Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಿ ಅಡ್ಡೆಗಳ ಮೇಲೆ ಸಿಸಿಬಿ ದಾಳಿ, ಅಕ್ರಮವಾಗಿ ವಾಸವಿದ್ದ 38 ಜನರು ಪತ್ತೆ

ಸಿಸಿಬಿಯ 6 ಎಸಿಪಿಗಳು, 20 ಇನ್ಸ್ಪೆಕ್ಟರ್ಗಳು, 100ಕ್ಕೂ ಹೆಚ್ಚು ಕಾನ್ಸ್ಟೇಬಲ್ಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ. ಪತ್ತೆಯಾದ ವಿದೇಶಿಯರ ದಾಖಲಾತಿಗಳ ಪರಿಶೀಲನೆ ನಡೆಸಲಾಗಿದೆ.

ವಿದೇಶಿ ಅಡ್ಡೆಗಳ ಮೇಲೆ ಸಿಸಿಬಿ ದಾಳಿ, ಅಕ್ರಮವಾಗಿ ವಾಸವಿದ್ದ 38 ಜನರು ಪತ್ತೆ
ಸಿಸಿಬಿ ದಾಳಿ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Jul 15, 2021 | 11:39 AM

ಬೆಂಗಳೂರು: ಅಪರಾಧಗಳ ರಾಜಧಾನಿಯಾಗಿ ಮಾರ್ಪಾಡು ಆಗುತ್ತಿದೆಯಾ ಅನ್ನುವಷ್ಟು ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ದೃಢ ಸಂಕಲ್ಪ ತೊಟ್ಟಿರುವ ಬೆಂಗಳೂರು ಪೊಲೀಸರು ಕಳೆದ ವಾರ ಸಾವಿರಾರು ರೌಡಿಗಳನ್ನು ಕರೆದು, ಕಟ್ಟೆಚ್ಚರ ನೀಡಿ ಕಳಿಸಿದ್ದಾರೆ. ಅದಾದ ಮೇಲೆ ಪಿಂಚಣಿದಾರರ ಸ್ವರ್ಗವೆಂಬ ಹೆಗ್ಗಳಿಕೆಯ ಬೆಂಗಳೂರಿಗೆ ಪಾತಕ ವಿದೇಶಿಗರು ಪೀಡೆಯಾಗಿ ಪರಿವರ್ತನೆಗೊಂಡಿದ್ದಾರೆ. ಹಾಗಾಗಿ ಇಂದು ಸಿಸಿಬಿ ಪೊಲೀಸರು ಫೀಲ್ಡಿಗೆ ಇಳಿದು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿಗರನ್ನು ವಿಚಾರಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ವಿದೇಶಿಯರ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಅನಧಿಕೃತವಾಗಿ, ವೀಸಾ ಅವಧಿ ಮೀರಿದ್ದರೂ ತಮ್ಮ ದೇಶಗಳಿಗೆ ಹಿಂತಿರುಗದೆ ಭಾರತದಲ್ಲೇ ವಾಸವಿರುವ ಹಿನ್ನೆಲೆಯಲ್ಲಿ ಅಂತಹ ವಿದೇಶಿ ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ.

ಇತ್ತೀಚೆಗೆ ಡ್ರಗ್ಸ್ ಪ್ರಕರಣಗಳಲ್ಲಿ ಹೆಚ್ಚು ವಿದೇಶಿ ಮಂದಿ ಭಾಗಿ ಹಿನ್ನೆಲೆಯಲ್ಲಿ ಸಿಸಿಬಿಯ 6 ಎಸಿಪಿಗಳು, 20 ಇನ್ಸ್ಪೆಕ್ಟರ್ಗಳು, 100ಕ್ಕೂ ಹೆಚ್ಚು ಕಾನ್ಸ್ಟೇಬಲ್ಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದಲೇ ಸಂಪಂಗಿಹಳ್ಳಿ, ಕೆಆರ್ ಪುರಂ, ರಾಮಮೂರ್ತಿನಗರ, ಬಾಣಸವಾಡಿ, ವೈಟ್ ಫೀಲ್ಡ್ ಹಾಗೂ ಕಮ್ಮನ ಹಳ್ಳಿ ಸೇರಿದಂತೆ ಹಲವು ಕಡೆ ದಾಳಿ ನಡೆದಿದೆ. ಪತ್ತೆಯಾದ ವಿದೇಶಿಯರ ದಾಖಲಾತಿಗಳ ಪರಿಶೀಲನೆ ನಡೆಸಲಾಗಿದೆ. ಸಿಸಿಬಿ ಅಧಿಕಾರಿಗಳು ಒಟ್ಟು 60 ಮನೆಗಳ ಮೇಲೆ ದಾಳಿ ಮಾಡಿದ್ದು ಈವರೆಗೂ ಅಕ್ರಮವಾಗಿ ವಾಸವಿದ್ದ 38 ಜನರು ಪತ್ತೆಯಾಗಿದ್ದಾರೆ. ಇನ್ನು ದಾಳಿ, ಪರಿಶೀಲನೆ ವೇಳೆ 25 ಗ್ರಾಂ ಗಾಂಜಾ ಪತ್ತೆಯಾಗಿದೆ. ನೈಜಿರಿಯನ್ ಮೂಲದ ವ್ಯಕ್ತಿ ಬಳಿ 90 ಎಕ್ಸ್ ಟಸಿ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ನೈಜಿರಿಯಾ ಪ್ರಜೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

