Chamarajanagara: ಅಕ್ರಮ ಗಣಿಗಾರಿಕೆಯಿಂದ ಒಂದೇ ವರ್ಷದಲ್ಲಿ 6 ಜೀವ ಬಲಿ; ಕೈಕಟ್ಟಿ ಕುಳಿತ ಜಿಲ್ಲಾಡಳಿತ

illigal mining: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬೀಳುತ್ತಿಲ್ಲ. ಮಾರ್ಚ್​ನಲ್ಲಿ ನಡೆದ ಗಣಿದುರಂತ ಮಾಸುವ ಮುನ್ನವೆ ಮತ್ತೊಂದು ದುರಂತಕ್ಕೆ ಜಿಲ್ಲೆ ಸಾಕ್ಷಿಯಾಗಿದ್ದು 6 ಜನರನ್ನ ಬಲಿಪಡೆದುಕೊಂಡಿದೆ.

Chamarajanagara: ಅಕ್ರಮ ಗಣಿಗಾರಿಕೆಯಿಂದ ಒಂದೇ ವರ್ಷದಲ್ಲಿ 6 ಜೀವ ಬಲಿ; ಕೈಕಟ್ಟಿ ಕುಳಿತ ಜಿಲ್ಲಾಡಳಿತ
ಅಕ್ರಮ ಗಣಿಗಾರಿಕೆ 3 ಅಮಾಯಕ ಜೀವಗಳು ಬಲಿ
Edited By:

Updated on: Jan 09, 2023 | 10:23 PM

ಚಾಮರಾಜನಗರ: ಜಿಲ್ಲೆಯಲ್ಲಿ ಸಿಗುವ ಕಪ್ಪು ಶಿಲೆಗೆ ಇನ್ನಿಲ್ಲದ ಬೇಡಿಕೆ ಇದೆ. ಇಲ್ಲಿಂದ ವಿದೇಶಕ್ಕೂ ರಫ್ತಾಗುತ್ತದೆ. ಇಂತಹ ಖನಿಜ ಸಂಪತ್ತನ್ನ ಗಣಿ ಉದ್ಯಮಿಗಳು ಲೂಟಿ ಮಾಡುವುದಕ್ಕೆ ಶುರುಮಾಡಿದ್ದಾರೆ. ಕಳೆದ ಮಾರ್ಚ್​ನಲ್ಲಿ ಗುಂಡ್ಲುಪೇಟೆಯ ಮಡಹಳ್ಳಿಯ ಗುಮ್ಮಕಲ್ಲು ಗುಡ್ಡ ಕುಸಿದು ಮೂವರು ಅಮಾಯಕರು ಬಲಿಯಾಗಿದ್ದರು. ಆ ಘಟನೆ ಮಾಸುವ ಮುನ್ನವೇ ಕಳೆದವಾರ ಬಿಸಲವಾಡಿಯಲ್ಲಿ ನಡೆದ ಗಣಿ ದುರಂತದಲ್ಲಿ ಮತ್ತೆ 3 ಅಮಾಯಕ ಮುಗ್ಧ ಜೀವಗಳು ಬಲಿಯಾಗಿದ್ದು ಇದರಿಂದ ಅಸುರಕ್ಷಿತವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ವರ್ಷದ ಅಂತರದಲ್ಲಿ 6 ಜೀವಗಳು ಉಸಿರು ಕೈ ಚೆಲ್ಲಿದಂತಾಗಿದೆ.

