D. R. bendre birthday ಹತ್ತರೀ ಸಾಧನಕೇರಿ ಬಸ್: ಸೂರ್ಯ ಮುಳುಗುವ ಮುನ್ನ ಓಡೋಡಿ ಬರುವ ಜನ, ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ…

‘ಅವತ್ತು ಬೇಂದ್ರೆಯವರ ಪದ್ಯ ಓದಿದಾಗ ನನ್ನ ಕಣ್ಣ ಮುಂದಿದ್ದದ್ದು ನನ್ನ ಅತ್ತೆಯ ಪುಟ್ಟ ಮಗಳು. ಉಮಾ ಅಂತ ಆಕೆಯ ಹೆಸರು. ಮುದ್ದಾದ ಹುಡುಗಿ. ನನ್ನ ತಾಯಿಗಂತೂ ಆಕೆಯೆಂದರೆ ಅತಿ ಮುದ್ದು. ನನ್ನ ತಾಯಿಗೆ ಹೆಣ್ಣು ಮಕ್ಕಳಿಲ್ಲ, ನಾವು ನಾಲ್ವರೂ ಗಂಡು ಮಕ್ಕಳೇ, ಹಾಗಾಗಿ ಅವರಿಗೆ ಈ ಉಮಾ ಅಂದರೆ ಅತೀವ ಪ್ರೀತಿ. ಆದರೆ ಬೇಂದ್ರೆಯವರ ಪದ್ಯದಂತೆ ಆಕೆ ಹೆಣ್ಣಾಗಲಿಲ್ಲ, ವಧುವಾಗಲಿಲ್ಲ, ತಾಯಾಗಲಿಲ್ಲ. ಎಂಟರೊಳಗೇ ಮಣ್ಣಾದಳು.‘ ಎಸ್​. ಸುರೇಂದ್ರನಾಥ್

D. R. bendre birthday ಹತ್ತರೀ ಸಾಧನಕೇರಿ ಬಸ್: ಸೂರ್ಯ ಮುಳುಗುವ ಮುನ್ನ ಓಡೋಡಿ ಬರುವ ಜನ, ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ...
Follow us
ಶ್ರೀದೇವಿ ಕಳಸದ
| Updated By: ಆಯೇಷಾ ಬಾನು

Updated on:Jan 31, 2022 | 11:32 AM

ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 126ರ ಹರೆಯ! ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್​ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 126ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ  ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್. 

ಪರಿಕಲ್ಪನೆ : ಶ್ರೀದೇವಿ ಕಳಸದ

ಬೆಂಗಳೂರಿನಲ್ಲಿ ವಾಸಿಸುತ್ತಿರುವ ರಂಗನಿರ್ದೆಶಕ, ಕಥೆಗಾರ ಎಸ್​. ಸುರೇಂದ್ರನಾಥ್ ಅವರ ಆಪ್ತಬರಹ ನಿಮ್ಮ ಓದಿಗೆ…