CCB Raid

ಎಕ್ಸ್ ಟಸಿ ಮಾತ್ರೆಗಳು

ಇನ್ನು ಈ ಬಗ್ಗೆ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ನಗರದಲ್ಲಿ ವಿದೇಶಿಗರು ಡ್ರಗ್ ಕೇಸ್ನಲ್ಲಿ ಭಾಗಿಯಾಗುತ್ತಿರುವ ಬಗ್ಗೆ ವರದಿಯಾಗಿತ್ತು. ಅದೇ ರೀತಿ ವಿದೇಶಗರ ಮೇಲೆ ಡ್ರಗ್ ಪ್ರಕರಣ ದಾಖಲಾಗಿತ್ತು. ಜೊತೆಗೆ ಯಾವುದೇ ದಾಖಲೆಗಳಿಲ್ಲದೇ, ಅವಧಿ ಮೀರಿ ವಾಸದ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿತ್ತು. ಈ ಸಂಬಂಧ ಇಂದು ಆರು ಎಸಿಪಿಗಳ ನೇತೃತ್ವದಲ್ಲಿ 90 ಮನೆಗಳ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ 38 ಮಂದಿ ಪಾಸ್ ಪೋರ್ಟ್ ಇಲ್ಲದೇ ಹಾಗೂ ಅವಧಿ ಮೀರಿ ವಾಸ ಮಾಡುತ್ತಿರುವುದು ಪತ್ತೆಯಾಗಿದೆ.

ಪಾಸ್ ಪೋರ್ಟ್ ಇಲ್ಲದೇ ವಾಸ ಮಾಡುತ್ತಿರುವವರ ವಿರುದ್ಧ ಫಾರಿನರ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗುವುದು. ವೀಸಾ ಅವಧಿ ಮುಗಿದಿದ್ದರೂ ವಾಸ ವಿರುವವರ ವಿಚಾರವಾಗಿ ದಾಖಲಾತಿ ನವೀಕರಣ ಬಗ್ಗೆ ವಿದೇಶಿ ಪ್ರಾದೇಶಿಕ ನೊಂದಣಿ ಕೇಂದ್ರ(ಎಫ್.ಆರ್.ಆರ್.ಓ)ದಲ್ಲಿ ಪ್ರರಿಶೀಲನೆ ಮಾಡಲಾಗುವುದು. ದಾಳಿ ವೇಳೆ ಎರಡು ಮನೆಯಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ. ಒಂದು ಮನೆಯಲ್ಲಿ 25 ಗ್ರಾಂ ಗಾಂಜಾ ಪತ್ತೆಯಾಗಿದೆ‌. ಮತ್ತೊಂದು ಮನೆಯಲ್ಲಿ 90 ಎಕ್ಸ್ ಟಸಿ ಮಾತ್ರೆಗಳು ಪತ್ತೆಯಾಗಿವೆ. ಎಕ್ಸ್ ಟಸಿ ಮಾತ್ರೆಗಳು ಪತ್ತೆಯಾದ ವ್ಯಕ್ತಿ ವಿರುದ್ಧ ಈ ಹಿಂದೆ ಎರಡು ಬಾರಿ ಡ್ರಗ್ ಕೇಸ್ ದಾಖಲಾಗಿದ್ದವು. ದಾಳಿ ವೇಳೆಯೂ ಈಗ ಮತ್ತೆ ಆತನ ಬಳಿ ಮಾದಕ ವಸ್ತು ಪತ್ತೆ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು‌.

ಸದ್ಯ ಇನ್ನು ಕೆಲವು ಕಡೆ ಪರಿಶೀಲನೆ ನಡೆಯುತ್ತಿದೆ. ಮಾದಕ ವಸ್ತುಗಳು ಪತ್ತೆಯಾದವರ ವಿರುದ್ಧ ಎನ್ ಡಿಪಿಎಸ್ ಆ್ಯಕ್ಟ್ ಅಡಿ ಕ್ರಮಕೈಗೊಳ್ಳಲಾಗುವುದು. ಉಳಿದಂತೆ ಅಕ್ರಮವಾಗಿ ನೆಲಸಿರುವವರನ್ನು ಬಂಧಿಸಲಾಗಿದೆ. ನ್ಯಾಯಾಲಯದ ಪ್ರಕ್ರಿಯೆ ಮುಗಿಯುವವರೆಗೂ ಅಕ್ರಮ ವಾಸಿಗರು ಇಲ್ಲೇ ಇರಬೇಕಾಗುತ್ತದೆ. ನಂತರ ಡಿಪೊರ್ಟೇಷನ್ ಪ್ರಕ್ರಿಯೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಸಿಸಿಬಿ ವಿಚಾರಣೆ ಬಳಿಕ ರಾಮುಲು ಪಿಎ ರಾಜು ಫೇಸ್​ಬುಕ್​ನಲ್ಲಿ ಸ್ಪಷ್ಟೀಕರಣ: ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ದೂರು ಸಲ್ಲಿಸಿದ್ದಾರೆ

Published On - 11:05 am, Thu, 15 July 21