
ದೆಹಲಿ: ಉತ್ತರಕರ್ನಾಟಕ ಜನರ ಬಹುದಿನಗಳ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮಹದಾಯಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಬಳಕೆ ಮಾಡಲು ಒಪ್ಪಿಗೆ ನೀಡಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರ ಬಹುದಿನ ಬೇಡಿಕೆ ಈಡೇರೋ ಸಮಯ ಬಂದಿದೆ.
ಒಂದಲ್ಲ.. ಎರಡಲ್ಲ.. ಮಹದಾಯಿ ವಿವಾದ ದಶಕದ ಹಿಂದಿನದ್ದು. ಈ ವಿವಾದದ ಸಿಹಿ ಸುದ್ದಿಗಾಗಿ ರೈತರು ದೊಡ್ಡ ಮಟ್ಟದ ಹೋರಾಟ ನಡೆಸಿದ್ರು. ರಾಜಕಾರಣಿಗಳ ಪರಿಶ್ರಮ ನಿರಂತರವಾಗಿತ್ತು. ಉತ್ತರ ಕರ್ನಾಟಕದ ಜನ್ರೆಲ್ಲಾ ಮಹದಾಯಿ ಖುಷಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ರು. ಆದ್ರೀಗ ಅವರಿಗೆಲ್ಲಾ ಸಿಹಿ ಸುದ್ದಿ ಸಿಕ್ಕಿದೆ. ಯಾವ ಯೋಜನೆಗಾಗಿ ಕಾಯುತ್ತಿದ್ರೋ ಆ ಯೋಜನೆ ನಮ್ಮ ಪರವಾಗಿದೆ. ಯಾಕಂದ್ರೆ, ಕೇಂದ್ರ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ.
ಮಹದಾಯಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ:
ಯೆಸ್.. ಕೇಂದ್ರ ಸರ್ಕಾರ ಮಹದಾಯಿ ಹೋರಾಟಗಾರರು ಮತ್ತು ರಾಜ್ಯ ರಾಜಕಾರಣಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ. ದಶಕದಿಂದ ವಿವಾದದ ಗೂಡಾಗಿದ್ದ ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ, ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ನ್ಯಾಯಾಧಿಕರಣ ಹಂಚಿದ್ದ ನೀರಿನ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಅದನ್ನು ಡಿಟೇಲ್ ಆಗಿ ಹೇಳೋಕೂ ಮುಂಚೆ ಈ ಹಿಂದೆ ನ್ಯಾಯಾಧಿಕರಣ ನೀಡಿದ್ದ ತೀರ್ಪು ಏನು ಅನ್ನೋದನ್ನು ತಿಳಿಯಿರಿ.
ನ್ಯಾಯಾಧಿಕರಣದ ತೀರ್ಪು:
ಇನ್ನು, 2018ರ ಆಗಸ್ಟ್ 14ರಂದು ನೀರು ಹರಿಸುವ ವಿಚಾರವಾಗಿ ನ್ಯಾಯಾಧಿಕರಣದಿಂದ ತೀರ್ಪು ಹೊರಬಿದ್ದಿತ್ತು.. ಈ ತೀರ್ಪನ್ನು ಮರುಪರಿಶೀಲಿಸುವಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳು 2019ರ ಜುಲೈ 25ರಂದು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಮೇಲ್ಮನವಿ ಸಲ್ಲಿಕೆ ಆಗುತ್ತಿದ್ದಂತೆ ಅಧಿಸೂಚನೆ ಹೊರಡಿಸುವ ನಿರ್ಣಯದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿತ್ತು.
ಆದ್ರೆ, ರಾಜ್ಯ ಸರ್ಕಾರ ಅಧಿಸೂಚನೆಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇತ್ತು. ಮೂರೂ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಇದೇ ತಿಂಗಳ 20ರಂದು ನಡೆಸಿದ್ದ ಸುಪ್ರೀಂ ಕೋರ್ಟ್, ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ತನ್ನ ನಿರ್ಧಾರ ಪ್ರಕಟಿಸಿದೆ.