ಬೆಳ್ಳಿ ಮೋಡ ಚಿತ್ರ ಅರವತ್ತರ ದಶಕದ ಮಧ್ಯದಲ್ಲಿ ಬಂದಿತ್ತು. ಮನೆ ಮಂದಿಯ ಜೊತೆಗೆ ನಾನೂ ನೋಡಿದ್ದೆ. ಸುಮಾರು ಹತ್ತು ಹನ್ನೊಂದು ವಯಸ್ಸಿನ ಹುಡುಗ ನಾನು. ಸಿನೆಮಾದ ತಲೆಬುಡ ಅರ್ಥ ಆಗಿರಲಿಲ್ಲ. ಮನೆಗೆ ಬಂದ ಮೇಲೆ ನಮ್ಮ ಮನೆಯಲ್ಲಿ ಎಲ್ಲರೂ ‘ಮೂಡಲ ಮನೆಯಾ ಮುತ್ತಿನ ನೀರಿನಾ’ ಅಂತ ಗೊಣಗುತ್ತಿದ್ದರು. ನಮ್ಮ ತಂದೆಯಂತೂ ರೇಡಿಯೋದಲ್ಲಿ ಆ ಹಾಡು ಬಂದ ಕೂಡಲೇ ತಮ್ಮಲ್ಲಿದ್ದ ಒಂದು ಪುಸ್ತಕವನ್ನು ತೆಗೆದು ಅದರಲ್ಲಿದ್ದ ಹಾಡನ್ನು ನೋಡಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ನನಗೆ ಅರಿವಾಗಿದ್ದು- ನನ್ನ ತಂದೆಯ ಬಳಿಯಲ್ಲಿ ಬೇಂದ್ರೆಯವರ ಕಾವ್ಯದ ಸರಿ ಸುಮಾರು ಎಲ್ಲಾ ಪುಸ್ತಕಗಳೂ ಇದ್ದವು, ಕೇವಲ ಬೇಂದ್ರೆ ಮಾತ್ರವಲ್ಲ, ಕುವೆಂಪು, ರಾಜರತ್ನಮ್‌ ಅವರ ಕಾವ್ಯ ಪುಸ್ತಕಗಳೂ ಇದ್ದವು. ತಮ್ಮಲ್ಲಿಲ್ಲದ ಕೆಲವು ಕವನಗಳನ್ನು/ಪದ್ಯಗಳನ್ನು ರೇಡಿಯೋದಲ್ಲಿ ಕೇಳಿ ಕೇಳಿ ಒಂದು ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಹಾಗೆ ಬರೆದುಕೊಂಡ ಅಂತಹ ಸುಮಾರು ನಾಲ್ಕಾರು ಪುಸ್ತಕಗಳು ಅವರ ಬಳಿಯಿದ್ದವು. ಒಮ್ಮೊಮ್ಮೆ ಅವರು ಹಾಡಿಕೊಳ್ಳುತ್ತಿದ್ದರು ಕೂಡಾ. ಅಂತಹ ದಿನಗಳಲ್ಲಿ ಇದ್ದಕ್ಕಿದ್ದಂತೇ ಇದೇ ಮೂಡಲ ಮನೆ ಹಾಡು ಬೇರೊಂದು ಧಾಟಿಯಲ್ಲಿ, ಜಾನಪದ ಧಾಟಿಯಲ್ಲಿ ಅವರು ಹಾಡಿಕೊಂಡಿದ್ದು ಕೇಳಿದೆ. ಅದು ಕಾಳಿಂಗರಾವ್‌ ಅವರು ರಾಗ ಸಂಯೋಜಿಸಿದ ಹಾಡು. ಯಾಕೋ ಸಿನೆಮಾ ಹಾಡಿಗಿಂತ ಇದು ಬಹಳ ಇಷ್ಟವಾಯಿತು. ನನಗೆ ಬೇಂದ್ರೆಯವರ ಹೆಸರು, ಅವರ ಕಾವ್ಯ ಅನುಭವಕ್ಕೆ ಬಂದಿದ್ದು ಹೀಗೆ.

