D. R. bendre birthday ಹತ್ತರೀ ಸಾಧನಕೇರಿ ಬಸ್ : ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು…

‘ಹರಿವ ನೀರಿಗೂ ಕಳವಳವಿದೆ, ಇಲ್ಲವೇ ನೀರಿನ ಹರಿವೇ ಒಂದು ಕಳವಳವಾಗಿ ಕವಿಗೆ ಕಂಡಿದೆ. ಈ ನೆಲದ ಎದೆಯಿಂದ ಹರಿಯುವ ಸಿಹಿನೀರು ಕಂಬನಿ ಕಡಲಿನ ಒಡಲಿಗೆ ಅರ್ಪಣವಾಗುತ್ತಿದೆ. ಇದೊಂದು ತೀರಲಾಗದ ತರ್ಪಣವಾಗುತ್ತಿದೆ. ಹರಿಯುವ ನೀರಿಗೆ ಬೇಸರವಿಲ್ಲ, ಜಡತೆಯಂತೂ ಇಲ್ಲವೇ ಇಲ್ಲ. ಆದರೂ ಆ ತಂಪು ನೀರಿಗೆ ಯಾವುದೋ ತಳಮಳ. ‘ಮೋಡ ಎರೆವುದು ಮಲೆಯ ತಲೆಯಲಿ, ಬೆಟ್ಟ ಸುರಿಸುವುದು ಕೊಳ್ಳಕೆ/ಕೊಳ್ಳ ತೊರೆವುದು ನದಿಗೆ, ಎಲ್ಲವು ಮತ್ತೆ ಕಡಲಿನ ಹಳ್ಳಕೆ’, ಎನ್ನುತ್ತ ಜಲಚಕ್ರದ ವೈಜ್ಞಾನಿಕ ಸಂಗತಿಗಳನ್ನು ಕಾವ್ಯಾತ್ಮಕ ಭಾಷೆಗೆ ಒಗ್ಗಿಸುತ್ತಾರೆ ಬೇಂದ್ರೆ.‘ ಚನ್ನಪ್ಪ ಅಂಗಡಿ

D. R. bendre birthday ಹತ್ತರೀ ಸಾಧನಕೇರಿ ಬಸ್ : ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು...
ಸಾಧನಕೆರೆ ಉದ್ಯಾನವನ
ಶ್ರೀದೇವಿ ಕಳಸದ | Shridevi Kalasad

| Edited By: Ayesha Banu

Jan 31, 2022 | 11:30 AM

ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 126ರ ಹರೆಯ! ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್​ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 126ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ  ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್. 

ಪರಿಕಲ್ಪನೆ : ಶ್ರೀದೇವಿ ಕಳಸದ

ಧಾರವಾಡದ ಲೇಖಕ, ಕಥೆಗಾರ ಚನ್ನಪ್ಪ ಅಂಗಡಿ ಅವರು ಬೇಂದ್ರೆ ಬೊಗಸೆಯಲ್ಲಿ ಕಾಣಿಸಹೊರಟಿದ್ದು ಇಲ್ಲಿದೆ.

ನೀರು ನನಗೆ ಕೇವಲ ಬಾಯಾರಿಕೆ ತಣಿಸುವ ದ್ರವ್ಯವಲ್ಲ. ಅದನ್ನು ಕುರಿತಂತೆ ನಾನು ಧ್ಯಾನಿಸದ ಸಂದರ್ಭವೇ ಇಲ್ಲ. ಈ ಜೀವಜಲವು ನನ್ನ ಬದುಕು-ಬರಹ, ಮಾತು-ಕತೆ, ವಾದ-ವಿವಾದ, ಸುಖ-ದುಃಖಗಳಲ್ಲಿ ನಿರಂತರವಾಗಿ ಪ್ರವಹಿಸುತ್ತಿರುತ್ತದೆ. ಇದೇ ಗುಂಗಿನಲ್ಲಿ ಬೇಂದ್ರೆ ಕಾವ್ಯವನ್ನು ಓದುತ್ತಿರುವ ಸಂದರ್ಭದಲ್ಲಿ ಗಕ್ಕನೇ ಸಿಕ್ಕ ಕೆಲವು ನೀರಿನ ಬುಗ್ಗೆಗಳನ್ನು ಮೊಗೆದು ನಿಮ್ಮ ಬೊಗಸೆಗೆ ಸುರಿಯಬೇಕೆನಿಸುತ್ತಿದೆ.

