ಏರೋಸ್ಪೇಸ್ ಪ್ರಮುಖ ಸಂಸ್ಥೆಯಾದ ಬೋಯಿಂಗ್ ಇಂಡಿಯಾದಿಂದ ಬೆಂಗಳೂರಿನಲ್ಲಿ 200 ಹಾಸಿಗೆ ಆಸ್ಪತ್ರೆ ಮತ್ತು ಜತೆಗೆ ಆಕ್ಸಿಜನ್ ವ್ಯವಸ್ಥೆ ಒದಗಿಸಲು ಮುಂದೆ ಬರಲಾಗಿದೆ ಎಂದು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ ಯಡಿಯೂರಪ್ಪ, ದಿಢೀರನೆ ಹೆಚ್ಚಳವಾದ ಕೊರೊನಾ ಸೋಂಕು ಪ್ರಕರಣದಿಂದಾಗಿ ಆಕ್ಸಿಜನ್ ಬೇಡಿಕೆ ವಿಪರೀತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. “ಸದ್ಯದ ಏರಿಕೆ ದರದಲ್ಲಿ, ಮೇ 15ರೊಳಗೆ ಕರ್ನಾಟಕಕ್ಕೆ 1500 ಮೆಟ್ರಿಕ್ ಟನ್ ಬೇಕಾಗಬಹುದು. ಭಾರತ ಸರ್ಕಾರದ ಬಳಕೆ ನಿಯಮಾವಳಿಯಂತೆ 964 ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದೆ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಯಲಹಂಕದ ಕೆಪಿಸಿಎಲ್ ಸ್ಥಳದಲ್ಲಿ ಆಕ್ಸಿಜನ್ ವ್ಯವಸ್ಥೆ ಜತೆಗೆ 200 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಬೋಯಿಂಗ್ ಇಂಡಿಯಾ ಮುಂದಾಗಿದೆ. ಕೆಪಿಸಿಎಲ್ ಘಟಕದಿಂದ ಆಕ್ಸಿಜನ್ ಪೂರೈಕೆ ಖಾತ್ರಿ ಆಗಿದೆ. ಇದರಿಂದಾಗಿ ರಾಜ್ಯದಲ್ಲಿನ ಈಗಿರುವ ಆಕ್ಸಿಜನ್ ಪೂರೈಕೆದಾರರ ಮೇಲೆ ಒತ್ತಡ ಕಡಿಮೆ ಆಗುತ್ತದೆ ಎಂದಿದ್ದಾರೆ. ಹೆಚ್ಚಿನ ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಕೇಳಲಾಗಿದೆ. ಅಂದಹಾಗೆ ಕರ್ನಾಟಕದಲ್ಲಿ ಕೋವಿಡ್- 19 ಪ್ರಕರಣಗಳು ವಿಪರೀತ ಹೆಚ್ಚಾಗಿದೆ. ಅದರ ಜತೆಗೆ ಸಾವಿನ ಪ್ರಮಾಣದಲ್ಲೂ ಹೆಚ್ಚಾಗಿದೆ. ಆಕ್ಸಿಜನ್ ಪೂರೈಕೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿದ್ದ ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ಮೇಲೆ ಕರ್ನಾಟಕಕ್ಕೆ ನಿರಾಳ ಸಿಕ್ಕಿದೆ.
ತಕ್ಷಣದಿಂದ ವೈದ್ಯಕೀಯ ಆಕ್ಸಿಜನ್ ಪೂರೈಕೆಯನ್ನು ದಿನಕ್ಕೆ 962 ಮೆಟ್ರಿಕ್ ಟನ್ನಿಂದ 1200 ಮೆಟ್ರಿಕ್ ಟನ್ಗೆ ಕರ್ನಾಟಕದ ಪಾಲನ್ನು ಕೇಂದ್ರ ಸರ್ಕಾರ ಏರಿಕೆ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೋಯಿಂಗ್ ಕಂಪೆನಿಗೆ, ಕಲಬುರಗಿಯಲ್ಲಿ 250 ಹಾಸಿಗೆಯ ಆಸ್ಪತ್ರೆ ಹಾಗೂ ಜತೆಗೆ ಆಕ್ಸಿಜನ್ ವ್ಯವಸ್ಥೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಜತೆಗೆ ಪಶ್ಚಿಮ ಬೆಂಗಳೂರಿನ ಹೊರಭಾಗದಲ್ಲೂ ಒಂದು ಆರಂಭಿಸಲು ಕೇಳಿಕೊಂಡಿದ್ದಾರೆ. “ಉತ್ತರ ಕರ್ನಾಟಕದ ಜಿಲ್ಲೆಗಳು, ಅದರಲ್ಲೂ ಬೀದರ್, ಕಲಬುರಗಿ. ಬೆಳಗಾವಿ, ರಾಯಚೂರು ಇಲ್ಲೆಲ್ಲ ಕೋವಿಡ್- 19 ತೀವ್ರವಾಗಿ ವ್ಯಾಪಿಸಿದೆ. ಈ ಎಲ್ಲ ಪ್ರದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯಕ್ಕೆ ಕೊರತೆ ಇದೆ. ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಅಥವಾ ಬೇರೆ ಯಾವುದಾದರೂ ಚಟುವಟಿಕೆ ಅಡಿಯಲ್ಲಿ ಇದೇ ರೀತಿಯ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ನಿರ್ಮಿಸಲು ಕೇಳಿಕೊಂಡಿದ್ದೇವೆ,” ಎಂದಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಚಿಕಿತ್ಸೆಗೆ 200 ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಮುಂದೆ ಬಂದಿದ್ದಕ್ಕೆ ಧನ್ಯವಾದಗಳು. ಯಲಹಂಕ (ಬೆಂಗಳೂರು), ಕಲಬುರಗಿ. ಆ ನಂತರ ಬೀದರ್, ಬೆಳಗಾವಿಯಲ್ಲೂ ಸೇವೆ ಸಲ್ಲಿಸಿ. ಗೌರವಾಮ್ವಿತ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ನೇಮಿಸಿದ ನೋಡಲ್ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
Thanks @Boeing_In for coming forward to set up two 200 oxygenated bed hospitals in Karnataka for treating COVID-19 cases. Yelahanka(Bengaluru) & Kalaburgi.The latter also to serve Bidar, Belgaum & Raichur.
The nodal officers appointed by Hon CM @BSYBJP would expedite the process. pic.twitter.com/HmXZHStrOy— Nirmala Sitharaman (@nsitharaman) May 7, 2021
ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಮುಖಭಂಗ; ಆಕ್ಸಿಜನ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ
(Boeing India to set up 200 bed hospital with oxygen facility in Yelahanka, Bengaluru, said Karnataka CM BS Yediyurappa)