
ಚಾಮರಾಜನಗರ, ಅಕ್ಟೋಬರ್ 12: ಗಡಿನಾಡು ಚಾಮರಾಜನಗರದಲ್ಲೊಂದು (Chamarajanagar) ಬೃಹತ್ ವಂಚನೆ (Fraud) ಜಾಲ ಬೆಳಕಿಗೆ ಬಂದಿದೆ. ಬೇಲಿನೆ ಎದ್ದು ಹೊಲವನ್ನ ಮೇಯ್ದಂತೆ ಬ್ಯಾಂಕ್ನ ಸಿಬ್ಬಂದಿಯೇ ಗ್ರಾಹಕರಿಗೆ ವಂಚಿಸಿರುವಂತಹ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಕೆನರಾ ಬ್ಯಾಂಕ್ನ ಬ್ರಾಂಚ್ನಲ್ಲಿ ನಡೆದಿದೆ. ಯಾರಿಗೋ ಸಾಲ ನೀಡುವ ಸಲುವಾಗಿ ಮತ್ಯಾರನ್ನೋ ಬಲಿ ಪಶು ಮಾಡಿದ್ದಾರೆ.
ಬ್ಯಾಂಕ್ ಹೆಸರು ಕೇಳಿದರೆ ಭಾರತದಲ್ಲಿ ಅಪಾರ ಗೌರವವಿದೆ. ಬ್ಯಾಂಕ್ ಅಂದರೆ ಕೇವಲ ಹೆಸರಲ್ಲ ಅದೊಂದು ನಂಬಿಕೆ. ಕಷ್ಟ ಕಾರ್ಪಣ್ಯಕ್ಕೆ ಸಾಲ ಪಡೆಯುವುದಕ್ಕೆ, ತಾವು ಕೂಡಿಟ್ಟ ಹಣ, ಚಿನ್ನಾಭರಣ ಜೋಪಾನವಾಗಿ ಇಡುವುದಕ್ಕೆ ಇರುವ ಏಕೈಕ ಸ್ಥಳ ಅಂದರೆ ಅದು ಬ್ಯಾಂಕ್. ಆದರೆ ಗಡಿನಾಡು ಚಾಮರಾಜನಗರದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿಯೇ ಕಳ್ಳಾಟ ಆಡಿರುವುದು ಇದೀಗ ಬಟಾಬಯಲಾಗಿದೆ.
ಇದನ್ನೂ ಓದಿ: ಸಾಲ ಕೊಡುವ ಮುನ್ನ ಹುಷಾರ್! ಕಿಡ್ನ್ಯಾಪ್ ಮಾಡಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟ ದುಷ್ಕರ್ಮಿಗಳು
ಅದ್ಯಾರಿಗೋ ಸಾಲ ಕೊಡುವುದಕ್ಕೆ ಸಂಬಂಧವೇ ಇಲ್ಲದವರನ್ನ ಬಲಿಪಶು ಮಾಡಿದ್ದಾರೆ. ಎನ್ ಚೈತ್ರಾ ಎಂಬವವರು 2014 ರಲ್ಲಿ ಕೊಳ್ಳೇಗಾಲ ತಾಲೂಕಿನ ಪಾಳ್ಯದಲ್ಲಿ ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದಿದ್ದರು. ಬಳಿಕ 2016ರಲ್ಲಿ 25 ಸಾವಿರ ರೂ. ಹಣವನ್ನ ಸಾಲವನ್ನಾಗಿ ಪಡೆದಿದ್ದರು. ಬಳಿಕ ಆ ಹಣವನ್ನ ಸಹ ಬಡ್ಡಿ ಸಮೇತ ಕಟ್ಟಿ ತೀರಿಸಿದ್ದರು.
ಇದಾದ ಬಳಿಕ ಚೈತ್ರಾ ತನ್ನ ಪತಿ ಜೊತೆ ಕೊಳ್ಳೇಗಾಲಕ್ಕೆ ಶಿಫ್ಟ್ ಆಗಿದ್ದರು. ಇದಾದ ಬಳಿಕ 2017 ರಲ್ಲಿ ಪಾಳ್ಯ ಬ್ರಾಂಚ್ನಲ್ಲಿರುವ ತನ್ನ ಖಾತೆಯನ್ನ ಕೊಳ್ಳೇಗಾಲ ಬ್ರಾಂಚ್ಗೆ ಶಿಫ್ಟ್ ಮಾಡಿಸಿದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎನ್ನುವ ಹಾಗೆ ಪಾಳ್ಯ ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗಾಯಿಸದೆ ಕಳ್ಳಾಟ ಆಡಿದ್ದಾರೆ.
