ಚಾಮರಾಜನಗರ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಿದ್ಧತೆ; ಯಡಬೆಟ್ಟದ ಬಳಿ ಗುಂಡಿ ನಿರ್ಮಾಣ
Chamarajnagar Death Incident: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ದುರ್ಘಟನೆ ನಡೆದ ಬೆನ್ನಲ್ಲೇ, ಇಲ್ಲಿನ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಚಾಮರಾಜನಗರ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತದಿಂದಲೇ ನೆರವೇರಿಸಲು ಸಿದ್ಧತೆ ಮಾಡಲಾಗಿದೆ. ಇದು ಭಾನುವಾರ ಮಧ್ಯರಾತ್ರಿ ಹೊತ್ತಿಗೆ ನಡೆದ ದುರಂತ. ಆಕ್ಸಿಜನ್ ಸಿಗದೆ ಕೊರೊನಾ ರೋಗಿಗಳಷ್ಟೇ ಅಲ್ಲದೆ, ಬೇರೆ ಕೆಲವು ರೋಗಿಗಳೂ ಸೇರಿ 24 ಮಂದಿ ಸಾವನ್ನಪ್ಪಿದ್ದಾರೆ. ಆದರೆ ನಿಜಕ್ಕೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು ಮೂರೇ ಮಂದಿ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.
ಅದೇನೆ ಇದ್ದರು, ಒಂದು ರಾತ್ರಿಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದು ಸಹಜವಾಗಿಯೇ ಭಯಹುಟ್ಟಿಸಿದೆ. ಇದೀಗ ಇವರೆಲ್ಲರ ಅಂತ್ಯಸಂಸ್ಕಾರ ಚಾಮರಾಜನಗರದ ಜಿಲ್ಲಾಡಳಿತದ ವತಿಯಿಂದಲೇ ನಡೆಯಲಿದೆ. ಹೀಗಾಗಿ ಯಡಬೆಟ್ಟದ ಬಳಿ ಮೂರಡಿ ಆಳ, ಆರಡಿ ಅಗಲದ ಗುಂಡಿಯನ್ನು ಜೆಸಿಬಿಯಿಂದ ತೆಗೆಸಲಾಗಿದೆ. ಬೆಳಗ್ಗೆಯಿಂದಲೂ ಮೃತರ ಅಂತ್ಯಕ್ರಿಯೆನ್ನು ನಡೆಸಲಾಗುತ್ತಿದೆ.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ದುರ್ಘಟನೆ ನಡೆದ ಬೆನ್ನಲ್ಲೇ, ಇಲ್ಲಿನ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಹಾಗೇ ತನಿಖೆಗೂ ಆದೇಶ ನೀಡಿದ್ದಾರೆ. ಇನ್ನು ಮೂರು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಗಂಟೆಯಲ್ಲೇ 22 ರೋಗಿಗಳ ಸಾವು | ಮೃತ ಸಂಬಂಧಿಕರ ಆಕ್ರಂದನ