ಸ್ಟಿಕ್ಕರ್ ಅಂಟಿಸಿ ತೆಗೆಯದಂತೆ ಸೂಚಿಸಲು ನಿಮಗಿರುವ ಅಧಿಕಾರವೇನು? ಜಾತಿ ಗಣತಿ ಬಗ್ಗೆ ಕೋರ್ಟ್ ಪ್ರಶ್ನೆ

ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಸಮೀಕ್ಷೆ ವೇಳೆ ಮಾಹಿತಿ ನೀಡುವುದು ಜನರಿಗೆ ಕಡ್ಡಾಯವಲ್ಲವೆಂದು ಸರ್ಕಾರ ಹೈಕೋರ್ಟ್ ಗೆ ಸ್ಪಷ್ಟಪಡಿಸಿದೆ. ಸಮೀಕ್ಷೆಗೆ ಮಧ್ಯಂತರ ತಡೆ ಕೋರಿರುವ ಅರ್ಜಿ ಸಂಬಂಧ ವಿಚಾರಣೆಯನ್ನು ಹೈಕೋರ್ಟ್ ನಾಳೆ ಮುಂದೂಡಿದೆ. ಇನ್ನು ಇಂದು ಹೈಕೋರ್ಟ್ ಕೇಳಿದ ಪ್ರಶ್ನೆಗಳೇನು? ಎರಡೂ ಕಡೆಯ ವಕೀಲರ ವಾದ ಪ್ರತಿವಾದ ಹೇಗಿತ್ತು ಎನ್ನುವ ಡಿಟೈಲ್ಸ್ ಇಲ್ಲಿದೆ.

ಸ್ಟಿಕ್ಕರ್ ಅಂಟಿಸಿ ತೆಗೆಯದಂತೆ ಸೂಚಿಸಲು ನಿಮಗಿರುವ ಅಧಿಕಾರವೇನು? ಜಾತಿ ಗಣತಿ ಬಗ್ಗೆ ಕೋರ್ಟ್ ಪ್ರಶ್ನೆ
Karnataka High Court
Updated By: ರಮೇಶ್ ಬಿ. ಜವಳಗೇರಾ

Updated on: Sep 24, 2025 | 9:47 PM

ಬೆಂಗಳೂರು, (ಸೆಪ್ಟೆಂಬರ್ 24): ಗೊಂದಲಗಳ ನಡುವೆ ರಾಜ್ಯಾದ್ಯಂತ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ (Caste survey) ಆರಂಭಗೊಂಡಿದೆ. ಈ ಮಧ್ಯೆ ಸರ್ವೆ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್ (Karnataka High Court) ವಿಭಾಗೀಯ ಪೀಠ ದಲ್ಲಿ ನಡೆದಿದೆ. ರಾಜ್ಯ ಒಕ್ಕಲಿಗರ ಸಂಘ, ಅಖಿತ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರು ಸೇರಿದಂತೆ ಹಲವರು ಎತ್ತಿರುವ ತಕರಾರಿಗೆ ಸರ್ಕಾರ ಹಾಗೂ ಆಯೋಗ ಇಂದು ಉತ್ತರ ಕೊಡುವ ಯತ್ನ ಮಾಡಿದೆ. ಇಂದೂ ಸುಮಾರು 2 ಗಂಟೆಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಪೀಠ ವಿಚಾರಣೆ ನಾಳೆಗೆ (ಸೆಪ್ಟೆಂಬರ್ 25) ಮುಂದೂಡಿದೆ.

ಸರ್ಕಾರದ ಪರ ಅಭಿಷೇಕ್ ಮನು ಸಿಂಘ್ವಿ ವಾದ

ಸಂವಿಧಾನದ 342 A(3) ವಿಧಿಯನ್ನು ಅರ್ಜಿದಾರರು ಪ್ರಶ್ನಿಸಿಲ್ಲ. ಹಿಂದುಳಿದ ವರ್ಗಗಳ ಕಾಯ್ದೆಯ ಸೆಕ್ಷನ್ 9, 11 ಕ್ಕೂ ತಡೆ ನೀಡುವಂತೆ ಅರ್ಜಿದಾರರು ಕೋರಿಲ್ಲ. ಸರ್ವೆಯಲ್ಲಿ ಯಾವ ತಪ್ಪಿದೆ ಎಂದು ಅರ್ಜಿದಾರರು ಹೇಳಿಲ್ಲ. ಹೀಗಾಗಿ ಸರ್ವೆಗೆ ತಡೆಯಾಜ್ಞೆ ನೀಡಬಾರದು ಎಂದು ವಾದ ಮಂಡಿಸಿದರು.

ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಸರ್ಕಾರಕ್ಕೆ ಸರ್ವೆ ನಡೆಸುವ ಅಧಿಕಾರವಿಲ್ಲವೆಂದು ಅರ್ಜಿದಾರರು ಹೇಳಿಲ್ಲ. ಆದರೆ ಸರ್ವೆ ನಡೆಸುತ್ತಿರುವ ರೀತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಜಾತಿಗಳ ನಡುವೆ ಧರ್ಮವನ್ನು ಸೇರಿಸಿದ್ದಾರೆಂಬ ಆರೋಪವಿದೆ. ಜಾತಿಗಳ ಪಟ್ಟಿ ಪ್ರಕಟಿಸುವ ಮುನ್ನ ಸೂಕ್ತ ವರ್ಗೀಕರಣವಿಲ್ಲ ಎಂಬ ಆರೋಪವಿದೆ ಎಂದು ಸರ್ಕಾರಕ್ಕೆ ಕೋರ್ಟ್ ಪ್ರಶ್ನಿಸಿತು.

ಸರ್ಕಾರದ ಪರ ಅಭಿಷೇಕ್ ಮನು ಸಿಂಘ್ವಿ ವಾದ

ಅಂಕಿ ಅಂಶ ಸಂಗ್ರಹಿಸುವ ಮುನ್ನವೇ ತಪ್ಪು ಹುಡುಕಲಾಗದು. ಜಾತಿಗಳ ಅಂಕಿ ಅಂಶ ಸಂಗ್ರಹಿಸದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಸರ್ವೆ ನಡೆದ ಬಳಿಕ ಅದರಲ್ಲಿ ಲೋಪವಿದ್ದರೆ ಪ್ರಶ್ನಿಸಲಿ. ಆದರೆ ಸರ್ವೆ ಆರಂಭಕ್ಕೂ ಮೊದಲೇ ಪ್ರಶ್ನಿಸುತ್ತಿದ್ದಾರೆ. ಸರ್ವೆ ಹೇಗೆ ತಪ್ಪೆಂದು ಅರ್ಜಿದಾರರು ಹೇಳಿಲ್ಲದಿರುವುದರಿಂದ ತಡೆಯಾಜ್ಞೆ ನೀಡಬಾರದು. ಹಿಂದುಳಿದ ಜನರನ್ನು ಗುರುತಿಸಿ ಸವಲತ್ತು ನೀಡಲು ಸರ್ವೆ ಮಾಡಲಾಗುತ್ತಿದೆ. ಇದಕ್ಕಾಗಿ ಮಾಹಿತಿಗಳನ್ನು ಸಂಗ್ರಹಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಕೇಂದ್ರ ಸರ್ಕಾರ ಜಾತಿ ಸರ್ವೆ ನಡೆಸಲು ಐದಾರು ವರ್ಷ ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯಗಳು ಜಾತಿಗಳ ಸರ್ವೆ ಮಾಡಬಾರದೆಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಪರ ಎಎಸ್‌ಜಿ ಅರವಿಂದ್ ಕಾಮತ್ ವಾದ

ಸಮೀಕ್ಷೆಯ ಹೆಸರಿನಲ್ಲಿ ಸರ್ಕಾರ ಜನಗಣತಿ ಮಾಡುತ್ತಿದೆ. ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿಯನ್ನೂ ನಡೆಸಲಿದೆ. ಎಲ್ಲ ರಾಜ್ಯಗಳೂ ಪ್ರತ್ಯೇಕ ಸರ್ವೆ ಮಾಡಿದರೆ ಸಮಸ್ಯೆ ಆಗಲಿದೆ. ಕೇಂದ್ರ, ರಾಜ್ಯದ ಸರ್ವೆಗಳಲ್ಲಿ ವಿರೋಧಭಾಸವಿರಬಾರದು. 2027 ರಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಆರಂಭಿಸಲಿದೆ. ರಾಜ್ಯದ ಸರ್ವೆಯಲ್ಲಿ ಜನ ಉತ್ತರ ನೀಡುವುದು ಕಡ್ಡಾಯವಿಲ್ಲ. ಇಂತಹ ಸರ್ವೆ ನಡೆಸುವುದರಿಂದ ಪ್ರಯೋಜನವೇನು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಜಾತಿಗಳ ಪಟ್ಟಿ ತಯಾರಿಸಲು ಇಂದಿರಾ ಸಹಾನಿ ತೀರ್ಪಿನಲ್ಲಿ ಅವಕಾಶವಿದೆ. ಮೀಸಲಾತಿಗಲ್ಲದಿದ್ದರೂ ಸವಲತ್ತು ನೀಡಲು ದತ್ತಾಂಶ ಬೇಕಾಗಬಹುದಲ್ಲಾ. ಸರ್ವೆ ವೇಳೆ ಕೇಳುವ ಪ್ರಶ್ನೆಗಳನ್ನು 60 ರಿಂದ 5 ಕ್ಕೆ ಇಳಿಸಬೇಕೆಂಬುದು ನಿಮ್ಮ ಬೇಡಿಕೆಯೇ ? ಪ್ರತಿ ಮನೆಯ ಸರ್ವೆ ಮಾಡಬಾರದೆಂದು ಕೇಳುತ್ತಿದ್ದಾರಾ ? ಎಂದು ಕೋರ್ಟ್ ಪ್ರಶ್ನಿಸಿತು.

