AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತರೀ ಸಾಧನಕೇರಿ ಬಸ್: ಮಾಡದಿರು ಬಾಳನ್ನು ಬೇಳೆಯಂತೆ, ಕೂಡಿರಲಿ ಬಾಳು ಇಡಿಗಾಳಿನಂತೆ…

‘ಅವರಿಬ್ಬರು ಸೇರಿದರೆ ಮಾತ್ರ ಬಾಳು ಬೇಳೆಯಾಗದೇ ಇಡಿಗಾಳಾಗುವುದು ಸಾಧ್ಯ. ಇಲ್ಲಿ ಕೂಡು ಎನ್ನುವುದು ಕೇವಲ ದೈಹಿಕ ಕೂಡುವಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ. ಮನಸ್ಸಿನ ಕೂಡುವಿಕೆಗೂ ಸಂಬಂಧಿಸಿದ್ದು. ಮನಸ್ಸುಗಳು ಪರಸ್ಪರ ಕೂಡಿದಾಗ ಮಾತ್ರ ಬಾಳು ಬೇಳೆಯಾಗದೇ ಇಡಿಗಾಳಾಗಲು ಸಾಧ್ಯ. ಬೇಳೆ ಇಲ್ಲಿ ಪ್ರತ್ಯೇಕತೆಯ ಸಂಕೇತವಾದರೆ ಇಡಿಗಾಳು ಐಕ್ಯತೆಯ ಸಂಕೇತವಾಗಿದೆ.‘ ಡಾ. ಕೆ. ರಘುನಾಥ

ಹತ್ತರೀ ಸಾಧನಕೇರಿ ಬಸ್: ಮಾಡದಿರು ಬಾಳನ್ನು ಬೇಳೆಯಂತೆ, ಕೂಡಿರಲಿ ಬಾಳು ಇಡಿಗಾಳಿನಂತೆ...
ಶ್ರೀದೇವಿ ಕಳಸದ
|

Updated on:Jan 31, 2021 | 5:42 PM

Share

ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 125ರ ಹರೆಯ! ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್​ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 125ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ  ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್. 

ಪರಿಕಲ್ಪನೆ : ಶ್ರೀದೇವಿ ಕಳಸದ

ಮುಂಬಯಿಯಲ್ಲಿ ವಾಸವಾಗಿರುವ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ. ರಘುನಾಥ ಅವರ ಬರಹ ನಿಮ್ಮ ಓದಿಗೆ.

ನಾನು ವಿಶ್ವಮಾತೆಯ ಗರ್ಭಕಮಲ-ಜಾತ ಪರಾಗ ಪರಮಾಣು ಕೀರ್ತಿನಾನು ಭೂಮಿತಾಯಿ ಮೈಯ ಹಿಡಿಮಣ್ಣ ಗುಡಿಗಟ್ಟಿ ನಿಂತಂಥ ಮೂರ್ತಿ ನಾನು ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ ಮಿನುಗುತಿಹ ಜ್ಯೋತಿ ನಾನು ಕನ್ನಡದ ತಾಯಿ- ತಾವರೆಯ ಪರಿಮಳ ಉಂಡು ಬೀರುತಿಹ ಗಾಳಿ ನಾನು

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ ಜೀವಂತ ಮಮತೆ ನಾನು ಈ ಐದು ಐದೆಯರೆ ಪಂಚಪ್ರಾಣಗಳಾಗಿ ಈ ಜೀವ ದೇಹನಿಹನು (‘ನಾನು’ -ಬೇಂದ್ರೆ)

ಈ ನೆಲಕ್ಕೆ ಬಂಧಿತರಾದ ನಮಗೆಲ್ಲಾ ಒಂದು ಅಸ್ಮಿತೆ ಎನ್ನುವುದು ಬೇಕೇಬೇಕು. ನಾವೆಲ್ಲ ನಮ್ಮ ತಂದೆ ತಾಯಿಗಳ ಮಿಲನದ ಜೈವಿಕ ಫಲಿತ ಎನ್ನುವುದು ಎಷ್ಟು ನಿಜವೋ ನಾವೆಲ್ಲಾ ಈ ಮಣ್ಣಿನ ಮಕ್ಕಳು ಎಂಬುದೂ ಅಷ್ಟೇ ನಿಜ. ಆ ಮಣ್ಣಿಗೆ ನಾವು ಗಡಿ ಸೀಮೆಗಳನ್ನು ಹಾಕಿಕೊಂಡಿದ್ದೇವೆ. ಆದ್ದರಿಂದ ನಮಗೆ ನಮ್ಮ ವ್ಯಕ್ತಿತ್ವಕ್ಕೆ ಈ ಗಡಿ ಸೀಮೆಗಳು ಇರುವುದು ಎಷ್ಟು ನಿಜವೋ ಅವುಗಳನ್ನು ಮೀರಲು ನಾವು ನಿರಂತರವಾಗಿ ಯತ್ನಿಸುತ್ತಿರುತ್ತೇವೆ ಎಂಬುದೂ ಅಷ್ಟೇ ನಿಜ.

