ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ರೆಸಾರ್ಟ್ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಷೇಧಿಸಿದ್ದರೂ, ಕದ್ದುಮುಚ್ಚಿ ಗೊರುಕಾನ ಆಡಳಿತ ಮಂಡಳಿ ರೆಸಾರ್ಟ್ ನಡೆಸುತ್ತಿದೆ. ಶನಿವಾರ ತಡರಾತ್ರಿ ಗೊರುಕಾನ ರೆಸಾರ್ಟ್ಗೆ ಬಂದಿದ್ದ ಪ್ರವಾಸಿಗರ ಕಾರು ಡಿಕ್ಕಿಯಾಗಿ ಬುಡಕಟ್ಟು ಸೋಲಿಗ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಗೊರುಕಾನ ರೆಸಾರ್ಟ್ಗೆ ತಡರಾತ್ರಿ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿಗರ ಕಾರು ಡಿಕ್ಕಿಯಾಗಿ ಯರಕನಗದ್ದೆ ಪೋಡು ನಿವಾಸಿ ನಂಜೇಗೌಡ(38) ಸಾವಿಗೀಡಾಗಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಕ್ಕೂ ಕ್ಯಾರೆ ಎನ್ನದೆ ರೆಸಾರ್ಟ್ ನಡೆಸುತ್ತಿರುವ ಗೊರುಕಾನ ಆಡಳಿತ ಮಂಡಳಿ ವಿರುದ್ಧ ಸೋಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಮಾಲೀಕತ್ವದಲ್ಲಿ ಪರಿಸರ ಶಿಕ್ಷಣ ಮತ್ತು ಆಯುರ್ವೇದ ಕೇಂದ್ರದ ಹೆಸರಿನಲ್ಲಿ ರೆಸಾರ್ಟ್ ನಡೆಯುತ್ತಿದೆ. ಭೂ ಪರಿವರ್ತನೆ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಭೂ ಪರಿವರ್ತನೆ ರದ್ದುಪಡಿಸಿ ಆದೇಶ ನೀಡಿತ್ತು.