ಕಾವೇರಿ ನದಿ ನೀರು ವಿವಾದ: CWRC ಆದೇಶ ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಹಿನ್ನಡೆ
CWMA on Cauvery Water Dispute: ಮಳೆ ಕೊರತೆಯ ನಡುವೆ ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWMA ಕರ್ನಾಟಕಕ್ಕೆ ಆದೇಶಿಸಿದ್ದು, ಇದು ಕರ್ನಾಟಕದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಕನ್ನಡ ಪರ ಸಂಘಟನೆಗಳು, ರೈತರು ಪ್ರತಿಭಟನೆಗಿಳಿದಿದ್ದಾರೆ. ಇದರ ಮಧ್ಯೆ ಸಿಡಬ್ಲ್ಯುಎಂಎ ತುರ್ತು ಸಭೆ ನಡೆಸಿದ್ದು, ಸಿಡಬ್ಲ್ಯುಆರ್ಸಿ ಆದೇಶ ಎತ್ತಿಹಿಡಿದಿದೆ.

ಮುಖ್ಯಾಂಶಗಳು
- ಕಾವೇರಿ ಜಲ ವಿವಾದ:CWRC ಆದೇಶ ಎತ್ತಿ ಹಿಡಿದ CWMA
- ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯುಎಂಎ ಆದೇಶ
- ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWMA ನಿರ್ದೇಶನ
ನವದೆಹಲಿ, (ಜುಲೈ 30): ಮಳೆ (Rain) ಕೊರತೆಯ ನಡುವೆ ತಮಿಳುನಾಡಿಗೆ (Tamil Nadu) 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ (Karnataka) ಆದೇಶಿಸಿದ್ದು, ಇದಕ್ಕೆ ಕರ್ನಾಟಕ ಮೇಲ್ನನವಿ ಹೋಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) , CWRC ಆದೇಶವನ್ನು ಎತ್ತಿ ಹಿಡಿದಿದ್ದು, 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶಿಸಿದೆ. ಇದರಿಂದ ಕರ್ನಾಟಕದಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.
ಕರ್ನಾಟಕದ ವಾದ ಹೇಗಿತ್ತು?
ದೆಹಲಿಯಲ್ಲಿಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ವಾದ ಮಂಡಿಸುತ್ತಿದ್ದು, ಕರ್ನಾಟಕದ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇತರೆ ಅಧಿಕಾರಿಗಳು ಪ್ರಬಲ ವಾದ ಮಂಡಿಸಿದ್ದಾರೆ.
ನೈಋತ್ಯ ಮುಂಗಾರು ಮಳೆಯ ಕೊರತೆ
ಸಿಡಬ್ಲ್ಯೂಎಂಎ (CWMA) ಅಧ್ಯಕ್ಷ ಎಸ್. ಕೆ. ಹಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕವು ಸಿಡಬ್ಲ್ಯೂಆರ್‌ಎ (CWRA) ಆದೇಶವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿತು. 2026ರ ಜುಲೈ 29ರ ವೇಳೆಗೆ ಕರ್ನಾಟಕದ ಜಲಾಶಯಗಳಲ್ಲಿ ಸುಮಾರು 52 ಟಿಎಂಸಿ ನೀರು ಸಂಗ್ರಹವಿದ್ದು, ತಮಿಳುನಾಡಿನ ಮೂರು ಜಲಾಶಯಗಳಲ್ಲಿ ಸುಮಾರು 43 ಟಿಎಂಸಿ ನೀರು ಸಂಗ್ರಹವಾಗಿದೆ. 2026ರ ಜೂನ್ 1ರಂದು (ಜಲ ವರ್ಷಾರಂಭದ ದಿನ) ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ 23.663 ಟಿಎಂಸಿ ನೀರು ಸಂಗ್ರಹವಿದ್ದರೆ, ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ 47.850 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಸೂಪರ್ ಎಲ್ ನಿನೋ ಪರಿಣಾಮದಿಂದ ನೈಋತ್ಯ ಮುಂಗಾರು ಮಳೆಯ ಕೊರತೆ ಉಂಟಾಗಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ 2026ರ ಜೂನ್ 1ರಿಂದ ಜುಲೈ 29ರವರೆಗೆ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಿಗೆ ಹರಿದು ಬಂದ ನೀರಿನ ಪ್ರಮಾಣ ಕೇವಲ 38.736 ಟಿಎಂಸಿಯಾಗಿದ್ದು, ಇದು ದೀರ್ಘಾವಧಿಯ ಸರಾಸರಿ ಒಳಹರಿವು 112.757 ಟಿಎಂಸಿಗೆ ಹೋಲಿಸಿದರೆ 65.65 ಶೇಕಡಾ ಕಡಿಮೆಯಾಗಿದೆ.
