸ್ವರಾಜ ಸಮಾವೇಶ ನಡೆಸಲು ಬಿಜೆಪಿ ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಿದೆ.
ಕುಟುಂಬ ಮಿಲನ ಸಮಾವೇಶ
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಒಳಗೊಂಡ ಕುಟುಂಬ ಮಿಲನ ಸಮಾವೇಶ ನಡೆಸಲು ಸಹ ಬಿಜೆಪಿ ತೀರ್ಮಾನಿಸಿದೆ. ಇನ್ನು, 58 ಸಾವಿರ ಬೂತ್ಗಳ ಪೈಕಿ ಚುನಾವಣೆ ನಡೆಯುವ ಪ್ರತಿ ಬೂತ್ನಲ್ಲೂ ಪಂಚರತ್ನ ಸಮಿತಿ ರಚಿಸುವಂತೆ ಬಿಜೆಪಿ ವರಿಷ್ಠರು ಸೂಚಿಸಿದ್ಧಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಡೆಗೂ ಸಮಾವೇಶಗಳನ್ನ ನಡೆಸಲು ಪಕ್ಷ ನಿರ್ಧರಿಸಿದೆ. ಹೀಗಾಗಿ, 6 ವಿಶೇಷ ತಂಡಗಳನ್ನ ರಚನೆ ಮಾಡಲಾಗಿದೆ.
ಪಂಚಾಯಿತಿ ಪಟ್ಟಕ್ಕೆ ಐಡಿಯಾ!
ಟೀಂ ನಂಬರ್-1
ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಡಿಸಿಎಂ ಅಸ್ವತ್ಥ್ ನಾರಾಯಣ, ಶೋಭಾ ಮತ್ತು ಮಹೇಶ ತೆಂಗಿನಕಾಯಿ
ಟೀಂ ನಂಬರ್-2
ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಚಿವ ಸೋಮಣ್ಣ ಮತ್ತು ನಂದೀಶ್
ಟೀಂ ನಂಬರ್-3
ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಶಾಸಕ ಅರವಿಂದ ಲಿಂಬಾವಳಿ ಹಾಗೂ ತುಳಸಿ ಮುನಿರಾಜುಗೌಡ
ಟೀಂ ನಂಬರ್-4
ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ರಾಜೇಂದ್ರ ಮತ್ತು ಸಿದ್ದರಾಜು
ಟೀಂ ನಂಬರ್-5
ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಸಚಿವ ಶ್ರೀರಾಮುಲು ಹಾಗೂ ಸಂಸದ ಪ್ರತಾಪ್ ಸಿಂಹ
ಟೀಂ ನಂಬರ್-6
ಸಚಿವ ಆರ್. ಅಶೋಕ ನೇತೃತ್ವದಲ್ಲಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹಾಗೂ MLC ರವಿಕುಮಾರ್
ಒಟ್ನಲ್ಲಿ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ಶೇ.80 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸುತ್ತಿದೆ. ಇನ್ನು, ಕಾಂಗ್ರೆಸ್ ಮತ್ತು ಜೆಡಿಎಸ್ ಇದುವರೆಗೂ ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ದತೆ ಕುರಿತು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಅದೇನೆ ಇರಲಿ, ಬಿಜೆಪಿ ಮಾತ್ರ ಪಂಚಾಯಿತಿ ಚುನಾವಣೆಗೆ ಈಗಲೇ ಸಿದ್ಧೆತೆ ಆರಂಭಿಸುವ ಮೂಲಕ ಕಾರ್ಯಕರ್ತರನ್ನ ಸಂಘಟಿಸೋ ಕೆಲಸಕ್ಕೆ ಚಾಲನೆ ನೀಡಿದ್ದು, ಇದು ಎಷ್ಟು ಪರಿಣಾಮಕಾರಿ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.