12 ವರ್ಷ ಮೇಲ್ಪಟ್ಟ ಹಸುಗಳ ಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ; ಸಿದ್ದರಾಮಯ್ಯ

12 ವರ್ಷ ಮೇಲ್ಪಟ್ಟ ಹಸುಗಳನ್ನು ಕಡಿಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

12 ವರ್ಷ ಮೇಲ್ಪಟ್ಟ ಹಸುಗಳ ಹತ್ಯೆಗೆ ಕಾನೂನಿನಲ್ಲಿ ಅವಕಾಶವಿದೆ; ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
Ganapathi Sharma
|

Updated on:Jun 05, 2023 | 3:10 PM

ಬೆಂಗಳೂರು: ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು (Anti-Cow Slaughter Law) ಹಿಂಪಡೆಯುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸೋಮವಾರ ಹೇಳಿದ್ದಾರೆ. ಎಮ್ಮೆಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಹತ್ಯೆ ಮಾಡಬಾರದು ಎಂದು ಪ್ರಶ್ನಿಸಿರುವ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, 12 ವರ್ಷ ಮೇಲ್ಪಟ್ಟ ಹಸುಗಳನ್ನು ಕಡಿಯಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾವು ಆ ಬಗ್ಗೆ (ಗೋಹತ್ಯೆ ನಿಷೇಧ ಕಾನೂನನ್ನು ಪರಿಶೀಲಿಸುವುದು) ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. 1964ರ ಕಾಯ್ದೆ ಪ್ರಕಾರ 12 ವರ್ಷ ಮೇಲ್ಪಟ್ಟ ಮತ್ತು ಕೃಷಿ ಚಟುವಟಿಕೆಗಳಲ್ಲಿ ಬಳಸಲು ಸಾಧ್ಯವಾಗದ ಹಸುಗಳ ಹತ್ಯೆ ಮಾಡಲು ಅವಕಾಶವಿದೆ. ಇದನ್ನೇ ವೆಂಕಟೇಶ್ ಕೂಡ ಹೇಳಿದ್ದಾರೆ. ಆದರೆ, ಅವರು ಅದನ್ನು ಸ್ಪಷ್ಟವಾಗಿ ಹೇಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಆಗಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾನೂನನ್ನು ಹಿಂಪಡೆಯುವ ಸಾಧ್ಯತೆಯ ವಿರುದ್ಧ ಬಿಜೆಪಿ ಪ್ರತಿಭಟನೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: Anti-Cow Slaughter Act :ಕರ್ನಾಟಕದಲ್ಲಿ ಶುರುವಾಯ್ತು ಗೋವು ಗಲಾಟೆ: ಬಿಜೆಪಿ-ಕಾಂಗ್ರೆಸ್‌ ಮಧ್ಯೆ ‘ಗೋಹತ್ಯೆ’ ಸಮರ

‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020’ ಇದು 2021 ರಲ್ಲಿ ಜಾರಿಗೆ ಬಂತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಮಸೂದೆಯನ್ನು ವಿರೋಧಿಸಿತ್ತು.

ಮುಖ್ಯಮಂತ್ರಿ, ಸಂಬಂಧಿತ ಸಚಿವರು ತೀರ್ಮಾನಿಸುತ್ತಾರೆ; ಶರಣಬಸಪ್ಪ ದರ್ಶನಾಪುರ

ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ವಿಚಾರವಾಗಿ ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ಕಾಯ್ದೆ ನಿಷೇಧ ಬಗ್ಗೆ ಸಂಪುಟದಲ್ಲಿ ಅಭಿಪ್ರಾಯ ಹೇಳುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಬಜರಂಗದಳ ಸಂಘಟನೆ ನಿಷೇಧ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇಶ ವಿರೋಧಿ ಚಟುವಟಿಕೆ ಮಾಡುವ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದೇಶ ವಿರೋಧಿ ಚಟುವಟಿಕೆ ಯಾರೇ ಮಾಡಿದ್ರೂ ಕ್ರಮ ಆಗಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Mon, 5 June 23