ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
07:52 pm ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾವು ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
06:46 pm: ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಬೇಕು ಎಂದಾದರೆ ಅದಕ್ಕೆ ಒಂದಷ್ಟು ಕಟ್ಟುಪಾಡುಗಳಿವೆ. ಕೆಟ್ಟ ಶಬ್ದಗಳ ಬಳಕೆ, ಅಶ್ಲೀಲ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸುವಂತಿಲ್ಲ. ಆದರೆ, ಒಟಿಟಿಗೆ ಈವರೆಗೆ ಯಾವುದೇ ರೀತಿಯ ಕಟ್ಟುಪಾಡುಗಳಿಗಿಲ್ಲ. ಈಗ ಇದಕ್ಕೂ ಕೆಲ ನಿಯಮ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
06:22 pm ಬಿಜೆಪಿ ಶಾಸಕ ಯತ್ನಾಳ್ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಅವರದ್ದು ತೋಳ ಬಂತು ತೊಳ ಕತೆ. ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನೆ ಬುರುಡೆ ಬಿಡ್ತಾರೆ. ಯಡಿಯೂರಪ್ಪ ಎರಡೂವರೆ ವರ್ಷದ ಸಿಎಂ ಆಗಿರುತ್ತಾರೆ ಎಂದು ದಾವಣಗೆರೆಯಲ್ಲಿ ಕೃಷಿ ಖಾತೆ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕುರುಬ ಸಮಾಜವನ್ನು ಎಸ್.ಟಿ ವಿಭಾಗಕ್ಕೆ ಸೇರಿಸುವಂತೆ ನಡೆದಿದ್ದ ಪ್ರತಿಭಟನೆಯಲ್ಲಿ ಕೆ.ಆರ್.ಪುರಂ ಇನ್ಸ್ಪೆಕ್ಟರ್ ಅಂಬರೀಶ್ ಭಾಗವಹಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ನಗಾರಿ ಹೊಡೆದು ಸರ್ಕಾರದ ವಿರುದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸರ್ಕಾರಿ ನೌಕರನೇ ಪ್ರತಿಭಟಿಸಿರುವುದರಿಂದ ವಿವಾದ ಸೃಷ್ಟಿಯಾಗಿದೆ. ಈ ಹಿಂದೆಯೂ ಇಂಥದ್ದೇ ವಿವಾದ ಮೈಮೇಲೆ ಎಳೆದುಕೊಂಡಿದ್ದ ಅಂಬರೀಶ್, ಕೆ.ಆರ್ ಪುರಂ ಶಾಸಕರ ಬರ್ತ್ಡೇಯಲ್ಲಿ ಭಾಗಿಯಾಗಿ ಬೆಳ್ಳಿ ಗದೆ ನೀಡಿ ಘೋಷಣೆ ಕೂಗಿದ್ದರು.
ಮೆರವಣಿಗೆ ನಡೆಸಿದ 10 ಲಕ್ಷ ರೈತರನ್ನು ಯಾವ ನಾಲಿಗೆಯಲ್ಲಿ ದೇಶದ್ರೋಹಿಗಳು ಎನ್ನುವುದು? ಆತ್ಮ, ಹೃದಯಗಳನ್ನು ಮಾರಿಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ ಅಲ್ಲವೇ?
ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು ದೇಶ ಪ್ರೇಮಿಗಳು ಹೇಗಾಗುತ್ತಾರೆ? ನಾಡಿನ ಜನತೆಗೆ ಸಿದ್ದರಾಮಯ್ಯ ಬರೆದ ಪತ್ರ
ಕರ್ನಾಟಕದ ಪ್ರದೇಶಗಳನ್ನು ಒಳಗೊಂಡ ಮಹಾರಾಷ್ಟ್ರದ ಹೊಸ ನಕ್ಷೆ ತಯಾರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡೆ ಸರಿಯಿಲ್ಲ. ಉದ್ಧವ್ ಠಾಕ್ರೆ ಬಹಳ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರು ತಾಳ್ಮೆ ಕಳೆದುಕೊಂಡಿದ್ದಾರೆ ಅನ್ನಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಗಡಿ ವಿವಾದ ಮುಗಿದ ಅಧ್ಯಾಯ ಎಂದು ಮೊರಾರ್ಜಿ ದೇಸಾಯಿ ಅವರೇ ಹೇಳಿದ್ದರು. ಆ ಸಂದರ್ಭದಲ್ಲಿ ನಾನೂ ಇದ್ದೆ. ಆದರೆ ಈಗ ಚುನಾವಣೆಗಾಗಿ ಮತ್ತೆ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಟ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾಗಿದೆ. ಈ ಬೆಳ್ಳಿಹೆಜ್ಜೆ ಸಂಭ್ರಮದಲ್ಲಿರೋ ಸುದೀಪ್ಗೆ ಚಿತ್ರರಂಗದ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಉಪೇಂದ್ರ, ಮೋಹನ್ ಲಾಲ್, ರಮ್ಯಾ ಕೃಷ್ಣ, ಪ್ರಿಯಾ ಮಣಿ ಸೇರಿದಂತೆ ಹಲವು ಕಲಾವಿದರು ಸುದೀಪ್ಗೆ ಶುಭ ಕೋರಿದ್ದಾರೆ.
ಜೆಡಿಎಸ್ ರಾಜಕೀಯ ಪಕ್ಷವೇ ಅಲ್ಲ. ಅವರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ನನ್ನ ಪ್ರಕಾರ JDS ಈಸ್ ನಾಟ್ ಎ ಪೊಲಿಟಿಕಲ್ ಪಾರ್ಟಿ ಎಂದಿರುವ ಸಿದ್ದರಾಮಯ್ಯ, ಅವರ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ವರ್ಗಾವಣೆ ಮಾಡಿದ್ದಕ್ಕೆ ಬೇಸರಗೊಂಡ ಡಿ ಗ್ರೂಪ್ ನೌಕರ ಮಹಿಳೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರು ಡಿಸಿ ಕಚೇರಿಯಿಂದ ನಂಜನಗೂಡಿಗೆ ವರ್ಗಾವಣೆ ಮಾಡಿದ್ದಕ್ಕೆ ಬೇಸರಗೊಂಡಿರುವ ಮಹಿಳೆಯ ಮನವೊಲಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರೈತ ನಾಯಕ ನರೇಶ್ ಟಿಕಾಯತ್, ನಾವು ಸರ್ಕಾರಕ್ಕೆ ಹಾಗೂ ಪ್ರಧಾನ ಮಂತ್ರಿ ಸ್ಥಾನಕ್ಕೆ ನೀಡಬೇಕಾದ ಗೌರವವನ್ನು ನೀಡುತ್ತೇವೆ. ವ್ಯವಸ್ಥೆ ನಮ್ಮೆದುರು ತಲೆಬಾಗಲಿ ಎಂದು