ಬಡವರ ಬಗ್ಗೆ ಕಾಳಜಿ ಇಲ್ಲವೆಂಬುದು ಇಂದಿರಾ ಕ್ಯಾಂಟೀನ್ ಮುಚ್ಚಿದ್ದರಿಂದಲೇ ಗೊತ್ತಾಗುತ್ತದೆ: ವಿಜಯೇಂದ್ರ

|

Updated on: Jul 19, 2024 | 2:14 PM

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇಂದಿನ ಕ್ಯಾಂಟೀನ್​​ಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ. 11 ಇಂದಿರಾ ಕ್ಯಾಂಟೀನ್​ಗಳು ಮುಚ್ಚಲಾಗಿರುವ ಬಗ್ಗೆ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಡವರ ಬಗ್ಗೆ ಕಾಳಜಿ ಇಲ್ಲವೆಂಬುದು ಇಂದಿರಾ ಕ್ಯಾಂಟೀನ್ ಮುಚ್ಚಿದ್ದರಿಂದಲೇ ಗೊತ್ತಾಗುತ್ತದೆ: ವಿಜಯೇಂದ್ರ
ವಿಜಯೇಂದ್ರ
Follow us on

ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿ 11 ಇಂದಿರಾ ಕ್ಯಾಂಟೀನ್​​ಗಳನ್ನು ಮುಚ್ಚಲಾಗಿದೆ ಎಂಬ ವರದಿಯ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಹಿಂದಿನ ಕ್ಯಾಂಟೀನ್ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್ ಪಕ್ಷದವರು ಈಗೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್​​ಗಳನ್ನು ತೆರೆದಿರುವ ಬಗ್ಗೆ ಹೆಮ್ಮೆಪಟ್ಟು ಕೊಂಡಿದ್ದ ಕಾಂಗ್ರೆಸ್ಸಿಗರೇ, ಕಳೆದ ಬಾರಿಯ ನಮ್ಮ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಕ್ಯಾಂಟೀನ್​​ಗಳನ್ನು ನಾವು ಮುಚ್ಚಿಸಲು ಹೊರಟಿದ್ದೇವೆ ಎಂದು ಅಪಪ್ರಚಾರ ನಡೆಸಿದಿರಿ. ಆದರೆ ಈಗೇನಾಗುತ್ತಿದೆ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ವಿಜಯೇಂದ್ರ ಎಕ್ಸ್​ ಸಂದೇಶ


ಬಡವರು ಹಾಗೂ ಶ್ರಮಿಕ ವರ್ಗದವರಿಗೆ ಹಸಿವು ನೀಗಿಸುತ್ತಿದ್ದ ನಿಮ್ಮದೇ ಯೋಜನೆಯ ಇಂದಿರಾ ಕ್ಯಾಂಟೀನ್ ಮುಚ್ಚಿಸುತ್ತಿದ್ದೀರಿ. ಬಡವರ ಬಗ್ಗೆ, ಹಸಿದವರ ಬಗ್ಗೆ, ನಿಮಗೆ ಪ್ರಾಮಾಣಿಕ ಕಾಳಜಿ ಇದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಯೋಜನೆಗಳನ್ನು ಮಾತ್ರ ಕೇಂದ್ರೀಕರಿಸಿರುವ ನೀವು ಅದನ್ನೂ ಪರಿಪೂರ್ಣವಾಗಿ ನಿಭಾಯಿಸಲಾಗದೆ, ಆರ್ಥಿಕ ಸಮತೋಲನ ಕಾಯ್ದುಕೊಳ್ಳಲಾಗದೆ, ರಾಜ್ಯದ ಬೊಕ್ಕಸ ಬರಿದು ಮಾಡಿ ಹಿಂದುಳಿದವರು, ದಲಿತರ ಕಲ್ಯಾಣ ಕಾರ್ಯಗಳನ್ನು ಮೂಲೆಗೊತ್ತಿ ಇದೀಗ ಬೀದಿಬದಿ ವ್ಯಾಪಾರ ಮಾಡಿ ಜೀವನ ಸಾಗಿಸುವ ಶ್ರಮಿಕ ವರ್ಗ ಹಾಗೂ ಬಡವರಿಗೆ ಹಸಿವು ನೀಗಿಸುವ ತಾಣವಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ನಿಮ್ಮ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಿಸಲು ಹೊರಟಿದ್ದೀರಿ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸರ್ಕಾರದ ಕಾರ್ಯವೈಖರಿ ನೋಡಿದರೆ ಕರ್ನಾಟಕದ ಚಲನಶೀಲತೆಗೆ ತುಕ್ಕು ಹಿಡಿಸಲು ಹೊರಟಂತಿದೆ. ಇಂದಿರಾ ಕ್ಯಾಂಟೀನ್​​ಗೆ ಆಗುತ್ತಿರುವ ಗತಿಯೇ ಬಡವರ ಇತರ ಯೋಜನೆಗಳಿಗೂ ಆಗುವುದು ನಿಶ್ಚಿತ ಎಂಬುದು ಸರ್ಕಾರದ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದರೆ ವೇದ್ಯವಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಬರಲಿದೆ ಎಲಿವೇಟೆಡ್ ಕಾರಿಡಾರ್: ಮತ್ತೆ ಮುನ್ನೆಲೆಗೆ ಬಂದ ಚರ್ಚೆ

ಬಾಕಿ ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆ ಪಡೆದ ಸಂಸ್ಥೆ ಆಹಾರ ಪೂರೈಸದೆ ಇರುವುದರಿಂದ ಬಿಬಿಎಂಪಿ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್ ಗಳು ಸ್ಥಗಿತಗೊಂಡಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಜಯೇಂದ್ರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