BS Yediyurappa: ಸಂಧ್ಯಾ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ; ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ ..

| Updated By: ಸಾಧು ಶ್ರೀನಾಥ್​

Updated on: Jul 26, 2021 | 4:33 PM

ಯಡಿಯೂರಪ್ಪ ಈಗ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಒಂದು ಭರ್ಜರಿ ರಾಜಕೀಯ ಇನ್ನಿಂಗ್ಸ್ ಅನ್ನು ಮುಗಿಸಿದ್ದಾರೆ. ಯಾರಿಗೂ ಸಿಗದಷ್ಟು ಅವಕಾಶಗಳು ಯಡಿಯೂರಪ್ಪ ಸಿಕ್ಕಿವೆ. ಯಡಿಯೂರಪ್ಪ ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿರಲು ಉತ್ತಮ ಆರೋಗ್ಯದ ಬೆಂಬಲವೂ ಬೇಕು. ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ.

BS Yediyurappa: ಸಂಧ್ಯಾ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ; ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ ..
ಸಂಧ್ಯಾ ಕಾಲದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ; ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ..
Follow us on

ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಸಿಎಂ ಆಗಿ ಆಳ್ವಿಕೆ ನಡೆಸಿದ ಯಡಿಯೂರಪ್ಪ ಇಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜಕೀಯದ ಭರ್ಜರಿ ಇನ್ನಿಂಗ್ಸ್ ಒಂದನ್ನು ಯಡಿಯೂರಪ್ಪ ಪೂರ್ಣಗೊಳಿಸಿದ್ದಾರೆ. ಹಾಗಾದರೇ, ಯಡಿಯೂರಪ್ಪ ರಾಜಕೀಯ ಭವಿಷ್ಯವೇನು? ಯಡಿಯೂರಪ್ಪ ಮುಂದೇನು ಮಾಡ್ತಾರೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ನೋಡಿ.

ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ; ಯಡಿಯೂರಪ್ಪ ಭವಿಷ್ಯವೇನು?
ಕಳೆದೆರೆಡು ವರ್ಷಗಳಿಂದ ಕರ್ನಾಟಕದ ಸಿಎಂ ಆಗಿ ಆಳ್ವಿಕೆ ನಡೆಸುತ್ತಿದ್ದ ಯಡಿಯೂರಪ್ಪ ಸೋಮವಾರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ 2007 ರಿಂದ ಇಲ್ಲಿಯವರೆಗೂ ನಾಲ್ಕು ಬಾರಿ ರಾಜ್ಯದ ಸಿಎಂ ಆಗಿ ಆಳ್ವಿಕೆ ನಡೆಸಿದ್ದಾರೆ. ಒಟ್ಟಾರೆ ಈ ನಾಲ್ಕು ಅವಧಿಯಿಂದ 5 ವರ್ಷ 2 ತಿಂಗಳು 11 ದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿ ಯಡಿಯೂರಪ್ಪ ಇಂದು ಸಿಎಂ ಹುದ್ದೆಯಿಂದ ನಿರ್ಗಮಿಸಿದ್ದಾರೆ. ಆದರೆ ಈಗ ರಾಜ್ಯದ ಜನರನ್ನು ಕಾಡುತ್ತಿರುವ ಪ್ರಶ್ನೆಯೇನೇಂದರೇ, ಯಡಿಯೂರಪ್ಪ ಭವಿಷ್ಯವೇನು ಎಂಬುದು. ಯಡಿಯೂರಪ್ಪ ರಾಜಕೀಯವಾಗಿ ಮುಂದೇನು ಮಾಡ್ತಾರೆ? ಎಂಬ ಪ್ರಶ್ನೆ ರಾಜ್ಯದ ಜನರನ್ನ ಕಾಡುತ್ತಿದೆ.

ಯಡಿಯೂರಪ್ಪ ಮುಂದೆ ಈಗ ಕೆಲ ಆಯ್ಕೆಗಳೂ ಇವೆ. ಕೆಲ ಸವಾಲುಗಳೂ ಇವೆ. ಯಡಿಯೂರಪ್ಪ ಮುಂದೆ ರಾಜ್ಯಪಾಲರಾಗುವ ಆಯ್ಕೆ ಇದೆ, ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಸದೃಢಗೊಳಿಸುವ ಆಯ್ಕೆಯೂ ಇದೆ. ಹಾಗಾದರೇ, ಯಡಿಯೂರಪ್ಪ ಆಯ್ಕೆ ಯಾವುದು ಎಂಬುದೇ ಕುತೂಹಲಕ್ಕೂ ಕಾರಣವಾಗಿದೆ.