ಇನ್ನು ಈ ಬಗ್ಗೆ ಜಿಲ್ಲಾಡಳಿತವನ್ನ ಪ್ರಶ್ನೆ ಮಾಡಿದರೆ ನಾವು ಗಣಿಯಲ್ಲಿ ಸುರಕ್ಷತೆ ಕ್ರಮ ವಹಿಸುವಂತೆ ನೋಟಿಸ್ ನೀಡಿ ಬಂದ್ ಮಾಡಿಸಿದ್ದರು, ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದರಿಂದ ಈ ದುರಂತವಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಯಾವಾಗ ಇಂತಹ ದುರಂತಗಳು ಸಂಭವಿಸುತ್ತದೆಯೋ ಅಂತಹ ಸಂಧರ್ಭದಲ್ಲಿ ಮಾತ್ರ ಅಧಿಕಾರಿಗಳು ಅಲರ್ಟ್ ಆಗುತ್ತಾರೆ. ಇನ್ನು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣರನ್ನ ಕೇಳಿದರೆ, ಈ ವಾರದಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಕ್ರಮ ಜರುಗಿಸುತ್ತಾರೆ ಎಂದು ಉತ್ತರಿಸುತ್ತಿದ್ದಾರೆ‌.

ಇನ್ನು ಜಿಲ್ಲೆಯಲ್ಲಿ 165 ಗಣಿಗಳಿದೆಯಂತೆ. ಇದರಲ್ಲಿ 107 ಕಪ್ಪು ಶಿಲೆಯಾದರೆ, ಉಳಿದದ್ದು ಬಿಳಿಕಲ್ಲು ಗಣಿಗಳು.‌ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯೇ ನಡೆದಿಲ್ಲ ಎಂದು ಉತ್ತರ ಬರುತ್ತಿದೆ. ಎಷ್ಟು ಅಡಿ ತೆಗೆಯಬೇಕು ಎನ್ನುವುದಕ್ಕೂ ಸರಿಯಾದ ನಿಯಮವಿಲ್ಲ. ಅಂತರ್ಜಲ ಸಿಗುವವರೆಗೂ ಗಣಿ ನಡೆಸಬಹುದೆಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಅಂತರ್ಜಲ ಸಿಕ್ಕರು ಪಂಪ್ ಮೂಲಕ ಗಣಿಯಿಂದ ನೀರು ಹೊರ ಹಾಕಿ ಗಣಿಗಾರಿಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ 1 ಎಕರೆ ಗಣಿ ಅನುಮತಿ ಪಡೆದು ಹತ್ತಾರು ಎಕರೆ ಗಣಿಗಾರಿಕೆ ನಡೆಸಲಾಗುತ್ತಿದೆ. ಹೀಗೆ ಸಾಲು ಸಾಲು ಅಕ್ರಮಗಳು ನಡೆಯುತ್ತಲೆ ಇದ್ದು. ಎಲ್ಲಾ ಗೊತ್ತಿದ್ದರು ಅಧಿಕಾರಿಗಳು ಮಾತ್ರ ಸುಮ್ಮನಿದ್ದಾರೆ. ಅಕ್ರಮಕ್ಕೆ ಯಾಕೆ ಬ್ರೇಕ್ ಹಾಕಿಲ್ಲ, ಇನ್ನೇಷ್ಟು ಜೀವಗಳು ಬಲಿಯಾಗಬೇಕು ಎಂದು ಸ್ಥಳೀಯರು ಪ್ರಶ್ನೆ ಮಾಡ್ತಿದ್ದಾರೆ.

ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಕರಣ: ರಾಂಚಿಯ ಉದ್ಯಮಿ ಪ್ರೇಮ್ ಪ್ರಕಾಶ್​​​ನ್ನು ಬಂಧಿಸಿದ ಇಡಿ

ಒಟ್ಟಾರೆ ಜಿಲ್ಲೆಯ ಗಣಿ ಉದ್ಯಮಗಳೆಲ್ಲ ಮಂತ್ರಿಗಳು, ಶಾಸಕರುಗಳು, ಇಲ್ಲ ಶಾಸಕರುಗಳ ಹಿಂಬಾಲಕರದ್ದೆಯಾಗಿದೆ. ಇದರಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಗೊತ್ತಿದ್ದರು ಅಧಿಕಾರಿಗಳು ಚಕಾರವೆತ್ತುತ್ತಿಲ್ಲ, ಜೊತೆಗೆ ಅಧಿಕಾರಿಗಳು ಕೂಡ ಇದರೊಟ್ಟಿಗೆ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