ಒಂದು ಅನುಭವವನ್ನು ಚಿತ್ರಿಸಿ ಅದನ್ನು ಕಾವ್ಯವಾಗಿಸಿದಾಗಲೇ ಅದು ಅತ್ಯುತ್ತಮ ಕಾವ್ಯ ಅನಿಸಿವುದು. ನಮ್ಮೆಲ್ಲರಿಗೂ ಸಾಮಾನ್ಯವಾಗಿ ಕಾಣಬಹುದಾದದ್ದು ಒಂದು ಬೆಳಗು, ಅಲ್ಲಿ ಬೆಳಕು ಹರಿಯುತ್ತದೆ ಅಷ್ಟೆ. ಬೇಂದ್ರೆಯವರಿಗೆ ಅದೊಂದು ಬೇರೆಯದೇ ಲೋಕದ ಪರಿಚಯ ಮಾಡಿಕೊಡುತ್ತದೆ. ಶಬ್ದಗಳಲ್ಲಿ, ಲಯದಲ್ಲಿ ತಮ್ಮ ಬೆಳಗಿನ ಅನುಭವವನ್ನು ಹಿಡಿದು ಕೊಡುತ್ತಾರೆ. ಆ ಬೆಳಗಿನಲ್ಲಿ ಕಂಡ ಈ ಜಗತ್ತು ಅವರಿಗೆ ಗಂಧರ್ವ ಸೀಮೆಯಾಗಿ ಬಿಡುತ್ತದೆ, ತಮ್ಮೆಲ್ಲಾ ಇಂದ್ರಿಯಗಳನ್ನು ತೆರೆದು ಆ ಅನುಭವವನ್ನು ತಮ್ಮದಾಗಿಸಿಕೊಳ್ಳುತ್ತಾರೆ, ಕೊನೆಯಲ್ಲಿ ಶಾಂತಿರಸವೇ ಪ್ರೀತಿಯಿಂದ ಮೈದೋರಿತಣ್ಣಾ ಇದು ಬರಿ ಬೆಳಗಲ್ಲೋ ಅಣ್ಣಾ ಅನ್ನುವಲ್ಲಿ ಆ ಅನುಭವವನ್ನು ನಮಗೂ ದಾಟಿಸಿ ಬಿಡುತ್ತಾರೆ. ಈ ಅದ್ಭುತ ಅನುಭವ, ಬೇಂದ್ರೆಯವರ ಪದ್ಯದ ಓದಿನಲ್ಲಿ ಹೇಗೆ ಕಂಡುಕೊಂಡೆನೋ ಹಾಗೆ ಕಾಳಿಂಗರಾಯರ ಹಾಡಿನಲ್ಲೂ ಕಂಡಿದ್ದು ಸತ್ಯ. ಈ ಬೆಳಗನ್ನು ಇಂದಿಗೂ ಕಾಣಲಾರದ ನಗರವಾಸಿಗಳಾದ ನಾವು ಶಾಪಗ್ರಸ್ತರೇ ಸರಿ.