ಕೇಂದ್ರ ಸಚಿವ ಸ್ಥಾನ, ರಾಜ್ಯಪಾಲ ಹುದ್ದೆ ನಿರಾಕರಣೆ!! ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಕಟ್ಟುವುದೇ ಯಡಿಯೂರಪ್ಪ ಗುರಿ

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರುವ ಯಡಿಯೂರಪ್ಪ ರಾಜಕೀಯ ಪುನರ್ ವಸತಿ ಹುದ್ದೆಗಳನ್ನು ಪಡೆಯುವ ಅವಕಾಶ ಇದೆ. ಸಿಎಂ ಹುದ್ದೆಯಿಂದ ಕೆಳಗಿಳಿದ ಹಿರಿಯ ರಾಜಕಾರಣಿಗಳಿಗೆ ನಮ್ಮ ದೇಶದಲ್ಲಿ ಯಾವುದಾದಾರೊಂದು ರಾಜ್ಯದ ರಾಜ್ಯಪಾಲರಾಗಿ ನೇಮಿಸಿ ಅವರ ಆಡಳಿತ ಅನುಭವ, ಸೇವೆಯನ್ನು ರಾಜ್ಯದ ಅಭಿವೃದ್ದಿ, ಆಡಳಿತ ನಿರ್ವಹಣೆಗೆ ಪಡೆದುಕೊಳ್ಳುವ ಸಂಪ್ರದಾಯ ಇದೆ. ಯಡಿಯೂರಪ್ಪಗೂ ಪ್ರಧಾನಿ ಮೋದಿ ರಾಜ್ಯಪಾಲರ ಹುದ್ದೆಯ ಆಫರ್ ನೀಡಿದ್ದಾರೆ.

ಈ ತಿಂಗಳ 17 ರಂದು ದೆಹಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಆಗ ಪ್ರಧಾನಿ ಮೋದಿ, ಯಾವ ರಾಜ್ಯದ ರಾಜ್ಯಪಾಲರಾಗಲು ಬಯಸುತ್ತೀರಾ ಎಂದು ಕೇಳಿದ್ದಾರೆ. ಆದರೆ, ಇದು ಗಂಭೀರವಾಗಿ ಕೇಳಿದ್ದಲ್ಲ. ತಮಾಷೆಗೆ ಪ್ರಧಾನಿ ಮೋದಿ, ಯಡಿಯೂರಪ್ಪ ಮುಂದೆ ಈ ಪ್ರಶ್ನೆ ಇಟ್ಟಿದ್ದಾರೆ. ಆದರೆ, ಯಡಿಯೂರಪ್ಪ ರಾಜ್ಯಪಾಲರ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಇದನ್ನು ಇಂದು ಖುದ್ದಾಗಿ ಯಡಿಯೂರಪ್ಪ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಇನ್ನೂ ಕರ್ನಾಟಕದ ಸಿಎಂ ಹುದ್ದೆಗೆ ರಾಜೀನಾಮೆ ನೀಡಿರುವ ಯಡಿಯೂರಪ್ಪ ಕೇಂದ್ರದಲ್ಲಿ ಸಚಿವರಾಗುವ ಅವಕಾಶ ಇದೆ. ಆದರೇ, ಯಡಿಯೂರಪ್ಪಗೆ ಈಗ ಕೇಂದ್ರದಲ್ಲಿ ಸಚಿವರಾಗಲು ಇಷ್ಟವಿಲ್ಲ. ಜೊತೆಗೆ ಬಿಜೆಪಿ ಅಲಿಖಿತ ನಿಯಮವಾದ 75ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಲ್ಲಿ ಯಾವುದೇ ಪ್ರಮುಖ ಹುದ್ದೆ ನೀಡಲ್ಲ ಎಂಬ ನಿಯಮವು ಇದಕ್ಕೆ ಅಡ್ಡಿ ಬರುತ್ತೆ.