ನೀರಾವರಿ ಉದ್ದೇಶಕ್ಕಾಗಿ ನೀರನ್ನು ಬಿಡುಗಡೆ ಮಾಡಿಲ್ಲ
ಈ ರೀತಿಯ ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕ ಸರ್ಕಾರವು ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಉದ್ದೇಶಕ್ಕಾಗಿ ಯಾವುದೇ ನೀರನ್ನು ಬಿಡುಗಡೆ ಮಾಡಿಲ್ಲ. ಸಾಮಾನ್ಯ ಜಲ ವರ್ಷದಲ್ಲಿ, ಅಂತರರಾಜ್ಯ ಗಡಿ ಪ್ರದೇಶವಾದ ಬಿಳಿಗುಂಡ್ಲುವಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಕ್ರಮವಾಗಿ 9.19 ಟಿಎಂಸಿ ಮತ್ತು 31.24 ಟಿಎಂಸಿ ನೀರಿನ ಹರಿವು ಖಚಿತಪಡಿಸಬೇಕಾಗುತ್ತದೆ. ಆದರೆ ಪ್ರಸ್ತುತ ಇರುವ ಬರ ಹಾಗೂ ನೀರಿನ ಕೊರತೆಯ ಪರಿಸ್ಥಿತಿಯನ್ನು ಪರಿಗಣಿಸಿ, ಸಿಡಬ್ಲ್ಯೂಆರ್‌ಎ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ.
ಇದನ್ನೂ ನೋಡಿ: ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಡಿಕೆ ಶಿವಕುಮಾರ್
ತಮಿಳುನಾಡು ಅಧಿಕಾರಿಗಳ ಪ್ರತಿವಾದ
ವರ್ಚುವಲ್ ಮೂಲಕ ಭಾಗಿಯಾಗಿರುವ ತಮಿಳುನಾಡು ಅಧಿಕಾರಿಗಳು, CWRC ಅತೀ ಕಡಿಮೆ ನೀರು ಬಿಡುವ ಆದೇಶ ಮಾಡಿದೆ. 3500 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು ಮಾಡಿದೆ. CWRC ಆದೇಶ ಬದಿಗಿರಿಸಿ ಹೆಚ್ಚುವರಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು. ಕರ್ನಾಟದ ಡ್ಯಾಂಗಳಿಗೆ ಒಟ್ಟು ಒಳಹರಿವು 36 ಟಿಎಂಸಿಯಷ್ಟಿದೆ . ವಾಡಿಕೆ ಮಳೆಯಾಗಿದ್ದರೆ ತಮಿಳುನಾಡಿಗೆ ಇಷ್ಟು ಹೊತ್ತಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಸಂಕಷ್ಟ ಸೂತ್ರವನ್ನು ಕರ್ನಾಟಕ ಸರಿಯಾಗಿ ಪಾಲಿಸಿಲ್ಲ.ಸಂಕಷ್ಟ ಸೂತ್ರದ ಅನ್ವಯಕ್ಕಿಂತ ಕಡಿಮೆ ನೀರು ಹರಿಸಿದೆ. ಎರಡು ತಿಂಗಳಲ್ಲಿ ಬಿಲಿಗುಂಡ್ಲುದಲ್ಲಿ ಕೇವಲ 3.5ಟಿಎಂಸಿ ನೀರು ಮಾತ್ರ ಹರಿದಿದೆ. ಸಂಕಷ್ಟ ಸೂತ್ರ ಅನ್ವಯ 9.46 ಟಿಎಂಸಿ ಬಾಕಿ ಉಳಿಸಿಕೊಂಡಿದೆ ಎಂದು ಪ್ರತಿವಾದ ಮಂಡಿಸಿದರು. ಈ ವಾದ ಪ್ರತಿವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA), ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶವನ್ನು ಎತ್ತಿಹಿಡಿದಿದ್ದು, ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್‌ನಂತೆ ಒಟ್ಟು 4.5 ಟಿಎಂಸಿ ನೀರು ಹರಿಸುವಂತೆ ನಿರ್ದೇಶನ ನೀಡಿದೆ.
ರಾಜ್ಯಾದ್ಯಂತ ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಜನಸಾಮಾನ್ಯರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯ ನಡುವೆಯೂ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಕಾವೇರಿ ಆಘಾತ ಎದುರಾಗಿದೆ.
Published On - 4:20 pm, Thu, 30 July 26




