ಚಾಮರಾಜನಗರ, ಜನವರಿ 17: ಚಿರತೆಯನ್ನು ಸೆರೆ ಹಿಡಿಯುವುದಕ್ಕೆಂದು ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡ ವಿಚಿತ್ರ ಪ್ರಕರಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ. ಬೋನಿಗೆ ಬಿದ್ದ ವ್ಯಕ್ತಿಯನ್ನು ಗ್ರಾಮದ ಹನುಮಂತಯ್ಯ ಎಂದು ಗುರುತಿಸಲಾಗಿದ್ದು, ಸದ್ಯ ಆತನನ್ನು ರಕ್ಷಿಸಲಾಗಿದೆ.
ಪಡಗೂರು ಗ್ರಾಮದ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಹೀಗಾಗಿ ಚಿರತೆಯನ್ನು ಸೆರೆ ಹಿಡಿದು ಜನರಿಗೆ ಸುರಕ್ಷತೆ ಒದಗಿಸುವಂತೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮಹದೇವಸ್ವಾಮಿ ಎಂಬವರ ಜಮೀನಿನಲ್ಲಿ ಬೋನು ಇಟ್ಟಿದ್ದರು. ಜೊತೆಗೆ ಬೋನಿನ ಒಳಗೆ ಕರು ಒಂದನ್ನು ಇರಿಸಿದ್ದರು.
ಇಷ್ಟೆಲ್ಲಾ ಆದ ಬಳಿಕ ಹನುಮಂತಯ್ಯ ಬೋನಿನ ಸಮೀಪ ಹೋಗಿದ್ದಾನೆ. ಬೋನು ಹೇಗಿದೆ ಎಂದು ನೋಡಲು ಒಳಗಡೆ ಹೋಗಿದ್ದಾನೆ. ಆತ ಒಳಗಡೆ ಹೋಗುತ್ತಿದ್ದಂತೆಯೇ ಬೋನಿನ ಗೇಟ್ ಲಾಕ್ ಆಗಿದೆ. ಹೀಗಾಗಿ ಸುಮಾರು ನಾಲ್ಕೈದು ಗಂಟೆ ಆತ ಅದರ ಒಳಗಡೆ ಸಿಲುಕಿದ್ದಾನೆ.
ಇದಾದ ಸುಮಾರು ಹೊತ್ತಿನ ಬಳಿಕ ಜಮೀನಿಗೆ ಕೆಲಸಕ್ಕೆಂದು ಬಂದ ಕೂಲಿ ಕಾರ್ಮಿಕರು ಹನುಮಂತಯ್ಯ ಬೋನಿನ ಒಳಗೆ ಇರುವುದನ್ನು ಗಮನಿಸಿದ್ದಾರೆ. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಿ ಸಿಬ್ಬಂದಿ ಹನುಮಂತಯ್ಯನನ್ನು ರಕ್ಷಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಒಂದೆಡೆ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆಗಳನ್ನು ನಾಶ ಮಾಡುತ್ತಿವೆ. ಮತ್ತೊಂದೆಡೆ ಚಿರತೆ ಕಾಟ ಜನರನ್ನು ಆತಂಕಕ್ಕೆ ಈಡುಮಾಡಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 24 ಸರ್ಕಾರಿ ಶಾಲೆಗಳಿಗೆ ಬಿತ್ತು ಬೀಗ!
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು ಹಾಗೂ ಹುಲಿ ಸಂಚಾರ ಕೆಲವು ದಿನಗಳ ಹಿಂದೆ ಕಂಡುಬಂದಿತ್ತು. ಆನೆಗಳ ಹಿಂಡು ಹಾಗೂ ಹುಲಿ ರಸ್ತೆ ದಾಟುತ್ತಿರುವ ವಿಡಿಯೋ ಪ್ರವಾಸಿಗರ ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