ಆದರೆ, ಯಡಿಯೂರಪ್ಪಗೆ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗಲೇ ಕೇಂದ್ರದಲ್ಲಿ ಮಂತ್ರಿ ಸ್ಥಾನದ ಆಫರ್ ಬಂದಿತ್ತು. ವಾಜಪೇಯಿ ನೀವು ಕೇಂದ್ರ ಮಂತ್ರಿಯಾಗಬೇಕೆಂದು ಹೇಳಿದ್ದರು. ಆದರೆ ಯಡಿಯೂರಪ್ಪ ಆಗಲೂ ಕೇಂದ್ರ ಮಂತ್ರಿಸ್ಥಾನದ ಆಫರ್ ಅನ್ನು ತಿರಸ್ಕರಿಸಿದ್ದರು. ಕೇಂದ್ರದಲ್ಲಿ ಮಂತ್ರಿಯಾದರೇ, ರಾಜ್ಯ ರಾಜಕಾರಣದಿಂದ ದೂರ ಉಳಿಯಬೇಕಾಗುತ್ತೆ. ಮುಂದೆ ಕರ್ನಾಟಕದಲ್ಲಿ ಸಿಎಂ ಹುದ್ದೆಗೇರಲು ಸಾಧ್ಯವಾಗಲ್ಲ ಎಂದು ವಾಜಪೇಯಿ ಯುಗದಲ್ಲೇ ಯಡಿಯೂರಪ್ಪ ಲೆಕ್ಕಾಚಾರ ಹಾಕಿ ಕೇಂದ್ರ ಮಂತ್ರಿ ಸ್ಥಾನದಿಂದ ದೂರ ಉಳಿದು ಬಿಟ್ಟರು. ಇದನ್ನು ಇಂದು ಯಡಿಯೂರಪ್ಪ ಅವರೇ ಬಹಿರಂಗಪಡಿಸಿದ್ದಾರೆ.

ಯಡಿಯೂರಪ್ಪ ಸದ್ಯಕ್ಕೆ ಹಂಗಾಮಿ ಮುಖ್ಯಮಂತ್ರಿ ಮುಂದೆ ರಾಜಕೀಯ ತೆರೆಮರೆಗೆ ಸರಿಯುತ್ತಾರಾ?

ಯಡಿಯೂರಪ್ಪಗೆ ಈಗ 78 ವರ್ಷ ವಯಸ್ಸಾಗಿದೆ. ಹಾಗಂತ ಯಡಿಯೂರಪ್ಪ ಸಿಎಂ ಹುದ್ದೆಯಿಂದ ಇಳಿದಾಕ್ಷಣ ರಾಜಕೀಯ ತೆರೆಮರೆಗೆ ಸರಿಯುತ್ತಾರೆ ಎಂಬುದು ಮೂರ್ಖತನ, ತಪ್ಪು ಲೆಕ್ಕಾಚಾರ. ಯಡಿಯೂರಪ್ಪ ರಾಜಕೀಯವಾಗಿ ಸಕ್ರಿಯವಾಗಿರುತ್ತಾರೆ. ರಾಜಕೀಯವಾಗಿ ಯಡಿಯೂರಪ್ಪ ಈಗ ಬಿಜೆಪಿ ಪಕ್ಷದಲ್ಲೇ ಹಿರಿಯ ರಾಜಕಾರಣಿಯಾಗಿ ಮುಂದುವರಿಯುವ ಅವಕಾಶ ಇದೆ. ಇಲ್ಲವೇ ಸಿಎಂ ಹುದ್ದೆಯಿಂದ ಕೆಳಗಿಳಿದು ಬಿಜೆಪಿ ಹೈಕಮಾಂಡ್ ವಿರುದ್ಧ ಮತ್ತೆ ಬಂಡಾಯದ ಬಾವುಟ ಹಾರಿಸಿ ಹೊಸ ಪಕ್ಷ ಸ್ಥಾಪಿಸುವ ಆಯ್ಕೆಯೂ ಇದೆ.