2017ರಲ್ಲಿ ಬ್ಯಾಂಕ್ ಖಾತೆ ವರ್ಗಾವಣೆ ಮಾಡದೆ ಇದ್ದದ್ದು ಒಂದಾದರೆ, ಮತ್ತೊಂದು ಮಹಾ ಮೋಸ ಕೂಡ ಬೆಳಕಿಗೆ ಬಂದಿದೆ. ಚೈತ್ರಾ ಅವರು ತುರ್ತು ಹಣದ ಅವಶ್ಯತೆ ಕಾರಣ ಖಾಸಗಿ ಫೈನಾನ್ಸ್ನಲ್ಲಿ 50 ಸಾವಿರ ರೂ. ಹಣ ಸಾಲಕ್ಕಾಗಿ ಅರ್ಜಿ ಹಾಕಿದ್ದರು. ಬ್ಯಾಂಕ್ನ ಸಿಬ್ಬಂದಿ ಚೈತ್ರಾ ಅವರ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಮಾಡುವಾಗ ಚೈತ್ರಾ 1 ಲಕ್ಷ 20 ಸಾವಿರ ರೂ. ಸಾಲದ ಹಣಕ್ಕೆ ಶ್ಯೂರಿಟಿ ಹಾಕಿರುವುದು ಗೊತ್ತಾಗಿದೆ. ಆದರೆ ಅಸಲಿಗೆ ಚೈತ್ರಾ ಯಾವ ಶ್ಯೂರಿಟಿನೂ ಹಾಕಿಲ್ಲ. ಬ್ಯಾಂಕ್ನ ಸಿಬ್ಬಂದಿ ಚೈತ್ರಾ ಅವರ ಬ್ಯಾಂಕ್ ಖಾತೆ ಇನ್ ಆಕ್ಟೀವ್ ಆಗಿದ್ದನ್ನ ಗಮನಿಸಿ ಇವರ ದಾಖಲಾತಿಯನ್ನ ಬಳಸಿಕೊಂಡು ಲಕ್ಷ್ಮೀ ಮಹಿಳಾ ಸಹಕಾರ ಸಂಘಕ್ಕೆ 1 ಲಕ್ಷದ 20 ಸಾವಿರ ರೂ. ಸಾಲ ನೀಡಿದ್ದಾರೆ.
ಈ ವಿಚಾರವಾಗಿ ಚೈತ್ರಾ, ತನ್ನ ಪತ್ನಿಯೊಂದು ಪಾಳ್ಯ ಗ್ರಾಮದ ಕೆನರಾ ಬ್ಯಾಂಕ್ಗೆ ಹೋಗಿ ಕೇಳಿದರೆ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ. ನಮಗೂ ಇದಕ್ಕೈ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸಿಬ್ಬಂದಿ ಪಲಾಯನವಾಗಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಎನ್. ಚೈತ್ರಾ, ನಾನು ಯಾವುದೇ ಸಾಲಕ್ಕೂ ಶ್ಯೂರಿಟಿ ಹಾಕಿಲ್ಲ. ಅಕ್ರಮವಾಗಿ ಶ್ಯೂರಿಟಿ ಹಾಕಿ ಲೋನ್ ಮಂಜೂರು ಮಾಡಿದ್ದಾರೆ ಎಂದರು. ಸದ್ಯ ಇದರಿಂದ ರೋಸಿ ಹೋದ ಗೃಹಿಣಿ ಹೋಮ್ ಬರ್ಡ್ಸ್ ಮ್ಯಾನ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್
ಸದ್ಯ ಬೆಳಕಿಗೆ ಬಂದಿದ್ದು ಇದೊಂದು ಪ್ರಕರಣ, ಆದರೆ ಬೆಳಕಿಗೆ ಬಾರದೆ ಇರುವುದು ಇನ್ನು ಎಷ್ಟಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇಂತ ಕಳ್ಳಾಟವಾಡಿ ಬ್ಯಾಂಕ್ಗೆ ಕೆಟ್ಟ ಹೆಸರು ತಂದ ಸಿಬ್ಬಂದಿಗೆ ತಕ್ಕ ಶಾಸ್ತಿ ಆಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 pm, Sun, 12 October 25