
ಬೆಂಗಳೂರು, (ಸೆಪ್ಟೆಂಬರ್ 25): ಹಲವು ಗೊಂದಲಗಳಿಗೆ ಕಾರಣವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ (Caste Census survey) ತಡೆ ನೀಡಲು ಕರ್ನಾಟಕ ಹೈಕೋರ್ಟ್ (Karnataka High Court) ನಿರಾಕರಿಸಿದೆ. ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ, ಎರಡು ದಿನ ವಾದ ಪ್ರತಿವಾದ ಆಲಿಸಿದ್ದು, ಅಂತಿಮವಾಗಿ ಇಂದು (ಸೆಪ್ಟೆಂಬರ್ 25) ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ. ಆದ್ರೆ, ಜನರ ದತ್ತಾಂಶದ ಗೌಪ್ಯತೆ ಬಗ್ಗೆ ಸರ್ಕಾರಕ್ಕೆ ಹಾಗೂ ಹಿಂದೂಳಿದ ವರ್ಗಾಗಳ ಆಯೋಗಕ್ಕೆ ಕೆಲವು ಮಹತ್ವದ ಷರತ್ತುಗಳನ್ನು ವಿಧಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ದತ್ತಾಂಶವನ್ನು ಸರ್ಕಾರ ಸೇರಿ ಯಾರಿಗೂ ಬಹಿರಂಗಪಡಿಸಬಾರದು. ದತ್ತಾಂಶದ ಗೌಪ್ಯತೆಯನ್ನು ಹಿಂದುಳಿದ ವರ್ಗಗಳ ಆಯೋಗ ರಕ್ಷಿಸಬೇಕು. ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದು ಎಂದು ಹೈಕೋರ್ಟ್ ಮಹತ್ವದ ಷರತ್ತುಗಳನ್ನು ವಿಧಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೇ ದತ್ತಾಂಶದ ಗೌಪ್ಯತೆ ಸಂಬಂಧ ಪ್ರಮಾಣಪತ್ರ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ನೇ ವಾರಕ್ಕೆ ಮುಂದೂಡಿದೆ.
ನೀವು ಸಂಗ್ರಹಿಸಿರುವ ದತ್ತಾಂಶ ಹೇಗೆ ರಕ್ಷಿಸುತ್ತೀರಿ ಎಂದು ಹೈಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಇ ಆಡಳಿತ ವಿಭಾಗವೇ ದತ್ತಾಂಶವನ್ನು ರಕ್ಷಿಸುತ್ತದೆ. ಸರ್ಕಾರದ ಅಧಿಕಾರಿಗಳಷ್ಟೇ ನಿಯಂತ್ರಣ ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಗೆ ತಡೆ ಕೋರಿ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಮತ್ತು ಇತರರು ಪಿಐಎಲ್ ಸಲ್ಲಿಸಿದ್ದರು. ಈ ಪಿಐಎಲ್ ಗಳನ್ನು ವಿಚಾರಣೆ ನಡೆಸುದ ಮುಖ್ಯ ನ್ಯಾ.ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಎರಡು ದಿನಗಳ ಕಾಲ ವಾದ ಪ್ರತಿವಾದ ಆಲಿಸಿತ್ತು. ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರು ಹಾಗೂ ಕೇಂದ್ರ ಸರ್ಕಾರ ಪರ ವಕೀಲರು ಸಮೀಕ್ಷೆ ತಡೆ ನೀಡುವಂತೆ ತಮ್ಮದೇ ರೀತಿಯಲ್ಲಿ ಪೀಥದ ಮುಂದೆ ಪ್ರಬಲ ವಾದ ಮಂಡಿಸಿದ್ದರು. ಇನ್ನು ಇದಕ್ಕೆ ರಾಜ್ಯ ಸರ್ಕಾರ ಹಾಗೂ ಹಿಂದೂಳಿದ ವರ್ಗಗಳ ಆಯೋಗದ ಪರ ವಕೀಲರು ಸಹ ಪ್ರಬಲವಾಗಿ ವಾದ ಮಂಡಿಸಿದರು. ಹೀಗೆ ಎರಡು ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ ಹೈಕೋರ್ ವಿಭಾಗೀಯ ಪೀಠ, ತಡೆ ನೀಡಲು ನಿರಾಕರಿಸಿದ್ದು, ಜನರು ಗೌಪ್ಯತೆ ಕಾಪಾಡುವಂತೆ ಕೆಲ ಸೂಚನೆಗಳನ್ನು ನೀಡಿ ಮಧ್ಯಂತೆ ಆದೇಶಿಸಿದೆ.
Published On - 4:59 pm, Thu, 25 September 25