ಬೇಂದ್ರೆ ಕನ್ನಡದ ಕವೀಂದ್ರ ; ಕರ್ನಾಟಕದ ರವೀಂದ್ರ. ಅದು ವೈಣಿಕ ಶಿಖಾಮಣಿಗಳ ರುದ್ರವೀಣೆ: ಗುನುಗುನಿಸಿ ಗುಂಗು ಹಿಡಿಸುವ ಮರಳುಸಿದ್ಧನ ಮಾಯಾಕಿನ್ನರಿ. ಅದು ಕಾವ್ಯಹೃದಯಸಮುದ್ರ. ಅನುಭವಿಸಬೇಕೆಂದರೆ ನೀರಿಗಿಳಿಯಲೇಬೇಕು. ನಮ್ಮನಮ್ಮ ಶಕ್ತ್ಯಾನುಸಾರ ಕೈಕಾಲು ಬಡಿದು ಏರಿಬರುವ ತೆರೆಗಳ ಮೇಲೆ ತೇಲಿ ಅನಂದಿಸಬೇಕು. ಮುಳುಗುವ ಅಪಾಯವಂತೂ ಇದ್ದೇ ಇದೆ. ಕಾರಣ ಇಂದಿಗೂ ಬೇಂದ್ರೆ ಎಂಬ ಕಾವ್ಯಸಾಗರ ಆಳ ಅಗಲಗಳ ನಿಗೂಢತೆಯನ್ನು ಬಿಟ್ಟುಕೊಡದ ಜಲರಾಶಿ. ಅಂತಹ ಕವಿ ಬೇಂದ್ರೆಗೆ ನೀರು ಎಂಬುದು ಸೃಷ್ಟಿಯ ಬೆಡಗು. ಮನುಷ್ಯನೂ ಸೇರಿದಂತೆ ಸಕಲ ಪ್ರಾಣಿಸಂಕುಲ, ಕೆರೆಕಟ್ಟೆ, ಹೊಳೆಹಳ್ಳ, ನೆಲಹೊಲ, ಇವೆಲ್ಲ ಜಲತತ್ವಾಲಂಬಿಗಳು. ಈ ಜೀವಜಲವನ್ನು ಕುರಿತು ಕವಿದಿನದಂದು ವರಕವಿಯ ಕಾವ್ಯಕಲ್ಪಕತೆ ಹಬ್ಬಿರುವ ದಿಕ್ಕುಗಳ ಕಡೆಗೆ ಹರಿಯೋಣ ಬನ್ನಿ. ಮಳೆಯೊಡನೆಜಳಕಾ ಮಾಡೋಣ ಬನ್ನಿ.

ಜಲೇ ದೈವಂ, ಸ್ಥಲೇ ದೈವಂ ಪಾವಕೇ ಪವನೇ ತಥಾ ಆಕಾಶೇ ಹೃದಯೋ ದೈವಂ ದೈವ ಗರ್ಭೇ ವಸಾಮ್ಯಹಂ

ಮೇಲಿನ ನಾಲ್ಕು ಸಾಲಿನ ರಚನೆಯಲ್ಲಿ ಆಪ್ ತತ್ವದ ಮಹತ್ವ, ಅನನ್ಯತೆ ಕಂಡುಬರುತ್ತವೆ. ಈ ಭೂಮಿ ಸೃಷ್ಟಿಯಾಗಿದ್ದೇ Bigbang ಎಂಬ ಮಹಾಸ್ಫೋಟದ ಮುಖಾಂತರ. ಅಗ್ನಿಗೋಳ ಉರಿದು ತಣ್ಣಗಾಗಿ ನೆಲದ ಸ್ವರೂಪ ಪಡೆದ ನಂತರವೂ ಪೃಥ್ವಿ ಅನೇಕ ಪ್ರಳಯಗಳಿಗೆ ಗುರಿಯಾಗಿದೆ. ಎಷ್ಟೇ ಬಾರಿ ಜಲಪ್ರಳಯವಾದರೂ ಈ ಭೂಮಿ ಉಳಿದು ಹೊಸಹೊಸ ಸೃಷ್ಟಿಗೆ ಸ್ಥಲವನ್ನು ಒದಗಿಸುತ್ತದೆ. ಪುರುಷನ ವೀರ್ಯ ಸ್ತ್ರೀಯ ಗರ್ಭದಲ್ಲಿ ನೀರು ಕಟ್ಟಿ ಗರ್ಭವನ್ನು ಬೆಳೆಸುತ್ತದೆ, ತೇಲಿಸುತ್ತದೆ ಅಷ್ಟೇ ಅಲ್ಲ ಪಿಂಡಾಂಡವನ್ನು ಪೊರೆಯುತ್ತದೆ. ಭೂಮಿಯ ಗರ್ಭದಲ್ಲಿ ನೀರು ಸೃಷ್ಟಿಯಾಗುವಂತೆ ಆಕಾಶದಲ್ಲಿ ಬಾಷ್ಪೀಕರಣಗೊಂಡು ಅನಿಲವಾಗುತ್ತದೆ. ಅನಿಲ ಕಣಗಳು ಸಂಯೋಜನೆಗೊಂಡು ತಣಿದು ಮೋಡವಾಗುತ್ತದೆ. ಭೂಮಿ ಮತ್ತು ಆಕಾಶಗಳು ನೀರೆಂಬ ಸೂತ್ರದಿಂದ ಸಂಬಂಧಿಸಲ್ಪಟ್ಟಿವೆ. ಇಳೆ ಮಳೆ ಸಂಯೋಗದಿಂದಲೇ ಅನ್ನ ಸೃಷ್ಟಿ, ಅದರಿಂದಲೇ ಜೀವ ಸೃಷ್ಟಿ ಮತ್ತು ವಿಕಾಸ.

