Karnataka Breaking News Highlights: ಯಡಿಯೂರಪ್ಪ ಭೇಟಿ ಮಾಡಿ ದೆಹಲಿಗೆ ತೆರಳಿದ ವೀಕ್ಷಕರು

| Updated By: Rakesh Nayak Manchi

Updated on: Jul 04, 2023 | 10:37 PM

Karnataka Assembly Monsoon, Budget Session Live Updates: ನಿನ್ನೆಯಿಂದ ಬಜೆಟ್ ಅಧಿವೇಶನ ಶುರುವಾಗಿದ್ದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಬಿಸಿ ಬಿಸಿ ಚರ್ಚೆಯಾಗಲಿದೆ. ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

Karnataka Breaking News Highlights: ಯಡಿಯೂರಪ್ಪ ಭೇಟಿ ಮಾಡಿ ದೆಹಲಿಗೆ ತೆರಳಿದ ವೀಕ್ಷಕರು
ಬಿಎಸ್ ಯಡಿಯೂರಪ್ಪ ಮತ್ತು ಮನ್ಸುಖ್ ಮಾಂಡವಿಯಾ

Karnataka Latest News Live Updates: ನಿನ್ನೆಯಿಂದ ವಿಧಾನಮಂಡಲ​​​ ಅಧಿವೇಶನ ಆರಂಭವಾಗಿದೆ.(Legislature Session) ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದು. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ(Siddaramaiah) ಬಜೆಟ್​ ಮಂಡಿಸಲಿದ್ದಾರೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದ್ದು ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ(Congress Guarantees) ಅನುಷ್ಠಾನ ವಿಚಾರ, ಬಿಜೆಪಿ ಅವಧಿಯ ವಿವಾದಿತ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ​​ ಚರ್ಚೆ ನಡೆಯುವ ಸಾಧ್ಯತೆ ಇದೆ. ಸದನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ. ಇನ್ನು ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದೆ. ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಧಿವೇಶನ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 04 Jul 2023 09:48 PM (IST)

    Karnataka Breaking News Live: ನಾಳೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

    ನಾಳೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಶಾಸಕ ರುದ್ರಪ್ಪ ಲಮಾಣಿ ಅವರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಅವರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದ್ದು, ಈ ವೇಳೆ ಸಿದ್ದರಾಮಯ್ಯ ಅವರು ಶುಭಕೋರಿದರು.

  • 04 Jul 2023 08:01 PM (IST)

    Karnataka Breaking News Live: ಯಡಿಯೂರಪ್ಪ ಭೇಟಿ ಮಾಡಿ ದೆಹಲಿಗೆ ತೆರಳಿದ ವೀಕ್ಷಕರು

    ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ ಮನ್​ಸುಖ್ ಮಾಂಡವಿಯಾ ಮತ್ತು ವಿನೋದ್ ತಾವ್ಡೆ ದೆಹಲಿಗೆ ತೆರಳಿದರು. ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಆಗಮಿಸಿದ ವೀಕ್ಷಕರಾದ ಮನ್ ಸುಖ್ ಮಾಂಡವೀಯ ಮತ್ತು ವಿನೋದ್ ತಾವ್ಡೆ ಅವರನ್ನು ಯಡಿಯೂರಪ್ಪ ಅವರು ನಿವಾಸದ ಗೇಟ್​​ವರೆಗೆ ಬಂದು ಬೀಳ್ಕೊಟ್ಟರು.


  • 04 Jul 2023 07:48 PM (IST)

    Karnataka Breaking News Live: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್​​ ಘೋಷಣೆ

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತಯ್ತಿದ್ದು, N.R ಪುರ ಪಟ್ಟಣ, ಶೃಂಗೇರಿ ,ಕೊಪ್ಪ ,ಮೂಡಿಗೆರೆ , ಕಳಸ‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮುಳ್ಳಯ್ಯನಗಿರಿ, ದತ್ತಪೀಠ ಗಿರಿ ಶ್ರೇಣಿ ಸಾಲಿನಲ್ಲಿ ವರುಣನ ಕೃಪೆ ಆಗಿದೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ದಿನ ಆರೆಂಜ್ ಅಲರ್ಟ್​​ ಘೋಷಣೆ ಮಾಡಲಾಗಿದೆ.

  • 04 Jul 2023 07:44 PM (IST)

    Karnataka Breaking News Live: ಭಾರೀ ಮಳೆ, ಉಡುಪಿ ಜಿಲ್ಲೆಗೆ ರೆಡ್​ ಅಲರ್ಟ್ ಘೋಷಣೆ

    ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆಯು ರೆಡ್ ಅಲರ್ಟ್​​ ಘೋಷಣೆ ಮಾಡಿದೆ. ಮಳೆ ಪರಿಸ್ಥಿತಿ ನೋಡಿಕೊಂಡು ಅಯಾ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲು ಅಧಿಕಾರ ನೀಡಿ ಉಡುಪಿ ಜಿಲ್ಲಾಧಿಕಾರಿ ಡಾ.ಕೂರ್ಮರಾವ್ ಆದೇಶಿಸಿದ್ದಾರೆ.

