ಬೀದರ್: ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಾ ಬಂದಂತೆ ಬೀದರ್ ಜಿಲ್ಲೆಯಲ್ಲಿ ಇನ್ನೊಂದು ಸಂಕಷ್ಟ ಎದುರಾಗಿದ್ದು, ಬ್ಲ್ಯಾಕ್ ಫಂಗಸ್ಗೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ಸಕ್ರಿಯ ಪ್ರಕರಣವಿರುವ ಜಿಲ್ಲೆಯಾಗಿದೆ. ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮಾಹಿತಿ ನೋಡುವುದಾದರೆ ಒಟ್ಟು ಇಲ್ಲಿಯವೆರೆಗೆ 23883 ಕೊರೊನಾ ಸೋಂಕಿತರಿದ್ದು, ಈ ಪೈಕಿ 23195 ಜನರ ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. 379 ಕೊರೊನಾ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 305 ಸಕ್ರಿಯ ಪ್ರಕರಣಗಳಿದ್ದು, 92 ಜನರು ಬ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೂಳಿದ 21 ಜನರು ಹೋಮ್ ಐಸೋಲೆಷನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಎಲ್ಲಾ ಅಂಕಿ ಅಂಶಗಳನ್ನ ನೋಡಿದ ಮೇಲೆ ಜಿಲ್ಲೆಯ ಜನರು ಅಧಿಕಾರಿಗಳು ಖುಷಿಯಲ್ಲಿದ್ದರು. ಕೊರೊನಾ ಸೋಂಕು ನಿಯತ್ರಣಕ್ಕೆ ಬಂತು ಎನ್ನುವಷ್ಟರಲ್ಲಿ ಈಗ ಬ್ಲ್ಯಾಕ್ ಫಂಗಸ್ ಕಾಟ ಶುರುವಾಗಿದ್ದು, ಜಿಲ್ಲೆಯಲ್ಲಿ 21 ಬ್ಲ್ಯಾಕ್ ಫಂಗಸ್ ರೋಗಿಗಳು ಪತ್ತೆಯಾಗಿದ್ದಾರೆ. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ಕೊಡಲು ಈಗಾಗಲೇ ಬ್ರಿಮ್ಸ್ ಆಸ್ಪತ್ರೆಯಲ್ಲಿ ಎರಡು ವಾರ್ಡ್ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 10 ಜನ ಬ್ಲ್ಯಾಕ್ ಫಂಗಸ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಕೆಲವರು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್ ಹೇಳಿದ್ದಾರೆ.
ಕೊರೊನಾ ಸೋಂಕು ಕಡಿಮೆಯಾಗಿದೆ ಎನ್ನುವುದರಲ್ಲಿ ಜಿಲ್ಲೆಗೆ ಬ್ಲ್ಯಾಕ್ ಫಂಗಸ್ ಕಾಲಿಟ್ಟಿದ್ದು, ಕೋವಿಡ್ ಗೆದ್ದವರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಕೊರೊನಾ ಸೊಂಕಿನಿಂದ ಬಳಲಿ ಚೆತರಿಸಿಕೊಂಡವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕೆಲವರು ದೃಷ್ಟಿ ಕಳೆದು ಕೊಳ್ಳು ಭೀತಿ ಎದುರಿಸುತ್ತಿದ್ದರೆ. ಇನ್ನು ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಹೈದರಾಬ್ನ ವಿವಿಧ ಕಡೆ ಚಿಕಿತ್ಸೆಗೆ ತೆರಳಿದ್ದಾರೆ.
ಕೋರೊನಾದಿಂದ ಚೆತರಿಸಿಕೊಂಡ ಎರಡು ಅಥವಾ ಮೂರು ವಾರಗಳ ಬಳಿಕ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು ಕೊವಿಡ್ ಕಡಿಮೆಯಾದವರಿಗೆ ಅವರ ಕುಟುಂಬದ ಜನರಿಗೆ ಇದು ಸಾಕಷ್ಟು ಆತಂಕ ಸೃಷ್ಟಿ ಮಾಡಿದೆ. ಅತಿ ಹೆಚ್ಚು ಸಕ್ಕರೆ ಕಾಯಿಲೆ ,ಕಿಮಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದವರಿಗೆ ಹೆಚ್ಚಾಗಿ ಕಾಣಿಸುತ್ತಿದ್ದು, ಇವರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾದ್ಯತೆಯು ಇದ್ದು, ಜತೆಗೆ ಸ್ಬಲ್ಪ ಯಾಮಾರಿದರು ಮೆದುಳಿಗೂ ತಗಲುವ ಸಾಧ್ಯತೆ ಇದೆ. ಹೀಗಾಗಿ ಸ್ವಲ್ಪ ತಲೆನೋವು ಹಾಗೂ ಕಣ್ಣು ಮೂಗು ಸಮಸ್ಯೆ ಕಂಡು ಬಂದ ಕೂಡಲೇ ಸ್ಥಳೀಯ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಮೂಗು ಮತ್ತು ಕಣ್ಣಿನ ಕೆಳ ಭಾಗದಲ್ಲಿ ನೋವು ಮತ್ತು ಊರಿತ ಕಾಣಿಸಿಕೊಳ್ಳುತ್ತದೆ ಸತತ ಎರಡು ದಿನಗಳ ವರೆಗೂ ತಲೆ ನೋವು ಇದ್ದರೆ ವೈದ್ಯರನ್ನು ಸಂಪರ್ಕಿಸಿದರೆ ಆರಂಭದಲ್ಲೇ ಸೂಕ್ತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೇಗ ರೋಗವನ್ನು ಗುಣಪಡಿಸಬಹುದು ಎಂದು ಇ.ಎನ್.ಟಿ. ಖ್ಯಾತ ತಜ್ಞ ವೈದ್ಯರಾದ ಡಾ. ವಿ.ವಿ.ನಾಗರಾಜ್ ಹೇಳಿದ್ದಾರೆ.
ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಗಳಲ್ಲಿ ಸೂಕ್ತ ಭದ್ರತೆ ವಹಿಸಿದ್ದರು ಅಂತರಾಜ್ಯ ಸಂಚಾರ ಮಾತ್ರ ಕಡಿಮೆ ಆಗುತ್ತಿಲ್ಲ. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಉಲ್ಬಣಗೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಬೀದರ್ ಜಿಲ್ಲೆಯಲ್ಲು ಲಗ್ಗೆ ಇಟ್ಟಿದು ಜಿಲ್ಲೆಯ ಜನತೆಯಲ್ಲಿ ಮತ್ತಷ್ಟು ಆತಂಕ ಸೃಷ್ಟಿಮಾಡಿದೆ.
ಬಳ್ಳಾರಿ ಜಿಲ್ಲೆಯಲ್ಲೂ ಹೆಚ್ಚಿದ ಬ್ಲ್ಯಾಕ್ ಫಂಗಸ್ ಆತಂಕ
ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಆರ್ಭಟಕ್ಕೆ ಈಡೀ ಜನ ಜೀವನವೇ ತತ್ತರಗೊಂಡಿದೆ.ಆದರೆ ಕಳೆದ ಒಂದು ವಾರದಿಂದ ಗಣಿ ಜಿಲ್ಲೆಯಲ್ಲಿ ಕೊರೊನಾ ಗಣನೀಯವಾಗಿ ಇಳಿಮುಖವಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ಜನರು ಬಲಿಯಾಗುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ಗೆ ಔಷಧಿ ಸಿಗದಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ 67 ಜನರು ಬ್ಲ್ಯಾಕ್ ಫಂಗಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದುವರೆಗೆ 12 ಜನರು ಬ್ಲ್ಯಾಕ್ ಫಂಗಸ್ಗೆ ಬಲಿಯಾಗಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆಗೆಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಬ್ಲ್ಯಾಕ್ ಫಂಗಸ್ಗೆ ಸಮರ್ಪಕವಾಗಿ ಔಷಧಿ ಸರಬರಾಜು ಆಗುತ್ತಿಲ್ಲ. ಹೀಗಾಗಿ ಬ್ಲ್ಯಾಕ್ ಸೋಂಕಿತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 83 ವಯಲ್ ಮಾತ್ರ ಔಷಧಿ ಬಂದಿದ್ದು, ಜಿಲ್ಲೆಯ ಸೋಂಕಿತರಿಗೆ ಕನಿಷ್ಠ 2 ಸಾವಿರ ವಯಲ್ ಬೇಕಾಗಿದೆ. ಇದರಿಂದಾಗಿ ಸೋಂಕಿತರಿಗೆ ಸಮರ್ಪಕ ಔಷಧಿ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ.
ಬಳ್ಳಾರಿ ಜಿಲ್ಲಾಡಳಿತ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಬ್ಲ್ಯಾಕ್ ಫಂಗಸ್ ಪತ್ತೆಯಾದ ಕೆಲವರು ಹುಬ್ಬಳ್ಳಿ, ಬೆಂಗಳೂರು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕ್ಕ ಮಕ್ಕಳನ್ನೂ ಬಿಡುತ್ತಿಲ್ಲ. ಸಿರುಗುಪ್ಪ ತಾಲೂಕಿನ 14 ವರ್ಷದ ಬಾಲಕಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದರಿಂದ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ವೇಳೆ ಬಾಲಕಿಗೆ ಬ್ಲ್ಯಾಕ್ ಫಂಗಸ್ ಕೂಡ ಕಾಣಿಸಿಕೊಂಡಿದ್ದು,ಈಗ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸಮರ್ಪಕ ಔಷಧಿ ಸಿಗದಿರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರನ್ನು ಕೇಳಿದರೆ, ಶೀಘ್ರದಲ್ಲಿ ಬ್ಲ್ಯಾಕ್ ಫಂಗಸ್ಗೆ ಹೆಚ್ಚಿನ ಔಷಧಿ ಬರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಹಾಸನ ಜಿಲ್ಲೆಯ ಐದು ಆಸ್ಪತ್ರೆಗಳಿಗೆ ಒಬ್ಬರೇ ವೈದ್ಯ; ನೂರಾರು ರೋಗಿಗಳ ಆರೈಕೆಯಲ್ಲಿ ನಿರತರಾಗಿರುವ ಡಾ.ಮಧುಸೂಧನ್
Published On - 4:34 pm, Fri, 4 June 21