ಚಾಮರಾಜನಗರ: ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕರ್ನಾಟಕ ಪಬ್ಲಿಕ್ ಶಾಲೆ (School) ಹೊತ್ತಿ ಉರಿದಿರುವಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳಿಂದ ಸಿಗರೇಟ್ ಸೇದಿ ಶಾಲೆಯೊಳಗೆ ಬೀಸಾಡಿರುವ ಶಂಕೆ ವ್ಯಕ್ತವಾಗಿದ್ದು, ಪಠ್ಯ ಪುಸ್ತಕ, ಡೆಸ್ಕ್, ಕೊಠಡಿ, ಕಿಟಕಿ ಬಾಗಿಲುಗಳು ಬೆಂಕಿಗಾಹುತಿ ಆಗಿವೆ. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಬಳಿ ವರವು ಕಾವಲು ಅರಣ್ಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಹಲವು ಗಿಡ, ಮರಗಳು ಬೆಂಕಿಗಾಹುತಿಯಾಗಿದೆ. ತಡರಾತ್ರಿವರೆಗೆ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತುಮಕೂರು: ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದಾಗ ಅಗ್ನಿ ಅವಘಡ ಸಂಭವಿಸಿ 18 ವರ್ಷದ ಯುವತಿ ಮೃತಪಟ್ಟ ದಾರುಣ ಘಟನೆ ಇತ್ತೀಚೆಗೆ ತುಮಕೂರಿನಲ್ಲಿ ಸಂಭವಿಸಿತ್ತು. ಇದೀಗ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಬಹಿರಂಗವಾಗಿದ್ದು, ಹೃದಯ ಕಲಕುವಂತಿತ್ತು. ಮೊಬೈಲ್ ಫೋನ್ ಬಳಸುತ್ತಿದ್ದುದರಿಂದ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೇಳಲಾಗಿತ್ತು.
ಮೃತ ಯುವತಿಯನ್ನು ಭವ್ಯಾ ಎಂದು ಗುರುತಿಸಲಾಗಿತ್ತು. ಜತೆಗೆ ಆಕೆಯ ತಾಯಿ ರತ್ನಮ್ಮ ಕೂಡ ಇದ್ದರು. ಗಂಭೀರ ಗಾಯಗೊಂಡಿರುವ ಅವರು ಚಿಕಿತ್ಸೆ ನೀಡಲಾಗಿತ್ತು. ಭವ್ಯ ಹಾಗೂ ರತ್ನಮ್ಮ ಸಿರಾ ತಾಲೂಕಿನ ನಿವಾಸಿಗಳು.
ಆನೇಕಲ್: ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿರುವಂತಹ ಘಟನೆ ಆನೇಕಲ್ ತಾಲೂಕಿನ ಬಸವನಪುರ ಗೇಟ್ನಲ್ಲಿ ಇತ್ತೀಚೆಗೆ ನಡೆದಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಳಗಿಳಿದು ಪ್ರಯಾಣಿಕರು ಪಾರಾಗಿದ್ದರು. ತಾಂತ್ರಿಕದೋಷದಿಂದ ಬೆಂಕಿ ಹೊತ್ತಿಕೊಂಡಿರುವ ಅನುಮಾನ ವ್ಯಕ್ತವಾಗಿತ್ತು. ಕೆಎ 57, ಎಫ್ 0569 ಸಂಖ್ಯೆ ಬಿಎಂಟಿಸಿ ಬಸ್ ಬೆಂಕಿಗಾಹುತಿ ಆಗಿದ್ದು, ಮೆಜೆಸ್ಟಿಕ್-ಜಿಗಣಿ ನಡುವೆ ಸಂಚರಿಸುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರು.
ಮತ್ತೊಂದು ಪ್ರಕರಣದಲ್ಲಿ ರಸ್ತೆ ಬದಿ ನಿಂತಿದ್ದ 3 ಖಾಸಗಿ ಬಸ್ಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಆರ್.ವಿ.ಇಂಜಿನಿಯರಿಂಗ್ ಕಾಲೇಜು ಬಳಿ ಇತ್ತೀಚೆಗೆ ನಡೆದಿತ್ತು. ಎಸ್ಆರ್ಎಸ್ ಟ್ರಾವೆಲ್ಸ್ಗೆ ಸೇರಿದ 3 ಬಸ್ಗಳು ಹೊತ್ತಿ ಉರಿದಿದ್ದವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:43 pm, Sun, 4 June 23