ಇಲ್ಲಿ ಬೇಂದ್ರೆಯವರು ತಾಯಿಯೊಡನೆ, ತಾಯ್ನುಡಿಯೊಡನೆ ನಮ್ಮ ಅಸ್ತಿತ್ವ ಬೆರೆತುಕೊಂಡಿರುವ ಮೂಲಭೂತ ಸತ್ಯವೊಂದನ್ನು ಪ್ರಸ್ತುತಪಡಿಸುತ್ತಾರೆ. ಇದನ್ನು ಬೇಂದ್ರೆಯವರು ‘ನಾನು’ ಎಂಬ ಪದ್ಯದಲ್ಲಿ ಮತ್ತಷ್ಟು ವಿಸ್ತರಿಸಿದ್ದಾರೆ. ಅವರ ಪ್ರಕಾರ ನಮಗೆಲ್ಲಾ ಐದು ಜನ ತಾಯಂದಿರಿದ್ದಾರೆ. ಅವರುಗಳೆಂದರೆ ಹೆತ್ತತಾಯಿ, ನಾವು ನೆಲೆನಿಂತಿರುವ ಭೂಮಿತಾಯಿ, ನಮ್ಮ ನಾಡಾದ ಕರ್ನಾಟಕಮಾತೆ, ಭರತಮಾತೆ ಮತ್ತು ವಿಶ್ವಮಾತೆಯರು. ಅವರು ತಮ್ಮನ್ನು ಈ ಐದು ಐದೆಯರೊಂದಿಗೆ ಗುರುತಿಸಿಕೊಳ್ಳುವುದರ ಮೂಲಕ ತಮ್ಮ ವ್ಯಕ್ತಿತ್ವದ ವಿಕಾಸವನ್ನು ಕಂಡುಕೊಳ್ಳುತ್ತಾರೆ. ಅವರು ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಇಟ್ಟುಕೊಳ್ಳುವುದರ ಮೂಲಕ ತಮ್ಮ ತಾಯಿಯ ಮೇಲಿನ ಮಮತೆಯನ್ನು ತೋರ್ಪಡಿಸುವುದರೊಂದಿಗೆ ತಮ್ಮ ಸರ್ವಾರ್ಪಣ ಮನೋಭಾವವನ್ನು ಪ್ರಕಟಿಸಿದ್ದಾರೆ. ಅವರು ತಮ್ಮನ್ನು ಉಳಿದ ತಾಯಿಯರೊಂದಿಗೆ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವಾಗ ಒಂದು ಇನ್ನೊಂದಕ್ಕೆ ವಿರುದ್ಧವಾಗದೆ ಪರಸ್ಪರ ಪೂರಕವಾಗಿದೆ ಎಂಬ ಸತ್ಯವನ್ನು ನಮಗೆ ಮನದಟ್ಟುಮಾಡಿಸುತ್ತಾರೆ. ಇದು ಅವರ ವ್ಯಕ್ತಿತ್ವದ ವಿಕಾಸವನ್ನು ಸೂಚಿಸುತ್ತದೆ.