ಅವರ ‘ಗಂಗಾವತರಣ’ ವಂತೂ ಪ್ರಸಿದ್ಧ ಕವಿತೆಯಾಗಿದೆ. ಇದು ಬಹಳ ಸುಶ್ರಾವ್ಯವಾಗಿ ಹಾಡುವುದರ ಮೂಲಕ ಜನಜನಿತವಾಗಿದೆ. ಈ ಹಾಡನ್ನು ಕೇಳದ ಕನ್ನಡಿಗರು ಇರಲಿಕ್ಕಿಲ್ಲವೆಂದೇ ನನ್ನ ಭಾವನೆ. ಏಕೆಂದರೆ ಅದನ್ನು ಚಲನಚಿತ್ರದಲ್ಲಿ ಭಾಗಶಃ ಅಳವಡಿಸಿಕೊಳ್ಳಲಾಗಿದೆ. ಆದರೆ ಬೇಂದ್ರೆಯವರಿಗೆ ಈ ಗೀತೆಯನ್ನು ಬರೆಯಲು ಪ್ರೇರಣೆಯಾಗಿದ್ದು ಮಾತ್ರ ಒಂದು ರೌದ್ರ ಪ್ರಸಂಗ. 1942 ರಲ್ಲಿ ಬಂಗಾಲ ಪ್ರಾಂತ್ಯ ಕಂಡ ವಿನಾಶಕಾರಿ ಕ್ಷಾಮ ಬೇಂದ್ರೆಯವರ ಮನಸ್ಸನ್ನು ಕಲುಕಿದ ಸಂದರ್ಭದಲ್ಲಿ ರೂಪು ತಳೆದ ಈ ಕವಿತೆ ಪೌರಾಣಿಕ, ಯೌಗಿಕ ಆಯಾಮಗಳನ್ನು ಪಡೆದು ವಿಶಿಷ್ಟವೆನಿಸಿದೆ. ಮನುಷ್ಯನ ಬದುಕನ್ನೇ ಕಸಿದ ಭೀಕರ ಬರಗಾಲ ಗಂಗಾನದಿಯ ತಟದಗುಂಟ ಸಾವಿನ ಸರಮಾಲೆಯನ್ನೇ ಸೃಷ್ಟಿಸಿತು. ತಲ್ಲಣಗೊಂಡ ಕವಿಯ ಮನಸ್ಸು ಹಸಿಹಸಿಯಾಗಿ ದಾರುಣ ಚಿತ್ರಣಗಳನ್ನು ಪೋಣಿಸುತ್ತ ಹೋಗದೇ, ಗಂಗೆಯ ಪ್ರಾರ್ಥನಾ ಗೀತೆಯಾಗಿದೆ. ಅವಳು,

ಶಿವಶುಭ್ರ ಕರುಣೆ ಅತಿಕಿಂಚಿದರುಣೆ ವಾತ್ಸಲ್ಯವರಣೆ

ಆಗಿ ಇಳಿದು ಬರಲೆಂಬ ಬೇಡಿಕೆಯಿದೆ. ಇದು ಪುರಾಣ ಕಥೆಯನ್ನೂ ದಾಟಿ, ಬೇಂದ್ರೆ ದಾಟಿ ಆಗಿ ಸಾಲು ಒಡಮೂಡುವ ಪರಿ. ಗಂಗೆಯನ್ನು ಆಕಾಶದಿಂದ ಭೂಮಿಗೆ ತಂದ ಭಗೀರಥನ ಕತೆಯ ಹಿನ್ನೆಲೆಯಲ್ಲಿ,

ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ ತಾಯಿ ಇಳಿದು ಬಾ ಇಳಿದು ಬಾ ಎಂದು ಮತ್ತೆ ಮತ್ತೆ ಹಾಡಿದ್ದಾರೆ. ಈ ಕವಿತೆಯುದ್ದಕ್ಕೂ ಕಂಡುಬರುವ ನಿರರ್ಗಳತೆ ಮತ್ತು ಅಂತ್ಯಪ್ರಾಸಗಳ ಮಂಜುಳತೆ ಸಹೃದಯನನ್ನು ಅನೂಹ್ಯ ಲೋಕಕ್ಕೆ ಕರೆದೊಯ್ಯುತ್ತಿವೆ. ‘ಇಳಿದು ಬಾ ತಾಯಿ ಇಳಿದು ಬಾ’ ಎನ್ನುವ ಪುನರುಕ್ತಿ ಕೇವಲ ಹಾಡಿನ ಗೇಯಸಾಧನೆಗಾಗಿ ತಂದಿರಿಸಿದ್ದು ಅಂತ ನನಗನಿಸುವದಿಲ್ಲ. ಕವಿಯ ಪ್ರಾರ್ಥನಾ ಭಾವ ಮತ್ತು ಅದರ ಹಿಂದಿರುವ ವಿನೀತತೆಯೇ ಮತ್ತೆಮತ್ತೆ ಮೈದೋರಿದಂತೆ ಭಾಸವಾಗುತ್ತದೆ. ತನ್ನ ಛಲ ಬಿಡದ ಪ್ರಾರ್ಥನೆಯಿಂದ ಗಂಗೆ ಇಳಿದು ಬಂದೇ ಬರುತ್ತಾಳೆ ಎನ್ನುವ ಆತ್ಮವಿಶ್ವಾಸವೂ ಇಲ್ಲಿದೆ.

ಇದೇ ರೀತಿ ಜಗನ್ನಾಥ ಪಂಡಿತನ ‘ಗಂಗಾಲಹರಿ’ ಯಿಂದ ಪ್ರೇರಣೆ ಪಡೆದು ಬೇಂದ್ರೆಯವರು ‘ಗಂಗಾಷ್ಟಕ’ ಎಂಬ ಕವಿತೆಯನ್ನು ಬರೆದಿದ್ದಾರೆ. ಕಾಶಿ, ಹರಿದ್ವಾರ, ಹೃಷಿಕೇಶಗಳಲ್ಲಿ ಸಂಚರಿಸಿ ನದಿಯ ವೈಭವವನ್ನು ಕಂಡು ರಚಿಸಿದ ಕವನ ‘ಗಂಗಾಷ್ಟಕ’ ಎಂದು ಹೇಳಲಾಗಿದೆ. ಗಂಗಾನದಿಯ ಸುತ್ತ ಸುತ್ತಿಕೊಂಡಿರುವ ಪೌರಾಣಿಕ ಕತೆಗಳ ಬಗ್ಗೆ ಅವರಿಗೆ ಅತೀವ ಆಕರ್ಷಣೆ. ಆದರೆ ‘ಅವತಾರವೆಂದೆ ಎಂದಾರೆ ತಾಯಿ ಈ ಅಧಃಪಾತವನ್ನೇ’ ಎನ್ನುತ್ತ ಮಾನವ ಕಲ್ಯಾಣಕ್ಕೆ ದೈವಶಕ್ತಿಯ ಅಧಃಪಾತವೇ ತಾನಾಗಿ ಕಾರಣವಾಗುತ್ತದೆ ಎನ್ನುವುದು ಮಾತ್ರ ಬೇಂದ್ರೆಯವರ ಕಾವ್ಯಪ್ರತಿಭೆ.

