ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಿನ್ನೆಗೆ ಒಂದು ವರ್ಷ ಆಗಿದೆ. ಈ ಒಂದು ವರ್ಷದಲ್ಲಿ ಸರ್ಕಾರ ಮಾಡಿದ ಸಾಧನೆ, ಅನುಭವಿಸಿದ ಸವಾಲಿನ ಬಗ್ಗೆ ಇಂದು ಸಿಎಂ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಲಿದ್ದಾರೆ.
ಆಪರೇಷನ್ ಕಮಲ ಸಕ್ಸಸ್ ಕಂಡು, ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗಿ ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದಲ್ಲಿ ಕಮಲ ಅರಳಿ ನಿನ್ನೆಗೆ ಒಂದು ವರ್ಷವಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ ಸಿಎಂ ಬಿಎಸ್‌ವೈಗೆ ಸಂಕಷ್ಟಗಳು ಒಂದರ ಹಿಂದೆ ಒಂದರಂತೆ ಬಂದಿದ್ವು. ಭೀಕರ ಮಳೆ.. ಉಪಚುನಾವಣೆ.. ಪಕ್ಷದ ಭಿನ್ನಮತ.. ಈಗ ಕೊರೊನಾ ಸರ್ಕಾರವನ್ನ ಬಿಟ್ಟೂ ಬಿಡದೆ ಕಾಡಿವೆ.
ವರ್ಷದ ಸಾಧನೆ, ಸವಾಲುಗಳ ಪುಸ್ತಕ ಇಂದು ಬಿಡುಗಡೆ!
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ, ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ನಿನ್ನೆಗೆ ಭರ್ತಿ ಒಂದು ವರ್ಷ ತುಂಬಿದೆ. ಈ ಹಿನ್ನೆಲೆ ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಒಂದು ವರ್ಷದ ಸಾಧನೆಗಳನ್ನೊಳಗೊಂಡ ‘ಪುಟಕ್ಕಿಟ್ಟ ಚಿನ್ನ’ ಹೆಸರಿನ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇದರಲ್ಲಿ ಸರ್ಕಾರ ಒಂದು ವರ್ಷದಲ್ಲಿ ಎದುರಿಸಿದ ಸವಾಲುಗಳ, ಸಾಧನೆಗಳ ಬಗ್ಗೆ ಸಿಎಂ ರಾಜ್ಯದ ಜನತೆಗೆ ಮಾಹಿತಿ ನೀಡಿಲಿದ್ದಾರೆ.
ಒಂದು ವರ್ಷದಲ್ಲಿ ಸಾಲು ಸಾಲು ಸವಾಲುಗಳು!
ಒಂದು ವರ್ಷದ ಬಿಜೆಪಿ ಸರ್ಕಾರಕ್ಕೆ ನೆರೆಹಾವಳಿ, ಸರ್ಕಾರ ಉಳಿಸಿಕೊಳ್ಳುವ ಅಗ್ನಿಪರೀಕ್ಷೆ ನಂತರ ಕೊರೊನಾ ಮಹಾಮಾರಿ.. ಹೀಗೆ ಸಾಲು ಸಾಲು ಸವಾಲುಗಳಲ್ಲೇ ವರ್ಷವನ್ನು ಕಳೆಯುವಂತೆ ಮಾಡಿದೆ. ಸಂಕಷ್ಟಗಳಿಂದಾಗಿ ಬರಿದಾದ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳುವ ಲೆಕ್ಕಾಚಾರದಲ್ಲೇ ಸಿಎಂ ಮುಳುಗಿ ಹೋಗುವಂತಾಗಿದೆ. ಸಿಎಂ ಬಿಎಸ್‌ವೈಗೆ ಮೊದಲು ಎದುರಾಗಿದ್ದೇ ನೆರೆ ಹಾವಳಿ. ಉತ್ತರ ಕರ್ನಾಟಕದಲ್ಲಿ ತಲೆದೋರಿದ ನೆರೆ ಪರಿಹಾರಕ್ಕೆ ಸ್ವತಃ ಸಿಎಂ ಮುಂದಾಗಿದ್ದರು. ಸಂಪುಟದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ರಾಜ್ಯವನ್ನು ಸುತ್ತಿ ನೆರೆ ಪರಿಹಾರ ಕಾರ್ಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಯಿತು.
ನಂತರ ಸಂಪುಟ ರಚನೆಯ ಸರ್ಕಸ್ ಗಾಗಿ ನೆರೆ ಪರಿಹಾರ ಕಾರ್ಯದ ನಡುವೆಯೇ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹಿಡಿದು ಯಡಿಯೂರಪ್ಪ ದೆಹಲಿ-ಬೆಂಗಳೂರು ಓಡಾಟ ನಡೆಸಬೇಕಾಯ್ತು. ಆಪ್ತರಿಗೆ ಸಿಎಂ ಮಣೆ ಹಾಕುತ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗುವಂತೆ ಸಚಿವರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿತ್ತು. ಆಮೇಲೆ ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಯಿತು.
ಸರ್ಕಾರದ ಅಳಿವು ಉಳಿವು ನಿರ್ಧರಿಸಲಿದ್ದ ಉಪ ಚುನಾವಣೆಯಲ್ಲಿ 12 ಸ್ಥಾನ ಗೆಲ್ಲುವ ಮೂಲಕ ಸರ್ಕಾರವನ್ನು ಬಿಜೆಪಿ ಭದ್ರಪಡಿಸಿಕೊಂಡಿತು. ಇದಾದ ಬಳಿಕ ಮತ್ತೆ ಸಂಪುಟ ವಿಸ್ತರಣೆ ಮಾಡಿದ ಸಿಎಂ, ತಮ್ಮ ಕೈ ಹಿಡಿದವರಿಗೆ ಮಣೆ ಹಾಕಿದ್ರು. ಇದಾಗಿದ್ದೇ ತಡ ಉಮೇಶ್ ಕತ್ತಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡ್ರು.
ರಾಜ್ಯ ಸರ್ಕಾರವನ್ನ ಕಾಡಿದ ಕೊರೊನಾ!
ಎಲ್ಲಾ ಸಮಸ್ಯೆ ಮುಗೀತು ಅನ್ನೋ ಮುನ್ನವೇ ರಾಜ್ಯದಲ್ಲಿ ಕೊರೊನಾ ವಕ್ಕರಿಸಿ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿದೆ. ಲಾಕ್‌ಡೌನ್ ಮಾಡಿದ್ರಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಅದರಲ್ಲೂ ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಕೇಸ್ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಇದರ ನಡುವೆ ಕೊರೊನಾ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಭಾರಿ ಹಗರಣ ನೆಡೆದಿದೆ ಅಂತಾ ವಿಪಕ್ಷ ಕಾಂಗ್ರೆಸ್ ಆರೋಪಿಸಿ ಕೆಲ ದಾಖಲೆ ಬಿಡುಗಡೆ ಮಾಡಿದೆ.
ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಎಂ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಕಳೆದಿದೆ. ಇಂದು ಸಿಎಂ ಬಿಡುಗಡೆ ಮಾಡುವ ಪುಸ್ತಕದಲ್ಲಿ ಸರ್ಕಾರ ಸಾಧನೆ, ಸವಾಲುಗಳು ಇರಲಿದೆ. ಸಿಎಂ ಇವತ್ತು ಏನ್ ಹೇಳ್ತಾರೆ ಅನ್ನೋದು ಭಾರಿ ಕುತೂಹಲ ಮೂಡಿಸಿದೆ.
Published On - 7:17 am, Mon, 27 July 20