ಬೆಂಗಳೂರು: ಕೊರೊನಾ ಎರಡನೇ ಅಲೆ ಕರ್ನಾಟಕದಲ್ಲಿ ನಿಧಾನಗತಿಯಲ್ಲಿ ಇಳಿಕೆ ಆಗುತ್ತಿದೆ. ಬೆಂಗಳೂರಿನಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ದಾಖಲಾಗುತ್ತಿದೆ. ಆದರೆ, ಇತರ ಗ್ರಾಮೀಣ ಭಾಗದಲ್ಲಿ ಕೊವಿಡ್-19 ಬಗ್ಗೆ ಇನ್ನಷ್ಟು ಜಾಗೃತಿ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಎರಡನೇ ಅಲೆಯಿಂದ ಬಹಳಷ್ಟು ಸಾವು ನೋವು ಸಂಭವಿಸಿದೆ. ಹಲವು ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಅಂಥವರಿಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿಎಂ ಬಾಲ ಸೇವಾ ಯೋಜನೆಯನ್ನು ಘೋಷಿಸಿದ್ದಾರೆ.
ಇದೀಗ ಸಂಜೆ 7 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಕೊರೊನಾ ಲಾಕ್ಡೌನ್ ಮುಂದುವರಿಕೆ, ನಿಯಮಾವಳಿಗಳಲ್ಲಿ ಬದಲಾವಣೆ, ಸೋಂಕು ತಡೆಗೆ ಹೊಸ ಕ್ರಮ ಅಥವಾ ಮತ್ತೊಂದು ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಹಿತಿ ಇತ್ಯಾದಿ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸುದ್ದಿಗೋಷ್ಠಿಯ ಸಂಪೂರ್ಣ ವಿವರ ಈ ಕೆಳಗೆ ಲಭ್ಯವಿದೆ.
ಹತ್ತನೇ ತರಗತಿ ಪೂರೈಸಿದ ಮಕ್ಕಳಿಗೆ ಲ್ಯಾಪ್ಟ್ಯಾಪ್ ಅಥವಾ ಟ್ಯಾಬ್ ನೀಡಲಾಗುವುದು. 21 ವರ್ಷ ಪೂರೈಸಿದ ಹೆಣ್ಣುಮಕ್ಕಳಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. ಅದನ್ನು ಮದುವೆ ವೆಚ್ಚ, ಉನ್ನತ ಶಿಕ್ಷಣ ಅಥವಾ ಸ್ವ ಉದ್ಯೋಗಕ್ಕೆ ಬಳಕೆ ಮಾಡಿಕೊಳ್ಳುವುದು. ಯೋಜನೆಯ ಒಟ್ಟು ವೆಚ್ಚ, ಇತ್ಯಾದಿ ವಿವರಗಳ ಬಗ್ಗೆ ವಿಸ್ತೃತವಾದ ವರದಿಯನ್ನು ಸರ್ಕಾರ ಪ್ರತ್ಯೇಕವಾಗಿ ಹೊರಡಿಸಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಿಎಂ ಬಾಲ ಸೇವಾ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಪೋಷಣೆಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಕೊವಿಡ್ನಿಂದ ಪೋಷಕರಿಬ್ಬರನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯಧನ ನೀಡಲಾಗುವುದು. ಪೋಷಕರು ಲಭ್ಯರಿಲ್ಲದಿದ್ದಲ್ಲಿ ನೋಂದಾಯಿತ ಪಾಲನಾ ಕೇಂದ್ರದಲ್ಲಿ ಆರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಮೊದಲ ಅಲೆಯಲ್ಲಿ ಹೆಚ್ಚಿನ ತೊಂದರೆಗಳು ಆಗಲಿಲ್ಲ. 2ನೇ ಅಲೆಯಲ್ಲಿ ದೇಶ, ರಾಜ್ಯದಲ್ಲಿ ಸಾಕಷ್ಟು ಜೀವಹಾನಿ ಉಂಟಾಗಿದೆ. ಕೆಲ ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೊರೊನಾದಿಂದ ತಂದೆ, ತಾಯಿ ಕಳೆದುಕೊಂಡ ಮಕ್ಕಳಿಗೆ ಯೋಜನೆ ಘೋಷಿಸಲಾಗಿದೆ. ಅನಾಥ ಮಕ್ಕಳಿಗೆ 3,500 ಪರಿಹಾರ ನೀಡಲಾಗುವುದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಗೃಹ ಇಲಾಖೆಯಿಂದ ಜೂನ್ 30ರ ವರೆಗೆ ಲಾಕ್ಡೌನ್, ಕಠಿಣ ನಿಯಮಾವಳಿಗಳನ್ನು ಮುಂದುವರಿಸುವಂತೆ ಸೂಚನೆ ಬಂದಿತ್ತು. ಕೆಲ ದಿನಗಳ ಹಿಂದೆ ಎರಡನೇ ಆರ್ಥಿಕ ಪ್ಯಾಕೇಜ್ ಘೋಷಿಸುವ ಸುಳಿವನ್ನು ಯಡಿಯೂರಪ್ಪ ನೀಡಿದ್ದರು. ಅಥವಾ ಹೊಸ ವಲಯವನ್ನು ಆರ್ಥಿಕ ಪ್ಯಾಕೇಜ್ಗೆ ಸೇರಿಸುವ ಸಾಧ್ಯತೆ ಇದೆ. ಯಾವ ವಿಚಾರಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ, ತಕ್ಷಣಕ್ಕೆ ಕರೆದಿರುವ ಸುದ್ದಿಗೋಷ್ಠಿ ಭಾರೀ ಕುತೂಹಲ ಮೂಡಿಸಿದೆ.
Published On - 7:26 pm, Sat, 29 May 21