ಬೆಳೆವ ಹೊಲಕೆ ಮಳೆಯಾಗಿ ಬಾಯಾರಿಸೆ ಹೊಳೆಯಾಗಿ ಕಣ್ಣಿಗೆ ಕಳೆಕಳೆಯಾಗಿ ಜಲವಾಗಿಹೆ ತಾಯಿ

ಇವು ‘ಭೌತಿಕ’ ಎಂಬ ಸಣ್ಣ ಕವಿತೆಯ ನಾಲ್ಕು ಸಾಲುಗಳು. ಜಲ, ತಾಯಿಯಂತೆ ಸಲಹುತ್ತದೆ ಎಂದು ಪ್ರತಿಪಾದಿಸುವ ಇಲ್ಲಿನ ಸರಳತೆ ಬೆರಗು ಹುಟ್ಟಿಸುತ್ತದೆ. ಜಲ ಮಳೆಯೂ ಆಗುತ್ತದೆ, ಹೊಳೆಯೂ ಆಗುತ್ತದೆ, ಕಳೆಕಳೆಯಾಗಿ ಕಣ್ಣೂ ತುಂಬುತ್ತದೆ ಎಂದು ಹೇಳುವಾಗ, ಕವಿ ಜೀವಜಲ ಕುರಿತಂತೆ ಇನ್ನೂ ಏನೇನೋ ಹೇಳಲು ಬಯಸುತ್ತಿದ್ದಾನೆಂದು ಕಲ್ಪನೆ ಮೂಡುತ್ತದೆ. ಜಲವಾಗಿಹ ತಾಯಿ ನೆಲವಾಗಿಯೂ ನಮ್ಮನ್ನು ಪೊರೆಯುವಳು ಎಂಬ ಕೃತಜ್ಞತಾಭಾವ ಇಲ್ಲಿ ಮೂಡಿಬಂದಿದೆ.

ಕದಡು ನೀರಾಗ ಕೈಹಾಕಿ-ಕಲಕಬ್ಯಾಡ್ರಿ ಸುಮ್ಮನೆ ಕೂತ ನೊಡ್ರಿ ನೆಲಕ್ಕ ನೆಲಾ ಕೂಡತದ ಜಲಕ್ಕ ಜಲಾ ಕೂಡತದ ಅದಕ್ಕ ಗೊತ್ತದ ಅದರ ಬೇರು ನಾವು ಕಲಕತೇವಿ ನೀರು

ನೀರಿನ ಹತ್ತು ಹಲವು ಮುಖಗಳನ್ನು ದರ್ಶಿಸಿರುವ ಬೇಂದ್ರೆಯವರು ಅದರ ಹಲವು ಆಯಾಮಗಳನ್ನು ಮುಟ್ಟಿ ನೋಡುವ ಪ್ರಯತ್ನವನ್ನೂ ಮಾಡುತ್ತಾರೆ. ಜಲತತ್ವಾಲಂಬಿಯಾದ ಮನುಷ್ಯ ಅದೇ ನೀರಿನೊಂದಿಗೆ ಏನೇನು ಮಾಡಬೇಕು, ಏನೇನು ಮಾಡಬಾರದು ಎಂಬ ಸಂಹಿತೆಯನ್ನು ಪ್ರತಿಪಾದಿಸಲು ಕೂಡ ಮುಂದಾಗುತ್ತಾರೆ. ಕದಡಿದ ನೀರಿನೊಂದಿಗೆ ನಾವು ಮಾಡಬೇಕಾದ ಕೆಲಸವೆಂದರೆ ಸುಮ್ಮನೆ ಕುಳಿತು ನೋಡುವುದಷ್ಟೇ. ಕ್ರಮೇಣ ನೆಲ ನೆಲವಾಗಿ ಕಾಣುತ್ತದೆ, ಜಲ ಜಲವಾಗಿ ಕಾಣುತ್ತದೆ. ಅದಕ್ಕೆ ಕಾಲ ಉತ್ತರ ಹೇಳುತ್ತದೆಯಷ್ಟೆ.

ಸೃಷ್ಟಿಗೆ ಆಧಾರವಾದ ನೀರು, ಸೃಷ್ಟಿಯಲ್ಲಿಯೇ ಹರಿದಾಡುತ್ತ ತನ್ನ ಲೀಲಾವಿಲಾಸದಿಂದ ಸೃಷ್ಟಿಯ ವೈಚಿತ್ರ, ಸೊಬಗು, ಸೊಗಸು, ಬೆರಗು ಇವಕ್ಕೆಲ್ಲ ಕಾರಣವಾಗುತ್ತದೆ. ಇದೇ ಭಾವವನ್ನಿಟ್ಟುಕೊಂಡು ಬೇಂದ್ರೆಯವರು ‘ನೀರು’ ಎಂತಲೇ ಕವಿತೆ ರಚಿಸಿದ್ದಾರೆ.

ಚಣಚಕು ತಣಿವಿಲ್ಲ, ಏನಿದು ಹರಿವ ನೀರಿನ ಕಳವಳ? ಏಕೊ ಮೊರೆಯುತ ಎತ್ತೊ ಹರಿಯುತ ಅಳುತಲಿಹುದೇ ಕಳವಳ?

