ಇತ್ತೀಚಿನ ದಿನಗಳಲ್ಲಿ ಮಲೈಮಹದೇಶ್ವರ ಸನ್ನಿಧಾನದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿವೆ. ಅದರಲ್ಲಿ ಪ್ರಮುಖವಾಗಿ ಭಕ್ತರ ಸೆಳೆಯಲು 108 ಅಡಿ ಮಲೈಮಹದೇಶ್ವರ ಪ್ರತಿಮೆಯನ್ನು (108 feet statue of Lord Mahadeshwara atop MM Hills) ನಿರ್ಮಾಣ ಮಾಡಲಾಗಿದ್ದು,ಇದರ ಅಭಿವೃದ್ಧಿ ಕೆಲಸ ಕೂಡ ನಡೆಯುತ್ತಿದೆ. ಆದ್ರೆ ಆ ಪ್ರತಿಮೆಯಿಂದ 10 ಕ್ಕು ಹೆಚ್ಚು ರೈತ ಕುಟುಂಬಗಳು (Farmers) ಬೀದಿಗೆ ಬೀಳುತ್ತಿವೆ. ಪ್ರತಿಮೆ ನಿರ್ಮಾಣ ಮಾಡುತ್ತಿರುವ ಜಾಗ ನಮ್ಮದು ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದರೆ, ಇತ್ತ ಜಿಲ್ಲಾಡಳಿತ ಮಾತ್ರ ಅದು ಸರ್ಕಾರದ ಜಾಗ ಅಂತಿದೆ.
ಇನ್ನೇನು ಉದ್ಘಾಟನೆ ಹಂತ ತಲುಪಿರುವ 108 ಅಡಿಯ ಮಹದೇಶ್ವರ ಪ್ರತಿಮೆ. ಪ್ರತಿಮೆ ಕೆಳಗೆ ನಿಂತು ತಮಗೆ ಪ್ರತಿಮೆಯಿಂದ ಅನ್ಯಾಯ ಆಯ್ತು ಅಂತಿರೋ ಜನ. ಹೌದು, ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ 108 ಅಡಿ ಎತ್ತರದ ಶ್ರೀ ಮಹದೇಶ್ವರ ಪ್ರತಿಮೆ ನಿರ್ಮಾಣವಾಗುತ್ತಿದೆ. ಈ ಅಭಿವೃದ್ಧಿ ಕೆಲಸ ಸಂಬಂಧ ಸ್ವಾಧೀನ ಸ್ಥಳಕ್ಕೆ ಹೋಗಲು ರಸ್ತೆ ನಿರ್ಮಾಣಕ್ಕೆ ಇಲ್ಲಿದ್ದ ಬೇಸಾಯ ಭೂಮಿಯನ್ನ ವಶಪಡಿಸಿಕೊಂಡು ಕೆಲಸ ಮಾಡಲಾಗುತ್ತಿದೆ.
ಇದರಿಂದ ಇದೀಗ ಅಲ್ಲಿ ಹತ್ತಾರು ಕುಟುಂಬಗಳು ಇದ್ದ ಭೂಮಿಯನ್ನ ಕಳೆದುಕೊಂಡು ಬೀದಿಗೆ ಬಿದ್ದಂತಾಗಿದೆ. ಮಲೈಮಹದೇಶ್ವರ ಸ್ವಾಮಿ ಆಗಮಿಸುವುದಕ್ಕೂ ಮೊದಲೇ ಈ ಭಾಗದಲ್ಲಿ ಜನರು ಕೃಷಿ ಮಾಡುತ್ತ ವಾಸಿಸುತ್ತಿದ್ದು, ಮೂಲ ನಿವಾಸಿಗಳಾಗಿದ್ದಾರೆ. ಆದರೆ ಇಲ್ಲಿನ ಪ್ರಾಧಿಕಾರದ ಆಡಳಿತವು ಶ್ರೀ ಮಹದೇಶ್ವರರ ಪ್ರತಿಮೆ ನಿರ್ಮಾಣದ ನೆಪವೊಡ್ಡಿ ಕೃಷಿ ಮಾಡುತ್ತಿರುವ ಜಮೀನಿನ ಕೆಲ ಭಾಗವನ್ನು ವಶಪಡಿಸಿಕೊಳ್ಳುತ್ತಿದೆ. ಈ ಮೂಲಕ ಜನರಿಗೆ ಅನ್ಯಾಯವೆಸಗುತ್ತಿದೆ. ಅಧಿಕಾರಿಗಳು ರೈತರಿಗೆ ಪರಿಹಾರ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ? ಇಲ್ಲಿನ ಅಧಿಕಾರಿಗಳು ಜನರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಅಂತ ಸ್ಥಳೀಯ ನಿವಾಸಿಗಳು, ರೈತ ಮುಖಂಡರು ಆರೋಪಿಸಿದ್ದಾರೆ.
ಇನ್ನು ಮಲೈಮಹದೇಶ್ವರರು ತಮ್ಮ ವಾಹನವಾದ ಹುಲಿ ಮೇಲೆ ಕುಳಿತಿರುವ ಶೈಲಿಯಲ್ಲಿ ಪ್ರತಿಮೆ ನಿರ್ಮಾಣವಾಗ್ತಿದೆ. ಆ ನಿಟ್ಟಿನಲ್ಲಿ ಎಲ್ಲ ಕೆಲಸ ಮುಗಿದಿದೆ. ಆದ್ರೆ ಸ್ಥಳೀಯ ರೈತರು ಅದು ತಮ್ಮ ಜಾಗ, ರಸ್ತೆಗಾಗಿ ಭೂಮಿ ಬಳಸಿಕೊಳ್ಳುತ್ತಿರುವುದರಿಂದ ತಮಗೆ ಅನ್ಯಾಯ ಆಗ್ತಿದೆ ಎಂದಿದ್ದರು. ಆದರೆ ಆ ಪ್ರದೇಶ ಸರ್ಕಾರಕ್ಕೆ ಸೇರಿದ್ದಾಗಿದೆ. ಹಲವು ವರ್ಷಗಳಿಂದ ಅವರು ಉಳುಮೆ ಮಾಡಿಕೊಂಡು ಬಂದಿದ್ದಾರೆ.
ಸುತ್ತಲಿನ ಐದು ಕುಟುಂಬಸ್ಥರು ಈ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದು ಸರ್ಕಾರಿ ಜಮೀನು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಅಂತ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ (Sri Male Mahadeshwara Swamy Temple Development Authority) ಕಾರ್ಯದರ್ಶಿ ಎಸ್. ಕಾತ್ಯಾಯಿನಿ ದೇವಿ ಹೇಳುತ್ತಿದ್ದಾರೆ.
ಮಲೆಮಾದಪ್ಪನ ತಟದಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ನಿವಾಸಿಗಳು ಪ್ರತಿಮೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದ್ರೆ, ಸಾಗುವಳಿ ಜಮೀನು ನೀಡುತ್ತಿರುವ ತಮಗೆ ಸೂಕ್ತ ಪರಿಹಾರ ನೀಡಲಿ ಎನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ವರದಿ: ದಿಲೀಪ್ ಚೌಡಹಳ್ಳಿ, ಟಿ ವಿ9, ಚಾಮರಾಜನಗರ