  • 04 Jul 2023 07:36 PM (IST)

    Karnataka Breaking News Live: ಯಡಿಯೂರಪ್ಪ ಭೇಟಿಯಾದ ಹೈಕಮಾಂಡ್ ವೀಕ್ಷಕರು

    ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ವೀಕ್ಷಕರಾಗಿ ಆಗಮಿಸಿದ ಮನ್ಸುಖ್ ಮಾಂಡವೀಯ, ವಿನೋದ್ ತಾವಡೆ ಅವರು ಭೇಟಿಯಾದರು. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹ ಬಳಿಕ ಡಾಲರ್ಸ್​ ಕಾಲೋನಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

  • 04 Jul 2023 06:02 PM (IST)

    Karnataka Breaking News Live: ವೆಸ್ಟ್ ಎಂಡ್ ಹೋಟೆಲ್‌ ಬಾಡಿಗೆ ನೀಡಲು ಕೆಎಸ್​ಟಿ ಸಂಗ್ರಹದ ಹಣ ಬಳಕೆ ಮಾಡುತ್ತೀರಾ? ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ

    ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಒಂದು ದಿನದ ಬಾಡಿಗೆ ಎಷ್ಟು ಕುಮಾರಸ್ವಾಮಿ ಅವರೇ? ಅಲ್ಲೊಂದು ಖಾಯಂ ಅಡ್ಡ ತೆರೆದಿದ್ದೀರಿ ಅಂದರೆ ಅದಕ್ಕೆ ಎಷ್ಟು ಕೋಟಿ ಸುರಿದಿದ್ದೀರಿ? ವೆಸ್ಟ್ ಎಂಡ್ ಹೋಟೆಲಿಗೆ ಜಮೀನಿನಲ್ಲಿ ಉಳುಮೆ ಮಾಡಿ ಬಾಡಿಗೆ ಕಟ್ಟುತ್ತಿದ್ದೀರಾ? ಅಥವಾ “KST” ಸಂಗ್ರಹದ ಹಣ ಬಳಸುತ್ತಿದ್ದೀರಾ? ಎಂದು KSTkumara ಅವರು ಉತ್ತರಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.  ಆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವೈಎಸ್​ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಆರೋಪ ಮಾಡಿದ ಕುಮಾರಸ್ವಾಮಿ ಅವರಿಗೆ ಕೆಎಸ್​ಟಿ (ಕುಮಾರಸ್ವಾಮಿ ಟ್ಯಾಕ್ಸ್) ಎಂದು ಹೇಳುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ. ​​

  • 04 Jul 2023 05:12 PM (IST)

    Karnataka Breaking News Live: ವಿಧಾನಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

    ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ಹಿನ್ನೆಲೆ ವಿಧಾನಪರಿಷತ್ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದ್ದಾರೆ.

  • 04 Jul 2023 05:09 PM (IST)

    Karnataka Breaking News Live: ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ಗದ್ದಲ, ಕಲಾಪ ನಾಳೆಗೆ ಮುಂದೂಡಿಕೆ

    ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ಗದ್ದಲ ಮುಂದುವರಿದ ಹಿನ್ನೆಲೆ ಕಲಾಪವನ್ನು ಸ್ಪೀಕರ್ ಯು.ಟಿ.ಖಾದರ್‌ ಅವರು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದ್ದಾರೆ.

  • 04 Jul 2023 05:07 PM (IST)

    Karnataka Breaking News Live: ಓನ್ ಸೈಡ್ ಸ್ಪೀಕರ್ ಎಂದು ಘೋಷಣೆ ಕೂಗುತ್ತಿರುವ ಬಿಜೆಪಿ

    ವಿಧಾನಸಭೆ: ಸ್ಪೀಕರ್ ಯು.ಟಿ‌.ಖಾದರ್ ವಿರುದ್ಧ ಬಿಜೆಪಿ ಗರಂ ಆಗಿದ್ದು, ಓನ್ ಸೈಡ್ ಸ್ಪೀಕರ್, ಓನ್ ಸೈಡ್ ಸ್ಪೀಕರ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ವಿಧಾನಸಭೆ ಪರಂಪರೆ ಹಾಳು ಮಾಡಬೇಡಿ, ಆ ಸ್ಥಾನದ ಘನತೆ ಉಳಿಸಿ, ಒತ್ತಡಕ್ಕೆ ಮಣಿದು ಸದನ ನಡೆಸಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಇದೇನು ಕಾಂಗ್ರೆಸ್ ಅಧಿವೇಶನ ಅಲ್ಲ, ಸ್ಪೀಕರ್ ಓನ್ ಸೈಡ್ ಆಗಿ ವರ್ತಿಸುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು. ಅಲ್ಲದೆ, ಸ್ಪೀಕರ್ ಕಾಂಗ್ರೆಸ್ ಸೈಡ್ ಎಂದು ಮತ್ತೆ ಬಿಜೆಪಿ ಶಾಸಕರು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಏನ್ ಒನ್ ಸೈಡ್ ಏನಿದು ಮಾತು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ, ಇದು ಕಾಂಗ್ರೆಸ್ ಅಧಿವೇಶನ ಅಲ್ಲ ಎಂದರು.

  • 04 Jul 2023 05:03 PM (IST)

    Karnataka Breaking News Live: ನಾಳೆ ಬಿಜೆಪಿ ಕಚೇರಿಗಳಿಗೆ ಕಾಂಗ್ರೆಸ್ ಮುತ್ತಿಗೆ

    ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರವಾಗಿ ಕೇಂದ್ರದ ನಡೆ ಖಂಡಿಸಿ ನಾಳೆ ಯುವ ಕಾಂಗ್ರೆಸ್​ನಿಂದ​​ ಪ್ರತಿಭಟನೆ ನಡೆಯಲಿದೆ. ಇದರ ಭಾಗವಾಗಿ ಬಿಜೆಪಿ ಕಚೇರಿ, ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದ್ದು, ಬೆಳಗ್ಗೆ 11.30ಕ್ಕೆ ಮಲ್ಲೇಶ್ವರಂನ ಬಿಜೆಪಿ ಕಚೇರಿಗೂ ಮುತ್ತಿಗೆ ಹಾಕಲಿದ್ದಾರೆ.

  • 04 Jul 2023 05:01 PM (IST)

    Karnataka Breaking News Live: ಜು.21ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ತೀರ್ಮಾನ

    ವಿಧಾನಸಭೆ ಕಲಾಪ ಪುನಾರಂಭಗೊಂಡ ನಂತರವೂ ಬಿಜೆಪಿ ಧರಣಿ ಮುಂದುವರಿಕೆಯಾಗಿದ್ದು, ಜು.21ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ಬಿಎಸಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.