ಹಣ್ಣು ರಸವೆನಿಸುತ್ತ ಜೀವದ ಹಸಿವ ತಣಿಸಲು ಬರುವೆಯಾ? ರಕ್ತದಲಿ ಒಂದಾಗಿ ಹೃದಯದಿ ಮತ್ತೆ ನಲಿವನು ತರುವೆಯಾ?

ಹರಿವ ನೀರಿಗೂ ಕಳವಳವಿದೆ, ಇಲ್ಲವೇ ನೀರಿನ ಹರಿವೇ ಒಂದು ಕಳವಳವಾಗಿ ಕವಿಗೆ ಕಂಡಿದೆ. ಈ ನೆಲದ ಎದೆಯಿಂದ ಹರಿಯುವ ಸಿಹಿನೀರು ಕಂಬನಿ ಕಡಲಿನ ಒಡಲಿಗೆ ಅರ್ಪಣವಾಗುತ್ತಿದೆ. ಇದೊಂದು ತೀರಲಾಗದ ತರ್ಪಣವಾಗುತ್ತಿದೆ. ಹರಿಯುವ ನೀರಿಗೆ ಬೇಸರವಿಲ್ಲ, ಜಡತೆಯಂತೂ ಇಲ್ಲವೇ ಇಲ್ಲ. ಆದರೂ ಆ ತಂಪು ನೀರಿಗೆ ಯಾವುದೋ ತಳಮಳ. ‘ಮೋಡ ಎರೆವುದು ಮಲೆಯ ತಲೆಯಲಿ, ಬೆಟ್ಟ ಸುರಿಸುವುದು ಕೊಳ್ಳಕೆ/ಕೊಳ್ಳ ತೊರೆವುದು ನದಿಗೆ, ಎಲ್ಲವು ಮತ್ತೆ ಕಡಲಿನ ಹಳ್ಳಕೆ’, ಎನ್ನುತ್ತ ಜಲಚಕ್ರದ ವೈಜ್ಞಾನಿಕ ಸಂಗತಿಗಳನ್ನು ಕಾವ್ಯಾತ್ಮಕ ಭಾಷೆಗೆ ಒಗ್ಗಿಸುತ್ತಾರೆ.

ಧಾರವಾಡದ ಸಾಧನಕೆರೆ

ನೀರಿನ ಬಗ್ಗೆ ಕವಿತೆ ಬರೆದ ಬೇಂದ್ರೆ ನೀರಾವರಿ ಕುರಿತಂತೆಯೂ ಕವನಿಸಿದ್ದಾರೆ.

ನೀರೊಡಲೇ ಒಡವೆಯ ಮನೆ ಬಡವನೆ ನೀರೊಡೆಯಾ ದುಡಿಯಾ ಪಡೆಯಾ ನುಡಿಯಾ ನುಡಿಸೆಲೊ ಎದೆ ತುಡಿಯಾ

ನೀರಾವರಿಯಿಂದ ಬಡವ ಪ್ರಯೋಜನ ಪಡೆಯಬೇಕು. ಆತ ಯೋಜನೆಯೊಂದರ ಪಾಲುದಾರನಾಗಿರಬೇಕು. ಜನಸಮುದಾಯ ಗೆಲವು ಕಾಣಬೇಕು. ‘ನೀರಾವರಿ ಕಾಲ್ ಪರಿಯಲಿ/ ಸಾಗಾಗಲಿ ಹೊಲವು/ ಜನ ಕಾಣಲಿ ಗೆಲವು’ ಎಂಬುದು ಕವಿಯ ಆತ್ಯಂತಿಕ ಆಶಯ. ಅದೇ ರೀತಿ ಬೇಂದ್ರೆಯವರು ‘ಹೃದಯಸಮುದ್ರ’ದಲ್ಲಿ ಅನುಭಾವಿಕ ನೆಲೆ ಕಂಡುಕೊಂಡಿದ್ದಾರೆ. ಮನುಷ್ಯನ ಅಂತರಂಗದಲ್ಲಿರುವ ಸಮುದ್ರದಷ್ಟು ವಿಶಾಲವಾದ ಸುಪ್ತಚೇತನದ ಶೋಧನೆ ಮಾಡಿದ್ದಾರೆ. ‘ಕಂಡವರಿಗಲ್ಲೊ, ಕಂಡವರಿಗಷ್ಟೆ ತಿಳಿದದ ಇದರ ಬೆಲೆಯು/ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು’ ಎನ್ನುವಲ್ಲಿ, -‘ಕಂಡವರಿಗೆ’ ಮತ್ತು ‘ಕಂಡವರಿಗಷ್ಟೆ’ ಹಾಗೂ ‘ಸಿಕ್ಕಲ್ಲಿ’ ಮತ್ತು ‘ಸಿಕ್ಕಲೆ’ ಶಬ್ದಗಳ ಅರ್ಥಗಳಲ್ಲಿರುವ ಅಂತರವನ್ನು ಸೂಕ್ಷ್ಮವಾಗಿ ಗಮನಿಸಿದರೆ ದೊರೆಯುವ ಅನುಭೂತಿ ಎಣಿಕೆಗೆ ಸಿಗಲಾರದ್ದು. ಯಾರಾರಿಗೋ ಅಥವಾ ಎಲ್ಲರಿಗೂ ಈ ಅನುಭವ ಪ್ರಾಪ್ತವಾಗುವುದಿಲ್ಲ. ಕಾಣುವ ಕಣ್ಣಿದ್ದವರಿಗೆ, ಅಂತಹ ಯೋಗವಿದ್ದವರಿಗೆ ಬೆಲೆಯೂ ತಿಳಿಯುತ್ತದೆ. ಜೊತೆಗೆ ಸೆಲೆ ಒಡೆಯುವುದು ಸೆಲೆ ಸಿಗುವಲ್ಲಿ ಮಾತ್ರ, ನೀರಿನ ಕಡೆಗೆ ನೀರು ಹರಿಯುವಂತೆ. ಹೀಗೆ ಶಬ್ದದ ಐಂದ್ರಜಾಲಿಕ ಮಾದರಿಯೊಂದರ ಮುಖಾಂತರ ಶ್ಲೇಷೆ ಹುಟ್ಟಿಸುವುದು ಬೇಂದ್ರೆ ಕಾವ್ಯಗುಣ.