ನಂತರದ ದಿನಗಳಲ್ಲಿ, ಬಹುಶಃ ಕಾಲೇಜಿನಲ್ಲಿದ್ದಾಗ ಅನಿಸುತ್ತದೆ, ಒಮ್ಮೆ ನಮ್ಮ ತಂದೆಯವರ ಪದ್ಯಗಳ ಪುಸ್ತಕವನ್ನು ನೋಡುತ್ತಿದ್ದೆ. ಒಂದು ಪುಟದಲ್ಲಿ ಕೆಂಪು ಇಂಕಿನಲ್ಲಿ ಒಂದು ಪದ್ಯವಿತ್ತು. ಹಸಿಯಿದ್ದಳು ಬಿಸಿಯಾದಳು ಸಸಿಯಿದ್ದ ಹುಡುಗಿ. ಒಮ್ಮೆ ಓದಿದೆ. ಮತ್ತೊಮ್ಮೆ ಓದಿದೆ. ಒಂದು ಹುಡುಗಿ ಬೆಳೆಯುತ್ತಾಳೆ, ಹೆಣ್ಣಾಗುತ್ತಾಳೆ, ವಧುವಾಗುತ್ತಾಳೆ, ತಾಯಿಯಾಗುತ್ತಾಳೆ, ಕೊನೆಗೆ ಮಣ್ಣಾಗುತ್ತಾಳೆ, ನೆನಪಾಗುತ್ತಾಳೆ, ವ್ಯಥೆಯಾಗುತ್ತಾಳೆ. ಇಷ್ಟು ಸರಳ ಶಬ್ದಗಳಲ್ಲಿ ಒಂದು ಹೆಣ್ಣಿನ ಜೀವನವನ್ನು ವರ್ಣಿಸಿದ ಪದ್ಯ ನಂಗಂತೂ ಇನ್ನೂವರೆಗೂ ಕಂಡಿಲ್ಲ. (ಇತ್ತೀಚೆಗೆ ಗೆಳೆಯ ಬಿ. ಆರ್.‌ ಲಕ್ಷ್ಮಣರಾವ್‌ ಹೊಸ ಸಂಕಲನ ‘ನವನಮೋನ್ಮೇಷ’ದಲ್ಲಿನ ‘ಸಣ್ಣ ಸಂಗತಿ’ ಪದ್ಯ ಓದಿದಾಗಲೂ ಇದೇ ಅನುಭವವಾಗಿತ್ತು.) ಅವತ್ತು ಬೇಂದ್ರೆಯವರ ಪದ್ಯ ಓದಿದಾಗ ನನ್ನ ಕಣ್ಣ ಮುಂದಿದ್ದದ್ದು ನನ್ನ ಅತ್ತೆಯ ಪುಟ್ಟ ಮಗಳು. ಉಮಾ ಅಂತ ಆಕೆಯ ಹೆಸರು. ಮುದ್ದಾದ ಹುಡುಗಿ. ನನ್ನ ತಾಯಿಗಂತೂ ಆಕೆಯೆಂದರೆ ಅತಿ ಮುದ್ದು. ನನ್ನ ತಾಯಿಗೆ ಹೆಣ್ಣು ಮಕ್ಕಳಿಲ್ಲ, ನಾವು ನಾಲ್ವರೂ ಗಂಡು ಮಕ್ಕಳೇ, ಹಾಗಾಗಿ ಅವರಿಗೆ ಈ ಉಮಾ ಅಂದರೆ ಅತೀವ ಪ್ರೀತಿ. ಆದರೆ ಬೇಂದ್ರೆಯವರ ಪದ್ಯದಂತೆ ಆಕೆ ಹೆಣ್ಣಾಗಲಿಲ್ಲ, ವಧುವಾಗಲಿಲ್ಲ, ತಾಯಾಗಲಿಲ್ಲ. ಎಂಟರೊಳಗೇ ಮಣ್ಣಾದಳು. ಅದು ಆಕೆಗಂಟಿದ ಶಾಪ, ಅಪಸ್ಮಾರದಲ್ಲಿ ಬಳಲೀ ಬಳಲೀ ಹುಡುಗಿ ಹೋಗೇ ಬಿಟ್ಟಳು. ಅದಕ್ಕೇ ನನಗನಿಸಿದ್ದು, ಪದ್ಯದಲ್ಲಿ ಬರುವ ಸಾಲುಗಳು:

ಸಸಿಯಿದ್ದಳು ಚಿಗುರಿದ್ದಳು ಉಗುರ್ಗೆಂಪಿನ ಹುಡುಗಿ ತುಟಿ ಸೊಂಪಿನ ಹುಡುಗಿ ಆಡುತ ನೋಡುತ ಬಿಟ್ಟಳು ಊರೆಲ್ಲವನುಡುಗಿ ಚಿಗುರಿದ್ದಳು ಚಿಗರೆಯ ಮರಿ ಹೂ ಬಿಟ್ಟಳು ಹುಡುಗಿ ಮೊಗ್ಗಿದಾ ಹುಡುಗಿ ಕಣ್ ಕುಣಿತಕೆ ನಗೆ ದಣಿತಕೆ ಮನೆ ಹೋಯಿತು ನಡುಗಿ…