2012 ರಲ್ಲಿ ತಮ್ಮನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸಿದ್ದರು. ಆದರೆ, ಈಗ ಯಡಿಯೂರಪ್ಪ ಈ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಯಡಿಯೂರಪ್ಪ ಈಗ ಸದ್ಯಕ್ಕೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುವ ಇಚ್ಛೆಯನ್ನು ಮಾತ್ರ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕತ್ವದ ವಿರುದ್ಧ ಬಂಡಾಯ ಎದ್ದು ಹೊಸ ಪಕ್ಷ ಸ್ಥಾಪಿಸುವ ವಯಸ್ಸು, ಮನಸ್ಸು ನನಗೆ ಇಲ್ಲ ಎಂದು ಯಡಿಯೂರಪ್ಪ ತಮ್ಮನ್ನು ಭೇಟಿಯಾದ ಸ್ವಾಮೀಜಿಗಳಿಗೆ ಇತ್ತೀಚೆಗೆ ತಿಳಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಈಗ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಯ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಾರೆ. ಯಡಿಯೂರಪ್ಪಗೆ 75 ವರ್ಷ ದಾಟಿದ ಬಳಿಕವೂ ಪಕ್ಷದ ಅಲಿಖಿತ ನಿಯಮದಿಂದ ವಿನಾಯಿತಿ ನೀಡಿ ಸಿಎಂ ಹುದ್ದೆಯನ್ನು ನೀಡಲಾಗಿದೆ. ಇದಕ್ಕಾಗಿ ಯಡಿಯೂರಪ್ಪ ಈಗ ಪಕ್ಷಕ್ಕೆ ಕೃತಘ್ನತೆಯಿಂದ ಇದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ; 2024ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸುವ ಗುರಿ

ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂಬುದೇನೋ ನಿಜ. ಆದರೆ, ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಿಲ್ಲ. ಈಗಲೂ, ಮುಂದೆಯೂ ರಾಜಕೀಯವಾಗಿ ಸಕ್ರಿಯವಾಗಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಯಡಿಯೂರಪ್ಪ ಪ್ರಚಾರ ನಡೆಸುವರು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಬೆಂಬಲ, ಆಶೀರ್ವಾದ ಇಲ್ಲದೇ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧ್ಯವಿಲ್ಲ.

ಹೀಗಾಗಿ ಯಡಿಯೂರಪ್ಪ ತಮ್ಮ ಅಗತ್ಯ ಇರುವ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು. ಜೊತೆಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಬಲವಾಗಿರುವುದು ಕರ್ನಾಟಕದಲ್ಲಿ ಮಾತ್ರ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಬಿಜೆಪಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿದೆ. ಇದೇ ಸಾಧನೆಯನ್ನು 2024ರ ಲೋಕಸಭಾ ಚುನಾವಣೆಯಲ್ಲೂ ಪುನರಾವರ್ತಿಸಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಪ್ಲ್ಯಾನ್.

ಇದಕ್ಕೆ ಬಿಜೆಪಿ ಹೈಕಮಾಂಡ್ ಗೂ ಯಡಿಯೂರಪ್ಪ ಸಹಕಾರ, ಬೆಂಬಲ ಬೇಕು. ಹೀಗಾಗಿಯೇ ಯಡಿಯೂರಪ್ಪ ದೇಶದಲ್ಲಿ ಮತ್ತೆ ಮೋದಿ ಸರ್ಕಾರವೇ ಆಸ್ತಿತ್ವಕ್ಕೆ ಬರಬೇಕು ಎಂದು ಹೇಳಿದ್ದಾರೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮೋದಿ ಬೆಂಬಲಿಸಿ ಪಕ್ಷದ ಪರ ಪ್ರಚಾರ ನಡೆಸುವ ಸುಳಿವು ನೀಡಿದ್ದಾರೆ. ಕರ್ನಾಟಕದಲ್ಲಿ ತಾವು ಇನ್ನೂ 10 ರಿಂದ 15 ವರ್ಷ ಪಕ್ಷದ ಪರ ದುಡಿಯುವುದಾಗಿ ನೆನ್ನೆ ಕೂಡ ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಮಗ ವಿಜಯೇಂದ್ರಗೆ ಸ್ಥಾನಮಾನ ಕೊಡಿಸುವ ಇರಾದೆ