ಬೈರಾಗಿಯ ಹಾಡಿನಲ್ಲಿ ಭೂಮಿ, ಜಲಕ್ಕಿರುವ ಬೈರಾಗಿಯ ವಿರಕ್ತ, ನಿರ್ಲಿಪ್ತ ಆಚರಣೆ; ಭೌತಿಕದಲ್ಲಿ ತಾಯಿಯೆಂತೆ ಸಲಹುವ ಜಲ ಮತ್ತು ನೆಲಗಳಿಗೆ ಸಲ್ಲಿಸುವ ಕೃತಜ್ಞತೆ; ಸವಿಜೇನುವಿನಲ್ಲಿ ನಾಲ್ಕು ತತ್ವಗಳ ಸಾಮರಸ್ಯ, ಅದು ಸೃಷ್ಟಿಸುವ ರಸ; ನನ್ನ ಹಸಿವು ಹಿಂಗದಿರಲಿಯಲ್ಲಿ ನೆಲದ ಜಲದ ಸೆಳೆಯ ನೆಲೆಯ ಮುಖಾಂತರ ಭೂಮಿ ತೋರುವ ತನ್ನ ಹೃದಯ ಶ್ರೀಮಂತಿಕೆ; ಒಳಬೆಡಗಿನ ತಿಳಿಹಾಡುವಿನಲ್ಲಿ ಮಳೆಗೆ ಪ್ರತಿಕ್ರಿಯೆಯಾಗಿ ಭೂಮಿ ನೀಡುವ ಬೆಳೆ ಎಂಬ ಬೆಳಕು; ದೈವಂನಲ್ಲಿ ಪಂಚಮಹಾಭೂತಗಳ ಅಂತರಂಗ ನೀರು ಆಗಿರುವುದು ಮತ್ತು ಅದು ದೈವವೇ ಆಗಿರುವುದು; ಸಮೃದ್ಧ, ಹೊಳೆಯ ಹರಿವು, ಸಕಲ, ವಸುಧಾ, ಕಿಮಪಿ ತತ್ ಗಳಲ್ಲಿ ಗಂಗೆ ಪಡೆದುಕೊಳ್ಳುವ ವಿಭೂತಿಮತ್ವ ; ಇವೆಲ್ಲ ಬೇಂದ್ರೆಯವರು ಧ್ಯಾನಿಸಿ ಧ್ಯಾನಿಸಿ ಕಂಡುಕೊಂಡ ಜಲತತ್ವದ ದರ್ಶನಗಳು.

