ರಾಜ್ಯ ಬಿಜೆಪಿ ನಾಯಕರಿಗೆ ನಾಯಕತ್ವ- ಶಿಸ್ತಿನ ಪಾಠ ಮಾಡಿದ ಬಿ.ಎಲ್. ಸಂತೋಷ್

ರಾಜ್ಯದಲ್ಲಿ ವಿರೋಧ ಪಕ್ಷ ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗಮನ ಸೆಳೆಯುವ ಹೋರಾಟ ರೂಪಿಸುವಲ್ಲಿ ವಿಫಲವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನೊಂದೆಡೆ ಬಣ ಬಡಿದಾಟ ಜೋರಾಗಿದ್ದು, ಈ ಸಂಬಂಧ ನಾಯಕರ ನಡೆಗೆ ಕೆಳ ಹಂತದ ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಎಲ್ಲಾ ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ರಾಜ್ಯ ನಾಯಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಅಲ್ಲದೇ ಕೆಲವರಿಗೆ ಪರೋಕ್ಷವಾಗಿ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯ ಬಿಜೆಪಿ ನಾಯಕರಿಗೆ ನಾಯಕತ್ವ- ಶಿಸ್ತಿನ ಪಾಠ ಮಾಡಿದ ಬಿ.ಎಲ್. ಸಂತೋಷ್
Bl Santosh
Edited By:

Updated on: Sep 19, 2025 | 8:32 PM

ಬೆಂಗಳೂರು, (ಸೆಪ್ಟೆಂಬರ್ 19): ಬಿಜೆಪಿ ಚಿಂತನಾ ಸಭೆಯ ( karnataka BJP Chintan Sabhe) ಸಮಾರೋಪ ಭಾಷಣದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh) ಅವರು ರಾಜ್ಯ ಬಿಜೆಪಿ ನಾಯಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಹಾಗೇ ನಾಯಕತ್ವ ಗುಣ ಬಗ್ಗೆಯೂ ಹೇಳಿದ್ದಾರೆ. ಪಕ್ಷದಲ್ಲಿ ಆಂತರಿಕ ಸ್ಫರ್ಧೆ ಇರಬೇಕು. ಅದು ಅಶಿಸ್ತಿನ ಹಂತಕ್ಕೆ ಹೋಗಬಾರದು. ಹಿಂದೆ ಎಲ್ಲಾ ಹಂತದಲ್ಲೂ ತಪ್ಪಾಗಿದೆ ಹೌದು. ಅದನ್ನು ಸರಿಪಡಿಸಿಕೊಂಡು ಹೋಗಬೇಕು. ಆರೋಪ ಬೇಡ. ಪಕ್ಷದಲ್ಲಿ ನಾಯಕರು ಮಾತನಾಡುವಾಗ ಪರಸ್ಪರ ನೇರವಾಗಿಯೇ ಮಾತಾಡಿ. ಮಧ್ಯವರ್ತಿಗಳನ್ನು ಇಟ್ಟುಕೊಂಡು ಮಾತನಾಡಬೇಕಿಲ್ಲ ಎಂದು ಪರೋಕ್ಷವಾಗಿ ಶಾಲಲ್ಲಿ ಕಲ್ಲು ಸೂತ್ಕೊಂಡ ಹೊಡೆದಂಗೆ ಹೇಳಿದರು.

