ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಮೂವರಲ್ಲ, ಮೂವತ್ನಾಲ್ಕು: ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಗಂಭೀರ ಆರೋಪ

|

Updated on: May 03, 2021 | 5:26 PM

Chamarajanagar Medical Oxygen: ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವರೂ ಆಗಿರುವ ಸಿ.ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.

ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಮೂವರಲ್ಲ, ಮೂವತ್ನಾಲ್ಕು: ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಗಂಭೀರ ಆರೋಪ
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ
Follow us on

ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ನಿಧನರಾದವರು 24 ಜನರಲ್ಲ, ಬದಲಿಗೆ 34 ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಮಂತ್ರಿ ಡಾ.ಸುಧಾಕರ್ ಮೂವರು ಮಾತ್ರ ಸತ್ತಿದ್ದಾರೆಂದು ಸುಳ್ಳು ಹೇಳಿದ್ದಾರೆ ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಅಧಿಕಾರಿಗಳು ಸಚಿವರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಘೋರ ದುರಂತದ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು. 24 ಜನರನ್ನು ಹೊರತುಪಡಿಸಿ ಉಳಿದ 10 ಜನರ ಹೆಸರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಪಟ್ಟಿಯಲ್ಲಿ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವರೂ ಆಗಿರುವ ಸಿ.ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.

ಮೂವರಷ್ಟೇ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ
‘ಇಂದು ಸಂಭವಿಸಿದ ಘಟನೆ ಬಹಳ ದುಃಖಕರವಾದುದು. ಮೃತರ ಕುಟುಂಬಗಳ ಜೊತೆ ರಾಜ್ಯ ಸರ್ಕಾರ ಇದೆ. ಈಗಾಗಲೇ ಸಿಎಂ ತನಿಖೆಗೆ ಆದೇಶ ನೀಡಿದ್ದಾರೆ. ನ್ಯಾಯಸಮ್ಮತ ತನಿಖೆ ಆಗಲಿ.  ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 123 ಸೋಂಕಿತರು ದಾಖಲಾಗಿದ್ದಾರೆ. ವೆಂಟಿಲೇಟರ್‌ನಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕೊವಿಡ್ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.  ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ ಮೂವರು ಸಾವನ್ನಪ್ಪಿದ್ದಾರೆ. ಮುಂಜಾನೆ 3 ಗಂಟೆಯಿಂದ 7 ಗಂಟೆಯವರೆಗೆ 7 ಜನ ಸಾವುನ್ನಪ್ಪಿದ್ದು, 24 ಗಂಟೆಯಲ್ಲಿ 23 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 24 ಸೋಂಕಿತರು ಮೃತಪಟ್ಟಿದ್ದಾರೆ. ನಮಗೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ ನೀಡಿದರು.

ಇದೇ ವೇಳೆ ಮಾತನಾಡಿದ ಚಾಮರಾಜನಗರ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಆಸ್ಪತ್ರೆಗೆ ಬಂದ ಪ್ರತಿಯೊಬ್ಬ ವ್ಯಕ್ತಿಯೂ ಗುಣಮುಖರಾಗಿ ಹೋಗಬೇಕು. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದರೂ ದುರಂತ ನಡೆದಿದೆ. ದುರಂತ ಸಂಭವಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಘಟನೆ ಬಗ್ಗೆ ತನಿಖೆ ನಡೆಸಿ 3 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ಮನಕಲಕುವ ದೃಶ್ಯಗಳು ಕಂಡು ಬಂದಿವೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಸಂಜೆ ಆಕ್ಸಿಜನ್ ಖಾಲಿ ಆಗಿದ್ರಿಂದ 24 ಗಂಟೆಯಲ್ಲಿ 22 ಕೊವಿಡ್, ನಾನ್ ಕೊವಿಡ್ ರೋಗಿಗಳು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ.

ಪ್ರತಿಯೊಬ್ಬರ ಸಾವು ನಮಗೆ ದೊಡ್ಡ ನಷ್ಟ. ಅವರವರ ಕುಟುಂಬಕ್ಕೂ ಇದು ದೊಡ್ಡ ಆಘಾತ. ಆಮ್ಲಜನಕ ಕೊರತೆಯಿಂದ ಈ ಸಾವು ಅಗಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆಮ್ಲಜನಕ ಯಾವ ಯಾವ ಪ್ರಮಾಣದಲ್ಲಿ ಬಂದಿದೆ ಮಾಹಿತಿ ಇದೆ. ಎಲ್ಲಾ ಸಾವುಗಳು ಅಮ್ಲಜನಕ ಕೊರತೆಯಿಂದಲೇ ಸಂಭವಿಸಿದ್ದಲ್ಲ. ಕೊವಿಡ್ ನಲ್ಲೇ ಕೊನೆ ಹಂತದಲ್ಲಿ‌ ದಾಖಲಾಗಿದ್ದವರೂ ಇದ್ದಾರೆ. ಈ ಬಗ್ಗೆ ತನಿಖೆ ಅಗಬೇಕು. 24 ರಲ್ಲಿ ಅಮ್ಲಜನಕದಿಂದ ಎಷ್ಟು ಸಾವು ಎಂಬುದನ್ನು ಪತ್ತೆ ಮಾಡಬೇಕು. 3 ದಿನಗಳಲ್ಲಿ ವಿಚಾರಣೆ ಮಾಡಲು ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ಸರ್ಕಾರ ನಿಯೋಜಿಸಿದೆ. 3 ದಿನದಲ್ಲಿ ಅವರು ತನಿಖಾ ವರದಿ ಸಲ್ಲಿಸಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: ಚಾಮರಾಜನಗರ ದುರ್ಘಟನೆಗೆ ರಾಜ್ಯ ಸರ್ಕಾರವೇ ಹೊಣೆ, ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ; ಸಿದ್ದರಾಮಯ್ಯ

Chennai Super Kings: ಐಪಿಎಲ್ ಕದ ತಟ್ಟಿದ ಕೊರೊನಾ! ಚೆನ್ನೈ ತಂಡದ 3 ಸದಸ್ಯರಿಗೆ ಪಾಸಿಟಿವ್.. ಒಂದೇ ದಿನದಲ್ಲಿ 10 ಪ್ರಕರಣಗಳು

(Chamarajanagar MLA Puttarangashetty alleged not only 24 but 34 people died by lack of medical oxygen )