  • 04 Jul 2023 04:59 PM (IST)

    Karnataka Breaking News Live: ವಿಧಾನಸಭೆಯಲ್ಲಿ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ಪ್ರಸ್ತಾಪ

    ತನ್ನ ಜೊತೆ ಟೋಲ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್​​ ಸದಸ್ಯ ನರೇಂದ್ರಸ್ವಾಮಿ, ಶಾಸಕರ ಜೊತೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ಮಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್​ನಲ್ಲಿ ನಿತ್ಯ ಗಲಾಟೆ ಆಗುತ್ತಿದೆ ಎಂದರು. ನರೇಂದ್ರ ಸ್ವಾಮಿ ಮಾತಿಗೆ ಪ್ರಸಾದ್ ಅಬ್ಬಯ್ಯ ದನಿಗೂಡಿಸಿದರು. ಈ ಬಗ್ಗೆ ಸಭೆ ಮಾಡಿ ಪರಿಹಾರ ಒದಗಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ವಿಐಪಿ ಲೇನ್ ಮಾಡಿ ಅದಕ್ಕೆ ಮಾಜಿ ಶಾಸಕರಿಗೂ ಅವಕಾಶ ನೀಡಿ ಎಂದು ಸ್ಪೀಕರ್ ಸಲಹೆ ನೀಡಿದರು.

  • 04 Jul 2023 04:57 PM (IST)

    Karnataka Breaking News Live: ಬಿಜೆಪಿ ಗದ್ದಲ ನಡುವೆಯೇ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಪ್ರಾರಂಭ

    ವಿಧಾನಸಭೆ: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಆರಂಭಗೊಂಡಿದೆ. ಟಿ.ಬಿ.ಜಯಚಂದ್ರ ಅವರು ವಂದನಾ ನಿರ್ಣಯ ಪ್ರಸ್ತಾಪ ಮಂಡಿಸಿದಾಗ ಬಿಜೆಪಿ ಸದಸ್ಯರು ಮೋಸ ಮೋಸ ಎಂದು ಘೋಷಣೆ ಮುಂದುವರಿಸಿದರು. ಬಿಜೆಪಿ ಗದ್ದಲ ನಡುವೆಯೇ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಪ್ರಾರಂಭಿಸಿದರು. ಈ ವೇಳೆ ಚರ್ಚೆಗಿಂತ ನಮ್ಮ ನಿಲುವಳಿ ತುಂಬಾ ಮುಖ್ಯ. ಸರ್ಕಾರದ ಹೊಗಳಿಕೆಯ ಭಾಷಣದ ಅಗತ್ಯತೆ ಈಗ ಬೇಕಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

  • 04 Jul 2023 04:54 PM (IST)

    Karnataka Breaking News Live: ಜೆಡಿಎಸ್​ ಪಕ್ಷದ ಸಚೇತಕರಾಗಿ ಸುರೇಶ್​​ ಬಾಬು ಆಯ್ಕೆ

    ವಿಧಾನಸಭೆ: ಜೆಡಿಎಸ್​ ಪಕ್ಷದ ಸಚೇತಕರಾಗಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್​​ ಬಾಬು ಆಯ್ಕೆಯಾಗಿದ್ದಾರೆ.

  • 04 Jul 2023 03:56 PM (IST)

    Karnataka Breaking News Live: ನಿಯಮ ಬಿಟ್ಟು ಚರ್ಚೆಗೆ ಕೊಟ್ಟರೆ ಸಂಪ್ರದಾಯ ಮುರಿದಂತಾಗುತ್ತದೆ: ಸ್ಪೀಕರ್ ಖಾದರ್

    ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಇನ್ನೊಂದೆಡೆ, ಮೊದಲು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಪ್ರಾರಂಭಿಸೋಣ. ನಿಯಮ ಬಿಟ್ಟು ಚರ್ಚೆಗೆ ಕೊಟ್ಟರೆ ಸಂಪ್ರದಾಯ ಮುರಿದಂತಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್​ ಸಲಹೆ ನೀಡಿದರು. ರಾಜ್ಯಪಾಲರ ಭಾಷಣದಲ್ಲೇ ಎಲ್ಲಾ ಅಂಶಗಳು ಇವೆ. ಚರ್ಚೆಗೆ ಅವಕಾಶ ನೀಡದಿದ್ದರೆ ಸರಿಯಾದ ಸಂದೇಶ ರವಾನೆ ಆಗಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದರು. ಇದಕ್ಕೆ ಎದ್ದುನಿಂತು ಉತ್ತರಿಸಿದ ಬಸವರಾಜ ಬೊಮ್ಮಾಯಿ, ಅಜೆಂಡಾ ಪ್ರಕಾರವೇ ಎಲ್ಲವೂ ನಡೆದಿದೆ ಎಂದರು. ಇದಕ್ಕೆ ಉತ್ತರಿಸಿದ ಸ್ಪೀಕರ್, ನಾನು ವಿಪಕ್ಷ ಮಿತ್ರ, ಆದರೆ ನಿಯಮ ಮೀರಿ ಹೋಗುವುದು ಬೇಡ. ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಿದಂತಾಗುತ್ತೆ ಎಂದರು.

  • 04 Jul 2023 03:51 PM (IST)

    Karnataka Breaking News Live: ಬಿಜೆಪಿ ಸದಸ್ಯರ ಪ್ರತಿಭಟನೆ, ಷರಿಷತ್ ಕಲಾಪ ಮುಂದೂಡಿಕೆ

    ವಿಧಾನ ಪರಿಷತ್​ ಕಲಾಪ ಆರಂಭವಾಗುತ್ತಿದ್ದಂತೆ ಗ್ಯಾರಂಟಿ ಬಗ್ಗೆ ಚರ್ಚೆಗೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಪ್ರಶ್ನೋತ್ತರ ಕಲಾಪದ ಬಳಿಕ ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರೂ ಒಪ್ಪದ ಬಿಜೆಪಿ ಸದಸ್ಯರು,  ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ದಾರೆ. ಹೀಗಾಗಿ ಸಭಾಪತಿಯವರು ಕೆಲಕಾಲ ಕಲಾಪ ಮುಂದೂಡಿದ್ದಾರೆ.

