
ಚಾಮರಾನಗರ, (ನವೆಂಬರ್ 04): ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಖಾಸಗಿ ವಾಕ್ ಮತ್ತು ಶ್ರವಣ ಶಾಲೆಯೊಂದರಲ್ಲಿ ವಿಶೇಷ ಚೇತನ ವಿದ್ಯಾರ್ಥಿನಿ ಮೇಲೆ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದ ಆಘಾತಕಾರಿ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಘಟನೆ ನಡೆದು 13 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಗೆ ಮಾತನಾಡಲು ಬರದಿದ್ದರಿಂದ ಇದನ್ನೇ ಆರೋಪಿ ಲಾಭವಾಗಿ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಕೊಳ್ಳೇಗಾಲದಲ್ಲಿ 2012-2013ನೇ ಸಾಲಿನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವೇಳೆ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ಕಳೆದ 1 ವಾರದ ಹಿಂದೆ ಶಾಲೆಯಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಭೆಯಲ್ಲಿ ಸಂತ್ರಸ್ತೆ ಈ ವಿಚಾರವನ್ನು ಬಿಚ್ಚಿಟ್ಟಿದ್ದಾಳೆ. ಬಳಿಕ ಸಂತ್ರಸ್ಥೆ ಕೊಟ್ಟ ಮಾಹಿತಿ ಮೇರೆಗೆ ಶಾಲೆಯ ಸಿಇಒ ದೂರು ನೀಡಿದ್ದು, ಇದೀಗ ಕೊಳ್ಳೇಗಾಲ ಪೊಲೀಸರು ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವೇಳೆ ಅಪ್ರಾಪ್ತ ವಯಸ್ಸನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ. ಆಕೆಯ ಹೇಳಿಕೆಯ ಆಧಾರದ ಮೇಲೆ, ಅಕ್ಟೋಬರ್ 30 ರಂದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಪ್ರಕರಣ ದಾಖಲಾಗಿದೆ. ಇನ್ನೂ ಆರೋಪಿಯನ್ನು ಬಂಧಿಸಲಾಗಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ತಿಳಿಸಿದ್ದಾರೆ.