ಚಾಮರಾಜನಗರ, ಡಿಸೆಂಬರ್ 4: ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ (CP Yogeshwar) ಭಾವನೂ ಆಗಿರುವ ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕ ಮಹದೇವಯ್ಯ (Mahadevaiah) ಅವರನ್ನು ಸುಪಾರಿ ಕೊಟ್ಟು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಮಧ್ಯೆ, ಮಹದೇವಯ್ಯ ಹತ್ಯೆಯಾಗಿರುವುದು ಬಹುತೇಕ ಖಚಿತ ಎಂದು ಕೆಲವು ಮೂಲಗಳು ತಿಳಿಸಿವೆ. ಮೂವರು ದುಷ್ಕರ್ಮಿಗಳ ತಂಡದಿಂದ ಮಹದೇವಯ್ಯ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳೆದ 3 ದಿನಗಳಿಂದ ಮಹದೇವಯ್ಯ ನಾಪತ್ತೆಯಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಗ್ರಾಮದಲ್ಲಿ ಕೆಎ 42, ಎನ್ 0012 ಸಂಖ್ಯೆ ಕಾರು ಭಾನುವಾರ ರಾತ್ರಿ ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ರಾಮನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಸಂದರ್ಭ ಕಾರಿನಲ್ಲಿ ರಕ್ತದ ಕಲೆ ಪತ್ತೆಯಾಗಿತ್ತು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಡಿಸೆಂಬರ್ 2ರಂದು ಏಕಾಏಕಿ ನಾಪತ್ತೆಯಾಗಿದ್ದರು. ಅದಾದ ಎರಡು ದಿನಗಳ ಬಳಿಕ ಅವರ ಕಾರು (ಡಿಸೆಂಬರ್ 03) ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ರಾಮನಗರ ಪೊಲೀಸರು ತನಿಖಾ ತಂಡಕ್ಕೆ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಈ ವೇಳೆ ಕಾರಿನಲ್ಲಿ ರಕ್ತದ ಕಲೆ ಇರುವುದು ಪತ್ತೆಯಾಗಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು.
ಮಹದೇವಯ್ಯ ಅವರ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಹದೇವಯ್ಯ ಪತ್ತೆಗೆ ಚನ್ನಪಟ್ಟಣ ಡಿವೈಎಸ್ಪಿ ನೇತೃತ್ವದ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಈ ಮಧ್ಯೆ, ಮಹದೇವಯ್ಯ ಅವರ ಮೊಬೈಲ್ ಲೊಕೇಷನ್ ಕೂಡ ಪರಿಶೀಲನೆ ಮಾಡಲಾಗಿತ್ತು. ಈ ವೇಳೆ, ಒಂದು ಬಾರಿ ಯಾರೋ ಕರೆ ಸ್ವೀಕರಿಸಿ ಮಾತನಾಡಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿತ್ತು.
ಡಿಸೆಂಬರ್ 1ರ ಮಧ್ಯರಾತ್ರಿ ರಾಮನಗರ ಜಿಲ್ಲೆ ಚನ್ನಪಟ್ಟಣ ಹೊರವಲಯದಲ್ಲಿರುವ ತೋಟದ ಮನೆಗೆ ನುಗ್ಗಿದ್ದ ಮೂವರು ಅಪರಿಚಿತರು, ಮಹದೇವಯ್ಯ ಅವರಿಂದ ಲಾಕರ್ ತೆಗೆಸಿ ಹಣ, ದಾಖಲೆ ಕೊಂಡೊಯ್ದಿರುವ ಅನುಮಾನ ವ್ಯಕ್ತವಾಗಿದೆ. ಮಹದೇವಯ್ಯ ಕಾರಿನಲ್ಲೇ ಅವರನ್ನು ಕರೆದೊಯ್ದಿರುವ ಅಪರಿಚಿತರು, ಚನ್ನಪಟ್ಟಣದಿಂದ ಚಾಮರಾಜನಗರ ಜಿಲ್ಲೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಬಳಿ ಡಾಬಾದಲ್ಲಿ ಪಾರ್ಟಿ ಮಾಡಿರುವ ದುಷ್ಕರ್ಮಿಗಳ ಗುಂಪು, ಅದೇ ಮಾರ್ಗದ ಅಂಗಡಿಯೊಂದರಲ್ಲಿ ನೀರಿನ ಬಾಟಲಿ ಖರೀದಿಸಿತ್ತು. ನಂತರ ಹನೂರು ತಾಲೂಕಿನ ನಾಲಾರೋಡ್ ಬಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಸಿಪಿ ಯೋಗೇಶ್ವರ ಭಾವ ನಾಪತ್ತೆ: ಮಹದೇವಯ್ಯ ಕಾರು ಚಾಮರಾನಗರದಲ್ಲಿ ಪತ್ತೆ
ಮಹದೇವಯ್ಯರನ್ನು ಹತ್ಯೆ ಮಾಡಿ ಅರಣ್ಯದಲ್ಲಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ನಂತರ ರಾಮಾಪುರ ಬಳಿ ಕಾರು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬಳಿಕ ಬೆಳಗ್ಗೆ 5 ಗಂಟೆ ಸುಮಾರಿಗೆ ರಾಮಾಪುರದಲ್ಲಿ ಕಾರು ನಿಲ್ಲಿಸಿದ ಹಂತಕರು, 5.15 ಕ್ಕೆ ರಾಮಾಪುರದ ಮುಖ್ಯರಸ್ತೆಯಲ್ಲಿ ಟೀ ಕುಡಿದು ಚನ್ನಪಟ್ಟಣಕ್ಕೆ ತೆರಳಿದ್ದರು ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Mon, 4 December 23