  • 04 Jul 2023 03:48 PM (IST)

    Karnataka Breaking News Live: ವಿಧಾನಸಭೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಪ್ರತಿಷ್ಟೆ ಗದ್ದಲ

    ಬಿಜೆಪಿ ಪ್ರಸ್ತಾವನೆಗೆ ಅವಕಾಶ ಕೊನೆಗೆ ನೀಡುತ್ತೇವೆ ಎಂಬ ಸ್ಪೀಕರ್ ಸಮಾಧಾನಕ್ಕೂ ಮಣಿಯದ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದಾರೆ. ಮೊದಲು ನಿಲುವಳಿ ನೀಡಿದ್ದು ಜೆಡಿಎಸ್. ಹೀಗಾಗಿ ಜೆಡಿಎಸ್ ಚರ್ಚೆ ನಡೆಯಲಿ ಎಂದು ಸ್ಪೀಕರ್ ಹೇಳಿದರು. ಈ ವೇಳೆ ಬಿಜೆಪಿ ಸದಸ್ಯರು, ಸರ್ಕಾರ ಪ್ರತಿಷ್ಟೆಗೆ ಬಿದ್ದಿದೆ ಎಂದರು. ಇದಕ್ಕೆ ಎದ್ದುನಿಂತು ಉತ್ತರಿಸಿದ ಡಿಕೆ ಶಿವಕುಮಾರ್, ಪ್ರತಿಷ್ಟೆ ನಮ್ಮದಲ್ಲ, ಇವರದ್ದೇ ಎಂದರು. ರಾಜ್ಯಪಾಲರ ಭಾಷಣದ ಮೇಲೆ ಆಕಾಶದ ತನಕ ಮಾತನಾಡಿ ಅಂತಾ ಹೇಳಿದರು.

  • 04 Jul 2023 03:44 PM (IST)

    Karnataka Breaking News Live: ವಿಧಾನಸಭೆಯಲ್ಲಿ ಧರಣಿ ಮುಂದುವರಿಸಿದ ಬಿಜೆಪಿ ಸದಸ್ಯರು

    ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದು, ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಗ್ಯಾರಂಟಿ ಜಾರಿ ಬಗ್ಗೆ ಯಾವ ರೀತಿ ಮೋಸ ಆಗಿದೆ ಎಂದು ನಿಲುವಳಿ ಸೂಚನೆ ನೀಡಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮೊದಲು ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಎಂದು ಹೇಳಿದ್ದರು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿದರೆ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಚರ್ಚೆಗೆ ಅವಕಾಶ ನೀಡುತ್ತೇನೆ. ದಿನಕ್ಕೆ ಒಂದು ನಿಲುವಳಿ ಮಾತ್ರ ಚರ್ಚೆಗೆ ಎತ್ತಿಕೊಳ್ಳಬಹುದು, ತಾವೆಲ್ಲ ಧರಣಿ ಕೈಬಿಟ್ಟು ಆಸನಕ್ಕೆ ಬನ್ನಿ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.

  • 04 Jul 2023 03:06 PM (IST)

    Karnataka Breaking News Live: ಆಡಿದ ಮಾತು ಸಿದ್ದರಾಮಯ್ಯ ಕಳೆದುಕೊಳ್ಳಬಾರದು: ಕೋಟ ಶ್ರೀನಿವಾಸ್ ಪೂಜಾರಿ

    ಇಂದು ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಸದನದ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಹೊರಾಟ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಘೋಷಣೆ ವಿಳಂಬ ಮಾಡಿತ್ತು. ಕಾಂಗ್ರೆಸ್ ಕೊಟ್ಟಿರುವ ಭರವಸೆ ಆದಷ್ಟು ಬೇಗ ಈಡೇರಿಸಬೇಕು. ಆಡಿದ ಮಾತು ಸಿದ್ದರಾಮಯ್ಯ ಕಳೆದುಕೊಳ್ಳಬಾರದು. ಪ್ರಜಾಪ್ರಭುತ್ವದಲ್ಲಿ ಇದೇ ಮೊದಲು ಕಾಂಗ್ರೆಸ್ ತನ್ನ ಮೊಂಡುವಾದ ಮಾಡುತ್ತಿದೆ. ಈ ಮೊಂಡುವಾದ ಖಂಡಿಸಿ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದರು.

  • 04 Jul 2023 02:46 PM (IST)

    Karnataka Breaking News Live: ವಿಪಕ್ಷ ನಾಯಕರ ಆಯ್ಕೆ ವಿಳಂಬ ಆಗಿರುವುದನ್ನು ಒಪ್ಪಿಕೊಳ್ಳುವೆ: ಡಿವಿಎಸ್

    ವಿಪಕ್ಷ ನಾಯಕರ ಆಯ್ಕೆ ವಿಳಂಬ ಆಗಿರುವುದನ್ನು ಒಪ್ಪಿಕೊಳ್ಳುವೆ. ಬಹುಶಃ ಇವತ್ತು ವಿಪಕ್ಷ ನಾಯಕರ ಆಯ್ಕೆ ಆಗಬಹುದು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಹೈಕಮಾಂಡ್ ವೀಕ್ಷಕರಿಗೆ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಸಮರ್ಥ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿ ಎಂದಿದ್ದೇವೆ. ವೀಕ್ಷಕರ ವರದಿ ಆಧರಿಸಿ ವಿಪಕ್ಷ ನಾಯಕರ ಆಯ್ಕೆ ಆಗುತ್ತದೆ. ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಕೇಳುವ ಅವಶ್ಯಕತೆ ಇಲ್ಲ. ಮೊನ್ನೆ ಅರುಣ್ ಸಿಂಗ್ ಶಾಸಕರ ಅಭಿಪ್ರಾಯ ಪಡೆದಿದ್ದಾರೆ ಎಂದರು.

