ಚಾಮರಾಜನಗರ: ಪ್ರೀತಿಯಿಂದ ಸಾಕಿದ್ದ ಶ್ವಾನಗಳಿಗೆ ವಿಷವಿಕ್ಕಿ ಕೊಂದ ಕಿರಾತಕರು!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರೀತಿಯಿಂದ ಸಾಕಿದ್ದ ಜಿಮ್ಮಿ ಮತ್ತು ಪಮ್ಮಿ ಎಂಬ ಎರಡು ಸಾಕು ನಾಯಿಗಳಿಗೆ ದುಷ್ಕರ್ಮಿಗಳು ವಿಷ ಹಾಕಿ ಹತ್ಯೆ ಮಾಡಿದ್ದಾರೆ. ಮಾಲೀಕ ವಿಷಯ ತಿಳಿದು ತಕ್ಷಣ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಚಾಮರಾಜನಗರ: ಪ್ರೀತಿಯಿಂದ ಸಾಕಿದ್ದ ಶ್ವಾನಗಳಿಗೆ ವಿಷವಿಕ್ಕಿ ಕೊಂದ ಕಿರಾತಕರು!
ಪ್ರೀತಿಯಿಂದ ಸಾಕಿದ್ದ ಶ್ವಾನಗಳಿಗೆ ವಿಷವಿಕ್ಕಿ ಕೊಂದ ಕಿರಾತಕರು!
Edited By:

Updated on: Dec 17, 2025 | 1:32 PM

ಚಾಮರಾಜನಗರ, ಡಿಸೆಂಬರ್ 17: ಇಂದಿನ ದಿನಗಳಲ್ಲಿ ಪ್ರಾಣಿಪ್ರಿಯರು ಮನೆಯ ಸಾಕು ಪ್ರಾಣಿಗಳನ್ನು ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಆಹಾರ, ಚೆಕ್​ಅಪ್ ಎಂದು ಕಾಳಜಿ ವಹಿಸುತ್ತಾರೆ. ಹೀಗಿರುವಾಗ ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಪ್ರೀತಿಯಿಂದ ಸಾಕಿದ್ದ ಎರಡು ಶ್ವಾನಗಳನ್ನು ವಿಷವಿಕ್ಕಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ರಾತ್ರಿ ಆಹಾರಕ್ಕೆ ವಿಷ ಹಾಕಿರುವ ಶಂಕೆ

ಕಾವ್ಯ ಎಂಬ ಯುವತಿ ಜಿಮ್ಮಿ ಮತ್ತು ಪಮ್ಮಿ ಎಂಬ ಎರಡು ಶ್ವಾನಗಳನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಿಕೊಂಡಿದ್ದರು. ಕಾರ್ಯನಿಮಿತ್ತ ಕಾವ್ಯ ಎರಡು ದಿನಗಳ ಹಿಂದೆ ಮಂಗಳೂರಿಗೆ ತೆರಳಿದ್ದ ವೇಳೆ, ತಡ ರಾತ್ರಿ ಶ್ವಾನಗಳು ಸೇವಿಸುವ ಆಹಾರದಲ್ಲಿ ವಿಷ ಮಿಶ್ರಣ ಮಾಡಿ ದುಷ್ಕರ್ಮಿಗಳು ಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇಂದು ಮುಂಜಾನೆ ನೆರೆಯ ಮನೆಯ ಸತೀಶ್ ಶ್ವಾನಗಳು ಮೃತಪಟ್ಟಿರುವುದನ್ನು ಗಮನಿಸಿ ಕಾವ್ಯಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಕೂಡಲೆ 112ಗೆ ಕರೆ

ಪ್ರೀತಿಯ ಶ್ವಾನಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಾವ್ಯ ಮಂಗಳೂರುದಿಂದ ಪಿಜಿ ಪಾಳ್ಯಕ್ಕೆ ಆಗಮಿಸಿದ್ದು, ಶ್ವಾನಗಳನ್ನು ಕಳೆದುಕೊಂಡ ದುಃಖದಲ್ಲಿ ಅವರು ಮಮ್ಮಲ ಮರುಗಿದ್ದಾರೆ. ಈ ಘಟನೆ ತಿಳಿದ ಕೂಡಲೇ ಕಾವ್ಯ 112 ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನಗಳ ಆಹಾರದಲ್ಲಿ ವಿಷ ಪ್ರಾಶನ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದು ಉದ್ದೇಶಪೂರ್ವಕ ಕೃತ್ಯವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಕಾನೂನಿಗೆ ವಿರುದ್ಧವಾದ ಈ ಅಮಾನವೀಯ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.