ಎಲ್ಲಾ ಸರ್ವೇಗಳಲ್ಲೂ ಕಾಂಗ್ರೆಸ್ ಗೆ ಕಡಿಮೆ ಸ್ಥಾನಗಳು ಬಂದಿವೆ. ನಾವು ಯಾವುದೇ ಹೋರಾಟ ಕೈಗೆತ್ತಿಕೊಂಡರೂ ಕಾಂಗ್ರೆಸ್ ಮತ್ತೊಂದು ವಿಷಯ ಹುಡುಕಿ ವಿಷಯಾಂತರ ಮಾಡಿಬಿಡುತ್ತದೆ. ಧರ್ಮಸ್ಥಳ ವಿಚಾರದಲ್ಲಿ ಏನೂ ಇಲ್ಲ ಅಂತಾದಾಗ ಚಾಮುಂಡಿ ಬೆಟ್ಟ ವಿಚಾರ ತಂದರು. ನಾಯಕರು ಕಾರ್ಯಕರ್ತರ ಕೈಗೆ ಸಿಕ್ಕುವಂತಿರಬೇಕು. ಪಕ್ಷದಲ್ಲಿ ಒಟ್ಟಾಗಿ ಹೋಗುವ ಕೆಲಸ ಆಗಬೇಕು. ಸ್ಪಷ್ಟತೆ ಇಲ್ಲದೇ ಯಾವುದೇ ಅನಗತ್ಯ ಹೇಳಿಕೆಗಳನ್ನು ನೀಡಬೇಡಿ ಎಂದು ಕಿವಿಮಾತು ಹೇಳಿದರು.

ಕಾರ್ಯಕರ್ತರ ಅಭಿಲಾಷೆ ಅರಿತು ಮುಂಚೂಣಿ ನಾಯಕರು ನಡೆದುಕೊಳ್ಳಬೇಕು. ನಾಯಕರ ಮಧ್ಯೆ ಒಗ್ಗಟ್ಟು, ಸಮನ್ವಯ ಕೊರತೆ ಇದೆ ಎಂದು ಕಾರ್ಯಕರ್ತರಿಗೆ ಅನ್ನಿಸಿದರೆ ಅದು ಇದೆ ಅಂತಲೇ ಅರ್ಥ, ಅದನ್ನು ಸರಿಪಡಿಸಿಕೊಳ್ಳಿ. ರಾಜ್ಯ ಸರ್ಕಾರ ಜನಪ್ರಿಯತೆ ಕಳೆದುಕೊಂಡಿರುವ ಸದಾವಕಾಶ ಬಳಸಿಕೊಳ್ಳಿ. ತಳಮಟ್ಟದಿಂದ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಿ ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗೆ ವ್ಯವಸ್ಥಿತ ತಯಾರಿ ಇರಲಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ತಪ್ಪಿನಿಂದ ಗೆಲ್ಲುವಂತಾಗಬಾರದು

ಮೊದಲು ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ. ನಂತರ ಬೇರೆಯವರಿಗೆ ಸಲಹೆ ಕೊಡುವ ಕೆಲಸ ಮಾಡಿ. 6 ತಿಂಗಳಿನಿಂದ ನೀವೇನು‌ ಮಾತನಾಡಿದ್ದೀರಿ ಎಂಬುದನ್ನು ರಿವ್ಯೂ ಮಾಡಿಕೊಳ್ಳಿ. ಆಗ ನೀವೇನು ತಪ್ಪು ಮಾಡಿದ್ದೀರಿ ಅಂತಾ ನಿಮಗೆ ಗೊತ್ತಾಗುತ್ತದೆ. ಈಗ ರಾಜ್ಯದಲ್ಲಿ ಸರ್ವೆ ಮಾಡಿದರೆ ಕಾಂಗ್ರೆಸ್ 60 ಸ್ಥಾನದಲ್ಲಿ ಬರಬಹುದು. ಹಾಗಂತ‌ ಗೆದ್ದುಬಿಡುತ್ತೀರಿ ಎಂದಲ್ಲ, ಕಾಂಗ್ರೆಸ್ ತಪ್ಪಿನಿಂದ ಗೆಲ್ಲುವಂತಾಗಬಾರದು. ಗೆಲುವಿಗೆ ನಿಮ್ಮ ಸಾಮರ್ಥ್ಯ ಏನು ಎಂಬುದು ಮುಖ್ಯ. ಚಿಂತನಾ ಸಭೆಯನ್ನು ಅಶೋಕ್ ಮತ್ತು ವಿಜಯೇಂದ್ರ‌ ಯಶಸ್ವಿಯಾಗಿ ನಡೆಸಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗುವಂತೆ ಇಬ್ಬರಿಗೂ ಸಲಹೆ ನೀಡುತ್ತೇನೆ‌ ಎಂದರು.