ಬಯಸುವುದಿಲ್ಲ. ಆದರೆ, ರೈತರ ಆತ್ಮಗೌರವವನ್ನು ಕಾಪಾಡಿಕೊಳ್ಳುವ ಕೆಲಸವನ್ನೂ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರ ಈ ಸೂಕ್ಷ್ಮವನ್ನು ಅರಿತು ಪರಿಹಾರ ದೊರಕಿಸಿಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿವೆ. ಅವರ ಕಥೆ ಕನ್ನಡ ಧಾರಾವಾಹಿ ಮನೆಯೊಂದು ಮೂರು ಬಾಗಿಲು ಥರ ಆಗಿದೆ. ಎತ್ತು ಏರಿಗೆಳೆದರೆ ಕೋಣ ಕೆರೆಗೆ ಎಳೆಯಿತು ಎಂಬ ಪರಿಸ್ಥಿತಿ ಇದೆ. ಹೀಗೆ ಅಸ್ಥಿರತೆ ಉಂಟಾದಾಗ ಜನರ ಗಮನ ಬೇರೆಡೆ ಸೆಳೆಯಲು ಏನೇನೋ ಮಾತನಾಡುತ್ತಾರೆ. ಅವರ ವಿವಾದಾತ್ಮಕ ಹೇಳಿಕೆಯನ್ನು ಕಠೋರವಾಗಿ ಖಂಡಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಮ್ಮಿಶ್ರ ಸರಕಾರದಲ್ಲಿ ನನಗೆ ಸ್ವಾತಂತ್ರ್ಯ ಇರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದರೂ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವ ಹಾಗಿರಲಿಲ್ಲ. ಸಿದ್ದರಾಮಯ್ಯ ಅವರ ಒತ್ತಡ ಇತ್ತು. ಮೈತ್ರಿ ಸರಕಾರದಲ್ಲಿ ನಾನು ಕ್ಲರ್ಕ್ ತರ ಇದ್ದೆ ಅಂತ ಈಗಾಗಲೇ ಹೇಳಿದ್ದೇನೆ. ಹಾಗಾಗಿ ನನಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಆಗಿಲ್ಲ ಎಂದು ಬಾಗಲಕೋಟೆಯಲ್ಲಿ ಬೇಸರ ತೋಡಿಕೊಂಡಿದ್ದಾರೆ.
ಸದ್ಯ ಎಲ್ಲಾ ಪಕ್ಷಗಳಲ್ಲಿ ಮೌಲ್ಯ ಅನ್ನೋದು ಹೊರಟು ಹೋಗಿದೆ. ರಾಜಕಾರಣಿಗಳು ಮೌಲ್ಯಗಳನ್ನು ಮರೆತಿದ್ದಾರೆ. ನಾವೆಲ್ಲರೂ ರಾಜಕೀಯದ ಎಥಿಕ್ಸ್ ಮರೆತಿದ್ದೇವೆ. ಆಗೆಲ್ಲಾ ಪಕ್ಷಾಂತರ ಇರಲಿಲ್ಲ, ಈಗ ಎಲ್ಲವೂ ಬದಲಾಗಿದೆ ಎಂದು ಬಾಗಲಕೋಟೆಯಲ್ಲಿ MLC ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ಮಹದಾಯಿ ಕುರಿತು ಗೋವಾ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಅತ್ಯಂತ ಬೇಜವಾಬ್ದಾರಿತನದ ನಡೆಯಾಗಿದೆ. ಮಹದಾಯಿ ವಿಚಾರದಲ್ಲಿ ಈಗಾಗಲೇ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ಅದರ ಅನುಷ್ಠಾನದತ್ತ ಗಂಭೀರ ಹೆಜ್ಜೆ ಹಾಕಬೇಕಿದೆಯಷ್ಟೇ. ಗೋವಾ ಸಿಎಂ ಹೇಳಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ.
