Bus Conductor: ಹಾಡು ಅಂದರೆ ಇವರಿಗೆ ಬಲು ಇಷ್ಟ: ಗಾನಸುಧೆಯಿಂದ ಪ್ರಯಾಣಿಕರ ಮನಗೆದ್ದ KSRTC ಬಸ್​ ಕಂಡಕ್ಟರ್​​

| Updated By: Digi Tech Desk

Updated on: Mar 09, 2023 | 5:51 PM

Chamarajanagara News: ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಬಸ್ಸಲ್ಲಿ ಹಾಡು ಹಾಡಿ ರಂಜಿಸುವ ಮೂಲಕ ಪ್ರಯಾಣಿಕರ ಮನಸ್ಸು ಗೆದ್ದಿರುವ ಆ ಕಂಡಕ್ಟರ್​​ ಹೆಸರೇ ಹೇಮಪ್ಪ ತಳವಾರ್​​. 

ಚಾಮರಾಜನಗರ: ಪ್ರತಿಭೆ (Talent) ಯಾರ ಸ್ವತ್ತಲ್ಲ. ಸರ್ವರಲ್ಲೂ ಒಂದೊಂದು ಬಗೆಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಸಾಕಷ್ಟು ಪ್ರತಿಭಾವಂತರು ಸೂಕ್ತ ವೇದಿಕೆಗಾಗಿ ಕಾಯುತ್ತಿದ್ದಾರೆ. ಇನ್ನು ಅದೆಷ್ಟೋ ಪ್ರತಿಭೆಗಳಿಗೆ ಆ ವೇದಿಕೆ ಎನ್ನುವುದು ಕನಸಾಗಿಯೇ ಉಳಿದಿದೆ. ಆದರೆ ಇಲ್ಲೊಬ್ಬರು ತಾವು ನಿಂತಲ್ಲೇ ತಮ್ಮ ಪ್ರತಿಭೆ ಮೂಲಕ ಸಾಕಷ್ಟು ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಬಸ್ಸಲ್ಲಿ ಹಾಡು ಹಾಡಿ ರಂಜಿಸುವ ಮೂಲಕ ಪ್ರಯಾಣಿಕರ ಮನಸ್ಸು ಗೆದ್ದಿರುವ ಆ ಕಂಡಕ್ಟರ್ (KSRTC Bus Conductor) ಹೆಸರೇ ಹೇಮಪ್ಪ ತಳವಾರ್​​.

ಮೂಲತಃ ಹಾವೇರಿ ಜಿಲ್ಲೆ ಗುತ್ತಲ್ ಪಟ್ಟಣ್ ನಿವಾಸಿಯಾಗಿರುವ ಹೇಮಪ್ಪ​, ಕಳೆದ 10 ವರ್ಷಗಳಿಂದ ಚಾಮರಾಜನಗರ ಕೆಎಸ್​ಆರ್​​ಟಿಸಿ ವಿಭಾಗದಲ್ಲಿ ಚಾಲಕ ಕಂ ನಿರ್ವಾಹಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಸ್​​ನಲ್ಲಿ ಮೈಕ್ ಹಿಡಿದು ಕನ್ನಡ ಹಾಡುಗಳನ್ನ ಹಾಡಿ ಪ್ರಯಾಣಿಕರನ್ನ ರಂಜಿಸಿದ್ದ ಇವರ ವಿಡಿಯೋ ಸೋಶಿಯಲ್​ ಮಿಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿತ್ತು. ನೆಟ್ಟಿಗರು ಕೂಡ ಇವರ ಗಾನಸುಧೆಗೆ ವ್ಹಾ ವ್ಹಾ ಎಂದಿದ್ದರು.

