ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ: ಮಾಜಿ ಶಾಸಕರ ಪತ್ನಿ ವಿರುದ್ಧ ದೂರು ದಾಖಲು

| Updated By: ರಮೇಶ್ ಬಿ. ಜವಳಗೇರಾ

Updated on: Oct 26, 2023 | 9:54 AM

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಮಾಜಿ ಶಾಸಕರೊಬ್ಬರ ಪತ್ಬಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದಾರೆ. ಇದೀಗ ಸುಳ್ಳು ಜಾತಿ ಪ್ರಮಾಣ ಪತ್ರ ಕೊಟ್ಟರು, ಶಿಫಾರಸ್ಸು ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ:  ಮಾಜಿ ಶಾಸಕರ ಪತ್ನಿ ವಿರುದ್ಧ ದೂರು ದಾಖಲು
Follow us on

ಬೆಂಗಳೂರು, (ಅಕ್ಟೋಬರ್ 26): ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ (Assistant professor Job) ಬಡ್ತಿ ಪಡೆಯಲು ಮಾಜಿ ಶಾಸಕರೊಬ್ಬರ ಪತ್ಬಿ ಸುಳ್ಳು ಜಾತಿ ಪ್ರಮಾಣ ಪತ್ರ (fake caste certificate) ನೀಡಿ ಸಿಕ್ಕಿಬಿದ್ದಿದ್ದಾರೆ. ನೆಲಮಂಗಲ (Nelamangala) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರ ಪತ್ನಿ ಡಾ. ಸುಜಾ ಕೆ.ಶ್ರೀಧರ್‌ ಎನ್ನುವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದಾರೆ.

ಡಾ. ಸುಜಾ ಕೆ.ಶ್ರೀಧರ್ ಅವರು ಪರಿಶಿಷ್ಟ ಜಾತಿಯ ದ್ರಾವಿಡ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದರು. ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಜಿ.ಎನ್‌. ಶಕುಂತಲಾ ಅವರಿಗೆ ದೊರೆತಿದ್ದ ಬಡ್ತಿಗೆ ಮಾಜಿ ಶಾಸಕರು ತಮ್ಮ ರಾಜಕೀಯ ಪ್ರಭಾವ ಬಳಸಿ ತಮ್ಮ ಪತ್ನಿ ಡಾ. ಸುಜಾ ಕೆ.ಶ್ರೀಧರ್ ಅವರಿಗೆ ಕೊಡಿಸಿದ್ದರು.

ಇದನ್ನೂ ಓದಿ: ಕಾಟಾಚಾರಕ್ಕೆ ಸೆಲೆಬ್ರಿಟಿ ಮನೆಗಳ ಪರಿಶೀಲನೆ, ನಾಮಕಾವಸ್ತೆ ನೊಟೀಸ್: ಅನುಮಾನ ಮೂಡಿಸಿದ ಅರಣ್ಯಾಧಿಕಾರಿಗಳ ನಡೆ

ಇನ್ನು ಈ ಬಗ್ಗೆ ನ್ಯಾಯ ಕೊಡಿಸಬೇಕೆಂದು ಇದೇ ಕಾಲೇಜು ಉಪನ್ಯಾಸಕಿ ಡಾ. ಶಕುಂತಲಾ, ಸುಳ್ಳು ಪ್ರಮಾಣ ಪತ್ರ ನೀಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದ್ ಕುಮಾರ್‌ ಅವರಿಗೆ ದೂರು ನೀಡಿದ್ದಾರೆ. ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರದ ಮಾಜಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಪತ್ನಿ ಡಾ.ಸುಜಾ.ಕೆ.ಶ್ರೀಧರ್‌ ಕೇರಳ ಮೂಲದವರು. ಸದ್ಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿ. ಡಾ.ಸುಜಾ ಕೆ ಶ್ರೀಧರ್ ಕೇರಳದ ಎಳವ ಜಾತಿಗೆ ಸೇರಿದ್ದು, ತಂದೆಯ ಜಾತಿ ಮಾತ್ರ ಮಗಳಿಗೆ ಬರುತ್ತದೆಂದು ದೂರುನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಈ ದೂರು ಆಧಾರಿಸಿ ನಾಗರಿಕ ಹಕ್ಕುಗಳ ಜಾರಿ ನಿರ್ದೆಶಾನಾಲಯದಿಂದ ನೆಲಮಂಗಲ ತಹಶೀಲ್ದಾರ್, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಲು ಶಿಫಾರಸ್ಸು ಮಾಡಿದ ಕಂದಾಯ ನಿರೀಕ್ಷಕ,ಮತ್ತು ಗ್ರಾಮ ಲೆಕ್ಕಿಗನ ಮೇಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