  • 04 Jul 2023 02:18 PM (IST)

    Karnataka Breaking News Live: ಅಧಿಕಾರಕ್ಕೆ ಬಂದು 45 ದಿನ ಕಳೆದರೂ ಗ್ಯಾರಂಟಿ ಜಾರಿ ಮಾಡಿಲ್ಲ; ವಿಜಯೇಂದ್ರ

    ಬೆಂಗಳೂರು: ಸರ್ಕಾರ ಬಂದು 45 ದಿನ ಕಳೆದರೂ ಗ್ಯಾರಂಟಿ ಜಾರಿ ಮಾಡಿಲ್ಲ ಎಂದು ಕಾಂಗ್ರೆಸ್​ ವಿರುದ್ದ ಫ್ರೀಡಂಪಾರ್ಕ್​ನಲ್ಲಿ ಬಿಜೆಪಿ ಶಾಸಕ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳಿಗೆ ಷರತ್ತು ಹಾಕ್ತಿದ್ದಾರೆ. ಹೀಗಾಗಿ ಬಿಜೆಪಿ ಬೀದಿಗೆ ಇಳಿಯುವ ಸಂದರ್ಭ ಎದುರಾಗಿದೆ ಎಂದರು.

  • 04 Jul 2023 02:10 PM (IST)

    Karnataka Breaking News Live: ವರ್ಗಾವಣೆ ದಂಧೆ ಬಗ್ಗೆಯೂ ಸದನದಲ್ಲಿ ಪ್ರಸ್ತಾಪ ಮಾಡ್ತೇವೆ; ಮಾಜಿ ಸಿಎಂ ಬೊಮ್ಮಾಯಿ

    ಬೆಂಗಳೂರು: ಹೆಚ್​.ಡಿ.ಕುಮಾರಸ್ವಾಮಿ ಅವರ ದಾಖಲೆಗಳನ್ನು ಇಡಲಿ, ನಮ್ಮ ಬಳಿಯಿರುವ ದಾಖಲೆಗಳನ್ನು ನಾವು ಇಡುತ್ತೇವೆ, ವರ್ಗಾವಣೆ ದಂಧೆ ಬಗ್ಗೆ ದೊಡ್ಡಮಟ್ಟದ ಚರ್ಚೆ ಮಾಡ್ತೇವೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.

  • 04 Jul 2023 01:37 PM (IST)

    Karnataka Breaking News Live: ಬಿಜೆಪಿ ಸದಸ್ಯರ ಧರಣಿಗೆ ಕಾಂಗ್ರೆಸ್​ ಶಾಸಕ ಕೆ.ಎಂ ಶಿವಲಿಂಗೇಗೌಡ ಆಕ್ರೋಶ

    ಬೆಂಗಳೂರು: ಬಿಜೆಪಿ ಸದಸ್ಯರ ಧರಣಿಗೆ ಕಾಂಗ್ರೆಸ್​ ಶಾಸಕ ಕೆ.ಎಂ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಜನರೇ ಸುಮ್ಮನೇ ಇದ್ದಾರೆ, ಇಲ್ಲಿಗೆ ಬಂದು ಕೂಗಾಡ್ತೀರಾ?, ರಾಜ್ಯದ ರೈತರಿಗೆ ಬೆಂಬಲ ಕೊಡಲು ಬಿಜೆಪಿಯವರಿಗೆ ಆಗಿಲ್ಲವೆಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರ ಹಾಕಿದ್ದಾರೆ.

  • 04 Jul 2023 01:05 PM (IST)

    Karnataka Breaking News Live: ವಿಧಾನಸಭೆ ಕಲಾಪ ಪುನಾರಂಭವಾಗ್ತಿದ್ದಂತೆ ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ

    ಬೆಂಗಳೂರು: ವಿಧಾನಸಭೆ ಕಲಾಪ ಪುನಾರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದಾರೆ. ದ್ರೋಹ ದ್ರೋಹ ಕಾಂಗ್ರೆಸ್ ದ್ರೋಹ ಎಂದು ಬಿಜೆಪಿ ಘೋಷಣೆ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ಶಾಸಕರು ಬಿಜೆಪಿ ವಿರುದ್ದ ಘೋಷಣೆ​ ಕೂಗುತ್ತಿದ್ದಾರೆ.

  • 04 Jul 2023 12:37 PM (IST)

    Karnataka Breaking News Live: ಚಿತ್ರದುರ್ಗಕ್ಕೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

    ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆ ಕುರಿತು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದೀಗ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತೆರಳಿದ್ದಾರೆ. ನಿನ್ನೆ(ಜು.3) ಮೃತಪಟ್ಟ ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

  • 04 Jul 2023 12:03 PM (IST)

    Karnataka Breaking News Live: ಸದನ ಕೆಲ ನಿಮಿಷಗಳ ಮುಂದೂಡಿಕೆ; ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಬೊಮ್ಮಾಯಿ, ಸುನಿಲ್ ಕುಮಾರ್

    ಬೆಂಗಳೂರು: ಸದನದಲ್ಲಿ ಬಿಜೆಪಿ ಗಲಾಟೆ ಹಿನ್ನಲೆ ಕೆಲ ನಿಮಿಷಗಳ ಕಲಾಪ ಮುಂದೂಡಿಕೆ ಮಾಡಲಾಗಿದ್ದು, ಈ ವೇಳೆ ಸ್ಪೀಕರ್ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವ ಸುನಿಲ್ ಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  • 04 Jul 2023 12:00 PM (IST)