ಇದನ್ನೂ ಓದಿ: Viral Video: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಣ್ಣವ್ರ ಹಾಡು ಹಾಡಿದ ಕಂಡಕ್ಟರ್; ಗಾಯನಕ್ಕೆ ಮನಸೋತ ಪ್ರಯಾಣಿಕರು

ಡಾ. ರಾಜ್ ಕುಮಾರ್ ಹಾಡುಗಳನ್ನು ಕೇಳುತ್ತ ಹಾಡಿನ ಅಭ್ಯಾಸ

ಬಾಲ್ಯದಿಂದಲೂ ಹಾಡುವ ಅಭ್ಯಾಸ ಹೊಂದಿರುವ ಹೇಮಪ್ಪ, ತಂದೆ-ತಾತ ಹಾಡುತ್ತಿದ್ದನ್ನು ಕೇಳಿ ತಾವು ಹಾಡುವುದನ್ನ ಕರಗತ ಮಾಡಿಕೊಂಡಿದ್ದಾರೆ. ಜೊತೆಗೆ ಎಸ್​ಪಿಬಿ, ವರನಟ ಡಾ. ರಾಜ್ ಕುಮಾರ್ ಹಾಡುಗಳನ್ನು ಕೇಳುತ್ತ ಅಭ್ಯಾಸ ಮಾಡಿಕೊಂಡಿದ್ದಾರೆ. ಸದ್ಯ ಕೆಲಸದ ಒತ್ತಡ, ಬಸ್ಸಿನಲ್ಲಿ ನೂಕಾಟ ತಳ್ಳಾಟದ ನಡುವೆ ಪ್ರಯಾಣಿಕರಿಗೆ ಹಾಡು ಹಾಡುವ ಮೂಲಕ ರಂಜಿಸುತ್ತಿದ್ದಾರೆ.

ಹಾಡು ಅಂದರೆ ಹೇಮಪ್ಪ ಅವರಿಗೆ ಬಲು ಇಷ್ಟ

ಹಾಡುವುದು ಅಂದರೆ ಹೇಮಪ್ಪ ಅವರಿಗೆ ಬಲು ಇಷ್ಟ. ಯಾರಾದ್ರು ಒಬ್ಬ ಸಂಗೀತಾಭಿಮಾನಿ ಹಾಡು ಅಂದ್ರೆ ಹಾಡುತ್ತೇನೆ ಎನ್ನುತ್ತಾರೆ. ಬಸ್​ನಲ್ಲಿ ತುಂಬಾ ಜನರಿದ್ದಾಗ ಹಾಡಲು ಸಾಧ್ಯವಾಗಲ್ಲ ಎನ್ನುವುದು ಅವರ ತಳಮಳ. ದೂರ ಪ್ರಯಾಣದ ಮಾರ್ಗ ಅಥವಾ ಜನಗಳ ಒತ್ತಡ ಕಡಿಮೆ ಇದ್ದಾಗ ಹೇಮಪ್ಪ ಹಾಡುತ್ತಾರೆ. ಬಸ್ ನಲ್ಲಿ ಹಾಡಿದಾಗ ಜನರು ಅಭಿಮಾನದ ಭಾವನೆ ತೋರುತ್ತಾರೆ. ಖುದ್ದು ಪ್ರಯಾಣಿಕರೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಚ್ಚಿಕೊಳ್ಳುವ ಮೂಲಕ ನಿಮ್ಮ ಧ್ವನಿ ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತಾರೆ.

ಇದನ್ನೂ ಓದಿ: ಮಾದಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಹರಿದುಬಂದ ಕಾಣಿಕೆ, ಎಷ್ಟು ಗೊತ್ತೇ?

ಇವರಿಗೆ ಸಂಗೀತದಲ್ಲಿ ಇನ್ನು ಮುಂದೆ ಸಾಗಬೇಕ ಎನ್ನುವ ಆಸೆ ಇದೆಯಂತೆ. ಸರಿಗಮ ಅಥವಾ ರಾಜ್ಯಮಟ್ಟದ ವೇದಿಕೆಯಲ್ಲಿ ಹಾಡುವ ಆಸೆಯಿದೆ. ಸಂಗೀತ ಕಲಿಯಬೇಕು ಎನ್ನುವ ತಮ್ಮ ಮನದಿಚ್ಚೆ ವ್ಯಕ್ತಪಡಿಸಿದರು.  ಆದರೆ ಕೆಲಸದ ಒತ್ತಡದ ನಡುವೆ ಕಲಿಯಲು ಆಗುತ್ತಿಲ್ಲ ಅಂತ ಹೇಮಪ್ಪ ತಳವಾರ್​ ಬೇಸರ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:47 pm, Thu, 9 March 23