ಕೇಂದ್ರ ಸರ್ಕಾರದ ಪರ ಅರವಿಂದ್ ಕಾಮತ್ ವಾದ

ಜಾತಿಗಳ ವರ್ಗೀಕರಣವನ್ನೇ ಮಾಡದೇ ಸಮೀಕ್ಷೆ ಮಾಡುತ್ತಿದ್ದಾರೆ. ಬೆಂಗಳೂರಿನ ಶ್ರೀಮಂತರಿರುವ ಮನೆಗೂ ಹೋಗಿ ಸಮೀಕ್ಷೆಯ ಅಗತ್ಯವೇನಿದೆ. ಸರ್ವೆ ಹೆಸರಿನಲ್ಲಿ ಸರ್ಕಾರ ಜನಗಣತಿ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಪರ ಅರವಿಂದ್ ಕಾಮತ್ ಸ್ಪಷ್ಟಪಡಿಸಿದರು.

ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆ

ಸರ್ಕಾರ 1561 ಜಾತಿಗಳನ್ನು ಹೇಗೆ ನಿಗದಿಪಡಿಸಿದೆ ?. ಜಾತಿ ವರ್ಗೀಕರಣಕ್ಕೆ ಅನುಸರಿಸಿದ ಕ್ರಮಗಳೇನು ?

ಆಯೋಗದ ಪರ ಪ್ರೊ.ರವಿವರ್ಮಕುಮಾರ್ ವಾದ

ಈ ಹಿಂದಿನ ಸರ್ವೆಗಳ ಮಾಹಿತಿ ಆಧರಿಸಿ 1561 ಜಾತಿ ಗುರುತಿಸಿದೆ. ಆಯೋಗದ ಸರ್ವೆಯ ಅನುಕೂಲಕ್ಕಾಗಿ 1561 ಜಾತಿ ಗುರುತಿಸಲಾಗಿದೆ. ನಮ್ಮ ಜಾತಿ ಸೇರಿಸಿಲ್ಲವೆಂಬ ಕೆಲವರ ಮನವಿ ಮೇರೆಗೆ ಹೊಸದಾಗಿ ಸೇರಿಸಲಾಗಿದೆ. ಜನರು ಹೇಳುವ ಜಾತಿಗಳನ್ನು ನಮೂದಿಸಿಕೊಳ್ಳುತ್ತೇವೆ. 1918 ರಿಂದಲೂ ಸಾಮಾಜಿಕ, ಆರ್ಥಿಕ ಸರ್ವೆಗಳನ್ನು ನಡೆಸಲಾಗಿದೆ. ಬ್ರಿಟಿಷ್ ಕಾಲದಲ್ಲೂ ಮಿಲ್ಲರ್ ಸಮಿತಿ ವರದಿ ನೀಡಿದೆ. ಈಗ 2 ಕೋಟಿ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದಕ್ಕಾಗಿ ಮಾತ್ರವೇ ಮೀಟರ್ ರೀಡರ್ ಗಳನ್ನು ಬಳಸಿಕೊಳ್ಳಲಾಗಿದೆ. ಸ್ಟಿಕರ್ ಅಂಟಿಸಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಸರ್ವೆ ನಂತರವೇ ಈ ಸ್ಟಿಕರ್ ಭರ್ತಿ ಮಾಡಲಾಗುತ್ತದೆ. ದೇಶದಲ್ಲೇ ಮೊದಲಿಗೆ ಹೌಸ್ ಲಿಸ್ಟಿಂಗ್ ಮಾಡಲಾಗಿದೆ ಎಂದು ಹೇಳಿದರು.

ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆ

ಆಧಾರ್ ನಂಬರ್ ಗಳನ್ನು ಪಡೆಯಲು ಕಾರಣವೇನು ? ಸ್ಟಿಕ್ಕರ್ ಗಳನ್ನು ಅಂಟಿಸಿ ಅದನ್ನು ತೆಗೆಯದಂತೆ ಸೂಚಿಸಲು ನಿಮಗಿರುವ ಅಧಿಕಾರವೇನು ?

ಆಯೋಗದ ಪರ ರವಿವರ್ಮಕುಮಾರ್ ವಾದ

ಕೇವಲ ಗುರುತಿಗಾಗಿ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಬೇರೆ ರಾಜ್ಯದವರನ್ನು ಪರಿಗಣಿಸದಿರಲು ಆಧಾರ್ ಪಡೆಯಲಾಗುತ್ತಿದೆ. ಸ್ಟಿಕ್ಕರ್ ತೆಗೆಯಬಾರದೆಂಬ ಒತ್ತಾಯವಿಲ್ಲ. ಮನವಿಯಷ್ಟೇ ಮಾಡಿದ್ದೇವೆ. 60 ಪ್ರಶ್ನೆಗೆ ಉತ್ತರಿಸುವಂತೆ ಒತ್ತಾಯ ಮಾಡುವುದಿಲ್ಲ.

ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆ

ಮಾಹಿತಿ ನೀಡುವುದು ಬಿಡುವುದು ಜನರ ಆಯ್ಕೆಯೆಂದು ತಿಳಿಸಿದ್ದೀರಾ ? ಈಗ ಮಾಡಿರುವ1 ಲಕ್ಷ 60 ಸಾವಿರ ಜನರ ಸರ್ವೆ ವೇಳೆ ಈ ಆಯ್ಕೆಯ ಹಕ್ಕಿನ ಬಗ್ಗೆ ಮಾಹಿತಿ ನೀಡಿದ್ದೀರಾ ? ಕೈಪಿಡಿಯಲ್ಲಿ ಸರ್ವೆ ನಿರಾಕರಿಸುವ ಈ ಆಯ್ಕೆಯನ್ನು ನೀಡಿಲ್ಲವಲ್ಲ ? ಪ್ರತಿ ಮನೆ ಸರ್ವೆ ಮಾಡಲೇಬೇಕೆಂದು ಕೈಪಿಡಿಯಲ್ಲಿದೆ. ಉತ್ತರ ನೀಡುವ ಕಡ್ಡಾಯವಿಲ್ಲವೆಂದು ಎಲ್ಲಿ ಹೇಳಿದ್ದೀರಾ ? ಸರ್ವೆಗೂ ಮೊದಲೇ ಸೂಕ್ತ ಸಮಾಲೋಚನೆ ಮಾಡಿಲ್ಲವೇಕೆ ?

ವಕೀಲ ಪ್ರೊ.ರವಿವರ್ಮಕುಮಾರ್ ವಾದ

ಮಾಹಿತಿ ನಿರಾಕರಿಸಿದ್ದಾರೆಂದು ಕಾಲಂ 10 ರಲ್ಲಿ ಬರೆಯಲು ಅವಕಾಶವಿದೆ. ನೀಡುವ ಉತ್ತರವನ್ನಷ್ಟೇ ಬರೆದುಕೊಳ್ಳಲು ಸೂಚಿಸಿದ್ದೇವೆ. ಸಮಾಲೋಚನೆ ನಡೆಸಿ ಜನರ ಮನವಿಗಳನ್ನು ಪರಿಗಣಿಸಲಾಗಿದೆ. ಸರ್ವೆ ಸಿದ್ದತೆಗೆ 20 ಕೋಟಿ 31 ಲಕ್ಷ ವೆಚ್ಚ ಮಾಡಿದ್ದೇವೆ. 350 ಕೋಟಿ ರೂ.ಗಳನ್ನು ಸರ್ವೆ ನಡೆಸುವವರ ಸಂಬಳಕ್ಕಾಗಿ ನೀಡಲಾಗುತ್ತಿದೆ. ಪ್ರತಿ ಮನೆಗೆ 100 ರೂ.ನಂತೆ ಸರ್ವೆ ಮಾಡುವವರಿಗೆ ನೀಡಲಾಗುತ್ತಿದೆ.

ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆ

ಸೈಬರ್ ಕ್ರೈಮ್ ಹೆಚ್ಚುತ್ತಿರುವ ವೇಳೆ ಆಧಾರ್ ನಂಬರ್ ಪಡೆಯುತ್ತಿದ್ದೀರಾ, ಖಾಸಗಿತನ ಉಲ್ಲಂಘನೆಯ ಭೀತಿ ಜನರಿಗಿರುತ್ತದೆ. ಆಧಾರ್ ನೊಂದಿಗೆ ಈ ಮಾಹಿತಿಯನ್ನೂ ಲಿಂಕ್ ಮಾಡುತ್ತಿದ್ದೀರಾ?

ಆಯೋಗದ ಪರ ರವಿವರ್ಮಕುಮಾರ್ ವಾದ –

ಆಧಾರ್ ನಂಬರ್ ಮಾಹಿತಿ 3ನೇ ವ್ಯಕ್ತಿಗೆ ದೊರಕದಂತೆ ವ್ಯವಸ್ಥೆ ಮಾಡಲಾಗಿದೆ. ಸಿಸ್ಟಮ್ ಗೆ ಹಾಕಿದ ಬಳಿಕ ಉಳಿದವರಿಗೆ ಸಿಗುವುದಿಲ್ಲ. ಹೀಗಾಗಿ ದುರುಪಯೋಗವಾಗುವ ಪ್ರಶ್ನೆಯಿಲ್ಲ.

ಹಿಂದುಳಿದ ವರ್ಗಗಳ ಒಕ್ಕೂಟದ ಪರ ಕೆ.ಎನ್.ಫಣೀಂದ್ರ ವಾದ

ಸುಪ್ರೀಂಕೋರ್ಟ್ ಕೂಡಾ ಹಿಂದುಳಿದ ವರ್ಗಗಳ ಸರ್ವೆಗೆ ಸೂಚಿಸಿದೆ. ರಾಜಕೀಯ ಮೀಸಲಾತಿಗೂ ಸರ್ವೆ ಅಗತ್ಯವೆಂದಿದೆ. ಯಾವುದಾದರೂ ಜಾತಿ ಅಸ್ತಿತ್ವದಲ್ಲಿಲ್ಲದಿದ್ದರೆ ಅದನ್ನು ನಮೂದಿಸುವುದಿಲ್ಲ.

ಆಯೋಗದ ಪರ ರವಿವರ್ಮಕುಮಾರ್ ವಾದ

ಜನಗಣತಿಗೂ, ಸಾಮಾಜಿಕ ಆರ್ಥಿಕ ಸರ್ವೆಗೂ ವ್ಯತ್ಯಾಸವಿದೆ.. ಜನಗಣತಿಗಿಂತ ಸರ್ವೆಯಲ್ಲಿ ವಿವರವಾದ ಮಾಹಿತಿಯನ್ನು ಪಡೆಯಲಾಗುತ್ತದೆ. ಸರ್ವೆಯಲ್ಲಿ ಸ್ವಯಂಪ್ರೇರಣೆಯಿಂದ ಉತ್ತರ ನೀಡಬಹುದು. ಜನಗಣತಿ ವೇಳೆ ವಿವರ ನೀಡುವುದು ಜನರಿಗೆ ಕಡ್ಡಾಯವಾಗಿದೆ. ಸರ್ವೆಯಲ್ಲಿ ಸಂಗ್ರಹಿಸುವ ದತ್ತಾಂಶ ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸಬಹುದು. ಜನಗಣತಿಯ ದತ್ತಾಂಶ ನ್ಯಾಯಾಂಗದ ಪರಾಮರ್ಶೆಗೆ ನೀಡಲಾಗುವುದಿಲ್ಲ ಎಂದು ಎಂದು ವಾದ ಮಂಡಿಸಿದ್ದಾರೆ.

ಅಂತಿಮವಾಗಿ ಸಮಯಾವಕಾಶದ ಕೊರತೆಯಿಂದಾಗಿ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ನಾಳೆ ವಾದಮಂಡನೆ ಅಂತ್ಯಗೊಳ್ಳಲಿದ್ದು, ಸರ್ವೆಗೆ ತಡೆ ನೀಡಬೇಕೇ ಬೇಡವೇ ಎಂಬುದನ್ನು ಹೈಕೋರ್ಟ್ ತೀರ್ಮಾನಿಸಲಿದೆ. ಹೀಗಾಗಿ ಕೋರ್ಟ್ ಆದೇಶ ತೀವ್ರ ಕುತೂಹಲ ಮೂಡಿಸಿದೆ.