ಕೊವಿಶೀಲ್ಡ್​, ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಕನ್ನಡಿಗರಿಗೆ ಸಿಗಲಿವೆ: ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಎರಡೂ ಲಸಿಕೆಗಳನ್ನು ನೀಡಲಾಗುವುದು. ಆದರೆ, ಲಸಿಕೆ ಪಡೆಯುವವರು ಇಂಥದ್ದೇ ಲಸಿಕೆ ಬೇಕೆಂದು ಕೇಳುವಂತಿಲ್ಲ.

ಕೊವಿಶೀಲ್ಡ್​, ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಕನ್ನಡಿಗರಿಗೆ ಸಿಗಲಿವೆ: ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್​
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2021 | 6:36 PM

ಬೆಂಗಳೂರು: ಕೊರೊನಾ ಲಸಿಕೆ ಹಂಚಿಕೆಗೆ ಇಡೀ ದೇಶವೇ ಸಜ್ಜಾಗಿದೆ. ಈಗಾಗಲೇ ಎಲ್ಲಾ ರಾಜ್ಯಗಳಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಆಗುತ್ತಿದ್ದು, ಜನವರಿ 16ರಿಂದ ವಿತರಣೆ ಕಾರ್ಯ ಆರಂಭವಾಗಲಿದೆ. ಆದರೆ, ಅನುಮತಿ ಗಿಟ್ಟಿಸಿಕೊಂಡಿರುವ 2 ಲಸಿಕೆಗಳ ಪೈಕಿ ಕರ್ನಾಟಕಕ್ಕೆ ಯಾವುದು ಬರಲಿದೆ? ಎರಡೂ ಲಸಿಕೆಗಳು ಏಕಕಾಲಕ್ಕೆ ಲಭ್ಯವಾಗುವುದಿಲ್ಲವೇ? ಎಂಬ ಗೊಂದಲವೆದ್ದಿತ್ತು.

ಈ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಾಜ್ಯಕ್ಕೆ ಕೊವಿಶೀಲ್ಡ್​ ಮಾತ್ರವಲ್ಲದೇ ಕೊವ್ಯಾಕ್ಸಿನ್​ ಲಸಿಕೆಯ 20 ಸಾವಿರ ಡೋಸ್ ಬರಲಿದೆ. ರಾಜ್ಯದಲ್ಲಿ ಇವೆರಡೂ ಲಸಿಕೆಗಳನ್ನು ನೀಡಲಾಗುವುದು. ಆದರೆ, ಲಸಿಕೆ ಪಡೆಯುವವರು ಇಂಥದ್ದೇ ಲಸಿಕೆ ಬೇಕೆಂದು ಕೇಳುವಂತಿಲ್ಲ ಎಂದು ತಿಳಿಸಿದ್ದಾರೆ.

ಕೋವ್ಯಾಕ್ಸಿನ್ ಒಂದು ಸೀಸೆಯಲ್ಲಿ 10 ಎಂಎಲ್ ಲಸಿಕೆ ಇರಲಿದೆ. ಕೋವಿಶೀಲ್ಡ್ ಒಂದು ಸೀಸೆಯಲ್ಲಿ 5 ಎಂಎಲ್ ಇದೆ. ಒಂದು ಸೀಸೆ ಕೋವ್ಯಾಕ್ಸಿನ್ ಲಸಿಕೆಯಿಂದ 20 ಡೋಸ್​ ಸಿಗಲಿದೆ ಅಂದರೆ ಒಂದು ಸೀಸೆಯಿಂದ ಮಂದಿಗೆ ಲಸಿಕೆ ನೀಡಬಹುದು. ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ ಎಂಬುದನ್ನು ಹೊರತುಪಡಿಸಿದರೆ ಎರಡು ಲಸಿಕೆಗಳ ನಡುವೆ ಬೇರೇನೂ ವ್ಯತ್ಯಾಸ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ನೀಡಬೇಕು, ಯಾವ ಸಿಬ್ಬಂದಿಗೆ ನೀಡಬೇಕು ಮೊದಲಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ. ಜನವರಿ 16 ರಿಂದ ಲಸಿಕೆ ವಿತರಣೆ ಆರಂಭವಾಗಲಿದೆ. ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಈ ವಿಚಾರವಾಗಿ ಎಲ್ಲರಿಗೂ ಸ್ಪಷ್ಟ ಮಾಹಿತಿ ಇದೆ ಎಂದು ಹೇಳಿದ್ದಾರೆ.

BBMPಗೆ 1.05 ಲಕ್ಷ ಕೊವಿಶೀಲ್ಡ್ ಲಸಿಕೆ ಹಸ್ತಾಂತರ