ಹೆಚ್.ವಿಶ್ವನಾಥ್ ಅವರು ಕಾಂಗ್ರೆಸ್ ಬಿಟ್ಟು ಹೋಗಿದ್ದೇ ತಪ್ಪು. ಈಗ ಪಶ್ಚಾತ್ತಾಪ ಅಥವಾ ಬೇರೇನೇ ಇದ್ದರೂ ಅದು ಅವರ ವೈಯಕ್ತಿಕ ವಿಚಾರ. ಆದರೆ, ಕಾಂಗ್ರೆಸ್‌ನಿಂದ ಹೊರಗೆ ಹೋದವರು ಕೆಲವೇ ದಿನದಲ್ಲಿ ಪಶ್ಚಾತ್ತಾಪ ಪಡುತ್ತಾರೆ ಎನ್ನುವುದು ಸತ್ಯ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ವಿ.ಕೆ.ಶಶಿಕಲಾ ಏರ್ಪೋರ್ಟ್ ಮಾರ್ಗದಲ್ಲಿ ತೆರಳುತ್ತಿದ್ದು, ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್‌ಗೆ ಹೋಗಲಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಶಶಿಕಲಾ ನಟರಾಜನ್ ದಿ.ಜಯಲಲಿತಾ ಮಾದರಿಯನ್ನು ಇಲ್ಲಿಯೂ ಅನುಸರಿಸಿದ್ದಾರೆ. ಮೈ ಮೇಲೆ ಶಾಲು ಹೊದ್ದು, ವಿಕ್ಟರಿ ಸಿಂಬಲ್ ತೋರಿಸುತ್ತಾ ಜಯಲಲಿತಾರಂತೆಯೇ ಎರಡು ಕೈ ಮುಗಿದು ಅಮ್ಮನ ಸ್ಟೈಲ್ ಕಾಪಾಡಿಕೊಂಡಿದ್ದಾರೆ. ಶಶಿಕಲಾ ಕಾರು ಕೆ.ಆರ್ ಮಾರ್ಕೆಟ್ನಿಂದ ಟೌನ್ ಹಾಲ್ ಕಡೆ ಹೊರಡುವಾಗ ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿತ್ತು.
ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಶಶಿಕಲಾ ನಟರಾಜನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮ್ಮ ನೆಚ್ಚಿನ ನಾಯಕಿ ಹೊರಬರುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.
ಆಸ್ಪತ್ರೆಯಿಂದ ಶಶಿಕಲಾ ಡಿಸ್ಚಾರ್ಜ್ ನಟರಾಜನ್ ಆಗುತ್ತಿರುವ ಹಿನ್ನೆಲೆ ಟಿಟಿವಿ ದಿನಕರನ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಶಶಿಕಲಾ ನಟರಾಜನ್ ಅಕ್ಕನ ಮಗ ಹಾಗೂ ಅಮ್ಮಲ್ ಮಕ್ಕಳ್ ಮುನ್ನೆಟ್ರ ಕಳಗಂ ಪಕ್ಷದ ಜನರಲ್ ಸೆಕ್ರೆಟರಿ ಹಾಗೂ ಚೆನ್ನೈ ಆರ್.ಕೆ ನಗರದ ಶಾಸಕರಾಗಿರುವ ದಿನಕರನ್ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದಾರೆ.
ಬೆಳಗಾವಿ ನಮ್ಮದೆಂದು ತಕರಾರು ತೆಗೆದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ಮುಂಬೈ ನಮಗೆ ಸೇರಬೇಕು ಎಂದು ಲಕ್ಷ್ಮಣ ಸವದಿ ಹೇಳಿದ್ದು, ಛತ್ರಪತಿ ಶಿವಾಜಿ ಪೂರ್ವಜರು ಕರ್ನಾಟಕದವರು ಹಾಗಾಗಿ ಶಿವಾಜಿಯ ಮೂಲ ಕರ್ನಾಟಕ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ಎರಡನೇ ಬಾರಿಗೆ ಆ್ಯಂಜಿಯೋಪ್ಲಾಸ್ಟ್ಗೆ ಒಳಗಾಗಿ ಆಸ್ಪತ್ರೆಗೆ ಸೇರಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಕೋಲ್ಕತ್ತಾದ ಅಪೋಲೊ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮತ್ತೆರೆಡು ಸ್ಟಂಟ್ ಅವಳವಡಿಸಿ, ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಗಂಗೂಲಿಯವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಹೊಸ ವರ್ಷಕ್ಕೆ ಹೊಸ ಆಲೋಚನೆಗಳೊಂದಿಗೆ ಕಾಲಿಟ್ಟಿದ್ದೇವೆ. ಪ್ರತಿಯೊಂದು ಜವಾಬ್ದಾರಿಗಳನ್ನೂ ಸಮರ್ಪಕವಾಗಿ ನಿಭಾಯಿಸಿ ಹೆಜ್ಜೆ ಇಡುವ ಮೂಲಕ ಈ ವರ್ಷವನ್ನು ಸಾರ್ಥಕಗೊಳಿಸೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ.
ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ ಆತ್ಮನಿರ್ಭರ ಭಾರತದ ಸಂಕೇತ ಮಾತ್ರವಲ್ಲ. ಅದು ಭಾರತದ ಆತ್ಮ ಗೌರವದ ಸಂಕೇತವೂ ಹೌದು ಎಂದು ಹೇಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ.
ಜನವರಿಯಲ್ಲಿ ಏನೇನಾಯಿತು ಎಂದು ಮೆಲುಕು ಹಾಕಿದ ಮೋದಿ. ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ವಿಜಯ ಸಾಧಿಸಿದ್ದು, ಕೊರೊನಾ ಲಸಿಕೆ ವಿತರಣೆ ಆರಂಭಿಸಿದ್ದು, ಸಂಕ್ರಾಂತಿ, ಗಣರಾಜ್ಯೋತ್ಸವ ಆಚರಿಸಿದ್ದು ಎಲ್ಲವೂ ಖುಷಿಯ ವಿಚಾರ. ಆದರೆ, ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯಲ್ಲಿ ನಡೆದ ಘಟನೆ ಬೇಸರ ಮೂಡಿಸುವಂಥದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮೋದಿ.
ಮೊನ್ನೆ ಮೊನ್ನೆಯಷ್ಟೇ ನಾವು ಒಬ್ಬರಿಗೊಬ್ಬರು ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡಿದ್ದೆವು. ಆದರೀಗ ಜನವರಿಯ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಸಮಯ ಎಷ್ಟು ಬೇಗ ಓಡುತ್ತದೆ ಎಂದು ಮನ್ ಕೀ ಬಾತ್ ಆರಂಭಿಸಿದ ಮೋದಿ.
ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಸಂಸ್ಥೆಯ ಕಾರ್ಮಿಕರ ಮುಷ್ಕರ 84ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಮಿಕರನ್ನು ಭೇಟಿಯಾಗಿದ್ದಾರೆ.
PUBG ಆಡುವಾಗ ಅವಮಾನಿಸಿದ್ದಕ್ಕೆ ಬೇಸತ್ತು, 16 ವರ್ಷದ ಹುಡುಗ ನೇಣಿಗೆ ಶರಣಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರಿನ ಭಾರತಿದಾಸನ್ ನಗರದಲ್ಲಿ ನಡೆದಿದೆ. ITI ವಿದ್ಯಾರ್ಥಿ ರವಿ ಎಂಬಾತ ಅಮ್ಮನ ಸೀರೆಯನ್ನು ಬಳಸಿ ನೇಣು ಹಾಕಿಕೊಂಡಿದ್ದಾನೆ. ಗಾರೆ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದಾಗ ಮಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.
ಕೊವಿಡ್ ಹಿನ್ನೆಲೆ ಕಳೆದ 10 ತಿಂಗಳಿಂದ ಬಂದ್ ಆಗಿದ್ದ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ನಾಳೆಯಿಂದ ದೇವಿ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕೃತ ಆದೇಶ ಹೊರಡಿಸಿದ್ದಾರೆ. ಕೆಲವು ಮಾರ್ಗಸೂಚಿ ಸೂತ್ರ ವಿಧಿಸಿ ಯಲ್ಲಮ್ಮ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದರ್ಶನ ಪಡೆಯುವಂತೆ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಕಾರ್ಯಕ್ರಮ ಮನ್ ಕೀ ಬಾತ್ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. 2021ನೇ ಇಸವಿಯ ಮೊದಲ ಮನ್ ಕೀ ಬಾತ್ ಕಾರ್ಯಕ್ರಮ ಇದಾಗಿದೆ.