ಇದನ್ನೇ ವ್ಯಕ್ತಿ ವ್ಯಕ್ತಿಗಳ ನಡುವೆ ಉಂಟಾಗಿರುವ ಒಡಕನ್ನು ಕುರಿತು ತಮ್ಮ ‘ಮನದನ್ನೆ’ ಕವಿತೆಯಲ್ಲಿ ‘ಮಾಡದಿರು ಬಾಳನ್ನು ಬೇಳೆಯಂತೆ’ ಎಂದು ಗುರುತಿಸಿದ್ದಾರೆ. ಅದಕ್ಕೆ ಪರ್ಯಾಯವಾಗಿ ಅವರು ಉತ್ತರಿಸುತ್ತಾ ‘ಕೂಡಿರಲಿ ಬಾಳು ಇಡಿಗಾಳಿನಂತೆ’ ಎನ್ನುತ್ತಾರೆ. ಇಬ್ಬರಿಗೂ ಅನ್ವಯವಾಗುವುದರಿಂದ ಅವರಿಬ್ಬರು ಸೇರಿದರೆ ಮಾತ್ರ ಬಾಳು ಬೇಳೆಯಾಗದೇ ಇಡಿಗಾಳಾಗುವುದು ಸಾಧ್ಯ. ಇಲ್ಲಿ ಕೂಡು ಎನ್ನುವುದು ಕೇವಲ ದೈಹಿಕ ಕೂಡುವಿಕೆಗೆ ಮಾತ್ರ ಸಂಬಂಧಿಸಿದ್ದಲ್ಲ. ಮನಸ್ಸಿನ ಕೂಡುವಿಕೆಗೂ ಸಂಬಂಧಿಸಿದ್ದು. ಮನಸ್ಸುಗಳು ಪರಸ್ಪರ ಕೂಡಿದಾಗ ಮಾತ್ರ ಬಾಳು ಬೇಳೆಯಾಗದೇ ಇಡಿಗಾಳಾಗಲು ಸಾಧ್ಯ. ಬೇಳೆ ಇಲ್ಲಿ ಪ್ರತ್ಯೇಕತೆಯ ಸಂಕೇತವಾದರೆ ಇಡಿಗಾಳು ಐಕ್ಯತೆಯ ಸಂಕೇತವಾಗಿದೆ. ಕೂಡಿ ಬಾಳೋಣ ಎನ್ನುವ ನಾಣ್ನುಡಿಯನ್ನು ನಿಜವಾಗಿಸುವ ದಾರಿಯೆಂದರೆ ಬೇಂದ್ರೆಯವರು ಸೂಚಿಸುವ ಇಡಿಗಾಳಾವುದರ ಮೂಲಕವೇ.

ಮೇಲ್ನೋಟಕ್ಕೆ ಇದು ಗಂಡು ಹೆಣ್ಣಿನ ನಡುವಿನ ಸಂಬಂಧದ ಬಿರುಕು ಬಿಟ್ಟ ಬಗೆಯನ್ನು ಬಗೆಹರಿಸುವ ಸಾಧನವಾಗಿ ಕಂಡರೆ ಅದನ್ನು ವಿಸ್ತಾರವಾಗಿ ಗ್ರಹಿಸಿದಾಗ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ. ಬಾಳನ್ನು ಬೇಳೆಯಂತೆ ಒಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಬಾಳನ್ನು ಇಡಿಗಾಳಿನಂತಾಗಿಸುವುದು ಎಷ್ಟು ಮುಖ್ಯ, ಎಂಬುದನ್ನು ಮೇಲಿನ ಸಾಲುಗಳು ಪರಿಣಾಮಕಾರಿಯಾಗಿ ಸಾರುತ್ತವೆ.

ಇಂತಹ ಮೂಲಭೂತ ತತ್ವವನ್ನು ಸಾಮಾನ್ಯವಾದ ದೈನಿಕ ಬದುಕಿನ ಪ್ರತಿಮೆಯಿಂದಲೇ ಎತ್ತಿಕೊಂಡಿರುವುದು ಬೇಂದ್ರೆಯವರ ಪ್ರತಿಭಾ ವಿಲಾಸದ ದ್ಯೋತಕವಾಗಿದೆ. ಗಾಂಧಿಯವರ ಮೋಹನ ರಾಗಕ್ಕೆ ಮರುಳಾದ ಬೇಂದ್ರೆಯವರು, ಸ್ವತಃ ಗಾಂಧಿಯವರು ತಮ್ಮ ಬಾಳನ್ನು ಒಂದಾಗಿಸುವುದರಲ್ಲಿ ತೆತ್ತುಕೊಂಡಂತೆ, ಅದರಿಂದ ಪ್ರೇರಣೆಯನ್ನು ಪಡೆದು ಒಂದಾಗಿಸುವ ಕಲೆಯನ್ನು ಸಿದ್ಧಿಸಿಕೊಂಡರು ಬೇಂದ್ರೆಯವರು. ಹಾಗೆ ಸಿದ್ಧಿಸಿಕೊಂಡದ್ದರ ದರ್ಶನದ ಅಭಿವ್ಯಕ್ತಿಯೇ ಮೇಲಿನ ಸಾಲುಗಳಲ್ಲಿ ಮೈ ಪಡೆದುಕೊಂಡಿದೆ.

ಡಾ. ಕೆ. ರಘುನಾಥ

ಹತ್ತರೀ ಸಾಧನಕೇರಿ ಬಸ್: ನೀವು ನಂಬಿಟ್ಟು ಹೋದ್ರಿ; ನಾವು ತಂಬಿಟ್ಟು ತಿಂದ್ವಿ

Published On - 5:41 pm, Sun, 31 January 21

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