    Karnataka Breaking News Live: ಜನರಿಗೆ ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ; ನಳೀನ್ ಕುಮಾರ್ ‌ಕಟೀಲ್​

    ಬೆಂಗಳೂರು: ಪ್ರತಿಭಟನೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ‌ಕಟೀಲ್​ ಭಾಷಣ ಮಾಡುತ್ತಿದ್ದು, ‘ಜನರಿಗೆ ಸುಳ್ಳು ಹೇಳಿ, ಐದು ಗ್ಯಾರಂಟಿ ಕಾರ್ಡ್ ಗಳನ್ನ ಹಂಚಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯಾದ 24 ಗಂಟೆಯೊಳಗೆ ಜನರಿಗೆ ತಲುಪಿಸುತ್ತೆವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದ್ರೆ, ಇವತ್ತೀನವರೆಗೂ ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗಿದ್ದರೆ ಎಂದಿದ್ದಾರೆ.

  • 04 Jul 2023 11:54 AM (IST)

    Karnataka Breaking News Live: ಗ್ಯಾರಂಟಿ ಜಾರಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್​​ನಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

    ಬೆಂಗಳೂರು: ಗ್ಯಾರಂಟಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​, ಮಾಜಿ ಸಿಎಂ ಡಿವಿಎಸ್​, ಮಾಜಿ ಸಚಿವರಾದ ಗೋಪಾಲಯ್ಯ, ಬಿ.ಸಿ.ನಾಗೇಶ್, N.ಮಹೇಶ್​, ಮಾಜಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಮಶೇಖರ್ ರೆಡ್ಡಿ, ಪರಿಷತ್ ಸದಸ್ಯ ಎನ್​​.ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿ,
    ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

  • 04 Jul 2023 11:51 AM (IST)

    Karnataka Breaking News Live: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಎಸ್ ಯಡಿಯೂರಪ್ಪ

    ಬೆಂಗಳೂರು: ಸರ್ಕಾರದ 5 ಗ್ಯಾರಂಟಿಗಳಿಗೆ ವಿಧಿಸಿರುವ ಷರತ್ತುಗಳು, ಗೋ ಹತ್ಯೆ ಮತ್ತು ಮತಾಂತರ ಕಾಯ್ದೆಯನ್ನ ವಾಪಾಸ್ ಪಡೆಯುತ್ತಿರುವ ಬಗ್ಗೆ ವಿರೋಧಿಸಿ ಇಂದು ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಇದೀಗ ಬಿಎಸ್ ಯಡಿಯೂರಪ್ಪ ಆಗಮಿಸಿದ್ದಾರೆ.

  • 04 Jul 2023 11:42 AM (IST)

    Karnataka Breaking News Live: ವಿಧಾನ ಸಭೆಯಲ್ಲಿ ಬಿಜೆಪಿ ಸದಸ್ಯರಿಂದ ಗಲಾಟೆ; ಕಲಾಪ 15 ನಿಮಿಷ ಮುಂದೂಡಿಕೆ

    ಬೆಂಗಳೂರು: ವಿಧಾನ ಸಭೆಯಲ್ಲಿ​ ಬಿಜೆಪಿ ಸದಸ್ಯರಿಂದ ಗಲಾಟೆ ಹಿನ್ನೆಲೆ ಕಲಾಪವನ್ನ 15 ನಿಮಿಷ ಮುಂದೂಡಿದ ಸಭಾಪತಿ ಯುಟಿ ಖಾದರ್

  • 04 Jul 2023 11:40 AM (IST)

    Karnataka Breaking News Live: ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯರಿಂದ ಗಲಾಟೆ; ಕಲಾಪ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ

    ಬೆಂಗಳೂರು: ವಿಧಾನ ಪರಿಷತ್​ನಲ್ಲಿ​ ಬಿಜೆಪಿ ಸದಸ್ಯರಿಂದ ಗಲಾಟೆ ಹಿನ್ನೆಲೆ ಕಲಾಪವನ್ನ ಮಧ್ಯಾಹ್ನ 12 ಗಂಟೆಗೆ ಮುಂದೂಡಿದ ಸಭಾಪತಿ ಬಸವರಾಜ ಹೊರಟ್ಟಿ

  • 04 Jul 2023 11:38 AM (IST)

    Karnataka Breaking News Live: ವಿಧಾನ ಪರಿಷತ್‌ನಲ್ಲೂ ಬಿಜೆಪಿ ಸದಸ್ಯರಿಂದ ತೀವ್ರ ಗದ್ದಲ

    ಬೆಂಗಳೂರು: ವಿಧಾನಪರಿಷತ್‌ನಲ್ಲಿಯೂ ವಿರೋಧ ಪಕ್ಷದ ಸದಸ್ಯರಿಂದ ಗಲಾಟೆ ಶುರುವಾಗಿದ್ದು, ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

  • 04 Jul 2023 11:33 AM (IST)

    Karnataka Breaking News Live: ಈ ಮೊಂಡಾಟ ಬಿಡಿ, ಮೊಂಡಾಟದಿಂದ ಏನೂ ಆಗಲ್ಲ; ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಗಲಾಟೆ ಶುರುಮಾಡಿದ್ದು, ಇದಕ್ಕೆ ಪ್ರತಿಯಾಗಿ ‘ಈ ಮೊಂಡಾಟ ಬಿಡಿ, ಮೊಂಡಾಟದಿಂದ ಏನೂ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮತ್ತೆ ಇದೇ ಮೊಂಡಾಟ ಪದಕ್ಕೆ ಬಿಜೆಪಿ ಗದ್ದಲ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ‘ಮೊಂಡಾಟ ಅಸಂವಿಧಾನ ಪದವಾ?, ಯಾವುದೇ ಪ್ರಶ್ನೆಗೆ ಉತ್ತರ ನೀಡಲು ನಾವು ತಯಾರು. ವಿಪಕ್ಷಗಳ ಮಾತಿಗೆ ಹೆದರಿಕೊಂಡು ಓಡಿ ಹೋಗಲ್ಲ ಎಂದರು.

