ಕೇಂದ್ರ ಸರ್ಕಾರಕ್ಕೆ ಮುಖಭಂಗ; ಆಕ್ಸಿಜನ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ
ಕರ್ನಾಟಕದ ಜನ ತತ್ತರಿಸುವಂತೆ ಮಾಡಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಸೂಕ್ತ ಪ್ರಕರಣದಲ್ಲಿ ಮಾತ್ರ ಮಧ್ಯಪ್ರವೇಶ ಮಾಡುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.

ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ನೀಡಬೇಕು ಎಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗ ಆಗಿದೆ. ಆಕ್ಸಿಜನ್ ಪೂರೈಕೆ ಬಗ್ಗೆ ತನ್ನ ನಿಲುವನ್ನು ಸಪಷ್ಟಪಡಿಸಿದ ಸುಪ್ರೀಂಕೋರ್ಟ್ ಕರ್ನಾಟಕದ ಜನ ತತ್ತರಿಸುವಂತೆ ಮಾಡಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಸೂಕ್ತ ಪ್ರಕರಣದಲ್ಲಿ ಮಾತ್ರ ಮಧ್ಯಪ್ರವೇಶ ಮಾಡುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ನಿಗದಿಪಡಿಸಿದ್ದ ವೈದ್ಯಕೀಯ ಆಮ್ಲಜನಕ ಸರಬರಾಜು ಮಿತಿಯನ್ನು 1200 ಮೆಟ್ರಿಕ್ ಟನ್ಗೆ ಹೆಚ್ಚಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮೇ 5ರಂದು ನೀಡಿದ್ದ ಆದೇಶವನ್ನು ಭಾರತ ಸರ್ಕಾರವು ಮೇ 6ರಂದು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು. ದೆಹಲಿಗೆ ಆಕ್ಸಿಜನ್ ಸರಬರಾಜು ಕುರಿತು ವಿಚಾರಣೆ ನಡೆಸುತ್ತಿದ್ದ ವೇಳೆ ಸಾಲಿಸಿಟ್ ಜನರಲ್ ತುಷಾರ್ ಮೆಹ್ತಾ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಎದುರು ವಿಶೇಷ ಮನವಿ ಸಲ್ಲಿಸಿದರು. ಈ ವಿಷಯವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಎದುರು ಸಲ್ಲಿಸುವಂತೆ ನ್ಯಾಯಮೂರ್ತಿ ಚಂದ್ರಚೂಡ್ ಸೂಚಿಸಿದ್ದರು. ಸಮರ್ಪಕ ದಾಖಲೆಗಳನ್ನು ಪರಿಶೀಲಿಸದೇ ನಾವಾದರೂ ಏನು ಮಾಡಲು ಸಾಧ್ಯ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದ್ದರು.
ಇದೀಗ ಇಂದು (ಮೇ.7) ನಡೆದ ವಿಚಾರಣೆಯಲ್ಲಿ ಎಸ್.ಜಿ.ಮೆಹ್ತಾ ಕೇಂದ್ರದ ಪರವಾಗಿ ವಾದ ಮಂಡಿಸಿದರಾದರೂ ಸುಪ್ರೀಂ ಕೋರ್ಟ್ ಅವರ ವಾದವನ್ನು ಪುರಸ್ಕರಿಸಿಲ್ಲ. ಬದಲಾಗಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ಪೀಠ ಕರ್ನಾಟಕದ ಜನ ತತ್ತರಿಸುವಂತೆ ಮಾಡಲ್ಲ. ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಸೂಕ್ತ ಪ್ರಕರಣದಲ್ಲಿ ಮಾತ್ರ ಮಧ್ಯಪ್ರವೇಶ ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡಿದೆ.
Published On - 11:40 am, Fri, 7 May 21



