Manchanabele Dam: ಮಂಚನಬೆಲೆ ಜಲಾಶಯ ಕಾಲುವೆ ರಿಪೇರಿ ಮಾಡಿಸಿದ್ದರೂ ನೀರು ಹರಿಯಲು ಬಿಟ್ಟಿಲ್ಲ, ಬಂದ್ ಮಾಡಿಟ್ಟಿದ್ದಾರೆ! ಯಾಕೆ ಹೀಗೆ?

| Updated By: ಸಾಧು ಶ್ರೀನಾಥ್​

Updated on: Jan 23, 2023 | 1:59 PM

ಸಾವಿರಾರು ರೈತರಿಗೆ ಅನುಕೂಲವಾಗಬೇಕಿದ್ದು, ಕಾಲುವೆಗಳು ಇಂದು ಸಂಪೂರ್ಣವಾಗಿ ದುರಸ್ತಿ ಕಂಡಿವೆ. ಆದರೆ ನೀರು ಹರಿಯುತ್ತಿಲ್ಲ. ಈ ಹಿಂದೆ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದಾಗ, ರೈತರು ವ್ಯವಸಾಯಕ್ಕೆ ಬಳಸಿಕೊಳ್ಳುತ್ತಿದ್ದರು. ದನಕರುಗಳ ಮೈ ತೊಳೆಯುತ್ತಿದ್ದರು. ಕುಡಿಯಲು ಸಹ ಬಳಸುತ್ತಿದ್ದರು.

Manchanabele Dam: ಮಂಚನಬೆಲೆ ಜಲಾಶಯ ಕಾಲುವೆ ರಿಪೇರಿ ಮಾಡಿಸಿದ್ದರೂ ನೀರು ಹರಿಯಲು ಬಿಟ್ಟಿಲ್ಲ, ಬಂದ್ ಮಾಡಿಟ್ಟಿದ್ದಾರೆ! ಯಾಕೆ ಹೀಗೆ?
ಮಂಚನಬೆಲೆ ಜಲಾಶಯ ಕಾಲುವೆ ರಿಪೇರಿ ಮಾಡಿಸಿದ್ದರೂ ನೀರು ಹರಿಯಲು ಬಿಟ್ಟಿಲ್ಲ, ಬಂದ್ ಮಾಡಿಟ್ಟಿದ್ದಾರೆ! ಯಾಕೆ ಹೀಗೆ?
Follow us on

ಅದು ಹತ್ತಾರು ಹಳ್ಳಿಗಳ, ಸಾವಿರಾರು ರೈತರಿಗೆ ಆಸರೆ-ಅನುಕೂಲವಾಗಿದ್ದ ಕಾಲುವೆಗಳು. ಆ ಕಾಲುವೆಗಳಲ್ಲಿ ನೀರು ಹರಿದು ರೈತರ ಬದುಕು ಕೂಡ ಹಸನಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರೋ ಕೆನಾಲ್ ಗಳು ಇದೀಗ ಯಾವುದಕ್ಕೂ ಉಪಯೋಗಕ್ಕೆ ಬಾರದಂತೆ ಆಗಿವೆ. ಈ ಮಧ್ಯೆ ಕಾಲುವೆಯನ್ನೇ ಸಂಪೂರ್ಣವಾಗಿ ಮುಚ್ಚಲು ತಾಲೂಕು ಆಡಳಿತ ಮುಂದಾಗಿದೆ! ಹೌದು ರೈತರಿಗೆ ಅನುಕೂಲವಾಗಬೇಕಾದ ಕಾಲುವೆಗಳಲ್ಲಿ ಇದೀಗ ನೀರು ಹರಿಯದೇ ಗಿಡಗಂಟಿಗಳಿಗೆ ಆವಾಸ ಸ್ಥಾನವಾಗಿದೆ. ಅಂದಹಾಗೆ ಇಂತಹ ದೃಶ್ಯ ಕಂಡು ಬಂದಿರುವುದು ರಾಮನಗರ (Ramanagara) ಜಿಲ್ಲೆ ಮಾಗಡಿ (Magadi) ತಾಲೂಕಿನ ಮಂಚನಬೆಲೆ ಜಲಾಶಯದ (Manchanabele Dam) ಎಡ ಹಾಗೂ ಬಲದಂಡೆ ಕಾಲುವೆಗಳಲ್ಲಿ (Water Canal). ಹೌದು ಹತ್ತಾರು ಹಳ್ಳಿಗಳ ಸಾವಿರಾರು ರೈತರಿಗೆ ವರದಾನವಾಗಬೇಕಿದ್ದ ಈ ಎರಡು ಕಾಲುವೆಗಳು, ಕಳೆದ ಹಲವು ವರ್ಷಗಳಿಂದ ನೀರು ಕಾಣದೇ, ಸಂಪೂರ್ಣವಾಗಿ ದುರಸ್ತಿ ಕಂಡಿವೆ.