  • 04 Jul 2023 11:28 AM (IST)

    Karnataka Breaking News Live: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರ ಗಲಾಟೆ

    ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರ ಗಲಾಟೆ ಶುರು ಮಾಡಿದ್ದು, ಗ್ಯಾರಂಟಿ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಬಿಜೆಪಿಯವರು ಪಟ್ಟು ಹಿಡಿದಿದ್ದಾರೆ.

  • 04 Jul 2023 11:13 AM (IST)

    Karnataka Breaking News Live: ಕುಮಾರಸ್ವಾಮಿ ಅವರ ಆರೋಪಕ್ಕೆ ಬೆಂಬಲವಿದೆಯೆಂದ ಯಡಿಯೂರಪ್ಪ

    ಬೆಂಗಳೂರು: ಕಾಂಗ್ರೆಸ್ ಏನು ಗ್ಯಾರಂಟಿ ಕೊಟ್ಟಿದೆ, ಅದನ್ನು ಕಂಡಿಶನ್​ಯಿಲ್ಲದೇ ತರಬೇಕು, ಗೋ ಹತ್ಯೆ ಕಾಯಿದೆ ಬದಲಾವಣೆ ಮಾಡಬಾರದು, ಈ ಕುರಿತಾಗಿ ಇಂದು(ಜು.4) ಫ್ರೀಡಂ ಪಾರ್ಕ್​ನಲ್ಲಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದರು. ಇನ್ನು ಇದೇ ವೇಳೆ ಮಾತನಾಡಿದ ಅವರು ‘ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳನ್ನು ನಾನು ಸ್ವಾಗತಿಸುತ್ತೇನೆ. ಅವರಿಗೆ ನಮ್ಮ ಪೂರ್ಣ ಬೆಂಬಲ ಇದೆ ಎಂದರು.

  • 04 Jul 2023 10:53 AM (IST)

    Karnataka Breaking News Live: ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ವಿಚಾರ; ಶುಭವಾಗಲಿ ಎಂದ ಡಿಸಿಎಂ

    ಬೆಂಗಳೂರು: ಗ್ಯಾರಂಟಿಗಳ ಜಾರಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಬಿಜೆಪಿಯವರು ಸದನದ ಹೊರಗೆ, ಒಳಗೆ ಪ್ರತಿಭಟನೆ ಮಾಡಲಿ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿಯವರಿಗೆ ಶುಭವಾಗಲಿ ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಎರಡೂ ಕಡೆ ಪ್ರತಿಭಟನೆ ಮಾಡೋದು ಒಳ್ಳೆಯದು. ಅವರೇ ನಮ್ಮ ಆಚಾರ ವಿಚಾರವನ್ನ ಪ್ರಚಾರ ಮಾಡುತ್ತಿದ್ದಾರೆ. ಅವರು ಏನೇ ಮಾಡಿದ್ರು, ನಮ್ಮಿಂದ ಲೋಪ ಆಗಲ್ಲ. ನಾವು ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ತೇವೆ ಎಂದಿದ್ದಾರೆ.

  • 04 Jul 2023 10:48 AM (IST)

    Karnataka Breaking News Live: ಇಂದು ದಾಖಲೆ ಸಮೇತ ಸದನಕ್ಕೆ ಹಾಜರಾಗುತ್ತಾರ ಕುಮಾರಸ್ವಾಮಿ?

    ಬೆಂಗಳೂರು: ಕಾಂಗ್ರೆಸ್ ವಿರುದ್ದ ಭ್ರಷ್ಟಾಚಾರ, ಕಮಿಷನ್ ಆರೋಪ ಮಾಡುತ್ತಿರುವ ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿಯವರು, ಇಂದು ದಾಖಲೆ ಸಮೇತ ಸದನಕ್ಕೆ ಹಾಜರಾಗುತ್ತಾರ ಎಂಬ ಪ್ರಶ್ನೆ ಮೂಡಿದೆ. ಸಿಎಂ ಕಛೇರಿಯಲ್ಲೇ ಲಂಚ ಪ್ರಕರಣಗಳು ನಡೆಯುತ್ತಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ವೈಎಸ್ಟಿ ಎಂಬ ತೆರಿಗೆ ಹೊಸದಾಗಿ ಬಂದಿದೆ ಎಂದು ಮಾಜಿ ಸಿಎಂ ಬಾಂಬ್ ಸಿಡಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಸೂಕ್ತ ದಾಖಲೆಗಳನ್ನು ಇಟ್ಟು ಮಾತಾಡಲಿ ಎಂದಿತ್ತು.

  • 04 Jul 2023 10:43 AM (IST)

    Karnataka Breaking News Live: ಮಾಜಿ ಸಿಎಂ ಬಿಎಸ್​ವೈ ಭೇಟಿಯಾದ MLC ಶಶಿಲ್ ನಮೋಶಿ

    ಬೆಂಗಳೂರು: ಇಂದು(ಜು.4) ಸರ್ಕಾರದ ಗ್ಯಾರಂಟಿ ಯೋಜನೆಯ ಜಾರಿ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಯಲಿದೆ. ಇದೀಗ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್​ವೈ ನಿವಾಸದಲ್ಲಿ ಪರಿಷತ್ ಸದಸ್ಯ (MLC) ಶಶಿಲ್ ನಮೋಶಿ ಅವರು ಭೇಟಿಯಾಗಿ ಯಡಿಯೂರಪ್ಪನವರ ಜೊತೆ ಮಾತುಕತೆ ನಡೆಸಿದ್ದಾರೆ.