ಕೇಂದ್ರ ಸರ್ಕಾರದ ‘ಸಿಹಿ’:
ಕಳಸಾ-ಬಂಡೂರಿ ಯೋಜನೆಗೆ ನೀರು ಹರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 13.42 ಟಿಎಂಸಿ ನೀರು ಬಳಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಜತೆಗೆ, ಕಳಸಾ ಯೋಜನೆಗೆ 1.72 ಟಿಎಂಸಿ ನೀರು ಹರಿಸಲು ಅಧಿಸೂಚನೆ ಹೊರಡಿಸಿದೆ. ಅಲ್ದೆ, ಬಂಡೂರಿ ಯೋಜನೆಗೆ 2.18 ಟಿಎಂಸಿ ನೀರು ಬಳಕೆಗೆ ಒಪ್ಪಿಕೊಂಡಿರೋ ಕೇಂದ್ರ ಸರ್ಕಾರ, ಕುಡಿಯುವ ನೀರಿಗಾಗಿ 3.98 ಟಿಎಂಸಿ ನೀರು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಇದಿಷ್ಟೇ ಅಲ್ದ, ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರದ ಮಾದರಿಯಲ್ಲಿ ಮಹದಾಯಿನದಿ ನೀರು ನಿಯಂತ್ರಣ ಪ್ರಾಧಿಕಾರ ರಚನೆಯಾಗಬೇಕು. ಈ ಪ್ರಾಧಿಕಾರ, ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸಲಿದೆ. ಪ್ರಾಧಿಕಾರದ ಸದಸ್ಯರಾಗಿ ಕೇಂದ್ರ ಮತ್ತು ಕಣಿವೆ ರಾಜ್ಯಗಳ ಅಧಿಕಾರಿಗಳನ್ನು ನೇಮಕ ಮಾಡ್ಬೇಕು. ಅಲ್ದೆ, ಪರಿಸರ ಇಲಾಖೆ ಅನುಮತಿ ಪಡೆದು, ಕಳಸಾ ಬಂಡೂರಿ ತಿರುವು ಯೋಜನೆ ಕಾಮಗಾರಿ ಆರಂಭಿಸಬೇಕು ಅಂತಲೂ ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ಹೊರಡಿಸಿದೆ.
ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ನೋಟಿಫಿಕೇಷನ್:
ಇನ್ನು, ಮೊನ್ನೆ ರಾಜ್ಯದ ಸಚಿವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ರನ್ನು ಭೇಟಿಯಾಗಿದ್ರು. ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹದಾಯಿ ವಿಚಾರವಾಗಿ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ರು. ಕೊನೆಗೆ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸೆಂಟ್ರಲ್ ಗವರ್ನಮೆಂಟ್, ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಇನ್ನು, ಈ ಬಗ್ಗೆ ಮಾತನಾಡಿರೋ ಸಚಿವ ಜಗದೀಶ್ ಶೆಟ್ಟರ್, ಅಧಿಸೂಚನೆ ಹೊರಡಿಸಿದ್ದು ಬಹಳ ಸಂತೋಷವಾಗಿದೆ. ಅಲ್ದೆ, ಗೋವಾ ರಾಜ್ಯದವರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ಬೇಕಿದೆ ಅಂದ್ರು.
ಇನ್ನು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ, ಕೇಂದ್ರದ ಈ ನಿರ್ಧಾರದಿಂದ ಖುಷಿ ಆಗಿದ್ದಾರೆ. ಒಟ್ನಲ್ಲಿ, ಸಿಎಂ ಬಿಎಸ್ವೈ ಜನ್ಮ ದಿನದಂದೇ ಕೇಂದ್ರ ಸರ್ಕಾರ ಸಿಹಿ ಸುದ್ದಿ ಕೊಟ್ಟಿದ್ದು, ಉತ್ತರ ಕರ್ನಾಟಕ ಭಾಗದ ರೈತರು ಮತ್ತು ಹೋರಾಟಗಾರರು ಖುಷಿ ತಂದಿದೆ.
Published On - 7:27 am, Fri, 28 February 20