ಚಾಮರಾಜನಗರ, ಆಗಸ್ಟ್ 25: ಚುಕ್ಕೆ ರೋಗ ಬಳಿಕ ಚಾಮರಾಜನಗರದಲ್ಲಿ (Chamarajanagar) ಮತ್ತೊಂದು ತೀರಾ ಅಪರೂಪದ ರೋಗ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ಕು ಮಂದಿಯಲ್ಲಿ ರೋಗ ಕಾಣಿಸಿಕೊಂಡಿದೆ. ಇದೀಗ ರೋಗ ಉಲ್ಬಣದಿಂದ ಕಾಲು, ಕೈ ಸ್ವಾಧೀನ ಕಳೆದುಕೊಂಡು ಜೀವನಕ್ಕೆ ಮುಂದೇನು ಅನ್ನೋ ಆತಂಕ ಕುಟುಂಬಸ್ಥರನ್ನು ಕಾಡುತ್ತಿದೆ. ಚಿಕಿತ್ಸೆ ಕೊಡಿಸಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಚಿಕಿತ್ಸೆ ನೆರವು ನೀಡಲಿ ಅಂತಾ ಮನವಿ ಮಾಡ್ತಿದ್ದಾರೆ.
ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಒಂದೇ ಕುಟುಂಬದ ಅಕ್ಕ, ಮೂವರು ತಮ್ಮಂದಿರಲ್ಲಿ ಕಾಯಿಲೆ ಬಂದಿದೆ. ಸಯ್ಯದ್ ರೆಹಮತ್ ಉಲ್ಲಾ ಹಾಗೂ ರಫಿಯಾ ದಂಪತಿಗೆ ಒಟ್ಟಾರೆ 10 ಮಂದಿ ಮಕ್ಕಳಿದ್ದು ತಾಸಿನ್ ತಾಜ್, ಇದಾಯತ್, ಇಮ್ರಾನ್, ನೂರ್ ಅಹಮದ್ ಎಂಬ ನಾಲ್ಕು ಜನ ಅಕ್ಕ ತಮ್ಮಂದಿರಲ್ಲಿ ರೋಗ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಕಾಡುಪ್ರಾಣಿ ದಾಳಿಗೆ 3 ವರ್ಷದ ಮಗು ಸಾವು ಆರೋಪ: ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ
ಹುಟ್ಟಿದ 20 ವರ್ಷಗಳ ಬಳಿಕ ಮಸ್ಕ್ಯೂಲಾರ್ ಡಿಸ್ಟ್ರೋಫಿ ರೋಗ ಕಾಣಿಸಿಕೊಂಡಿದ್ದು, ಮೊದಲಿಗೆ ನಡೆಯಲು, ಮೆಟ್ಟಿಲು ಹತ್ತಲೂ ಸಮಸ್ಯೆಯಾಗಿದೆ. ನಂತರ ಸಂಪೂರ್ಣವಾಗಿ ಬೇರೆಯರನ್ನೇ ಆಶ್ರಯಿಸಿ ನಡೆಯುವಂತಹ ಪರಿಸ್ಥಿತಿ ಬಂದಿದೆ. ಕಾಲು ಹಾಗೂ ಸೊಂಟದ ಕೆಳಗಿನ ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದೆ.
ಇದೀಗ ಊಟ ಮಾಡಲೂ ಕೂಡ ಬೇರೆಯವರನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಚಾಮರಾಜನಗರ, ಮೈಸೂರು, ಬೆಂಗಳೂರಿನಲ್ಲೂ ಕೂಡ ಚಿಕಿತ್ಸೆ ಕೊಡಿಸಿದರು ಪ್ರಯೋಜನವಿಲ್ಲ. ಜಪಾನ್ಗೂ ಕೂಡ ಅವರ ಮಾಂಸ ಖಂಡವನ್ನು ಕಳಿಸಿ ಪರೀಕ್ಷೆ ನಡೆಸಲಾಗಿದೆ. ಆ ವೇಳೆ ಇದು ಮಸ್ಕ್ಯೂಲಾರ್ ಡಿಸ್ಟ್ರೋಫಿ ರೋಗಲಕ್ಷಣ ಅಂತಾ ಗೊತ್ತಾಗಿದೆ. ಇದೀಗಾ ಚಿಕಿತ್ಸೆ ಕೊಡಿಸಲು ಸಹ ಸಮಸ್ಯೆಯಾಗಿದೆ. ಈ ಕಾಯಿಲೆಗೆ ಸೂಕ್ತವಾದ ಚಿಕಿತ್ಸೆ ಕೊಡಿಸಲಿ ಅಂತಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡ್ತಿದೆ ಕುಟುಂಬ.
ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ನಿಧಿ ಆಸೆಗಾಗಿ ಮನೆಯಲ್ಲಿ 20 ಅಡಿ ಆಳದ ಗುಂಡಿ ತೋಡಿದ ಮಹಿಳೆ
ಆರೋಗ್ಯಾಧಿಕಾರಿಗಳೇ ಹೇಳುವಂತೆ ವಂಶವಾಹಿಯಿಂದ ಈ ರೋಗ ಬರುವ ಸಾಧ್ಯತೆಯಿದೆ. ಇದಕ್ಕೆ ಸೂಕ್ತವಾದ ಚಿಕಿತ್ಸೆ ಸೌಲಭ್ಯವಿಲ್ಲ. ಇದರ ಪರಿಣಾಮ ಕಡಿಮೆಗೊಳಿಸಲು ಫಿಜಿಯೋಥೆರಪಿ, ಅಕ್ಯುಫ್ರೆಶರ್ ಥೆರಪಿ ಇದೆ. ಮುಜುಗರಕ್ಕೆ ಒಳಗಾಗುತ್ತೇವೆ ಅಂದು ಇಲ್ಲಿಯವರೆಗೂ ಈ ರೋಗದ ಬಗ್ಗೆ ಕುಟುಂಬಸ್ಥರು ಆರೋಗ್ಯ ಇಲಾಖೆ ಗಮನಕ್ಕೆ ತಂದಿಲ್ಲ. ಇದೀಗ ಅವರ ಚಿಕಿತ್ಸೆಗೆ ಅಗತ್ಯ ನೆರವು ಒದಗಿಸುವ ಭರವಸೆ ನೀಡ್ತಾರೆ ಅಧಿಕಾರಿಗಳು.
ಇತ್ತಿಚ್ಚಿಗೆ ಹನೂರು ಭಾಗದಲ್ಲಿ ಮಕ್ಕಳಿಗೆ ಚುಕ್ಕೆ ರೋಗ ಕಾಣಿಸಿಕೊಂಡಿತ್ತು. ಇದೀಗ ಕೊಳ್ಳೇಗಾಲ ಭಾಗದಲ್ಲಿ ಮಸ್ಕ್ಯೂಲಾರ್ ಡಿಸ್ಟ್ರೋಫಿ ಕುಟುಂಬ ತುತ್ತಾಗಿರೋದು ಆತಂಕ ಮೂಡಿಸಿದೆ. ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಚಿಕಿತ್ಸೆ ಕೊಡಿಸಲಿ ಅನ್ನೋ ಮೂಲಕ ಕುಟುಂಬಸ್ಥರು ನೆರವಿನ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.