AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕಾನೂನು ಅನುಸರಿಸಲೇಬೇಕು; ಎಲಾನ್ ಮಸ್ಕ್ ಒಡೆತನದ ಎಕ್ಸ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಮುಖಭಂಗ

ಕರ್ನಾಟಕ ಹೈಕೋರ್ಟ್ ಎಕ್ಸ್ ಕಾರ್ಪೋರೇಷನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಸಾಮಾಜಿಕ ಮಾಧ್ಯಮವನ್ನು ಅರಾಜಕ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಬಿಡಲಾಗುವುದಿಲ್ಲ, ಸಾಮಾಜಿಕ ಮಾಧ್ಯಮಗಳ ಮೇಲೂ ನಿಯಂತ್ರಣ ಹೇರುವುದು ಇಂದಿನ ಕಾಲದ ಅಗತ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಎಕ್ಸ್ ಭಾರತ ದೇಶದ ಕಾನೂನುಗಳನ್ನು ಪಾಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ. ಆರ್ಟಿಕಲ್ 19ರ ಅಡಿಯಲ್ಲಿ ಸ್ವಾತಂತ್ರ್ಯದ ಸಾಂವಿಧಾನಿಕ ರಕ್ಷಣೆ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆ, ವಿದೇಶಿ ಸಂಸ್ಥೆಗಳಿಗೆ ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಎಕ್ಸ್​ಗೆ ಹೈಕೋರ್ಟ್​ನಲ್ಲಿ ಭಾರೀ ಹಿನ್ನಡೆಯಾಗಿದೆ.

ಭಾರತದ ಕಾನೂನು ಅನುಸರಿಸಲೇಬೇಕು; ಎಲಾನ್ ಮಸ್ಕ್ ಒಡೆತನದ ಎಕ್ಸ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಮುಖಭಂಗ
X Office
ಸುಷ್ಮಾ ಚಕ್ರೆ
|

Updated on: Sep 24, 2025 | 8:24 PM

Share

ಬೆಂಗಳೂರು, ಸೆಪ್ಟೆಂಬರ್ 24: ಎಲಾನ್ ಮಸ್ಕ್ ಒಡೆತನದ ಎಕ್ಸ್​ನಲ್ಲಿನ (X Corp) ಪೋಸ್ಟ್​ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿ ಆದೇಶಗಳನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಎಕ್ಸ್ ಸಂಸ್ಥೆ ಕರ್ನಾಟಕ ಹೈಕೋರ್ಟ್​ಗೆ (Karnataka High Court) ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಇಂದು ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿದೆ. ಎಕ್ಸ್ ಪೋಸ್ಟ್​ಗಳನ್ನು ನಿರ್ಬಂಧಿಸುವ ಆದೇಶ ನೀಡುವ ಕೇಂದ್ರ ಸರ್ಕಾರದ ಸೆನ್ಸಾರ್​ ಶಿಪ್ ಪೋರ್ಟಲ್ ಆಗಿರುವ ಸಹಯೋಗ್ ನಮ್ಮ ವಿರುದ್ಧ ಪೂರ್ವಗ್ರಹ ಪೀಡಿತವಾಗಿ ಕ್ರಮ ಕೈಗೊಳ್ಳದಂತೆ ತಡೆಯಬೇಕೆಂದು ಎಕ್ಸ್ ಕರ್ನಾಟಕ ಹೈಕೋರ್ಟ್​ಗೆ ಮನವಿ ಮಾಡಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್​ ಎಕ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಎಕ್ಸ್​ ಸಂಸ್ಥೆಗೆ ಭಾರೀ ಹಿನ್ನಡೆಯಾಗಿದೆ. ತನ್ನ ಆದೇಶದಲ್ಲಿ ಕರ್ನಾಟಕ ಹೈಕೋರ್ಟ್ ಸಾಮಾಜಿಕ ಜಾಲತಾಣದ ವಿರುದ್ಧ ಅಸಮಾಧಾನ ಹೊರಹಾಕಿದೆ. ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಹೇರುವುದು ಇಂದಿನ ಕಾಲದ ಅಗತ್ಯವಾಗಿದೆ. ಮೇಲ್ವಿಚಾರಣೆಯಿಲ್ಲದೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ಹೊಸ ಉಪಜಾತಿಗಳ ಸೃಷ್ಟಿ: ಸರ್ಕಾರದ ಜಾತಿ ಜನಗಣತಿ ರದ್ದುಪಡಿಸುವಂತೆ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆ

“ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದಲ್ಲಿ ಅನಿಯಂತ್ರಿತವಾಗಿ ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ. ದೇಶದಲ್ಲಿ ಕಾರ್ಯನಿರ್ವಹಿಸಲು ಬಯಸುವ ಪ್ರತಿಯೊಂದು ಕಂಪನಿಯು ಇದನ್ನು ತಿಳಿದುಕೊಳ್ಳಬೇಕು” ಎಂದು ಕರ್ನಾಟಕ ಹೈಕೋರ್ಟ್ ಒತ್ತಿ ಹೇಳಿದೆ.

ಅಮೆರಿಕ ಮೂಲದ ಸಾಮಾಜಿಕ ಜಾಲತಾಣವಾದ X ಭಾರತ ದೇಶದ ಕಾನೂನುಗಳನ್ನು ಪಾಲಿಸಬೇಕು. ಆರ್ಟಿಕಲ್ 19ರ ಅಡಿಯಲ್ಲಿ ಸ್ವಾತಂತ್ರ್ಯದ ಸಾಂವಿಧಾನಿಕ ರಕ್ಷಣೆ ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದೆಯೇ ವಿನಃ ವಿದೇಶಿ ಸಂಸ್ಥೆಗಳಿಗೆ ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