ಪ್ರಾರಂಭದಲ್ಲಿ ಜಲಾಶಯ ನಿರ್ಮಾಣ ಮಾಡಿ, ಕೆಲ ವರ್ಷಗಳ ಕಾಲ ನೀರು ಹರಿಸಿದ್ದು ಬಿಟ್ಟರೇ, ಹಲವು ವರ್ಷಗಳಿಂದ ಇದುವರೆಗೂ ಕಾಲುವೆಗೆ ನೀರು ಹರಿಸಿಲ್ಲ. ಈ ಹಿಂದೆ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದಾಗ, ರೈತರು ವ್ಯವಸಾಯಕ್ಕೆ ಬಳಸಿಕೊಳ್ಳುತ್ತಿದ್ದರು. ದನಕರುಗಳ ಮೈ ತೊಳೆಯುತ್ತಿದ್ದರು. ಕುಡಿಯಲು ಸಹ ಬಳಸುತ್ತಿದ್ದರು. ಆದರೆ ಆನಂತರ ಕಾಲುವೆಗಳಲ್ಲಿ ನೀರು ಹರಿಸುವುದನ್ನೆ ಅಧಿಕಾರಿಗಳು ಬಿಟ್ಟಿದ್ದಾರೆ. ಇನ್ನು ಕಾಲುವೆಗಳಿಗೆ ನೀರು ಹರಿಸಿ ಅಂತಾ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ರೈತರು ಮನವಿ ಮಾಡಿದ್ರು ಯಾವುದೇ ಪ್ರಯೋಜನವಿಲ್ಲದಂತೆ ಆಗಿದೆ. ಇದು ರೈತರ ಆಕ್ರೋಶವನ್ನು ಹೆಚ್ಚಿಸಿದೆ ಎನ್ನುತ್ತಾರೆ ರೈತ ರಾಮಾಂಜುನಯ್ಯ.

ಅಂದಹಾಗೆ ಮಂಚನಬೆಲೆ ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆಗಳು ಸುಮಾರು 30 ಕಿಲೋ ಮೀಟರ್ ಗೂ ಹೆಚ್ಚು ಇವೆ. ಈ ಹಿಂದೆ ಕೆಲವು ವರ್ಷಗಳ ಕೆಳಗೆ ಎರಡು ಕಾಲುವೆಗಳಿಗೂ ಕೂಡ ನೀರು ಹರಿಸಲಾಗುತ್ತಿತ್ತು. ಹೀಗಾಗಿ ರಾಮನಗರ ಜಿಲ್ಲೆಯ ರಾಮನಗರ ಹಾಗೂ ಮಾಗಡಿ ತಾಲೂಕಿನ ಸಾವಿರಾರು ರೈತರು ಕಾಲುವೆ ನೀರನ್ನ ಬಳಸಿಕೊಂಡು ವ್ಯವಸಾಯ ಮಾಡುತ್ತಿದ್ದರು. ಆದ್ರೆ ಕಳೆದ ಹಲವು ವರ್ಷಗಳಿಂದ ಕಾಲುವೆ ನೀರು ಹರಿಸದೇ ಇರುವ ಹಿನ್ನೆಲೆಯಲ್ಲಿ ಕಾಲುವೆ ತುಂಬೆಲ್ಲ ಗಿಡಗಂಟಿಗಳು ಬೆಳೆದುಕೊಂಡಿವೆ. ಅಲ್ಲದೇ ಕೆಲವು ಕಡೆಗಳಲ್ಲಿ ಕಾಲುವೆಗಳ ಸೈಜ್ ಕಲ್ಲುಗಳನ್ನ ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಹೀಗಾಗಿ ಕಾಲುವೆಗಳು ಸಂಪೂರ್ಣವಾಗಿ ದುರಸ್ತಿ ಕಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೊ ಮಾಗಡಿ ಶಾಸಕ ಮಂಜುನಾಥ್, ಎರಡು ಕಾಲುವೆಗಳು ಸಂಪೂರ್ಣವಾಗಿ ಹಾಳಾಗಿವೆ. ರಿಪೇರಿ ಮಾಡಿ ನೀರು ಬಿಟ್ಟರೂ ಪ್ರಯೋಜನವಿಲ್ಲ. ಹೀಗಾಗಿ ಕಾಲುವೆಗಳನ್ನ ಮುಚ್ಚಿ, ಸಣ್ಣ ನೀರಾವರಿ ಯೋಜನೆ ಮೂಲಕ ಜಲಾಶಯದಿಂದ ಗ್ರಾಮಗಳಿಗೆ ನೀರನ್ನ ಕೊಡಲು ಯೋಜನೆ ರೂಪಿಸಲಾಗಿದೆ ಎನ್ನುತ್ತಿದ್ದಾರೆ.

ಒಟ್ಟಾರೆ ಸಾವಿರಾರು ರೈತರಿಗೆ ಅನುಕೂಲವಾಗಬೇಕಿದ್ದು, ಕಾಲುವೆಗಳು ಇಂದು ಸಂಪೂರ್ಣವಾಗಿ ದುರಸ್ತಿ ಕಂಡಿವೆ. ಆದರೆ ನೀರು ಹರಿಯುತ್ತಿಲ್ಲ. ಅದರ ಬದಲಿಗೆ ಬೇರೆ ಯೋಜನೆಗಳ ಮೂಲಕ ಗ್ರಾಮೀಣ ಭಾಗದ ರೈತರಿಗೆ ನೀರು ಕೊಡುತ್ತೇವೆ ಎನ್ನುತ್ತಿದ್ದಾರೆ ಸ್ಥಳೀಯ ಶಾಸಕ ಮಂಜುನಾಥ್. ಆದರೆ ಈ ಯೋಜನೆಯಿಂದ ರೈತರಿಗೆ ಅನುಕೂಲವಾಗುತ್ತದೇಯಾ? ಕಾದು ನೋಡಬೇಕಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