ಕುರುಬ ಸಮುದಾಯಕ್ಕೆ ST ಮೀಸಲಾತಿ ನೀಡಲು ಆಗ್ರಹಿಸಿ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ದಾಬಸ್‌ಪೇಟೆ ತಲುಪಲಿದೆ. ಹೋರಾಟದ ಮುಂದುವರೆದ ಭಾಗವಾಗಿ ಫೆ.7ರಂದು ಬಿಐಇಸಿಯಲ್ಲಿ ‘ಎಸ್‌ಟಿ ನಮ್ಮ ಹಕ್ಕು’ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಬಾಗಲಕೋಟೆಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ನಗರದ ಕಾಳಿದಾಸ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಸಂಘಟನಾ ಸಮಾವೇಶದಲ್ಲಿ ಭಾಗಿಯಾಗಲಿರುವ ಹೆಚ್ಡಿಕೆಗೆ ಪಕ್ಷದ ಪ್ರಮುಖ ನಾಯಕರು ಜೊತೆಯಾಗಲಿದ್ದಾರೆ. ಸಮಾವೇಶದಲ್ಲಿ ವಿವಿಧ ತಾಲ್ಲೂಕಿನ 100ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಸೇರುವುದಾಗಿ ತಿಳಿದುಬಂದಿದೆ.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು ದೆಹಲಿಯ ಗಾಜೀಪುರ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸುತ್ತಿದ್ದು ಗಾಜೀಪುರ ಗಡಿಯಲ್ಲಿ 12 ಹಂತದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.
ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ಹೊಸ ನಿಯಮವನ್ನು ಪ್ರಶ್ನಿಸಿ, ಇಂದು ದಕ್ಷಿಣ ಭಾರತದ ಫಿಲ್ಮ್ ಚೇಂಬರ್ ಸಂಘದ ಸಭೆಯನ್ನು ಚೆನ್ನೈನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಭೆಯಲ್ಲಿ ಸೌತ್ ಇಂಡಿಯನ್ ಫಿಲಂ ಚೇಂಬರ್ ಅಧ್ಯಕ್ಷ ಕಾಟ್ರಗಾಡ್ ಪ್ರಸಾದ್, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.
ಕೊವಿಡ್ ಸೋಂಕಿನಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಶಶಿಕಲಾ ನಟರಾಜನ್ ಸಂಪೂರ್ಣ ಗುಣಮುಖರಾಗಿದ್ದಾರೆ. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಶಶಿಕಲಾ ಅವರಿಗೆ ಕೆಲದಿನಗಳವರೆಗೆ ಹೋಂ ಕ್ವಾರಂಟೈನ್‌ನಲ್ಲಿರಲು ವೈದ್ಯರು ಸಲಹೆ ನೀಡಿದ್ದಾಗಿ ತಿಳಿದುಬಂದಿದೆ. ಇನ್ನು ಶಶಿಕಲಾ ಅವರ ಜೈಲುವಾಸ ಜನವರಿ 27ರಂದೇ ಅಂತ್ಯವಾಗಿದ್ದು, ಜೈಲು ಸಿಬ್ಬಂದಿ ಬಿಡುಗಡೆ ಪ್ರಕ್ರಿಯೆಯನ್ನು ಅಂದೇ ಮುಗಿಸಿದ್ದಾರೆ.
ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.2ರಷ್ಟು ದಾಖಲಾಗಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದಿನಿಂದ 4 ದಿನ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು ರಾಜ್ಯದಲ್ಲಿ 4 ದಿನಗಳ ಕಾಲ ಕೊವಿಡ್ ಲಸಿಕೆ ಅಭಿಯಾನವನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ. ಫೆ.3ರವರೆಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ಇರಲಿದ್ದು, ಅದಕ್ಕೆ ಹೆಚ್ಚಿನ ಸಮಯಾವಕಾಶ ಬೇಕಾದ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.
Published On - 7:48 pm, Sun, 31 January 21