ಬೇಂದ್ರೆಯವರು ತಮ್ಮ ಕಾವ್ಯೋದ್ಯೋಗದುದ್ದಕ್ಕೂ ನೀರು-ಜೀವಜಲ-ಜಲತತ್ವ-ಪಂಚಮಹಾಭೂತಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ನಿರಂತರ ಮಾಡಿದ್ದಾರೆ. ಅವನ್ನು ಕಾವ್ಯವಸ್ತು ಮಾಡಿಕೊಂಡು ಅನೇಕ ಮಾದರಿಯ ಕವನಗಳನ್ನು ಬರೆದಿದ್ದಾರೆ. ಒಂದೊಂದು ಕವನದ ಮುಖಾಂತರವೂ ತಾವು ದರ್ಶಿಸಿದ ಸತ್ಯವನ್ನು ಕಾವ್ಯರಸಿಕರಿಗೆ ನೀಡಿದ್ದಾರೆ. ಯಾವುದೇ ಆಕರಗಳನ್ನು ಶೋಧಿಸಿ, ಪುರಾಣೇತಿಹಾಸಗಳನ್ನು ಆಧರಿಸಿ ಬರೆದರೂ ಸ್ವಂತಿಕೆಯ ಛಾಪನ್ನು ಮೂಡಿಸದೇ ಬಿಟ್ಟಿಲ್ಲ. ನೀರಿನ ರೌದ್ರ ಗುಣವನ್ನು ಹೇಳುವಾಗ ತಮ್ಮ ಅಂತರಂಗದಲ್ಲುಂಟಾಗುವ ವಾತ್ಸಲ್ಯಭಾವವನ್ನು ಕಾಣಿಸದೇ ಬಿಟ್ಟಿಲ್ಲ. ಎಂಥ ವಸ್ತುವಿನಲ್ಲೂ ಸಹಜವಾಗಿ ಪ್ರವೇಶಿಸಿ ನಿರಗರ್ಗಳವಾಗಿ ಹರಿಬಿಡುವ ಹಸ್ತಗುಣವೊಂದು ಅವರಿಗೆ ಸಿದ್ಧಿಸಿಬಿಟ್ಟಿತ್ತು. ಹಾಗಾಗಿ ಅವರ ಕಾವ್ಯದಲ್ಲಿ ಬೋಧಪ್ರದವಾದ ಉದ್ದರಣೆಗಳು ಹೇರಳವಾಗಿ ಸಿಗುತ್ತವೆ. ಜೀವಜಲ ಕುರಿತಾದ ಅಂತಹ ಕೆಲವು ಮಾದರಿಗಳನ್ನು ಗಮನಿಸಿ.

* ಕಾಲೂರಿತು ಮಳೆ, ಕತ್ತೆತ್ತಿತು ಬೆಳೆ, ಹನಿಯೊಡೆಯಿತು ಮೋಡ * ನೀರ ಉಗೆಯಲ್ಲಿ ಬೆಂಕಿ ಅಡಗಿರಬಹುದೆ?-ಪಂಚ ಮಹಾಭೂತಗಳ ರಹಸ್ಯ * ನಿಂತಲ್ಲಿಯೆ ಕಾಲುಂಟಿತ್ತು! ಊಹೆ ದಿಗಂತಕ್ಕೆ ಹೊಂಟಿತ್ತು * ತುಡಗೀಲೆ ಹೆಜ್ಜೆಹಾಕಿ, ಚಡಪಡಿಸಿ ಬಾ (ಮಳೆಗೆ ಹೇಳಿದ್ದು) * ಮಜ್ಜಿಗೆಯ ಮೇಲ್ ತೇಲಿ, ಬೆಣ್ಣೆಯಂತೆ ಸಲಿಲ-ಮೋಡ * ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೋ? ಇಳಿಯೊಡನೆ ಜಳಕ ಮಾಡೋಣ, ನಾವೂನು, ಮೋಡಗಳ ಆಟ ನೋಡೋಣ * ಒಕ್ಕಲಕು, ಹಕ್ಕಲಕು ಹೊರಪ ಕೊಡಲಿ / ಜೋಳಕೈ ಕಾಯುತಿದೆ, ತೆರವು ಕೊಡಲಿ

ಇದು ಬೇಂದ್ರೆ ಎಂಬ ಕಾವ್ಯಮಾರ್ಗಿ ಜಲತತ್ವವನ್ನು ಅರಿತು, ಅರಗಿಸಿಕೊಂಡು, ಬೆರೆತು, ಮಿಳಿತು, ಸಹೃದಯನಿಗೆ ಉಣಬಡಿಸಿದ ರೀತಿ.

ಚನ್ನಪ್ಪ ಅಂಗಡಿ

ಹತ್ತರೀ ಸಾಧನಕೇರಿ ಬಸ್: ನೀನು ಅಳುನುಂಗಿ ನಕ್ಕರೆ ಮಾತ್ರ ನಾನೂ ನಗಲು ಸಾಧ್ಯ…

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada