ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ CD ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 09ರ ಬೆಳಗ್ಗೆ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ನಾನು ನಿರಪರಾಧಿ ಎಂದು ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೆ ಈ ಪ್ರಕರಣ ಸಂಬಂಧ ರಾಜ್ಯಮಟ್ಟದ ತನಿಖೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ತನಿಖೆ ವಿಚಾರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಲು ಯೋಚಿಸಿದ್ದು ಯಾವ ರೀತಿಯ ತನಿಖೆ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ಈ ಹಿಂದೆ ಸಿಡಿ ಪ್ರಕರಣದ ತನಿಖೆಗೆ ಸಿದ್ಧ ಎಂದು ಬಿಎಸ್ ಯಡಿಯೂರಪ್ಪನವರು ಹೇಳಿದ್ದರು. ಅದರಂತೆ ಉನ್ನತ ಮಟ್ಟದ ತನಿಖೆ ಕುರಿತು ಚರ್ಚೆ ನಡೆಯಲಿದ್ದು ಸರ್ಕಾರದ ಮುಂದಿರುವ ಅವಕಾಶಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಇಂದು ಅಥವಾ ನಾಳೆಯೊಳಗೆ ಅಂತಿಮ ತೀರ್ಮಾನ ಸಾಧ್ಯತೆ ಇದೆ. ಹಾಗಾದ್ರೆ ಉನ್ನತ ಮಟ್ಟದ ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶ ನೀಡ್ತಾರಾ? ಎಂಬ ಪ್ರಶ್ನೆಗೆ ತೆರೆ ಬೀಳಬೇಕಿದೆ. ಇನ್ನು ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳು, ಕಾನೂನು ತಜ್ಞರು ಹಾಗೂ ಅಧಿಕಾರಿಗಳು, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸ್ವಯಂಪ್ರೇರಿತ ತನಿಖೆ ನಡೆಸುವ ಸಾಧ್ಯಾಸಾಧ್ಯತೆ ಬಗ್ಗೆ ಹಾಗೂ ಗೃಹ ಸಚಿವ ಸೇರಿ ಕೆಲ ಹಿರಿಯ ಸಚಿವರ ಜೊತೆ ಮಾತುಕತೆ ನಡೆಯಬಹುದು. ಜೊತೆಗೆ CID ಅಥವಾ CBI ತನಿಖೆಗೆ ಕೊಡಬಹುದಾ ಅಂತಾ ಕೂಡ ಚರ್ಚೆ ಆಗಲಿದೆ.
ಪ್ರಕರಣ ಸಂಬಂಧ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ದೂರು ದಾಖಲಾದ ದಿನದಿಂದ ಎಲ್ಲವನ್ನೂ ಗಮನಿಸುತ್ತಿದ್ದೇವೆ. ಲಾ ಬುಕ್ನಲ್ಲಿ ಏನಿದೆಯೋ ಅದರ ಪ್ರಕಾರ ನಡೆಯುತ್ತೇವೆ. ಎಲ್ಲ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತೇವೆ. ಜಾರಕಿಹೊಳಿ ಹೇಳಿದಂತೆ 2+4+3 ಬಗ್ಗೆ (ಬೆಂಗಳೂರಿನ 2 ಕಡೆ ಷಡ್ಯಂತ್ರ ನಡೆದಿದೆ, ಯಶವಂತಪುರದ 4, 5ನೇ ಮಹಡಿಯಲ್ಲಿ ಷಡ್ಯಂತ್ರ ನಡೆದಿದೆ) ನನಗೆ ಗೊತ್ತಿಲ್ಲ. ಸಿಎಂ ಜೊತೆಗೂ ಕೂಡ ಚರ್ಚೆ ಮಾಡಿ ತನಿಖೆ ಮಾಡ್ತೇವೆ ಎಂದು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ರಾಜಕಾರಣಕ್ಕಾಗಿ ಯಾರೂ ಈ ಮಟ್ಟಕ್ಕೆ ಇಳಿಯಬಾರದು, ಪಾಪ ರಮೇಶ್ ಜಾರಕಿಹೊಳಿ ಅಮಾಯಕರಿದ್ದಾರೆ: ಹೆಚ್.ಡಿ ಕುಮಾರಸ್ವಾಮಿ
Published On - 2:38 pm, Tue, 9 March 21