ಯಡಿಯೂರಪ್ಪಗೆ ತಮ್ಮ ಮಗ ವಿಜಯೇಂದ್ರ ರಾಜಕೀಯ ಭವಿಷ್ಯ ಉಜ್ವಲಗೊಳಿಸಬೇಕೆಂಬ ಆಸೆ ಇದೆ. ಈಗಾಗಲೇ ಹಿರಿಯ ಮಗ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಸದಸ್ಯರಾಗಿದ್ದಾರೆ. ಆದರೆ, ಕಿರಿಯ ಮಗ ವಿಜಯೇಂದ್ರಗೆ ಸಂಘಟನಾ ಸಾಮರ್ಥ್ಯ ಇದ್ದರೂ, ಶಾಸಕ, ಸಚಿವ, ಲೋಕಸಭಾ ಸದಸ್ಯ ಸೇರಿದಂತೆ ಯಾವುದೇ ಹುದ್ದೆ ಆಲಂಕರಿಸಿಲ್ಲ. ತಾವು ಇನ್ನೂ ಮುಂದೆ ಪಕ್ಷದ ಕಟ್ಟಾಳುವಾಗಿ ನಾಯಕರಾಗಿ ಮುಂದುವರಿಯುವುದರಿಂದ ತಮ್ಮ ರಾಜಕೀಯ ಉತ್ತರಾಧಿಕಾರಿ ಮಗ ವಿಜಯೇಂದ್ರಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕೆಂಬ ಆಸೆ ಇದೆ. ಇದನ್ನು ಹೈಕಮಾಂಡ್ ನಾಯಕರಿಗೂ ತಿಳಿಸಿದ್ದಾರೆ. ಆದರೆ, ಈಗ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರ ಈ ಆಸೆ ಈಡೇರಿಸಲು ವಿಜಯೇಂದ್ರಗೆ ಯಾವ ಸ್ಥಾನಮಾನ ನೀಡುತ್ತೆ ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿದೆ.

ಮುಂದಿನ ಸಿಎಂ ಯಾರೆಂಬುದನ್ನು ಸೂಚಿಸಲ್ಲ ಎಂಬ ಬಿಎಸ್‌ವೈ!

ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿರುವ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಮುಂದೆ ಯಾರುನ್ನು ನೇಮಿಸಬೇಕು ಎಂದು ಸೂಚಿಸಬಹುದಿತ್ತು. ಆದರೆ, ಈ ಬಾರಿ ಯಡಿಯೂರಪ್ಪ ಮುಂದೆ ಯಾರು ಸಿಎಂ ಆಗಬೇಕೆಂಬ ಬಗ್ಗೆ ಯಾರ ಹೆಸರುನ್ನು ಕೂಡ ತಾವು ಹೈಕಮಾಂಡ್ ಗೆ ಶಿಫಾರಸ್ಸು ಮಾಡಲ್ಲ ಎಂದಿದ್ದಾರೆ. ಮುಂದಿನ ಸಿಎಂ ಆಯ್ಕೆ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪ ಬಿಟ್ಟಿದ್ದಾರೆ. ಆದರೆ, ಇದೇ ಯಡಿಯೂರಪ್ಪ 2011ರ ಜುಲೈನಲ್ಲಿ ಸಿಎಂ ಹುದ್ದೆಯಿಂದ ಲೋಕಾಯುಕ್ತ ವರದಿ ಪರಿಣಾಮವಾಗಿ ಕೆಳಗಿಳಿದಾಗ ಡಿ.ವಿ.ಸದಾನಂದಗೌಡರನ್ನು ಸಿಎಂ ಆಗಿ ಆಯ್ಕೆ ಮಾಡಬೇಕೆಂದು ಹೈಕಮಾಂಡ್‌ಗೆ ಸೂಚಿಸಿದ್ದರು. ಆದರೂ ಯಡಿಯೂರಪ್ಪ ಮುಂದಿನ ಸಿಎಂ ಆಗಿ ತಮಗೆ ಆಪ್ತರಾಗಿರುವ ಲಿಂಗಾಯತ ಸಮುದಾಯದವರೇ ಆದ ಬಸವರಾಜ ಬೊಮ್ಮಾಯಿ ಹೆಸರುನ್ನು ಸೂಚಿಸಬಹುದು ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಈಗ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಒಂದು ಭರ್ಜರಿ ರಾಜಕೀಯ ಇನ್ನಿಂಗ್ಸ್ ಅನ್ನು ಮುಗಿಸಿದ್ದಾರೆ. ಯಾರಿಗೂ ಸಿಗದಷ್ಟು ಅವಕಾಶಗಳು ಯಡಿಯೂರಪ್ಪ ಸಿಕ್ಕಿವೆ. ಯಡಿಯೂರಪ್ಪ ರಾಜಕೀಯವಾಗಿ ಹೆಚ್ಚು ಸಕ್ರಿಯವಾಗಿರಲು ಉತ್ತಮ ಆರೋಗ್ಯದ ಬೆಂಬಲವೂ ಬೇಕು. ಯಡಿಯೂರಪ್ಪಗೆ ಈಗ ಆರೋಗ್ಯವೇ ಭಾಗ್ಯ.

(bs yediyurappa resignation from chief minister post in karnataka what next)