ನಮ್ಮ ಇಡೀ ಮನೆಯನ್ನು ಆವರಿಸಿದ್ದ ನಮ್ಮ ಪುಟ್ಟ ಹುಡುಗಿಯನ್ನೇ ಕುರಿತು ಬರೆದಂತಿತ್ತು. ಒಂದು ಪದ್ಯ ಹೀಗೂ ನಮ್ಮನ್ನು ಹೀಗೂ ಆವರಿಸಬಹುದು ಎಂದು ಅರಿವಾದದ್ದು ನನಗೆ ಅದೇ ಮೊದಲು. ನಂತರದ ದಿನಗಳಲ್ಲಿ ಎಚ್ಚೆಸ್ವಿಯವರ ಅನೇಕ ಪದ್ಯಗಳು ಹೀಗೆ ನನ್ನನ್ನು ಕಾಡಿವೆ, ವಿಶೇಷವಾಗಿ ‘ಉತ್ತರಾಯಣ ಮತ್ತು…’ ಅದರಲ್ಲಿನ ‘ಒಂದು ಕಥೆ’ ಪದ್ಯ, ರಾಮಗಿರಿ ಊರಿನ ರಾಮಣ್ಣನ ಮಗಳು ರಾಜಮ್ಮನ ಜೀವ ಕೂಡಾ ಈ ಹಸಿಯಿದ್ದ ಬಿಸಿಯಾದ ಹುಡುಗಿಯಂತಹುದೇ. ಇದೇ ಸಂಕಲನದ ಒಂದು ಪದ್ಯದಲ್ಲಿ ಬರುವ ಕೊನೆಯ ಸಾಲುಗಳು

ಮುಳುಗಿದರೆ ಮುಳುಗಬೇಕೀರೀತಿ ಹತ್ತು ಜನ ನಿಂತು ನೋಡುವ ಹಾಗೆ ಗೌರವ ಬೆರೆತ ಬೆರಗಲ್ಲಿ. ಸೂರ್ಯ ಮುಳುಗುವ ಮುನ್ನ, ಓಡೋಡಿ ಬರುವ ಜನ ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ.

ಇಂದಿಗೂ ನನ್ನ ಪ್ರಿಯವಾದ ಸಾಲುಗಳು. ಹಾಗೇ ಹೋಗಬೇಕೆಂದು ಆಸೆ… ಈ ಪದ್ಯಗಳು, ಕವನಗಳು, ಹಾಡುಗಳು ಈ ಕವಿಗಳು ತಮ್ಮ ಅನುಭವಗಳನ್ನು ಹೆಕ್ಕಿ ಹೆಕ್ಕಿ ನಮಗೆ ಉಣಿಸುವ ಸಂಭ್ರಮವಲ್ಲವೇ? ಇವುಗಳಿಂದ ನಾವೂ ಶ್ರೀಮಂತರಾಗುತ್ತೇವಲ್ಲವೇ? ಅದಕ್ಕೇ ತಾನೇ ಈ ಸಾಲುಗಳು ಇವತ್ತಿಗೂ ನಮ್ಮ ಜೊತೆಯಲ್ಲಿರುವುದು.

ಇದು ದೇವರಾಣೆಗೂ ವಿಮರ್ಶೆಯಲ್ಲ. ಪದ್ಯ ಓದಿದಾಗ ನನಗನಿಸಿದ್ದು. ಒಮ್ಮೊಮ್ಮೆ ಅನಿಸುತ್ತದೆ ಇಂತಹ ದುಸ್ಸಾಹಸಗಳಿಗೆ ಕೈ ಹಾಕಬಾರದು ಅಂತ. ನನಗೆ ಮಾವಿನಹಣ್ಣಿನ ರುಚಿಯನ್ನು ಚಪ್ಪರಿಸಿ ಅನುಭವಿಸುವದಷ್ಟೇ ಗೊತ್ತು, ಅದನ್ನು ವಿವರಿಸಲು ಸಾಧ್ಯವಿಲ್ಲ, ಅದರ ಗೊಡವೆಗೂ ಹೋಗಬಾರದು ನಾನು.

ಎಸ್​. ಸುರೇಂದ್ರನಾಥ

ಹತ್ತರೀ ಸಾಧನಕೇರಿ ಬಸ್: ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 125ರ ಹರೆಯ

Published On - 4:08 pm, Sun, 31 January 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್