ಬೆಳಗಾವಿ: ಬೈ ಎಲೆಕ್ಷನ್ ಫಲಿತಾಂಶ ಹೊರಬೀಳುತ್ತಿದ್ದಂತೆ ತಾವೇಕೆ ಕಾಂಗ್ರೆಸ್ ಬಿಡುವಂತಾಯಿತು, ಬಿಜೆಪಿಯನ್ನು ಸೇರಿದ್ದೇಕೆ ಎಂಬ ಸತ್ಯ ಸಂಗತಿಗಳನ್ನ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸುವುದಾಗಿ ಅಂದಿನ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದರು. ಅದರಂತೆ ಇಂದು ವಿಜಯ ಸಾಹುಕಾರನಾಗಿ ಹೊರಹೊಮ್ಮುತ್ತಿದ್ದಂತೆ ರಮೇಶ್ ಜಾರಕಿಹೊಳಿ ಒಂದಷ್ಟು ಅರ್ಧ ಸತ್ಯಗಳನ್ನ ಹೇಳಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಸ್ಥಳೀಯ ಶತ್ರು ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಕೆಂಡಕಾರಿದ್ದಾರೆ.
ನನ್ನ ವಿರುದ್ಧ ಸಿದ್ದರಾಮಯ್ಯ ಹೇಳಿಕೆ ನೀಡಿದರೆ ಅವರ ಎಲ್ಲಾ ವಿಚಾರಗಳನ್ನು ನಾನೂ ಬಹಿರಂಗ ಪಡಿಸುವೆ ಎಂದು
ಬೆಳಗಾವಿಯಲ್ಲಿ ಟಿವಿ9ಗೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹಿಂದಿನ ದಿನ ಸಿದ್ದರಾಮಯ್ಯ ಶಿಷ್ಯ ಜಮೀರ್ ಅಹ್ಮದ್ ನಮ್ಮ ಜತೆಗಿದ್ರು. ಅವರ ಬಗ್ಗೆ ಎಲ್ಲ ಹೇಳಿದ್ರೆ ರಾಜೀನಾಮೆ ಕೊಡಬೇಕಾಗುತ್ತೆ ಎಂದು ರಮೇಶ್ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ವಿಷ ಕನ್ಯೆ:
ಇನ್ನು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಷ ಕನ್ಯೆ. ಅಕೆ ಕಾಲಿಟ್ಟ ಮನೆ ಭಸ್ಮವಾಗುತ್ತದೆ. ಬಿಜೆಪಿಗೆ ಬರುತ್ತೇನೆಂದು 2 ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿ ಕೇಳಿಕೊಂಡಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್, ಮಹೇಶ್ ಕುಮಟಳ್ಳಿಗೆ ಕರೆ ಮಾಡಿದ್ದರು. ಆದ್ರೆ ಅವಳ ಸಹವಾಸ ಬೇಡವೆಂದು ನಾವು ಕೈಬಿಟ್ಟೆವು ಎಂದು ರಮೇಶ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದೆ ಮರಾಠ ಅಭ್ಯರ್ಥಿಯನ್ನ ಕಣಕ್ಕೆ ನಿಲ್ಲಿಸಿ ಲಕ್ಷ್ಮೀ ಹೆಬ್ಬಾಳ್ಕರ್ನ್ನ ಸೋಲಿಸ್ತೇವೆ ಎಂದು ರಮೇಶ್ ಗುಟುರು ಹಾಕಿದ್ದಾರೆ.
Published On - 3:35 pm, Mon, 9 December 19