ಚಾಮರಾಜನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಂದ್ರೆ ಅರಿಶಿಣ. ಅರಿಶಿಣ ಬೆಳೆಯ ಬೆಲೆ ಇದೀಗ ಪಾತಾಳಕ್ಕೆ ಇಳಿದಿದೆ. ಸದ್ಯ ಅರಿಶಿಣ ಬೆಳೆ ಬೆಲೆ ಕುಸಿದ್ದರಿಂದ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಿ ಮೂರು ತಿಂಗಳಾಗಿದೆ. ಆದ್ರೆ ಅಧಿಕಾರಿಗಳು ಮಾತ್ರ ಖರೀದಿ ಕೇಂದ್ರ ತೆರೆಯದಿರುವುದಕ್ಕೆ ರೈತರು ಆಕ್ರೋಶಗೊಂಡು, ಹೋರಾಟಕ್ಕಿಳಿದಿದ್ದಾರೆ. ಒಂದು ಕಡೆ ಅರಿಶಿಣ ಸುರಿಯುತ್ತಾ, ಮತ್ತೊಂದೆಡೆ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಹಣ ನೀಡುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆಳೆಗಾರರು. ಇಷ್ಟಕ್ಕೆಲ್ಲ ಕಾರಣ ಅಂದ್ರೆ ಅರಿಶಿಣ ಖರೀದಿ ಕೇಂದ್ರ ತೆರೆಯದೆ ಇರುವುದು. ಹೌದು, ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಜಿಲ್ಲೆಗೊಂದು ಬೆಳೆ ಎಂದು ಹೇಳಲಾಗಿತ್ತು. ಇದರ ಅಡಿಯಲ್ಲಿ ಚಾಮರಾಜನಗರ ಜಿಲ್ಲೆ ಪ್ರಮುಖ ವಾಣಿಜ್ಯ ಬೆಳೆಯಾಗಿ ಅರಿಶಿನವನ್ನ (Chamarajanagar district crop turmeric) ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದ್ರೀಗಾ ಜಿಲ್ಲೆಯ ಪ್ರಮುಖ ಬೆಳೆಯಾದ ಅರಿಶಿಣಕ್ಕೆ ಸರಿಯಾದ ಬೆಲೆ ಇಲ್ಲದೆ ರೈತರಯ ಕಂಗಾಲಾಗಿದ್ದರು.
ಇದರಿಂದ ರೈತರು ಕಳೆದ ಆರೇಳು ತಿಂಗಳಿಂದ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ಅರಶಿಣಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಅದರಂತ ಕ್ವಿಂಟಾಲ್ ಗೆ 6 ಸಾವಿರ ರೂಪಾಯಿಯಷ್ಟು ಬೆಂಬಲ ಬೆಲೆ ಘೋಷಣೆ ಮಾಡಿ ಅರಿಶಿಣ ಖರೀದಿ ಕೇಂದ್ರ ತೆರೆಯಲು ಆದೇಶ ಮಾಡಲಾಗಿತ್ತು. ಆದ್ರೆ ಈ ಆದೇಶ ಹೊರಡಿಸಿ, 3 ತಿಂಗಳಾಗಿದೆ. ಅರಿಶಿಣ ಖರೀದಿ ಕೇಂದ್ರವನ್ನ ಚುನಾವಣೆ ನೆಪ ಹೇಳಿ ಅಧಿಕಾರಿಗಳು ತೆರದಿರಲಿಲ್ಲ. ಇದರಿಂದ ಅರಿಶಿಣವನ್ನ ಪಾಲಿಷ್ ಮಾಡಿ ಇಟ್ಟಿದ್ದರಿಂದ ಅರಿಶಿಣಕ್ಕೆ ಹುಳ ಆಗುವ ಆತಂಕ ಇತ್ತು. ಈ ಕಾರಣದಿಂದ ರೈತರು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿನ್ನೆ ಪ್ರತಿಭಟನೆ ನಡೆಸಿದ್ರು.
ಇನ್ನು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ರೈತರು ತೀವ್ರ ಆಕ್ರೋಶ ಹೊರಹಾಕಿದ್ರು. ಲಂಚ ಬೇಕಿದ್ರೆ ಕೊಡುತ್ತೇವೆ ಅಂತ ರೈತರಿಂದಲೇ ಹಣ ಸಂಗ್ರಹಿಸಿ ಅಧಿಕಾರಿಗಳಿಗೆ ಲಂಚ ಕೊಡಲು ಮುಂದಾದ್ರು. ಸದ್ಯ ಚಾಮರಾಜನಗರದಲ್ಲಿ 40 ಮೆಟ್ರಿಕ್ ಟನ್ ಅರಿಶಿಣ ಬೆಳೆ ಬೆಳೆಯಲಾಗಿದ್ದು, ಆದಷ್ಟು ಬೇಗ ಅರಿಶಿಣ ಖರೀದಿ ಮಾಡಬೇಕು ಅಂತ ರೈತರು ಎಚ್ವರಿಕೆ ನೀಡಿದ್ರು. ರೈತರ ಎಚ್ಚರಿಕೆಗೆ ಹೆದರಿದ ಅಧಿಕಾರಿಗಳು, ಸದ್ಯ ಒಂದಿಬ್ಬರು ರೈತರ ಅರಿಶಿಣ ಖರೀದಿ ಮಾಡಿದ್ದರಿಂದ ಹೋರಾಟ ಕೈಬಿಟ್ಟಿದ್ದಾರೆ.
ಒಟ್ಟಾರೆ, ಸದ್ಯ ಅರಿಶಿಣ ಕೇಂದ್ರ ತೆರೆಯವುದಾಗಿ ಅಧಿಕಾರಿಗಳು ರೈತರಿಗೆ ಹೇಳಿದ್ದಾರೆ. ಒಂದು ವಾರಾದೊಳಗೆ ಅರಿಶಿಣ ಕೇಂದ್ರ ತೆರೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿಯೂ ರೈತರು ಎಚ್ಚರಿಕೆ ನೀಡಿದ್ದಾರೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9, ಚಾಮರಾಜನಗರ
Published On - 1:43 pm, Wed, 31 May 23