  • 04 Jul 2023 10:39 AM (IST)

    Karnataka Breaking News Live: ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಎರಡನೇ ದಿನದ ವಿಧಾನಮಂಡಲ ಅಧಿವೇಶನಕ್ಕೆ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಈಗಾಗಲೇ ಮೂರು ಕಡೆಗಳಲ್ಲಿ ಬಿಜೆಪಿ, ಸರ್ಕಾರದ ಗ್ಯಾರಂಟಿ ಯೋಜನೆ ಜಾರಿಗೆ ತರುವ ವಿಚಾರವಾಗಿ ಹೋರಾಟ ನಡೆಸಲು ಸಜ್ಜಾಗಿದೆ. ಅದರಂತೆ ಇದೀಗ ಅಧಿವೇಶನಕ್ಕೆ ಸಿಎಂ ಆಗಮಿಸಿದ್ದಾರೆ.

  • 04 Jul 2023 10:00 AM (IST)

    Karnataka Breaking News Live: ವಿಧಾನ ಪರಿಷತ್​​ನಲ್ಲಿ 5 ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ

    ಬೆಂಗಳೂರು: ಇಂದು ಬಿಜೆಪಿಯಿಂದ ಮೂರು ಕಡೆಗಳಲ್ಲಿ ಸರ್ಕಾರದ 5 ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಅದರಂತೆ ಒಂದು ಕಡೆ ಪರಿಷತ್​​ನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಮತ್ತು ಫ್ರೀಡಂಪಾರ್ಕ್​ನಲ್ಲಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ನಳಿನ್ ಕುಮಾರ್ ಕಟೀಲ್ ಸಾಥ್​ ನೀಡಲಿದ್ದು, ‘ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ’ ಶೀರ್ಷಿಕೆಯಡಿ ಹೋರಾಟ ನಡೆಸಲಿದ್ದಾರೆ.

  • 04 Jul 2023 09:25 AM (IST)

    Karnataka Breaking News Live: ವಿಧಾನಸಭೆಯಲ್ಲಿ 5 ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ

    ಬೆಂಗಳೂರು: ನಿನ್ನೆಯಿಂದ ಶುರುವಾಗಿರುವ ವಿಧಾನಮಂಡಲ ಅಧಿವೇಶನದಲ್ಲಿ ಇಂದು ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ, 5 ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ. ಸದನದ ಒಳಗೆ, ಹೊರಗೆ ಹೋರಾಟ ನಡೆಸಲು ಬಿಜೆಪಿ ಈಗಾಗಲೇ ತೀರ್ಮಾನ ಮಾಡಿದ್ದು, ಉಭಯ ಸದನದ ಒಳಗೆ ಬಿಜೆಪಿ ಸದಸ್ಯರು ಹೋರಾಟ ನಡೆಸಲಿದ್ದಾರೆ.

  • 04 Jul 2023 08:40 AM (IST)

    Karnataka Breaking News Live: ಇಂದು ಸರ್ಕಾರದ ವಿರುದ್ದ ಫ್ರೀಡಂ ಪಾರ್ಕ್​ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ

    ಬೆಂಗಳೂರು: ಇಂದು(ಜು.4) ವಿಧಾನಸೌಧದ ಒಳಗಡೆ ಮತ್ತು ಹೊರಗಡೆ ಏಕಕಾಲದಲ್ಲಿ 2 ಕಡೆ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಒತ್ತಡ ತರಲು ಬಿಜೆಪಿ ತಂತ್ರ ಹೆಣೆದಿದೆ. ನಗರದ ಫ್ರೀಡಂ ಪಾರ್ಕ್​ನಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬೆಳಗ್ಗೆ 10.30 ರಿಂದ ಸಂಜೆಯವರೆಗೆ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಡಿ.ವಿ ಸದಾನಂದ ಗೌಡ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಮಾಜಿ ಸಚಿವರು, ಸಂಸದರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.

  • 04 Jul 2023 08:35 AM (IST)

    Karnataka Breaking News Live: ಇಂದು ಸದನದಲ್ಲಿ ಐದು ಗ್ಯಾರಂಟಿ ಘೋಷಣೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ಧರಣಿ

    ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಶುರುವಾಗಿದ್ದು, ಇಂದು(ಜು.4) ಸದನದಲ್ಲಿ ಐದು ಗ್ಯಾರಂಟಿ ಘೋಷಣೆಗಳ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ಧರಣಿ ನಡೆಸಲಿದೆ. ಏಕಕಾಲದಲ್ಲಿ 2 ಕಡೆ ಪ್ರತಿಭಟನೆ ಮೂಲಕ ಒತ್ತಡ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.

  • 04 Jul 2023 07:58 AM (IST)

    Karnataka Breaking News Live: ಇಂದು ಸದನದಲ್ಲಿ ಕಾಂಗ್ರೆಸ್​​ ಘೋಷಿಸಿರುವ ಗ್ಯಾರಂಟಿ ಘೋಷಣೆಗಳ ಬಗ್ಗೆ ಪ್ರಸ್ತಾಪ

    ಬೆಂಗಳೂರು: ನಿನ್ನೆಯಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಿದ್ದು, ಇಂದು ಕಾಂಗ್ರೆಸ್​​ ಘೋಷಿಸಿರುವ ಗ್ಯಾರಂಟಿ ಘೋಷಣೆಗಳ ಬಗ್ಗೆ ಪ್ರಸ್ತಾಪ ಆಗಲಿದೆ. ಈ ವೇಳೆ ಸದನದಲ್ಲಿ ಗ್ಯಾರಂಟಿ ಘೋಷಣೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟಿಸುವ ಸಾಧ್ಯತೆಯಿದೆ. ಸದನದ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದ್ದು, ಏಕಕಾಲದಲ್ಲಿ 2 ಕಡೆ ಪ್ರತಿಭಟನೆ ಮೂಲಕ ಒತ್ತಡ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.

Published On - 7:57 am, Tue, 4 July 23

Follow us on