ಬೆಂಗಳೂರು: ಗೋಹತ್ಯೆ ನಿಷೇಧ ಕಾನೂನನ್ನು (Anti-Cow Slaughter Law) ಹಿಂಪಡೆಯುವ ಸುಳಿವು ನೀಡಿರುವ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಅವರ ಹೇಳಿಕೆ ವಿರೋಧಿಸಿ ಬಿಜೆಪಿ ಮಂಗಳವಾರ ಕರ್ನಾಟಕದಾದ್ಯಂತ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಲವಾರು ಬಿಜೆಪಿ ಮುಖಂಡರು ಜಮಾಯಿಸಿ ಪ್ರತಿಭಟನೆಯ ಸಂಕೇತವಾಗಿ ಗೋಪೂಜೆ ನಡೆಸಿದರು. ಆದರೆ, ಬಿಜೆಪಿಯ ಯಾವೊಬ್ಬ ಸಂಸದ ಮತ್ತು ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ.
ಎಮ್ಮೆಗಳನ್ನು ಕಡಿಯಬಹುದಾದರೆ ಹಸುಗಳನ್ನು ಏಕೆ ಕೊಲ್ಲಬಾರದು ಎಂದು ವೆಂಕಟೇಶ್ ಅವರು ಪ್ರಶ್ನಿಸಿದ್ದರು. ಆಮೂಲಕ ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯುವ ಸುಳಿವು ನೀಡಿದ್ದರು.
ಗೋಹತ್ಯೆ ನಿಷೇಧವನ್ನು ಸರ್ಕಾರ ಹಿಂಪಡೆಯಬಾರದು ಎಂದು ಒತ್ತಾಯಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು.
ಇದೇ ವೇಳೆ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಹಿಂಪಡೆಯುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾನೂನನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಅಂತಹ ಪ್ರಸ್ತಾಪ ಇಲ್ಲದಿರುವಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: 12 ವರ್ಷ ಮೇಲ್ಪಟ್ಟ ಹಸುಗಳ ಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ; ಸಿದ್ದರಾಮಯ್ಯ
ಸೋಮವಾರ ವೆಂಕಟೇಶ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, 1964ರ ಕಾಯ್ದೆಯಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಗೋಹತ್ಯೆಗೆ ಅನುಮತಿ ಇದೆ ಮತ್ತು ಕೃಷಿ ಕೆಲಸಕ್ಕೆ ಯಾವುದೇ ಪ್ರಯೋಜನವಿಲ್ಲದ ಹಸುಗಳನ್ನು ಹತ್ಯೆ ಮಾಡಬಹುದು ಎಂಬುದಾಗಿ ಇದೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